ಈ ಬಾರಿ ಕೃಷ್ಣ ಜನ್ಮಾಷ್ಟಮಿ ಯಾವಾಗ? ಗೋಕುಲಾಷ್ಟಮಿ ಪೂಜೆಯ ಮುಹೂರ್ತ, ಮಹತ್ವವೇನು? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ಬಾರಿ ಕೃಷ್ಣ ಜನ್ಮಾಷ್ಟಮಿ ಯಾವಾಗ? ಗೋಕುಲಾಷ್ಟಮಿ ಪೂಜೆಯ ಮುಹೂರ್ತ, ಮಹತ್ವವೇನು? ಇಲ್ಲಿದೆ ವಿವರ

ಈ ಬಾರಿ ಕೃಷ್ಣ ಜನ್ಮಾಷ್ಟಮಿ ಯಾವಾಗ? ಗೋಕುಲಾಷ್ಟಮಿ ಪೂಜೆಯ ಮುಹೂರ್ತ, ಮಹತ್ವವೇನು? ಇಲ್ಲಿದೆ ವಿವರ

Krishna Janmashtami 2024: ಶ್ರೀ ಕೃಷ್ಣ, ಮಹಾವಿಷ್ಣುವಿನ 8 ಅವತಾರ. ಜಗತ್ತಿಗೆ ಭಗವದ್ಗೀತೆಯನ್ನು ಸಾರಿದ ಶ್ರೀಕೃಷ್ಣನು ಹುಟ್ಟಿದ್ದು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು. ಹಾಗಾದರೆ ಈ ವರ್ಷ ಜನ್ಮಾಷ್ಟಮಿಯನ್ನು ಎಂದು ಆಚರಿಸಲಾಗುತ್ತದೆ? ಮತ್ತು ಪೂಜಾ ವಿಧಿ ವಿಧಾನಗಳೇನು ಮಾಹಿತಿ ಇಲ್ಲಿದೆ ಓದಿ. (ಬರಹ: ಅರ್ಚನಾ ವಿ ಭಟ್‌)

ಈ ಬಾರಿ ಕೃಷ್ಣ ಜನ್ಮಾಷ್ಟಮಿ ಯಾವಾಗ? ಗೋಕುಲಾಷ್ಟಮಿ ಪೂಜೆಯ ಮುಹೂರ್ತ, ಮಹತ್ವವೇನು? ಇಲ್ಲಿದೆ ವಿವರ
ಈ ಬಾರಿ ಕೃಷ್ಣ ಜನ್ಮಾಷ್ಟಮಿ ಯಾವಾಗ? ಗೋಕುಲಾಷ್ಟಮಿ ಪೂಜೆಯ ಮುಹೂರ್ತ, ಮಹತ್ವವೇನು? ಇಲ್ಲಿದೆ ವಿವರ

ಹಿಂದೂ ಧರ್ಮದಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಬಹಳ ಮಹತ್ವವಿದೆ. ಶ್ರೀಕೃಷ್ಣನ ಜನ್ಮದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರೀಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಶ್ರೀಕೃಷ್ಣನು ವಿಷ್ಣುವಿನ 8ನೇ ಅವತಾರವಾಗಿ ಜನಿಸಿದನು ಎಂದು ಪುರಾಣಗಳು ಹೇಳುತ್ತವೆ.

 ಶ್ರೀಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನ ಶ್ರೀಕೃಷ್ಣನ ಮಗುವಿನ ರೂಪ ಅಂದರೆ ಲಡ್ಡು ಗೋಪಾಲನನ್ನು ಪೂಜಿಸಲಾಗುತ್ತದೆ. ಈ ದಿನದಂದು ಉಪವಾಸ ವ್ರತಾಚರಣೆಯನ್ನು ಮಾಡಲಾಗುತ್ತದೆ. ಈ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಯಾವಾಗ ಆಚರಿಸಲಾಗುತ್ತದೆ? ಪೂಜೆಯ ವಿಧಾನ ಮತ್ತು ಮಹತ್ವವನ್ನು ತಿಳಿಯೋಣ.

ಶ್ರೀಕೃಷ್ಣ ಜನ್ಮಾಷ್ಟಮಿ ಯಾವಾಗ?

ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 26, 2024, ಸೋಮವಾರ ಆಚರಿಸಲಾಗುತ್ತಿದೆ.

ಜನ್ಮಾಷ್ಟಮಿಯ ಆಚರಣೆಗೆ ಶುಭ ಮುಹೂರ್ತಗಳು

ಅಷ್ಟಮಿ ತಿಥಿ ಪ್ರಾರಂಭ - ಆಗಸ್ಟ್ 26 , 2024 ರಂದು 03:39 AM

ಅಷ್ಟಮಿ ತಿಥಿ ಅಂತ್ಯ - ಆಗಸ್ಟ್ 27, 2024 ಮಧ್ಯಾಹ್ನ 02:19 ಕ್ಕೆ

ರೋಹಿಣಿ ನಕ್ಷತ್ರ ಆರಂಭ - ಆಗಸ್ಟ್ 26, 2024 ರಂದು ಮಧ್ಯಾಹ್ನ 03:55 ರಿಂದ ಪ್ರಾರಂಭ

ರೋಹಿಣಿ ನಕ್ಷತ್ರ ಮುಕ್ತಾಯ - ಆಗಸ್ಟ್ 27, 2024 ರಂದು ಮಧ್ಯಾಹ್ನ 03:38 ಗಂಟೆಗೆ

ಚಂದ್ರೋದಯ ಸಮಯ ರಾತ್ರಿ- 11:41

ನಿಶಿತಾ ಪೂಜಾ ಸಮಯ - ಆಗಸ್ಟ್ 27 ಮಧ್ಯರಾತ್ರಿ 12:06 ದಿಂದ 12:51 ರವರೆಗೆ

ಅವಧಿ - ಒಟ್ಟು 45 ನಿಮಿಷಗಳು

ಪೂಜೆಯ ವಿಧಾನ

ಜನ್ಮಾಷ್ಟಮಿಯ ದಿನದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ. ನಂತರ ಶುಭ್ರವಾದ ಬಟ್ಟೆ ಧರಿಸಿ, ಮನೆಯ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ. ಅನಂತರ ದೀಪ ಹಚ್ಚಿ. ನಿಮ್ಮ ಮನೆಯಲ್ಲಿರುವ ದೇವರಿಗೆ ಜಲಾಭಿಷೇಕ ಮಾಡಿ. ಈ ದಿನ ಶ್ರೀಕೃಷ್ಣನ ಮಗುವಿನ ರೂಪ ಅಂದರೆ ಲಡ್ಡು ಗೋಪಾಲನನ್ನು ಪೂಜಿಸಲಾಗುತ್ತದೆ. ಬಾಲಗೋಪಾಲನ ಮೂರ್ತಿಗೆ ಜಲಾಭಿಷೇಕ ಮಾಡಿ. ಈ ದಿನ ಬಾಲಗೋಪಾಲನನ್ನು ತೊಟ್ಟಿಲಲ್ಲಿ ಮಲಗಿಸಿ ತೂಗಲಾಗುತ್ತದೆ. ನಿಮ್ಮ ಇಚ್ಛೆಯಂತೆ ಬಾಲಗೋಪಾಲನಿಗೆ ನೈವೇದ್ಯವನ್ನು ಇಡಿ.

ಅಂದು, ರಾತ್ರಿ ಪೂಜೆ ಬಹಳ ಮುಖ್ಯ. ಏಕೆಂದರೆ ಶ್ರೀಕೃಷ್ಣ ರಾತ್ರಿಯಲ್ಲಿ ಜನಿಸಿದನು. ರಾತ್ರಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಮಾಡಿ. ಅಲ್ಲದೆ ಬಾಲಗೋಪಾಲನಿಗೆ ಸಕ್ಕರೆ ಮಿಠಾಯಿ ಮತ್ತು ಒಣ ಹಣ್ಣುಗಳನ್ನು ಅರ್ಪಿಸಬೇಕು. ಕೊನೆಗೆ ಆರತಿ ಮಾಡಬೇಕು. ಅಂದು ಪುಟ್ಟ ಕೃಷ್ಣನನ್ನು ಪಾರಿಜಾತ ಪುಷ್ಪಗಳಿಂದ ಪೂಜಿಸುವುದು ಅತ್ಯಂತ ಮಂಗಳಕರ ಎಂದು ಪಂಡಿತರು ಸೂಚಿಸುತ್ತಾರೆ. ಕೃಷ್ಣಾಷ್ಟಮಿಯ ದಿನದಂದು ಒಂದು ಹೊತ್ತು ಮಾತ್ರ ಊಟ ಮಾಡಲಾಗುತ್ತದೆ. ನಂತರ ಕೃಷ್ಣನ ದೇವಾಲಯಕ್ಕೆ ಭೇಟಿ ನೀಡುವುದರಿಂದ ಕೋಟಿ ಜನ್ಮಗಳ ಪುಣ್ಯ ಲಭಿಸುತ್ತದೆ ಎಂದು ಪುರಾಣಗಳು ಹೇಳುತ್ತವೆ.

ಕೃಷ್ಣಾಷ್ಟಮಿಯ ಮಹತ್ವ

ಶ್ರೀಕೃಷ್ಣ ಜನ್ಮಾಷ್ಟಮಿ ಬಹಳ ಮುಖ್ಯವಾದ ಹಬ್ಬವಾಗಿದೆ. ಈ ದಿನ ಶಾಸ್ತ್ರೋಕ್ತವಾಗಿ ಶ್ರೀಕೃಷ್ಣನನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ನೆರವೇರುತ್ತವೆ. ಈ ದಿನ ಪೂಜೆ ಮಾಡುವುದರಿಂದ ಮಕ್ಕಳಿಲ್ಲದ ದಂಪತಿಗಳಿಗೂ ಸಂತಾನ ಪ್ರಾಪ್ತಿಯಾಗುತ್ತದೆ. ಶ್ರೀಕೃಷ್ಣ ಜನಿಸಿದ್ದು ರಾತ್ರಿ. ಹಾಗಾಗಿ ಕೃಷ್ಣ ಜನ್ಮಾಷ್ಟಮಿಯಂದು, ಶ್ರೀಕೃಷ್ಣನ ಮಗುವಿನ ರೂಪವನ್ನು ಪೂಜಿಸಲಾಗುತ್ತದೆ. ಬಾಲ ಗೋಪಾಲನನ್ನು ಮನೆಗೆ ಆಹ್ವಾನಿಸಲು ಮನೆಯ ಮುಂದೆ ಶ್ರೀಕೃಷ್ಣನ ಸಣ್ಣ ಹೆಜ್ಜೆ ಗುರುತುಗಳ ರಂಗೋಲಿ ಬರೆಯಲಾಗುತ್ತದೆ. ಹಲವಾರು ಪೋಷಕರು ತಮ್ಮ ಮಕ್ಕಳನ್ನು ಬಾಲ ಗೋಪಾಲರಂತೆ ಸುಂದರವಾಗಿ ಅಲಂಕರಿಸುತ್ತಾರೆ.

ಸಂತಾನವಿಲ್ಲದ ದಂಪತಿಗಳು ಕೃಷ್ಣಾಷ್ಟಮಿಯ ದಿನ ಸಂತಾನ ಗೋಪಾಲ ಮಂತ್ರ ಪಠಿಸಿ ಪೂಜೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಕೃಷ್ಣ ಅಷ್ಟೋತ್ತರ ಪೂಜೆ ಮತ್ತು ಕೃಷ್ಣ ಸಹಸ್ರ ನಾಮ ಪೂಜೆ ಮಾಡುವುದರಿಂದ ಕುಟುಂಬದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ. ಅಭಿವೃದ್ಧಿ ಹಾಗೂ ಐಶ್ವರ್ಯ ಸಿಗುತ್ತದೆ ಎಂಬ ನಂಬಿಕೆಯಿದೆ. ಶ್ರೀಕೃಷ್ಣನ ಆರಾಧನೆಯಿಂದ ಸಕಲ ಪಾಪಗಳು ನಿವಾರಣೆಯಾಗುತ್ತದೆ ಎಂದು ಸ್ಕಂದ ಪುರಾಣ ಹೇಳುತ್ತದೆ.

ಬರಹ: ಅರ್ಚನಾ ವಿ ಭಟ್‌

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.