ವರಮಹಾಲಕ್ಷ್ಮಿ ಹಬ್ಬಕ್ಕೆ ಬ್ಯಾಕ್ ಡ್ರಾಪ್ ಅಲಂಕಾರ ಹೇಗೆ ಮಾಡಬೇಕೆಂದುಕೊಂಡಿದ್ದೀರಿ; ಇಲ್ಲಿ ಕೆಲವು ಐಡಿಯಾಗಳಿವೆ ನೋಡಿ
ಶ್ರಾವಣ ಮಾಸದ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಕೂಡಾ ಒಂದು. ಹಬ್ಬಕ್ಕೆ ಇನ್ನು 10 ದಿನಗಳಷ್ಟೇ ಬಾಕಿ ಇದೆ. ಈಗಿನಿಂದಲೇ ಸಕಲ ತಯಾರಿ ಮಾಡಲಾಗುತ್ತಿದೆ. ಬ್ಯಾಕ್ ಡ್ರಾಪ್ ತಯಾರಿಯೂ ಜೋರಾಗಿದೆ. ನೀವು ಯಾವ ರೀತಿ ಅಲಂಕಾರ ಮಾಡಬೇಕೆಂದುಕೊಂಡಿದ್ದೀರಿ. ಇಲ್ಲಿ ಕೆಲವು ಬ್ಯಾಕ್‌ಡ್ರಾಪ್ ಐಡಿಯಾಗಳಿವೆ ನೋಡಿ.
ಮಹಿಳೆಯರು ಸಂಭ್ರಮದಿಂದ ಎದುರು ನೋಡುತ್ತಿರುವ ವರಮಹಾಲಕ್ಷ್ಮಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಹೆಂಗಳೆಯರು ಹಬ್ಬಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿಯೂ ವಿಭಿನ್ನವಾಗಿ ಲಕ್ಷ್ಮಿಯನ್ನು ಅಲಂಕಾರ ಮಾಡುವವರು ಈ ಬಾರಿ ಯಾವ ರೀತಿ ಅಲಂಕಾರ ಮಾಡಬೇಕು? ಯಾವ ಬಣ್ಣದ ಸೀರೆ ತರಬೇಕು? ಬ್ಯಾಕ್ ಡ್ರಾಪ್ ಹೇಗೆ ಅಲಂಕಾರ ಮಾಡುವುದು ಎಂದು ಪ್ಲ್ಯಾನ್ ಮಾಡುತ್ತಿದ್ದಾರೆ.
ಆಗಸ್ಟ್ 16, ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹಬ್ಬಕ್ಕೆ ಲಕ್ಷ್ಮಿಯನ್ನು ಅಲಂಕಾರ ಮಾಡುವುದು ಎಷ್ಟು ಮುಖ್ಯವೋ, ಬ್ಯಾಕ್ ಡ್ರಾಪ್ (ದೇವಿ ಕೂರಿಸುವ ಹಿಂಬದಿ)ಯನ್ನು ಅಲಂಕಾರ ಮಾಡುವುದು ಅಷ್ಟೇ ಮುಖ್ಯವಾಗಿದೆ. ಕೆಲವರು ಮನೆಯಲ್ಲೇ ದೊರೆಯುವ ಕೆಲವು ಸಿಂಪಲ್ ವಸ್ತುಗಳಿಂದ ಡೆಕೊರೇಟ್ ಮಾಡಿದರೆ, ಇನ್ನೂ ಕೆಲವರು ಮಾರುಕಟ್ಟೆಯಲ್ಲಿ ದೊರೆಯುವ ತರೇಹವಾರಿ ಅಲಂಕಾರಿಕ ವಸ್ತುಗಳನ್ನು ಕೊಂಡು ತರುತಿದ್ದಾರೆ. ಕೆಲವೆಡೆ ರೆಡಿ ಬ್ಯಾಕ್‌ಡ್ರಾಪ್ ಕೂಡಾ ಮಾರಾಟವಾಗುತ್ತಿದೆ. ಈ ಬಾರಿ ಹಬ್ಬಕ್ಕೆ ಡೆಕೊರೇಷನ್ ಮಾಡಲು ಸಿಂಪಲ್ ಐಡಿಯಾಗಳು ಇಲ್ಲಿವೆ.
ಸಿಲ್ಕ್, ಕಾಟನ್ ಸೀರೆಗಳು
ಸೀರೆಗಳು ನಮಗೆ ಸುಲಭವಾಗಿ ದೊರೆಯುವ ವಸ್ತುಗಳು. ಇದನ್ನು ಬಳಸಿ ಅತ್ಯಾಕರ್ಷಕವಾದ ಬ್ಯಾಕ್‌ಡ್ರಾಪ್ ರೆಡಿ ಮಾಡಬಹುದು. ಇದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ. ಹಬ್ಬದಂದು ನೀವು ವರಮಹಾಲಕ್ಷ್ಮಿಗೆ ಯಾವ ಬಣ್ಣದ ಸೀರೆ ತರುತ್ತಿದ್ದೀರಿ ಎಂಬುದು ನಿಮ್ಮ ನೆನಪಿನಲ್ಲಿ ಇರಲಿ. ಅದಕ್ಕೆ ವಿರುದ್ಧವಾದ ಬಣ್ಣದ ಸೀರೆಯನ್ನು ಬ್ಯಾಕ್‌ಡ್ರಾಪ್‌ಗೆ ಆಯ್ಕೆ ಮಾಡಿಕೊಳ್ಳಿ. ಲಕ್ಷ್ಮಿ ವಿಗ್ರಹದ ಹಿಂಭಾಗ ಡಬಲ್ ಗಂ ಟೇಪ್, ಸೇಫ್ಟಿ ಪಿನ್ ಅಥವಾ ನಿಮಗೆ ಅನುಕೂಲವಾಗುವ ವಸ್ತುಗಳನ್ನು ಬಳಸಿ ಸೀರೆಯನ್ನು ಹರಡಿ. ಇದರ ಮೇಲೆ ನಿಮಗಿಷ್ಟವಾದ ಅಥವಾ ಸೀರೆಗೆ ಹೊಂದುವ ಹೂಗಳನ್ನು ಮಧ್ಯೆ ಮಧ್ಯೆ ಅರೇಂಜ್ ಮಾಡಿ. ಇದು ನೋಡಲು ಸಿಂಪಲ್ ಆದರೂ ಅತ್ಯಾಕರ್ಷಕವಾಗಿ ಕಾಣುತ್ತದೆ. ಹೂಗಳ ಬದಲಿಗೆ ವೀಳ್ಯದೆಲೆ ಕೂಡಾ ಇಡಬಹುದು.
ವೀಳ್ಯದೆಲೆ, ಬಾಳೆ ಎಲೆಗಳು
ಸಿಂಪಲ್ ಸೀರೆಯನ್ನು ಬ್ಯಾಕ್ ಡ್ರಾಪ್‌ಗೆ ಇಟ್ಟು ಅದರ ಮೇಲೆ ವೀಳ್ಯದೆಲೆ ಅಥವಾ ಬಾಳೆಎಲೆಗಳನ್ನು ಇಟ್ಟು ಮಾಡುವ ಅಲಂಕಾರ ಕೂಡಾ ಬಹಳ ಅಟ್ರಾಕ್ಟಿವ್ ಆಗಿರುತ್ತದೆ. ಇದನ್ನು ಮಾವಿನ ಎಲೆಯನ್ನು ಕೂಡಾ ಬಳಸಬಹುದು. ಇದರ ಮೇಲೆ ಸೇವಂತಿಗೆ ಅಥವಾ ಚೆಂಡು ಹೂವನ್ನು ಫಿಕ್ಸ್ ಮಾಡಿದರೆ ಇನ್ನಷ್ಟು ಸುಂದರವಾಗಿ ಕಾಣುತ್ತದೆ.
ತೆಂಗಿನ ಗರಿಯಿಂದ ತಯಾರಿಸಿದ ಬ್ಯಾಕ್‌ಡ್ರಾಪ್
ಪ್ರತಿಯೊಂದು ಶುಭ ಸಮಾರಂಭಕ್ಕೆ ತೆಂಗಿನ ಗರಿ ಇರಲೇಬೇಕು. ಸೀರೆ ಬದಲಿಗೆ ತೆಂಗಿನ ಗರಿಯನ್ನು ಹೆಣೆದು ಅದನ್ನು ಬ್ಯಾಕ್‌ಡ್ರಾಪ್ ಆಗಿ ಬಳಸಬಹುದು. ಇದರ ಮೆಲೆ ಸೇವಂತಿಗೆ, ಚೆಂಡು ಹೂವಿನ ಅಲಂಕಾರ ಹಸಿರು ಬ್ಯಾಕ್‌ಡ್ರಾಪ್‌ಗೆ ಇನ್ನಷ್ಟು ಮೆರುಗು ತಂದುನೀಡುತ್ತದೆ. ಆದರೆ ತೆಂಗಿನ ಗರಿ ಹೆಣೆಯಲು ಸಮಯ ಬೇಕಿರುವುದರಿಂದ ಈಗನಿಂದಲೇ ಪ್ಲ್ಯಾನ್ ಮಾಡಬೇಕು.
ಕೃತಕ ಹೂಗಳು
ಈಗಂತೂ ಮಾರುಕಟ್ಟೆಯಲ್ಲಿ ಅಸಲಿ ಹೂಗಳನ್ನೇ ನಾಚಿಸುವಂತ ಕೃತಕ ಹೂಗಳು ದೊರೆಯುತ್ತಿವೆ. ಹಿಂಬದಿಗೆ ಸಿಂಪಲ್ ಆದ ಸೀರೆ ಅಥವಾ ಮತ್ತಾವುದೇ ವಸ್ತ ಬಳಸಿ, ಅದರ ಮೇಲೆ ಸಂಪೂರ್ಣ ನಕಲಿ ಹೂಗಳ ಅಲಂಕಾರವನ್ನೇ ಮಾಡಬಹುದು. ಇದರ ಮಧ್ಯ ಮಧ್ಯಕ್ಕೆ ಸ್ಪಾರ್ಕಲ್ ಶೀಟ್‌ಗಳನ್ನೂ ಬಳಸಬಹುದು.
ಮರದ ಪಟ್ಟಿಗಳು
ನಿಮಗೆ ಇಷ್ಟವಾದ ಬಣ್ಣದ ಸೀರೆ ಅಥವಾ ಇತರ ಯಾವುದೇ ವಸ್ತವನ್ನು ಹಿಂಬದಿಗೆ ಇಟ್ಟು, ಅದರ ಮೇಲೆ ತೆಳುವಾದ ಮರದ ಪಟ್ಟಿಗಳನ್ನು ಚೌಕಾಕಾರವಾಗಿ ಅರೇಂಜ್ ಮಾಡಬಹುದು. ಗ್ಯಾಪ್ ಮಧ್ಯೆ ಮಧ್ಯಕ್ಕೆ ಹೂಗಳು, ಚಿನ್ನದ ಬಣ್ಣದ ಗಂಟೆಗಳು, ಮಾವಿನ ಎಲೆ, ಸೇವಂತಿಗೆ ಹೂಗಳನ್ನು ಅಂಟಿಸಬಹುದು.
ರಂಗೋಲಿ ಬ್ಯಾಕ್‌ಡ್ರಾಪ್
ಹೆಚ್ಚು ಆಡಂಬರ ಬೇಡ, ಸಿಂಪಲ್ ಆಗಿ ಬ್ಯಾಕ್ ಡ್ರಾಪ್ ಸಾಕು ಎನ್ನುವವರು, ಮಾರುಕಟ್ಟೆಯಲ್ಲಿ ದೊರೆಯುವ ರಂಗೋಲಿ ಪ್ರಿಂಟ್ ಇರುವ ವಸ್ತ್ರಗಳನ್ನು ಬ್ಯಾಕ್ ಡ್ರಾಪ್ ಆಗಿ ಬಳಸಬಹುದು. ಇದಕ್ಕೆ ಇನ್ನಷ್ಟು ಲುಕ್ ನೀಡಲು ಸೇವಂತಿಗೆ, ಚೆಂಡು ಹೂ ಅಥವಾ ಕೃತಕ ಹೂಗಳನ್ನು ಮೇಲ್ಭಾಗದಿಂದ ಇಳಿ ಬಿಡಬಹುದು.
ಈಗಂತೂ ಮಾರುಕಟ್ಟೆಯಲ್ಲಿ ಒಂದಕ್ಕಿಂದ ಒಂದು ಅತ್ಯಾಕರ್ಷಕ ರೆಡಿ ಬ್ಯಾಕ್‌ಡ್ರಾಪ್ ಕಾಣಸಿಗುತ್ತವೆ. ನಿಮಗೆ ಹೆಚ್ಚು ಸಮಯ ಇಲ್ಲದಿದ್ದರೆ, ಹಣ ಖರ್ಚಾದರೂ ಪರವಾಗಿಲ್ಲ ಎನ್ನುವಂತಿದ್ದರೆ ಈ ರೆಡಿ ಬ್ಯಾಕ್‌ಡ್ರಾಪ್‌ಗಳನ್ನು ತಂದು ನೀವು ಪೂಜೆಗೆ ಬಳಸಬಹುದು.