ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Narasimha Jayanti 2024: ನರಸಿಂಹ ಜಯಂತಿ ಆಚರಣೆ ಯಾವಾಗ, ಶ್ರೀಹರಿಯು ಉಗ್ರ ನರಸಿಂಹ ಅವತಾರ ತಾಳಿದ್ದೇಕೆ? ಇಲ್ಲಿದೆ ಮಾಹಿತಿ

Narasimha Jayanti 2024: ನರಸಿಂಹ ಜಯಂತಿ ಆಚರಣೆ ಯಾವಾಗ, ಶ್ರೀಹರಿಯು ಉಗ್ರ ನರಸಿಂಹ ಅವತಾರ ತಾಳಿದ್ದೇಕೆ? ಇಲ್ಲಿದೆ ಮಾಹಿತಿ

ಹಿರಣ್ಯಕಶಿಪುವನ್ನು ಕೊಲ್ಲಲು ವಿಷ್ಣುವು ನರಸಿಂಹನ ಅವತಾರವನ್ನು ತಾಳಿ ಬಂದ ದಿನವನ್ನು ನರಸಿಂಹ ಜಯಂತಿ ಎಂದು ಆಚರಿಸಲಾಗುತ್ತದೆ. ಈ ವರ್ಷ ನರಸಿಂಹ ಜಯಂತಿ ಯಾವಾಗ ಆಚರಿಸಲಾಗುತ್ತದೆ? ಇದರ ಮಹತ್ವವೇನು? ಹಿರಣ್ಯ ಕಶಿಪು ಯಾರು ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ.

ನರಸಿಂಹ ಜಯಂತಿ ಆಚರಣೆ ಯಾವಾಗ, ಶ್ರೀಹರಿಯು ಉಗ್ರ ನರಸಿಂಹ ಅವತಾರ ತಾಳಿದ್ದೇಕೆ?
ನರಸಿಂಹ ಜಯಂತಿ ಆಚರಣೆ ಯಾವಾಗ, ಶ್ರೀಹರಿಯು ಉಗ್ರ ನರಸಿಂಹ ಅವತಾರ ತಾಳಿದ್ದೇಕೆ?

ವೈಶಾಖ ಮಾಸದಲ್ಲಿ ಧಾರ್ಮಿಕ ಆಚರಣೆಗಳಿಗೆ ಮಹತ್ವ ಪಡೆದಿದೆ. ಈ ಸಮಯದಲ್ಲಿ ನರಸಿಂಹ ಜಯಂತಿಯನ್ನು ಕೂಡಾ ಆಚರಿಸಲಾಗುತ್ತದೆ. ಶುಕ್ಲಪಕ್ಷದ ಸಪ್ತಮಿಯ ದಿನ ಗಂಗೋತ್ಪತ್ತಿ ಆಗುತ್ತದೆ. ತದ ನಂತರ ದ್ವಾದಶಿಯಂದು ಶ್ರೀಕೃಷ್ಣನ ಪೂಜೆಯನ್ನು ಮಾಡಿದರೆ ವಿಶೇಷ ಪುಣ್ಯವು ಲಭಿಸುತ್ತದೆ. ಇದಾದ ನಂತರ ವೈಶಾಖ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಚತುರ್ದಶಿ ದಿನ ನರಸಿಂಹ ಜಯಂತಿ ಬರಲಿದೆ.

ಶನಿವಾರದಂದು ಸ್ವಾತಿ ನಕ್ಷತ್ರದಲ್ಲಿ ಚತುರ್ದಶಿ ಇದ್ದಲ್ಲಿ ವಿಶೇಷವಾದಂತಹ ಫಲಗಳು ದೊರೆಯುತ್ತವೆ. ಇಲ್ಲವಾದಲ್ಲಿ ಚತುರ್ದಶಿ ಮತ್ತು ಸ್ವಾತಿ ನಕ್ಷತ್ರಗಳನ್ನು ಪರಿಗಣಿಸಬೇಕು. ಇದರ ಅನ್ವಯ 2024ರಲ್ಲಿ ಶ್ರೀನರಸಿಂಹ ಜಯಂತಿಯು ಮೇ ತಿಂಗಳ ಬುಧವಾರ 22 ರಂದು ಆಚರಿಸಲಾಗುತ್ತದೆ. ಸ್ವಾತಿ ನಕ್ಷತ್ರವು ಬೆಳಗಿನ ವೇಳೆ 07.01ರವರೆಗೂ ಇರಲಿದೆ. ಚತುರ್ದಶಿಯು ಸಂಜೆ 05.35 ರವರೆಗು ಇರುತ್ತದೆ. ಆದ್ದರಿಂದ ಆ ದಿನ ಮುಂಜಾನೆಯ ವೇಳೆ ಶ್ರೀನರಸಿಂಹಸ್ವಾಮಿ ಪೂಜೆ ಮಾಡುವುದರಿಂದ ವಿಶೇಷ ಫಲಗಳು ದೊರೆಯುತ್ತವೆ.

ನರಸಿಂಹ ಜಯಂತಿ ಪೂಜಾ ವಿಧಿ

ಕೆಲವರು ಚತುರ್ದಶಿಯ ಮಧ್ಯಾಹ್ನದ ವೇಳೆ ಸ್ನಾನ ಮಾಡುತ್ತಾರೆ. ಆನಂತರ ಸಂಜೆ ಕಲಶದಲ್ಲಿ ನೀರನ್ನು ತುಂಬಿ ಅದರಲ್ಲಿ ಲಕ್ಶ್ಮೀಸಮೇತ ಶ್ರೀ ನರಸಿಂಹ ಸ್ವಾಮಿಯ ಬಂಗಾರದ ಪ್ರತಿಮೆಯನ್ನು ಇಟ್ಟು ಪೂಜಿಸುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಚತುರ್ದಶಿಯಂದು ಬೆಳಗಿನ ವೇಳೆ ಪೂಜೆ ಮಾಡುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ. ಪೂಜೆಯ ನಂತರ ಮನ್ಯುಸೂಕ್ತ ಪಾರಾಯಣ ಮಾಡಿದರೆ ಮತ್ತು ಉದಕಭವನ್ನು ದಾನ ನೀಡಿದರೆ ಭೂದಾನ ಮಾಡಿದ ಪುಣ್ಯ ಲಭಿಸುತ್ತದೆ. ಇದಲ್ಲದೆ ಶ್ರೀನರಸಿಂಹ ಜಯಂತಿಯ ದಿನ ಪೂಜೆ ಮಾಡಿ ಅವರ ಕುಲದಲ್ಲಿ ಉಪವಾಸ ಮಾಡುವ ಪದ್ದತಿ ಇದ್ದಲ್ಲಿ ಉಪವಾಸ ಮಾಡಿದರೆ ಬ್ರಹ್ಮಹತ್ಯಾ ದೋಷವು ನಿವಾರಣೆಯಾಗುತ್ತದೆ. ಎಳ್ಳು ಮತ್ತು ಜೇನುತುಪ್ಪವನ್ನು ದಾನ ನೀಡುವುದರಿಂದ ಸಕಲ ಪಾಪ ನಿವಾರಣೆ ಆಗುತ್ತದೆ. ಕಲಶದಲ್ಲಿ ಲಕ್ಷ್ಮಿ ಸಮೇತರಾದ ನರಸಿಂಹಸ್ವಾಮಿ ವಿಗ್ರಹವನ್ನೇ ಇಟ್ಟು ಪೂಜಿಸಬೇಕು. ಸಾಧ್ಯವಿದ್ದಲ್ಲಿ ಆ ದಿನ ಉಪವಾಸ ಮಾಡುವುದೂ ಒಳ್ಳೆಯದು. ಮನೆಗೆ ಆಗಮಿಸಿದ ದಂಪತಿಗೆ ಭೋಜನ ವ್ಯವಸ್ಥೆ ಮಾಡುವ ಮೂಲಕ ನರಸಿಂಹ ಜಯಂತಿಯ ಪೂಜೆಯು ಸಮಾಪ್ತಿಯಾಗುತ್ತದೆ.

ಸನಕಾದಿ ಮುನಿಗಳ ಶಾಪದ ಫಲವಾಗಿ ಜಯ ವಿಜಯರು ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಾಗಿ ಭೂಲೋಕದಲ್ಲಿ ಜನ್ಮತಾಳುತ್ತಾರೆ. ವರಾಹ ರೂಪದಲ್ಲಿ ಬಂದ ವಿಷ್ಣುವು ಹಿರಣ್ಯಾಕ್ಷನನ್ನು ಕೊಲ್ಲುತ್ತಾನೆ. ಆಗ ಕೋಪಗೊಂಡ ಹಿರಣ್ಯಕಶಿಪು ತನ್ನ ಸೋದರನ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ತೀರ್ಮಾನಿಸುತ್ತಾನೆ. ಗುರು ಹಿರಿಯರ ಸಲಹೆಯಂತೆ ಬ್ರಹ್ಮನನ್ನು ಕುರಿತು ಕಠೋರ ತಪಸ್ಸನ್ನು ಆಚರಿಸುತ್ತಾನೆ. ಇವನ ತಪಸ್ಸಿಗೆ ಮೆಚ್ಚಿ ಬ್ರಹ್ಮನು ಪ್ರತ್ಯಕ್ಷವಾಗಿ ತಪಸ್ಸಿನ ಕಾರಣವನ್ನು ಕೇಳಿದಾಗ, ಹಿರಣ್ಯಕಶಿಪು ತನಗೆ ಅಮರತ್ವವನ್ನು ನೀಡಲು ಕೇಳುತ್ತಾನೆ. ಆದರೆ ಬ್ರಹ್ಮದೇವನು ನಿನಗೆ ಅಮರತ್ವವನ್ನು ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬೇರೊಂದು ವರವನ್ನು ಕೇಳು ಎಂದು ಹೇಳುತ್ತಾನೆ. ಹಿರಣ್ಯಕಶಿಪು ಬುದ್ಧಿವಂತಿಕೆಯಿಂದ ಯಾವುದೇ ಜೀವಿಗಳಿಂದ, ಮನೆಯ ಹೊರಗೆ ಅಥವಾ ಒಳಗೆ, ಹಗಲು ಅಥವಾ ರಾತ್ರಿ ಮತ್ತು ಯಾವುದೇ ಆಯುಧಗಳಿಂದ ತನಗೆ ಸಾವು ಬರಬಾರದೆಂಬ ವರವನ್ನು ಕೇಳುತ್ತಾನೆ. ಇದನ್ನು ಒಪ್ಪಿದ ಬ್ರಹ್ಮದೇವನು ಹಿರಣ್ಯಕಶಿಪುವಿಗೆ ವರವನ್ನು ದಯಪಾಲಿಸುತ್ತಾನೆ.

ಹಿರಣ್ಯಕಶಿಪುವನ್ನು ಕೊಲ್ಲಲು ಉಗ್ರ ರೂಪ ತಾಳಿದ ವಿಷ್ಣು

ಹಿರಣ್ಯಕಶಿಪು ಮಗನೇ ಪ್ರಹ್ಲಾದ. ಪ್ರಹ್ಲಾದನು ವಿಷ್ಣುವಿನ ಪರಮಭಕ್ತ. ತನ್ನ ತಂದೆ ಎದುರೇ ವಿಷ್ಣುವನ್ನು ಹೊಗಳುವುದಲ್ಲದೆ ಭಗವಾನ್ ವಿಷ್ಣುವನ್ನು ಪೂಜಿಸುತ್ತಾನೆ. ಇದರಿಂದ ಕೋಪಗೊಳ್ಳುವ ಹಿರಣ್ಯಕಶಿಪು ಜನ್ಮ ನೀಡಿದ ಮಗನನ್ನೇ ಕೊಲ್ಲಲು ಅನೇಕ ಬಾರಿ ಪ್ರಯತ್ನಿಸುತ್ತಾನೆ. ಆದರೆ ಅಗ್ನಿಗೆ ಅವನನ್ನು ಸುಡಲು ಸಾಧ್ಯವಾಗುವುದಿಲ್ಲ. ವಾಯುವಾಗಲಿ ಅಥವಾ ಇನ್ನಾವುದೇ ದೇವತೆಗಳು ಪ್ರಹ್ಲಾದನನ್ನು ಹತ್ಯೆ ಮಾಡಲು ವಿಫಲರಾಗುತ್ತಾರೆ. ಭಕ್ತಪ್ರಹ್ಲಾದನನ್ನು ಆನೆ ತುಳಿಯುವುದಿಲ್ಲ, ಪ್ರಪಾತಕ್ಕೆ ತಳ್ಳಿದರೂ ತೊಂದರೆ ಆಗುವುದಿಲ್ಲ, ವಿಷ ಕುಡಿಸಿದರೂ ಪ್ರಾಣ ಹೋಗುವುದಿಲ್ಲ.

ಒಮ್ಮೆ ಹಿರಣ್ಯಕಶಿಪು ಮತ್ತು ಪ್ರಹ್ಲಾದನ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಶ್ರೀಹರಿಯು ಮೂರೂ ಲೋಕದಲಿಯು ನೆನೆಸಿದ್ದಾನೆ ಎಂದು ಪ್ರಹ್ಲಾದನು ತನ್ನ ತಂದೆಗೆ ತಿಳಿಸುತ್ತಾನೆ. ಆಗ ಹಿರಣ್ಯಕಶಿಪುವು ಅರಮನೆಯ ಒಂದು ಕಂಬವನ್ನು ತೋರಿಸಿ ನಿನ್ನ ಆ ವಿಷ್ಣುವೋ ಈ ಕಂಬದಲ್ಲಿ ನೆಲೆಸಿರುವನೇ ಎಂದು ಕೇಳುತ್ತಾನೆ. ಆಗ ಹೌದು ತಂದೆ, ಈ ಕಂಬದಲ್ಲಿಯೂ ಶ್ರೀಹರಿಯು ನೆಲೆಸಿದ್ದಾನೆ ಎಂದು ಹೇಳುತ್ತಾನೆ. ಇದರಿಂದ ಕೋಪಗೊಂಡ ಹಿರಣ್ಯಕಶಿಪುವು ತನ್ನ ಗದೆಯಿಂದ ಜೋರಾಗಿ ಆ ಕಂಬಕ್ಕೆ ಹೊಡೆಯುತ್ತಾನೆ. ಆಗ ಆ ಕಂಬವು ಛಿದ್ರ ಛಿದ್ರಗೊಂಡು ಶ್ರೀ ವಿಷ್ಣುವು ಸಿಂಹ ರೂಪವುಳ್ಳ ಶ್ರೀ ನರಸಿಂಹಸ್ವಾಮಿಯ ಅವತಾರದಲ್ಲಿ ಪ್ರತ್ಯಕ್ಷನಾಗುತ್ತಾನೆ. ಮನೆಯ ಹೊರಗೂ ಅಲ್ಲದೆ, ಒಳಗೂ ಅಲ್ಲದೆ ಹೊಸ್ತಿಲ ಮೇಲೆ ಕುಳಿತು ಹಿರಣ್ಯಕಶಿಪುವಿನ ಎದೆಯನ್ನು ತನ್ನ ಉಗುರುಗಳಿಂದ ಸೀಳುತ್ತಾನೆ. ಈ ರೀತಿ ಹಿರಣ್ಯಕಶಿಪುವಿನ ಅಂತ್ಯವಾಗುತ್ತದೆ. ವಿಷ್ಣುವು ಶ್ರೀನರಸಿಂಹ ಸ್ವಾಮಿ ಅವತಾರ ತಾಳಿ ಹಿರಣ್ಯಕಶಿಪುವನ್ನು ವಧಿಸಿದ ಈ ದಿನವನ್ನು ನರಸಿಂಹ ಜಯಂತಿ ಎಂದು ಆಚರಿಸಲಾಗುತ್ತಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).