ಇಂದು ಮೋಹಿನಿ ಏಕಾದಶಿ; ಶುಭ ಮುಹೂರ್ತ, ಪೂಜಾ ವಿಧಾನ, ಪಠಿಸಬೇಕಾದ ಮಂತ್ರಗಳು ಯಾವುವು? ಇಲ್ಲಿದೆ ವಿವರ-indian festival auspices time to celebrate mohini ekadashi 2024 how to worship lord vishnu rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇಂದು ಮೋಹಿನಿ ಏಕಾದಶಿ; ಶುಭ ಮುಹೂರ್ತ, ಪೂಜಾ ವಿಧಾನ, ಪಠಿಸಬೇಕಾದ ಮಂತ್ರಗಳು ಯಾವುವು? ಇಲ್ಲಿದೆ ವಿವರ

ಇಂದು ಮೋಹಿನಿ ಏಕಾದಶಿ; ಶುಭ ಮುಹೂರ್ತ, ಪೂಜಾ ವಿಧಾನ, ಪಠಿಸಬೇಕಾದ ಮಂತ್ರಗಳು ಯಾವುವು? ಇಲ್ಲಿದೆ ವಿವರ

Mohini Ekadashi 2024: ಪ್ರತಿ ತಿಂಗಳು 2 ಬಾರಿ ಏಕಾದಶಿ ಬರುತ್ತದೆ. ಪ್ರತಿ ಏಕಾದಶಿಗೆ ವಿಶೇಷ ಮಹತ್ವವಿದೆ. ಇಂದು ಮೋಹಿನಿ ಏಕಾದಶಿ ಆಚರಿಸಲಾಗುತ್ತಿದ್ದು ಶುಭ ಮುಹೂರ್ತ, ಪೂಜಾ ವಿಧಾನ, ಪಠಿಸಬೇಕಾದ ಮಂತ್ರಗಳ ಬಗ್ಗೆ ಒಂದಿಷ್ಟು ವಿವರ ಇಲ್ಲಿದೆ.

ಇಂದು ಮೋಹಿನಿ ಏಕಾದಶಿ; ಶುಭ ಮುಹೂರ್ತ, ಪೂಜಾ ವಿಧಾನ, ಪಠಿಸಬೇಕಾದ ಮಂತ್ರಗಳ ಬಗ್ಗೆ ಮಾಹಿತಿ
ಇಂದು ಮೋಹಿನಿ ಏಕಾದಶಿ; ಶುಭ ಮುಹೂರ್ತ, ಪೂಜಾ ವಿಧಾನ, ಪಠಿಸಬೇಕಾದ ಮಂತ್ರಗಳ ಬಗ್ಗೆ ಮಾಹಿತಿ

ಮೋಹಿನಿ ಏಕಾದಶಿ 2024: ವೈಶಾಖ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯಲ್ಲಿ ಮೋಹಿನಿ ಏಕಾದಶಿ ಕೂಡಾ ಒಂದು. ಇಂದು ಮೇ 19, ಭಾನುವಾರದಂದು ಮೋಹಿನಿ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಈ ಏಕಾದಶಿಗೆ ವಿಶೇಷ ಮಹತ್ವವಿದೆ. ಈ ಬಾರಿಯ ಮೋಹಿನಿ ಏಕಾದಶಿಯು ಅನೇಕ ಶುಭ ಕಾರ್ಯಗಳೊಂದಿಗೆ ಬರುತ್ತಿದೆ. ಇಂದು ಸರ್ವಾರ್ಥ ಸಿದ್ಧಿಯೋಗ, ಲಕ್ಷ್ಮೀನಾರಾಯಣ ಯೋಗ ಮತ್ತು ಶುಕ್ರಾದಿತ್ಯ ಯೋಗವಿದೆ.

ಭಕ್ತರು ಇಂದು ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ವಿಷ್ಣು ದೇವರ ಆಶೀರ್ವಾದ ಪಡೆಯಲಿದ್ದಾರೆ. ಪುರಾಣಗಳ ಪ್ರಕಾರ ಮೋಹಿನಿ ಏಕಾದಶಿಯಂದು ಉಪವಾಸ ಮಾಡುವುದರಿಂದ ಜಾತಕದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಏಕಾದಶಿ ಪೂಜಾ ವಿಧಾನ, ಪರಿಹಾರಗಳು, ಮಹತ್ವ, ಮಂತ್ರಗಳು, ಉಪವಾಸ, ಪಠಣದ ಬಗ್ಗೆ ತಿಳಿಯೋಣ.

ಪೂಜಾ ವಿಧಾನ

ಮೋಹಿನಿ ಏಕಾದಶಿಯಂದು ಬೇಗ ಎದ್ದು ಸ್ನಾನ ಮಾಡಿ. ಮನೆಯ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಬೇಕು. ಭಗವಾನ್ ವಿಷ್ಣುವಿಗೆ ಪಂಚಾಮೃತ ಮತ್ತು ಗಂಗಾಜಲದಿಂದ ಅಭಿಷೇಕ ಮಾಡಬೇಕು. ನಂತರ ಶ್ರೀಗಂಧ ಮತ್ತು ಅರಿಶಿನ ಹೂವುಗಳನ್ನು ದೇವರಿಗೆ ಅರ್ಪಿಸಬೇಕು. ದೀಪವನ್ನು ಬೆಳಗಿ ಸಾಧ್ಯವಾದರೆ ಉಪವಾಸ ಮಾಡಬೇಕು. ಮೋಹಿನಿ ಏಕಾದಶಿ ವ್ರತ ಕಥೆಯನ್ನು ಓದಬೇಕು. ಹೀಗೆ ಮಾಡುವುದರಿಂದ ಎಲ್ಲಾ ಪಾಪಗಳೂ ದೂರವಾಗುತ್ತವೆ. ಪೂಜೆಯ ಸಮಯದಲ್ಲಿ ಓಂ ನಮೋ ಭಗವತೇ ವಾಸುದೇವಾಯ ನಮಃ ಎಂಬ ಮಂತ್ರವನ್ನು ಪಠಿಸಿ. ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ತುಳಸಿಯನ್ನು ಅರ್ಪಿಸಬೇಕು. ಆದರೆ ಏಕಾದಶಿಯ ದಿನ ತುಳಸಿ ಎಲೆಗಳನ್ನು ಕತ್ತರಿಸಬಾರದು ಆದ್ದರಿಂದ ಹಿಂದಿನ ದಿನವೇ ಕಿತ್ತು ಶೇಖರಿಸಿರಬೇಕು.

ಪಠಿಸಲು ಮಂತ್ರಗಳು

ಏಕಾದಶಿಯಂದು ವಿಷ್ಣುವಿನ ಪೂಜೆ ಮಾಡುವಾಗ ವಿಷ್ಣು ಅಷ್ಟೋತ್ತರ ಶತನಾಮಾವಳಿ ಪಠಿಸಿ, ವಿಷ್ಣು ಸಹಸ್ರನಾಮ ಜಪಿಸುವುದು ಇನ್ನೂ ಒಳ್ಳೆಯದು. ಓಂ ನಮೋ ಭಗವತೇ ವಾಸುದೇವಾಯ ನಮಃ, ಓಂ ವಿಷ್ಣುವೇ ನಮಃ ಮಂತ್ರಗಳನ್ನು ಜಪಿಸಿ.

ಮೋಹಿನಿ ಏಕಾದಶಿಯ ಮಹತ್ವ, ಮುಹೂರ್ತ

ಕ್ಷೀರ ಸಾಗರದಲ್ಲಿ ಸಮುದ್ರ ಮಂಥನದ ಸಮಯದಲ್ಲಿ, ವಿಷ್ಣುವು ಮೋಹಿನಿಯ ರೂಪವನ್ನು ತಾಳುತ್ತಾನೆ ಮತ್ತು ಅಸುರರಿಗೆ ಅಮೃತವನ್ನು ಪಡೆಯದಂತೆ ತಡೆದು ಅದನ್ನು ದೇವತೆಗಳಿಗೆ ನೀಡುತ್ತಾನೆ. ಆದ್ದರಿಂದಲೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನವನ್ನು ಮೋಹಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಮೋಹಿನಿ ಏಕಾದಶಿಯಂದು ಉಪವಾಸ ಮಾಡಿ, ವಿಷ್ಣುವನ್ನು ಪೂಜಿಸುವುದರಿಂದ ಪಾಪಗಳು ನಾಶವಾಗುತ್ತವೆ. 18 ಮೇ ಶನಿವಾರ ಬೆಳಗ್ಗೆ 11.22 ರಿಂದ ಮೇ 19 ಮಧ್ಯಾಹ್ನ 11.50 ವರೆಗೆ ಮುಹೂರ್ತವಿದೆ.

ಪರಿಹಾರಗಳು

ಈ ದಿನ ಸ್ನಾನದ ನಂತರ ವಿಷ್ಣು ಮೋಹಿನಿ ಮತ್ತು ಲಕ್ಷ್ಮೀದೇವಿಗೆ ವಿಶೇಷ ಪೂಜೆ ಮಾಡಬೇಕು. ವಿಷ್ಣು ಸಹಸ್ರನಾಮ ಪಠಿಸಬೇಕು. ತುಳಸಿ ಎಲೆಗಳು, ಹಣ್ಣುಗಳು, ಹೂವುಗಳು, ಹಳದಿ ಬಟ್ಟೆ, ಕೇಸರಿ ಹಾಲು ಇತ್ಯಾದಿಗಳನ್ನು ಭಗವಂತನಿಗೆ ಅರ್ಪಿಸಬೇಕು. ಏಕಾದಶಿಯಂದು ಉಪವಾಸ ಮಾಡುವವರು ಮರುದಿನ ಬ್ರಾಹ್ಮಣರಿಗೆ ಅನ್ನದಾನ ಮತ್ತು ವಸ್ತ್ರದಾನ ಮಾಡಿದ ನಂತರ ಉಪವಾಸ ಮುರಿಯಬೇಕು. ಹೀಗೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಬ್ರಾಹ್ಮಣರನ್ನು ಮನೆಗೆ ಆಹ್ವಾನಿಸಿ ಆಹಾರ ಮತ್ತು ಬಟ್ಟೆ ನೀಡಬೇಕು. ನಿಮ್ಮ ಸಾಮರ್ಥ್ಯಕ್ಕನುಗುಣವಾಗಿ ಸ್ವಲ್ಪ ದಕ್ಷಿಣೆಯನ್ನೂ ಕೊಡಿ. ಹೀಗೆ ಮಾಡುವುದರಿಂದ ವ್ಯಾಪಾರ ಸುಗಮವಾಗಿ ಸಾಗುತ್ತದೆ. ಮೋಹಿನಿ ಏಕಾದಶಿಯಂದು ಹಳದಿ ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ.

ಈ ಕೆಲಸಗಳನ್ನು ಮಾಡಬೇಡಿ

ಮೋಹಿನಿ ಏಕಾದಶಿಯಂದು ಅಪ್ಪಿತಪ್ಪಿಯೂ ಅನ್ನ, ಬೇಳೆ ಕಾಳುಗಳನ್ನು ಸೇವಿಸಬಾರದು. ಧಾನ್ಯಗಳಲ್ಲಿ ಎಲ್ಲಾ ಪಾಪಗಳು ಹೀರಲ್ಪಡುತ್ತವೆ. ಅವುಗಳನ್ನು ಸೇವಿಸುವುದರಿಂದ ಪಾಪಗಳು ದೇಹವನ್ನು ಸೇರುತ್ತವೆ ಎಂಬ ನಂಬಿಕೆ ಇದೆ. ಮಾಂಸ, ಮದ್ಯ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನೂ ಸೇವಿಸಬಾರದು ಎಂಬ ನಿಯಮವಿದೆ. ಯಾರೊಂದಿಗೂ ಜಗಳವಾಡಬೇಡಿ. ಯಾರ ಬಗ್ಗೆಯೂ ಅಸೂಯೆ ಪಡಬೇಡಿ, ಯಾರನ್ನೂ ಹಿಂಸೆ ಮಾಡಬೇಡಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.