118 ದಿನಗಳ ಚಾತುರ್ಮಾಸ ವ್ರತ ಇಂದಿನಿಂದ ಆರಂಭ; ಈ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು? ಇಲ್ಲಿದೆ ಮಾಹಿತಿ
ಚಾತುರ್ಮಾಸ 2024: ಇಂದಿನಿಂದ ( ಜುಲೈ 17) ರಿಂದ ಚಾತುರ್ಮಾಸ ಆರಂಭವಾಗಿದೆ. 118 ದಿನಗಳ ಚಾತುರ್ಮಾಸ ವ್ರತ ಇದಾಗಿದ್ದು ಈ ಸಮಯದಲ್ಲಿ ಕೆಲವೊಂದು ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಚಾತುರ್ಮಾಸ ಸಮಯದಲ್ಲಿ ದೇವರ ಪೂಜೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಹಿಂದೂ ಕ್ಯಾಲೆಂಡರ್‌ನ ಮೊದಲ ಏಕಾದಶಿಯಿಂದ ಚಾತುರ್ಮಾಸ ಪ್ರಾರಂಭವಾಗುತ್ತದೆ. ಭಗವಾನ್ ವಿಷ್ಣುವು ಯೋಗ ನಿದ್ರೆಯ ಸ್ಥಿತಿಯನ್ನು ಪ್ರವೇಶಿಸುವ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ.
ಚಾತುರ್ಮಾಸದಲ್ಲಿ ಮನಃಶುದ್ಧಿಯಿಂದ ಪೂಜೆ, ಯಾಗ, ಉಪವಾಸ, ದಾನ, ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ಅದೃಷ್ಟ ದೊರೆಯುತ್ತದೆ. ಈ ವರ್ಷ ಶುಕ್ಲ ಯೋಗ, ಸೌಮ್ಯ ಯೋಗ, ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ ಸೇರಿದಂತೆ ಹಲವು ಶುಭ ಯೋಗಗಳಿವೆ. ಈ ಸಮಯದಲ್ಲಿ ಭಗವಾನ್ ಶಿವ ಮತ್ತು ವಿಷ್ಣುವನ್ನು ಪೂಜಿಸುವುದರಿಂದ ಅನೇಕ ಮಂಗಳಕರ ಫಲಿತಾಂಶಗಳನ್ನು ತರುತ್ತದೆ ಎಂದು ನಂಬಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ದೇವತೆಗಳು ಮತ್ತು ಭಗವಾನ್ ವಿಷ್ಣುವು ಯೋಗ ನಿದ್ರೆಗೆ ಪ್ರವೇಶಿಸುತ್ತಾರೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯ ದಿನ ಅವರು ಎಚ್ಚರಗೊಳ್ಳುತ್ತಾರೆ. ಆದ್ದರಿಂದಲೇ ಚಾತುರ್ಮಾಸ ಸಮಯದಲ್ಲಿ ಸನಾತನ ಧರ್ಮದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ.
ಚಾತುರ್ಮಾಸದಲ್ಲಿ ಮಾಡಬೇಕಾದ ಕೆಲಸಗಳು
ಚಾತುರ್ಮಾಸದ ಸಮಯದಲ್ಲಿ ಮನೆಯಲ್ಲಿ ದೇವರ ಪೂಜೆ, ವ್ರತಗಳನ್ನು ಮಾಡಲು ವಿಶೇಷ ಒತ್ತು ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ಒಳ್ಳೆಯ ಫಲ ದೊರೆಯುತ್ತದೆ. ಭಗವಾನ್ ವಿಷ್ಣುವಿನ ಆರಾಧನೆ ಮತ್ತು ಭಗವದ್ಗೀತೆಯನ್ನು ಓದಬೇಕು. ಬಡವರಿಗೆ ಹಣ, ಬಟ್ಟೆ, ಛತ್ರಿ, ಚಪ್ಪಲಿ ಮತ್ತು ಇತರ ಅಗತ್ಯ ವಸ್ತುಗಳನ್ನು ದಾನ ಮಾಡಿದರೆ ಶುಭ.
ಚಾತುರ್ಮಾಸದಲ್ಲಿ ಮಾಡಬಾರದ ಕೆಲಸಗಳು
ಚಾತುರ್ಮಾಸದಲ್ಲಿ ಭೂಮಿಪೂಜೆ, ಮದುವೆ, ಗೃಹಪ್ರವೇಶ, ಉಪನಯನ ಸಂಸ್ಕಾರ ಮುಂತಾದ ಎಲ್ಲಾ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಈ ರೀತಿಯ ಹೊಸ ಕೆಲಸಗಳನ್ನು ಎಂದಿಗೂ ಆರಂಭಿಸಬಾರದು. ಈ ಸಮಯದಲ್ಲಿ ಕೈಗೊಂಡ ಯಾವುದೇ ಕೆಲಸವು ಉತ್ತಮ ಫಲಿತಾಂಶವನ್ನು ನೀಡುವುದಿಲ್ಲ. ಸುಳ್ಳು ಹೇಳುವುದಾಗಲೀ, ಇತರರಿಗೆ ಮೋಸ ಮಾಡುವುದಾಗಲೀ, ಸಮಸ್ಯೆ ಉಂಟು ಮಾಡುವುದಾಗಲೀ ಮಾಡಬಾರದು.
ಚಾತುರ್ಮಾಸದಲ್ಲಿ ಅನುಸರಿಸಬೇಕಾದ ನಿಯಮಗಳು
- ಚಾತುರ್ಮಾಸವನ್ನು ಕೆಲವರು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಈ ಸಮಯದಲ್ಲಿ ಸೂರ್ಯೋದಯಕ್ಕೆ ಮುನ್ನ ಏಳಬೇಕು. ಎದ್ದು ಸ್ನಾನ ಪೂಜೆ ಮಾಡಬೇಕು. ಅನಗತ್ಯ ವಾದ ವಿವಾದಗಳನ್ನು ತಪ್ಪಿಸಿ.
- ಈ ಸಮಯದಲ್ಲಿ ಧ್ಯಾನ ಮತ್ತು ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ವಿಷ್ಣು ಮತ್ತು ಶಿವನನ್ನು ಆರಾಧಿಸಿದರೆ ಒಳ್ಳೆಯದು. ಪೂರ್ವಿಕರಿಗಾಗಿ ಪ್ರಾರ್ಥನೆಗಳನ್ನು ಮಾಡಬೇಕು. ಬಡವರಿಗೆ ಮತ್ತು ನಿರಾಶ್ರಿತರಿಗೆ ಸಾಧ್ಯವಾದಷ್ಟು ದಾನ ಮಾಡಿ. ಆರೋಗ್ಯ , ಸಂಪತ್ತು, ದುಃಖ ಮತ್ತು ಪಾಪಗಳ ನಿವಾರಣೆಗಾಗಿ ಈ ಕೆಲಸಗಳನ್ನು ಮಾಡಿ.
- ಸಾಲದ ಹೊರೆ ಅಧಿಕವಾಗಿದ್ದರೆ ಚಾತುರ್ಮಾಸದಲ್ಲಿ ಅನ್ನದಾನ ಮಾಡುವುದು ಉತ್ತಮ. ಭಗವದ್ಗೀತೆಯನ್ನು ಪಠಿಸಿ. ಈ ಪರಿಹಾರಗಳನ್ನು ಅನುಸರಿಸಿದ ಎಲ್ಲರಿಗೂ ಮಂಗಳ ಉಂಟಾಗುತ್ತದೆ. ನಿಮ್ಮ ಜೀವನದ ಬಹುತೇಕ ಸಮಸ್ಯೆಗಳು ದೂರಾಗಿ ಶತ್ರುಗಳ ಬಾಧೆ ದೂರವಾಗುತ್ತದೆ. ಕಳೆದ ವರ್ಷ 148 ದಿನ ಚಾತುರ್ಮಾಸವಿದ್ದರೆ ಈ ವರ್ಷ 118 ದಿನಗಳಿವೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.