ಕೈ ಮಣಿಕಟ್ಟಿಗೆ ಕೆಂಪು ಬಣ್ಣದ ದಾರ ಕಟ್ಟುವುದು ಏಕೆ? ಎಷ್ಟು ದಿನಗಳವರೆಗೂ ಈ ದಾರದಲ್ಲಿ ಶಕ್ತಿ ಇರುತ್ತದೆ?
ಎಷ್ಟೋ ಜನರು ತಮ್ಮ ಕೈ ಮಣಿಕಟ್ಟಿನಲ್ಲಿ ಕೆಂಪು ದಾರವನ್ನು ಧರಿಸುವುದನ್ನು ನೋಡಬಹುದು. ಹೀಗೆ ಧರಿಸುವುದರ ಹಿಂದೆ ವೈಜ್ಞಾನಿಕ ಕಾರಣ ಕೂಡಾ ಇದೆ. ಇದನ್ನು ರಕ್ಷಣೆ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ.

ಕಲ್ವ, ರಕ್ಷಾ ಸೂತ್ರ, ಮೌಳಿ, ರಾಖಿ ಇತ್ಯಾದಿ ದಾರಗಳನ್ನು ಹಿಂದೂಗಳು ತಮ್ಮ ಮಣಿಕಟ್ಟಿನ ಸುತ್ತ ಕಟ್ಟಿಕೊಳ್ಳುತ್ತಾರೆ. ಇದನ್ನು ವಿಶೇಷ ಪೂಜೆಯ ಸಮಯದಲ್ಲಿ ಅಥವಾ ರಕ್ಷಾ ಬಂಧನದ ಸಮಯದಲ್ಲಿ ಕಟ್ಟಲಾಗುತ್ತದೆ. ಇದನ್ನು ರಕ್ಷಣೆ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ನಕಾರಾತ್ಮಕ ಶಕ್ತಿ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಇದನ್ನು ಕಟ್ಟಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಕೈ ಮಣಿಕಟ್ಟಿಗೆ ಇದನ್ನು ಧರಿಸಲಾಗುತ್ತದೆ.
ಮಣಿಕಟ್ಟಿಗೆ ದಾರವನ್ನು ಕಟ್ಟುವುದರಿಂದ ಸನಾತನ ಧರ್ಮವನ್ನು ಅನುಸರಿಸುವವರನ್ನು ಗುರುತಿಸುತ್ತದೆ. ಹೆಚ್ಚಿನ ಜನರು ಕೆಂಪು, ಕಿತ್ತಳೆ ಅಥವಾ ಹಳದಿ ದಾರವನ್ನು ಕಟ್ಟಿಕೊಳ್ಳುತ್ತಾರೆ. ಇದು ಏಕತೆಯ ಸಂಕೇತವಾಗಿದೆ. ಇದು ಕೇವಲ ಬಣ್ಣದ ದಾರವಲ್ಲ. ಅದನ್ನು ಧರಿಸುವುದರ ಹಿಂದೆ ನಾನಾ ಕಾರಣಗಳಿವೆ. ಆಳವಾದ ಅರ್ಥವನ್ನು ಹೊಂದಿದೆ. ಪುರಾಣಗಳಲ್ಲಿ ಈ ದಾರವನ್ನು ಕಟ್ಟುವುದರ ಹಿಂದೆಯೂ ಒಂದು ಕಥೆಯಿದೆ.
ಶ್ರೀಕೃಷ್ಣನ ಕೈಗೆ ತನ್ನ ವಸ್ತ್ರ ಹರಿದು ಕಟ್ಟಿದ ದ್ರೌಪದಿ
ಒಮ್ಮೆ ಶ್ರೀಕೃಷ್ಣನ ಮಣಿಕಟ್ಟಿಗೆ ಆಕಸ್ಮಿಕವಾಗಿ ಗಾಯವಾಯಿತು. ರಕ್ತಸ್ರಾವವನ್ನು ನಿಲ್ಲಿಸಲು, ದ್ರೌಪದಿ ತನ್ನ ವಸ್ತ್ರದ ಒಂದು ಭಾಗವನ್ನು ಹರಿದು ಶ್ರೀಕೃಷ್ಣನ ಮಣಿಕಟ್ಟಿಗೆ ಕಟ್ಟಿದಳು. ಅಂದಿನಿಂದ ಕೃಷ್ಣನು ನಾನು ದ್ರೌಪದಿಯನ್ನು ಶಾಶ್ವತವಾಗಿ ರಕ್ಷಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದನು ಮತ್ತು ಅವಳಿಗೆ ಎಂದಿಗೂ ಯಾವುದಕ್ಕೂ ಕೊರತೆಯಾಗುವುದಿಲ್ಲ ಎಂದು ಭರವಸೆ ನೀಡಿದನು. ಆದ್ದರಿಂದಲೇ ದುಶ್ಶಾಸನನು ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಶ್ರೀ ಕೃಷ್ಣನು ಆಕೆಗೆ ವಸ್ತ್ರವನ್ನು ನೀಡಿ ಕಾಪಾಡುತ್ತಾನೆ.
ಕಲ್ವವನ್ನು ರಾಖಿ ರೂಪ ಎಂದೂ ಕರೆಯುತ್ತಾರೆ. ರಕ್ಷಾಬಂಧನದ ರೂಪವಾಗಿ ಕೂಡಾ ಇದನ್ನು ಗುರುತಿಸುತ್ತಾರೆ. ರಾಖಿ ಹಬ್ಬದ ಸಮಯದಲ್ಲಿ ಹುಡುಗಿಯರು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾರೆ. ಅವರ ಸಹೋದರನು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ದುಷ್ಟರಿಂದ ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಕಲ್ವವನ್ನು ರಕ್ಷಾ ಸೂತ್ರ ಎಂದೂ ಕರೆಯುತ್ತಾರೆ. ಶುಭ ಸಮಾರಂಭದಲ್ಲಿ ಪುರೋಹಿತರು, ಪುರುಷರು ಮತ್ತು ಮಹಿಳೆಯರು ಪರಸ್ಪರರ ಮಣಿಕಟ್ಟಿನ ಮೇಲೆ ರಕ್ಷಾ ಸೂತ್ರವನ್ನು ಕಟ್ಟುತ್ತಾರೆ. ಇದು ಆಶೀರ್ವಾದದ ಪ್ರತೀಕವಾಗಿದೆ. ಯಜ್ಞ, ಪೂಜೆ, ಸಂಕಲ್ಪ ಮತ್ತು ಇತರ ಅನೇಕ ಆಚರಣೆಗಳಲ್ಲಿ ಇದನ್ನು ಅನುಸರಿಸಲಾಗುತ್ತದೆ. ರಕ್ಷಾ ಸೂತ್ರವನ್ನು ಧರಿಸಿದವರಿಗೆ ಯಾವುದೇ ನಕಾರಾತ್ಮಕತೆ ಅಥವಾ ಅಡೆತಡೆಗಳು ಇರುವುದಿಲ್ಲ.
ವೈಜ್ಞಾನಿಕ ಕಾರಣ
ಮಣಿಕಟ್ಟಿಗೆ ಈ ರೀತಿ ರಕ್ಷಾಸೂತ್ರವನ್ನು ಕಟ್ಟುವುದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಇದನ್ನು ವಿಶೇಷವಾಗಿ ನಾಡಿ ಬಳಿ ಕಟ್ಟಲಾಗುತ್ತದೆ. ಹೀಗೆ ಕಟ್ಟುವವರ ಮೇಲೆ ಮೇಲೆ ದೈಹಿಕ ಮತ್ತು ಆಧ್ಯಾತ್ಮಿಕ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಮಣಿಕಟ್ಟನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗುತ್ತದೆ. ಈ ದಾರವನ್ನು ಕಟ್ಟುವುದರಿಂದ ನರಮಂಡಲದ ಮೇಲೆ ಹಿತವಾದ ಪರಿಣಾಮ ಬೀರುತ್ತದೆ. ದೇಹವು ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಶಾಂತತೆಯನ್ನು ನೀಡುವಂತೆ ಉತ್ತೇಜಿಸುತ್ತದೆ. ಧ್ಯಾನ ಮತ್ತು ಪ್ರಾರ್ಥನೆಯ ಸಮಯದಲ್ಲಿ ಏಕಾಗ್ರತೆಯನ್ನು ತರುತ್ತದೆ.
ಎಷ್ಟು ದಿನ ಧರಿಸಬೇಕು?
ಸಾಂಪ್ರದಾಯಿಕವಾಗಿ ಕಲ್ವವನ್ನು 21 ದಿನಗಳವರೆಗೆ ಧರಿಸಬೇಕು. ಅದರ ನಂತರ ಅದು ಮಸುಕಾಗಲು ಪ್ರಾರಂಭಿಸುತ್ತದೆ. ಹೀಗೆ ಬಣ್ಣ ಬಿಡಲು ಆರಂಭಿಸಿದಾಗ ಅದರ ರಕ್ಷಣಾತ್ಮಕ ಶಕ್ತಿಗಳು ಸಹ ಮಸುಕಾಗುತ್ತವೆ ಎಂದು ಹೇಳಲಾಗುತ್ತದೆ. ಪೂಜೆಯ ಸಮಯದಲ್ಲಿ ಕಲ್ವವನ್ನು ಧರಿಸುವವರು ಧನಾತ್ಮಕ ಶಕ್ತಿಗಳನ್ನು ಹೊಂದಿರುತ್ತಾರೆ. ಆದ್ದರಿಂದ ಮಸುಕಾದ ದಾರವನ್ನು ತೆಗೆದು ಹೊಸತನ್ನು ಕಟ್ಟಿದರೆ ಉತ್ತಮ.
ಕೈಯಿಂದ ತೆಗೆದ ಕಾಲ್ವಾವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಅದನ್ನು ಸುರಕ್ಷಿತವಾಗಿ ಮತ್ತು ಗೌರವದಿಂದ ಇಡುವುದು ಮುಖ್ಯ. ಕಾಲ್ವಾವನ್ನು ಯಾರು ಬೇಕಾದರೂ ದುರುಪಯೋಗಪಡಿಸಿಕೊಳ್ಳಬಹುದು. ಅದಕ್ಕಾಗಿಯೇ ಈ ದಾರವನ್ನು ಪವಿತ್ರ ಮರಕ್ಕೆ ಕಟ್ಟಬೇಕು. ಇಲ್ಲದಿದ್ದರೆ ಮರಳಿನಲ್ಲಿ ಹೂಳಬೇಕು. ಇದನ್ನು ಮಾಡುವುದರಿಂದ, ಬಲಗಳ ಸಮತೋಲನವನ್ನು ಕಾಪಾಡಿಕೊಳ್ಳಲಾಗುತ್ತದೆ. ಕೆಲವರು ತುಳಸಿ ಗಿಡದ ಮಣ್ಣಿಗೆ ಹಾಕುತ್ತಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.