ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಾರಾಹಿ ದೀಕ್ಷೆ ತೆಗೆದುಕೊಂಡ ಆಂಧ್ರ ಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌; ಹಾಗೆಂದರೇನು, ಆಚರಿಸುವ ವಿಧಾನ ಹೇಗೆ?

ವಾರಾಹಿ ದೀಕ್ಷೆ ತೆಗೆದುಕೊಂಡ ಆಂಧ್ರ ಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌; ಹಾಗೆಂದರೇನು, ಆಚರಿಸುವ ವಿಧಾನ ಹೇಗೆ?

ಆಂಧ್ರ ಪ್ರದೇಶದ ಉಪಮುಖ್ಯಂತ್ರಿ ಪವನ್‌ ಕಲ್ಯಾಣ್‌ ಇತ್ತೀಚೆಗೆ ವಾರಾಹಿ ವಿಜಯ ದೀಕ್ಷೆ ತೆಗೆದುಕೊಂಡಿದ್ದಾರೆ. ವಾರಾಹಿ ದೀಕ್ಷೆ ಎಂದರೇನು? ಈ ದೀಕ್ಷೆಯನ್ನು ಏಕೆ ತೆಗೆದುಕೊಳ್ಳಲಾಗುತ್ತದೆ? ಇಲ್ಲಿದೆ ಮಾಹಿತಿ. ( ಬರಹ: ಅರ್ಚನಾ ವಿ ಭಟ್‌)

ವಾರಾಹಿ ದೀಕ್ಷೆ ತೆಗೆದುಕೊಂಡ ಆಂಧ್ರ ಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌; ಹಾಗೆಂದರೇನು, ಆಚರಿಸುವ ವಿಧಾನ ಹೇಗೆ?
ವಾರಾಹಿ ದೀಕ್ಷೆ ತೆಗೆದುಕೊಂಡ ಆಂಧ್ರ ಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌; ಹಾಗೆಂದರೇನು, ಆಚರಿಸುವ ವಿಧಾನ ಹೇಗೆ?

ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ವಾರಾಹಿ ವಿಜಯ ದೀಕ್ಷೆ ತೆಗೆದುಕೊಂಡಿದ್ದಾರೆ. ಇದೇ ಜೂನ್ 26 ರಿಂದ ಹನ್ನೊಂದು ದಿನಗಳ ಕಾಲ ಈ ದೀಕ್ಷೆಯನ್ನು ಪಡೆದುಕೊಂಡಿದ್ದಾರೆ. ಕಳೆದ ವರ್ಷ ಚುನಾವಣಾ ಪ್ರಚಾರದ ವೇಳೆಯಲ್ಲಿಯೂ ಪವನ್ ಕಲ್ಯಾಣ್ ಅವರು ಈ ದೀಕ್ಷೆ ತೆಗೆದುಕೊಂಡಿದ್ದರು. ಆ ಸಮಯದಲ್ಲಿ ಹಾಲು, ಹಣ್ಣು ಮತ್ತು ನೀರನ್ನು ಮಾತ್ರ ಸೇವಿಸಲಾಗುತ್ತದೆ. ಹಾಗಾದ್ರೆ ವಾರಾಹಿ ದೀಕ್ಷೆ ಎಂದರೇನು? ಅದನ್ನು ಏಕೆ ತೆಗೆದುಕೊಳ್ಳಲಾಗುತ್ತದೆ? ಈ ದೀಕ್ಷೆಯನ್ನು ಕೈಗೊಳ್ಳುವುದರಿಂದ ಸಿಗುವ ಪ್ರಯೋಜನಗಳೇನು? ಎಷ್ಟು ದಿನಗಳ ಕಾಲ ದೀಕ್ಷೆ ತೆಗೆದುಕೊಳ್ಳುತ್ತಾರೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ವಾರಾಹಿ ಎಂದರೆ ಯಾರು?

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ವಾರಾಹಿ, ಶಕ್ತಿಯ ರೂಪಗಳಲ್ಲಿ ಒಂದಾಗಿದೆ. ಸಪ್ತ ಮಾತೃಕೆಯರಲ್ಲಿ ಬರುವ ಬ್ರಹ್ಮಾಣಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ನಾರಸಿಂಹೆ, ಇಂದ್ರಾಣಿ ಇವರಲ್ಲಿ ಒಂದಾಗಿರುವ ಮಾತೆಯಾಗಿದ್ದಾಳೆ. ಈ ದೇವಿಯ ಮುಖವು ವರಾಹ ರೂಪದಲ್ಲಿದೆ. ಎಂಟು ತೋಳುಗಳನ್ನು ಹೊಂದಿದೆ. ಶಂಖ, ನೇಗಿಲು, ಪಾಶ, ಸುದರ್ಶನ ಚಕ್ರ, ಕಲಶ, ಅಂಕುಶ, ವರದ ಮತ್ತು ಅಭಯ ಹಸ್ತಗಳೊಂದಿಗೆ ತಾಯಿಯು ಕಾಣಿಸಿಕೊಳ್ಳುತ್ತಾಳೆ. ಪುರಾಣಗಳ ಪ್ರಕಾರ ರಕ್ತಬೀಜ, ಅಂಧಕಾಸುರ ಮತ್ತು ಶುಂಭ ನಿಶುಂಭ ಎಂಬ ರಾಕ್ಷಸರನ್ನು ವರಾಹಿ ದೇವಿಯು ಕೊಂದಳು ಎಂದು ಹೇಳಲಾಗುತ್ತದೆ. ಕುದುರೆ, ಹಾವು, ಸಿಂಹ, ನೇಗಿಲು ಮುಂತಾದ ವಾಹನಗಳ ಮೇಲೆ ದೇವಿ ಕಾಣಿಸಿಕೊಳ್ಳುತ್ತಾಳೆ.

ವಾರಾಹಿ ಎಂದರೆ ಭೂದೇವಿ ಎಂದೂ ಹೇಳಲಾಗುತ್ತದೆ. ಮಾರ್ಕಂಡೇಯ ಪುರಾಣದ ಪ್ರಕಾರ, ವಾರಾಹಿ ದೇವಿಯು ವಿಷ್ಣುವಿನ ವರಾಹ ಅವತಾರದಿಂದ ಹುಟ್ಟಿಕೊಂಡಿದ್ದಾಳೆ ಎಂದು ಹೇಳಲಾಗುತ್ತದೆ. ವಾರಾಹಿ ದೇವಿಯು ಬೇಡಿದ ವರವನ್ನು ದಯಪಾಲಿಸುವ ತಾಯಿ ಎಂದು ಪರಿಗಣಿಸಲಾಗುತ್ತದೆ. ದೇಶದ ಹಲವು ಭಾಗಗಳಲ್ಲಿ ವರಾಹಿ ಅಮ್ಮನವರಿಗೆ ದೇವಸ್ಥಾನಗಳಿವೆ. ಒಡಿಶಾ, ವಾರಣಾಸಿ ಮತ್ತು ಮೈಲಾಪುರದಲ್ಲಿರುವ ವಾರಾಹಿ ದೇವಾಲಯಗಳು ಹೆಚ್ಚು ಜನಪ್ರಿಯವಾಗಿವೆ. ವಾರಾಹಿ ದೇವಿಯು ಲಲಿತಾ ದೇವಿಯ ಎಲ್ಲಾ ಸೈನ್ಯಗಳ ಮುಖ್ಯಸ್ಥೆ ಎಂದೂ ಹೇಳಲಾಗುತ್ತದೆ. ಆದ್ದರಿಂದಲೇ ಲಲಿತಾ ಸಹಸ್ರನಾಮದಲ್ಲೂ ವಾರಾಹಿ ಅಮ್ಮನವರ ಉಲ್ಲೇಖವಿದೆ.

ವಾರಾಹಿ ದೀಕ್ಷೆ ಯಾವಾಗ ತೆಗೆದುಕೊಳ್ಳಲಾಗುತ್ತದೆ?

ವಾರಾಹಿ ಅಮ್ಮನವರ ದೀಕ್ಷೆಯನ್ನು ಜ್ಯೇಷ್ಠ ಮಾಸದ ಕೊನೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಕೆಲವರು ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ದೀಕ್ಷೆ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಹನ್ನೊಂದು ದಿನಗಳವರೆಗೆ ಈ ದೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ.

ವಾರಾಹಿ ದೀಕ್ಷೆ ತೆಗೆದುಕೊಂಡಾಗ ಪಾಲಿಸಬೇಕಾದ ನಿಯಮಗಳು

ಈ ದೀಕ್ಷೆ ತೆಗೆದುಕೊಂಡ ಸಮಯದಲ್ಲಿ ಸಾತ್ವಿಕ ಆಹಾರವನ್ನು ಮಿತವಾಗಿ ಸೇವಿಸಲಾಗುತ್ತದೆ. ನೆಲದ ಮೇಲೆ ಮಲಗುವುದು, ಬರಿಗಾಲಿನಲ್ಲಿ ನಡೆಯುವುದು, ಬೆಳಿಗ್ಗೆ ಮತ್ತು ಸಂಜೆ ಪೂಜೆಯನ್ನು ಮಾಡಬೇಕಾಗುತ್ತದೆ. ಪೂಜೆಯನ್ನು ಮಾಡುವಾಗ ವಾರಾಹಿ ದೇವಿಗೆ ಸಂಬಂಧಿಸಿದ ಸ್ತೋತ್ರಗಳನ್ನು ಹೇಳುತ್ತಾ ಪೂಜೆಯನ್ನು ಮಾಡಬೇಕು.

ವಾರಾಹಿ ದೀಕ್ಷೆ ಏಕೆ ತೆಗೆದುಕೊಳ್ಳಲಾಗುತ್ತದೆ?

ಶತ್ರುಗಳನ್ನು ಗೆಲ್ಲಲು ಮತ್ತು ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ವಾರಾಹಿ ದೇವಿಯ ದೀಕ್ಷೆಯನ್ನು ಕೈಗೊಳ್ಳಲಾಗುತ್ತದೆ. ನಕಾರಾತ್ಮಕ ದೃಷ್ಠಿ ತಡೆಯಲು ಈ ದೀಕ್ಷೆಯನ್ನು ತೆಗೆದುಕೊಳ್ಳಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ವಾರಾಹಿಯ 12 ಹೆಸರುಗಳು ಅತ್ಯಂತ ಶಕ್ತಿಶಾಲಿ ಎಂದು ಹೇಳಲಾಗುತ್ತದೆ. ವಾರಾಹಿ ದೀಕ್ಷೆಯನ್ನು ತೆಗೆದುಕೊಳ್ಳುವುದರಿಂದ ಎಲ್ಲಾ ರೀತಿಯ ಕೆಲಸ, ಕಾರ್ಯಗಳಲ್ಲಿ ಯಾವುದೇ ರೀತಿಯ ಅಡೆತಡೆಗಳಿಲ್ಲದೆ ಯಶಸ್ವಿಯಾಗುತ್ತಾರೆ ಎಂಬ ನಂಬಿಕೆಯಿದೆ. ಸಮಾಜದಲ್ಲಿ ಕೀರ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆಷಾಢ ಮಾಸದಲ್ಲಿ ಬರುವ ನವರಾತ್ರಿಯನ್ನು ವಾರಾಹಿ ದೇವಿ ನವರಾತ್ರಿ ಎಂದು ಕರೆಯಲಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಅರ್ಚನಾ ವಿ ಭಟ್‌

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.