ಚರ್ಮದ ಸಮಸ್ಯೆ, ಆರೋಗ್ಯ ಸಮಸ್ಯೆ ಎಲ್ಲಾ ಪರಿಹಾರಕ್ಕೂ ಬೇಕು ಈ ದೈವಿಕ ಗಿಡ; ಪೂಜೆಗೆ ಮಾತ್ರವಲ್ಲ, ಬಹೋಪಯೋಗಿ ಈ ತುಳಸಿ
ಮಹಿಳೆಯರು ಪ್ರತಿದಿನ ತುಳಸಿಗೆ ಪೂಜೆ ಮಾಡಿ ಸೌಭಾಗ್ಯ ಕೊಡುವಂತೆ ಪ್ರಾರ್ಥಿಸುತ್ತಾರೆ. ಆದರೆ ಈ ದೈವಿಕ ಗಿಡವು ಪೂಜೆಗೆ ಮಾತ್ರವಲ್ಲ, ವಿವಿಧ ರೀತಿಗಳಿಂದ ನಮಗೆ ಉಪಯೋಗವಾಗಿದೆ. ಚರ್ಮದ ಸಮಸ್ಯೆ, ಮಕ್ಕಲ ಬಾಲಗ್ರಹ ಸಮಸ್ಯೆ ಸೇರಿದಂತೆ ವಿವಿಧ ರೀತಿಯಲ್ಲಿ ಉಪಯೋಗವಾಗುತ್ತಿದೆ.
ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ಪ್ರತಿ ದಿನ ಅದರಲ್ಲೂ ಶುಕ್ರವಾರ, ಹಬ್ಬ ಹರಿದಿನಗಳಲ್ಲೂ ತುಳಸಿಗೆ ವಿಶೇಷ ಅಲಂಕಾರ ಮಾಡಿ, ವಿವಿಧ ಹೂಗಳಿಂದ ಅಲಂಕರಿಸಿ ಹೂ, ಧೂಪ, ದೀಪ ನೈವೇದ್ಯಗಳನ್ನು ಪೂಜೆ ಮಾಡಲಾಗುತ್ತದೆ. ತುಳಸಿಯು ಲಕ್ಷ್ಮಿಯ ಪ್ರತೀಕವಾಗಿದೆ ಎಂದು ನಂಬಲಾಗಿದೆ.
ಆದರೆ ತುಳಸಿ, ಪೂಜೆಗೆ ಮಾತ್ರವಲ್ಲ, ನಮಗೆ ನಾನಾ ರೀತಿ ಉಪಯೋಗವಿದೆ. ತುಳಸಿಯನ್ನು ನಾವು ಅನೇಕ ರೀತಿಯಲ್ಲಿ ಉಪಯೋಗಿಸಬಹುದು. ಬಹುಶ: ತುಳಸಿಯ ಹೊರತಾಗಿ ಇನ್ನುಳಿದ ಯಾವುದೇ ಸಸ್ಯವು ಬೇರೆ ರೀತಿ ನಮಗೆ ಉಪಕಾರಿಯಾಗುವುದಿಲ್ಲ. ಮನೆಯ ಬಳಿ ತುಳಸಿ ಗಿಡವಿದ್ದರೆ ಅದರಿಂದ ಸೂಸುವ ಸುವಾಸನೆಯು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿ ದಿನವೂ ಗೃಹಿಣಿಯರು ತುಳಸಿ ಪೂಜೆ ಮಾಡಿದಲ್ಲಿ ಆ ಕುಟುಂಬದಲ್ಲಿ ಹಣಕಾಸಿನ ತೊಂದರೆ ಇರುವುದಿಲ್ಲ. ತುಳಸಿ ಪೂಜೆಯಿಂದ ಶನಿ ಕಾಟದಿಂದ ಪಾರಾಗಬಹುದು. ಮಾತ್ರವಲ್ಲದೆ ಅಷ್ಟಮ ಶನಿಯಿಂದ ಉಂಟಾಗುವ ಅಪಮೃತ್ಯುವನ್ನು ಗೆಲ್ಲಬಹುದು. ಭೂತ ಪ್ರೇತದ ತೊಂದರೆ ಇದ್ದಲ್ಲಿ ತುಳಸಿ ಪೂಜೆ ಮಾಡುವುದರಿಂದ ತೊಂದರೆಯಿಂದ ಮುಕ್ತಿ ದೊರೆಯುತ್ತದೆ.
ಬಾಲಗ್ರಹ ದೋಷದಿಂದ ಮುಕ್ತಿ
ನವಜಾತ ಶಿಶುಗಳಲ್ಲಿ ಕಂಡುಬರುವ ಬಾಲಗ್ರಹದ ದೋಷದಿಂದ ಮುಕ್ತಿ ದೊರೆಯುತ್ತದೆ. ಇಷ್ಟಲ್ಲದೆ ಬಡತನದಿಂದ ಬಳಲುತ್ತಿರುವವರು ತುಳಸಿ ದೇವಿಯನ್ನು ಹಾಲಿನಿಂದ ಪೂಜಿಸಬೇಕು. ಐದು ರೀತಿಯ ಆಹಾರ ಪದಾರ್ಥ ಅಥವಾ ಐದು ರೀತಿಯ ಹಣ್ಣುಗಳನ್ನು ನೈವೇದ್ಯವಾಗಿ ಅರ್ಪಿಸಿದರೆ ಕುಟುಂಬದ ದಾರಿದ್ಯವು ಮರೆಯಾಗಿ ಹಣಕಾಸಿನ ಅನುಕೂಲತೆ ದೊರೆಯುತ್ತದೆ. ತುಳಸಿ ಗಿಡದ ಮುಖಾಂತರ ಗಾಳಿಯು ಮನೆಯನ್ನು ಪ್ರವೇಶಿಸಿದರೆ ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳು ಮರೆಯಾಗಿ ಹೋಗುತ್ತವೆ.
ತುಳಸಿಕಡ್ಡಿಯಿಂದ ಇಂದಿಗೂ ಹಲ್ಲನ್ನು ಉಜ್ಜುವ ಪರಿಪಾಠವಿದೆ. ಇದೇ ಕಡ್ಡಿಯನ್ನು ತಾಯತದಲ್ಲಿ ಕುತ್ತಿಗೆಯಲ್ಲಿ ಧರಿಸಿದರೆ ಮನದಲ್ಲಿರುವ ಭಯವು ಮರೆಯಾಗಿ ಆತ್ಮವಿಶ್ವಾಸವು ಹೆಚ್ಚುತ್ತದೆ. ಅಲ್ಲದೆ ಅಂತಹವರ ಬಳಿ ಋಣಾತ್ಮಕ ಶಕ್ತಿಗಳು ಸುಳಿಯುವುದು ಇಲ್ಲ. ತುಳಸಿ ಗಿಡವಿರುವ ಬುಡದಿಂದ ಮಣ್ಣನ್ನು ತೆಗೆದುಕೊಂಡು ಅದನ್ನು ಪೂಜಿಸಬೇಕು. ಆನಂತರ ಕೈ ಕಾಲು ಮತ್ತು ಇನ್ನಿತರ ಭಾಗಗಳಿಗೆ ಲೇಪಿಸಿಕೊಂಡು ಕನಿಷ್ಠ ಪಕ್ಷ 15 ನಿಮಿಷಗಳ ನಂತರ ಸ್ನಾನವನ್ನು ಮಾಡಿದರೆ ಚರ್ಮದ ರೋಗವು ಗುಣವಾಗುತ್ತದೆ. ಇದು ಸ್ವಯಂ ತುಳಸಿ ದೇವಿಯೇ ನೀಡಿರುವ ವರವೆಂದು ಧಾರ್ಮಿಕ ಗ್ರಂಥಗಳ ಮುಖಾಂತರ ತಿಳಿಯಬಹುದು. ಮನೆಯ ಹೊರ ಭಾಗದಲ್ಲಿರುವ ತುಳಸಿ ಗಿಡದ ಮುಂದೆ ಕುಳಿತು ಪುರುಷರು ಯಾವುದೇ ದೇವರ ಅಥವಾ ಗ್ರಹಗಳ ಧ್ಯಾನವನ್ನು ಮಾಡಿದರೆ ಅದರಿಂದ ದೊರೆಯುವ ಫಲವು ದ್ವಿಗುಣವಾಗುತ್ತದೆ. ತುಳಸಿ ಗಿಡದ ಬುಡದ ಮಣ್ಣನ್ನು ತೆಗೆದುಕೊಂಡು ಎಡಗೈಯಲ್ಲಿ ಇರಿಸಿ ಅದರ ಮೇಲೆ ಬಲಗೈಯನ್ನು ಮುಚ್ಚಿ ಬಲತೊಡೆಯ ಮೇಲೆ ಇಟ್ಟು ತುಳಸಿ ಕವಚ ಅಥವಾ ತುಳಸಿ ಅಷ್ಟೋತ್ತರವನ್ನು ಪಠಿಸಿದಲ್ಲಿ ಆ ಮಣ್ಣಿಗೆ ವಿಶೇಷವಾದ ಶಕ್ತಿ ಬರುತ್ತದೆ. ಇದರಿಂದ ಇದನ್ನು ಹಣೆಯಲ್ಲಿ ಧರಿಸಿದರೆ ದೃಷ್ಟಿ ದೋಷವು ಪರಿಹಾರವಾಗುತ್ತದೆ.
ಕುಜ ದೋಷಕ್ಕೆ ಪರಿಹಾರ
ತುಳಸಿ ಗಿಡವಿರುವ ಬೃಂದಾವನದ ಬಳಿ ಕುಳಿತು ಸಂದ್ಯಾವಂದನೆಯನ್ನು ಮಾಡಿದರೆ ಕೋಟಿ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳು ಪರಿಹಾರವಾಗುತ್ತದೆ. ನೀರಿನಿಂದ ತೊಳೆದ ತುಳಸಿಯ ಮೂರು ದಳಗಳನ್ನು ಪ್ರತಿನಿತ್ಯ ಸೇವಿಸಿದರೆ ರಕ್ತವು ಶುದ್ದಿಯಾಗುತ್ತದೆ. ಇಂದಿನ ದಿನಗಳಲ್ಲಿಯೂ ಕುಂಡಲಿಯಲ್ಲಿ ಮಂಗಳ ದೋಷ ಅಥವಾ ಕುಜ ದೋಷ ಕಂಡು ಬಂದರೆ ಆ ಮದುವೆಯನ್ನು ನಡೆಸುವುದೇ ಇಲ್ಲ. ಆದರೆ ಕುಜ ದೋಷವಿರುವ ಗೃಹಿಣಿಯು ತುಳಸಿಯ ಪೂಜೆಯನ್ನು ಮಾಡಿದರು ಕುಜ ದೋಷವು ನಿವಾರಣೆ ಯಾಗುತ್ತದೆ. ಶಾಸ್ತ್ರ ಗ್ರಂಥಗಳ ಪ್ರಕಾರ ತುಳಸಿ ಗಿಡದ ಅದಿದೇವತೆಯು ಮಂಗಳನಾಗುತ್ತಾನೆ. ಆದ್ದರಿಂದ ಕುಜ ದೋಷವಿರುವವರು ಸತತವಾಗಿ 48 ದಿನಗಳ ಕಾಲ ತುಳಸಿ ಗಿಡಕ್ಕೆ ಪೂಜೆಯನ್ನು ಸಲ್ಲಿಸಿದರೆ ಕುಜ ದೋಷ ಮರೆಯಾಗುತ್ತದೆ.
ತುಳಸಿ ಗಿಡವು ಜಲಂಧರನ ಪತ್ನಿಯಾದ ವೃಂದೆಯ ಪ್ರತಿರೂಪ ಎಂದು ಹೇಳಲಾಗುತ್ತದೆ. ಗಣಪತಿಯನ್ನು ತುಳಸಿಯಿಂದ ಪೂಜಿಸಬಾರದು. ಸಾಕ್ಷಾತ್ ಭಗವಾನ್ ವಿಷ್ಣುವು ತುಳಸಿಯನ್ನು ಹಾರದ ರೂಪದಲ್ಲಿ ಧರಿಸಿದ್ದಾನೆ. ತುಳಸಿ ದಳಗಳನ್ನು ಸಾಧ್ಯವಾದಷ್ಟು ಸೂರ್ಯ ಹುಟ್ಟುವ ಮುಂಚೆಯೇ ಕೀಳಲು ಪ್ರಯತ್ನಿಸಬೇಕು. ಆದರೆ ಯಾವುದೇ ಕಾರಣಕ್ಕೂ ಉಗುರಿನಿಂದ ತುಳಸಿ ಗಿಡಗಳನ್ನು ಚಿವುಟಿ ಬಿಡಿಸಬಾರದು.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮ ಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.