ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Sita Navami 2024: ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರಲು ಸೀತಾ ನವಮಿ ದಿನ ಮಹಿಳೆಯರು ಈ ಪೂಜಾ ವಿಧಾನ ಅನುಸರಿಸಿ

Sita Navami 2024: ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರಲು ಸೀತಾ ನವಮಿ ದಿನ ಮಹಿಳೆಯರು ಈ ಪೂಜಾ ವಿಧಾನ ಅನುಸರಿಸಿ

Sita Navami 2024: ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ನವಮಿ ದಿನದಂದು ಸೀತಾ ನವಮಿ ಆಚರಿಸಲಾಗುತ್ತದೆ. ಈ ಬಾರಿ ಮೇ 16 ರಂದು ಸೀತಾ ನವಮಿ ಇದೆ. ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರಲು ಸೀತಾ ನವಮಿ ದಿನ ಮಹಿಳೆಯರು ಈ ಪೂಜಾ ವಿಧಾನ ಅನುಸರಿಸಿ.

ಸೀತಾ ನವಮಿ 2024
ಸೀತಾ ನವಮಿ 2024

ಕೆಲವೇ ದಿನಗಳ ಹಿಂದಷ್ಟೇ ರಾಮ ನವಮಿ, ಹನುಮ ಜಯಂತಿ ಆಚರಿಸಲಾಗಿದೆ. ಇದೀಗ ಭಕ್ತರು ಸೀತಾ ನವಮಿ ಆಚರಣೆಗಾಗಿ ಕಾಯುತ್ತಿದ್ದಾರೆ. ಪ್ರತಿ ವರ್ಷವೂ ಸೀತಾ ನವಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 16, ಗುರುವಾರ ಸೀತಾ ನವಮಿಯನ್ನು ಆಚರಿಸಲಾಗುತ್ತಿದೆ. ವಿಶೇಷವಾಗಿ ಮಹಿಳೆಯರು ಜಾನಕಿ ಹುಟ್ಟಿದ ದಿನವನ್ನು ಆಚರಿಸಲು ಎದುರು ನೋಡುತ್ತಿದ್ದಾರೆ.

ಪಂಚಾಂಗದ ಪ್ರಕಾರ, ಸೀತಾ ನವಮಿಯನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ನವಮಿ ದಿನಾಂಕದಂದು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಸೀತೆಯು ಜನಕ ರಾಜನಿಗೆ ದೊರೆತ ದಿನವೆಂದು ನಂಬಲಾಗಿದೆ. ಇದೇ ದಿನವನ್ನು ಸೀತೆ ಹುಟ್ಟಿದ ದಿನವೆಂಬ ನಂಬಿಕೆ ಇದೆ. ಬಹಳ ಹಿಂದಿನಿಂದಲೂ ಸೀತಾ ನವಮಿಯನ್ನು ಆಚರಿಸುತ್ತಾ ಬರಲಾಗಿದೆ. ಅವಿವಾಹಿತ ಯುವತಿಯರು ಈ ದಿನ ಸೀತಾದೇವಿಯನ್ನು ಪ್ರಾರ್ಥಿಸಿದರೆ ರಾಮನಂಥ ಪತಿ ದೊರೆಯುತ್ತಾನೆ. ವಿವಾಹಿತ ಮಹಿಳೆಯರು ಈ ದಿನ ವಿಧಿ ವಿಧಾನಗಳ ಪ್ರಕಾರ ಭಗವಾನ್ ರಾಮ ಮತ್ತು ತಾಯಿ ಸೀತೆಯನ್ನು ಪೂಜಿಸಿದರೆ, ಅಖಂಡ ಸೌಭಾಗ್ಯವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ಜನಕ ಮಹಾರಾಜನಿಗೆ ಭೂಮಿಯಲ್ಲಿ ಸಿಕ್ಕ ಸೀತಾಮಾತೆ

ವಾಲ್ಮೀಕಿ ರಾಮಾಯಣದ ಪ್ರಕಾರ ಮಿಥಿಲಾದಲ್ಲಿ ಭೀಕರ ಬರಗಾಲದಿಂದ ಜನಕ ಮಹಾರಾಜ ಬಹಳ ಬೇಸರದಿಂದ ಇದ್ದನು. ಋಷಿಮುನಿಗಳ ಸಲಹೆಯ ಮೇರೆಗೆ ಜನಕನು ಯಜ್ಞ ಮಾಡಿ ಭೂಮಿಯನ್ನು ಉಳಲು ಆರಂಭಿಸಿದನು. ಆಗ ಭೂಮಿಯಲ್ಲಿ ದೊರೆತ ಪೆಟ್ಟಿಗೆಯ ಒಳಗೆ ಹೆಣ್ಣು ಮಗು ಕಾಣಿಸಿತು. ಅಂದು ಆ ಮಗುವನ್ನು ಮನೆಗೆ ಕರೆ ತಂದ ಜನಕನು ಪ್ರೀತಿಯಿಂದ ಸಾಕಿದನು. ಜನಕ ರಾಜನ ಮಗಳಾದ್ದರಿಂದ ಜಾನಕಿ ಎಂದೂ ಭೂಮಿಯಲ್ಲಿ ದೊರೆತಿದ್ದರಿಂದ ಸೀತೆ ಎಂದೂ ಹೆಸರಿಡಲಾಯ್ತು.

ಸೀತಾ ನವಮಿಯ ಶುಭ ಸಮಯ

ವೈಶಾಖ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು 16 ಮೇ 2024 ರಂದು ಬೆಳಗ್ಗೆ 04:52 ಕ್ಕೆ ಪ್ರಾರಂಭವಾಗುತ್ತದೆ. ಇದು ಮರುದಿನ ಅಂದರೆ, ಮೇ 17 ರಂದು ಬೆಳಗ್ಗೆ 07:18 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ಮೇ 16, ಗುರುವಾರ ಸೀತಾ ನವಮಿಯನ್ನು ಆಚರಿಸಲಾಗುತ್ತದೆ. ಬೆಳಗ್ಗೆ 11:08 ರಿಂದ 01:21 ವರೆಗೆ ಸೀತಾದೇವಿಯನ್ನು ಪೂಜಿಸಲು ಶುಭ ಮುಹೂರ್ತವಿದೆ.

ಸೀತಾ ನವಮಿ ಪೂಜಾ ವಿಧಿ ವಿಧಾನ

ಸೀತಾ ನವಮಿಯ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ. ಪೂಜಾ ಕೋಣೆಯನ್ನು ಸ್ವಚ್ಛ ಮಾಡಿ. ದೇವರ ಪೀಠದ ಮೇಲೆ ಕೆಂಪು ವಸ್ತವನ್ನು ಹರಡಿ, ಇದರ ಮೇಲೆ ಸ್ವಚ್ಛಗೊಳಿಸಿದ ಭಗವಾನ್ ಶ್ರೀ ರಾಮ ಮತ್ತು ಸೀತಾಮಾತೆಯ ವಿಗ್ರಹ ಅಥವಾ ಫೋಟೋವನ್ನು ಇಡಿ. ಸೀತಾ ಮಾತೆಯ ಮುಂದೆ ದೀಪಗಳನ್ನು ಬೆಳಗಿಸಿ ಮತ್ತು ಅವಳಿಗೆ ಅಲಂಕಾರಿಕ ವಸ್ತುಗಳನ್ನು ಅರ್ಪಿಸಿ. ಇದಾದ ನಂತರ ಸೀತೆಗೆ ಹಣ್ಣು, ಹೂವು, ಧೂಪ, ದೀಪ, ದೂರ್ವಾ, ನೈವೇದ್ಯ ಇತ್ಯಾದಿಗಳನ್ನು ಅರ್ಪಿಸಿ. ಮಂತ್ರಗಳನ್ನು ರಾಮ ಮತ್ತು ಸೀತೆಗೆ ಆರತಿ ಮಾಡಿ. ಈ ದಿನ ಉಪವಾಸವಿದ್ದು ಪೂಜಿಸಿದರೆ ನಿಮ್ಮ ದಾಂಪತ್ಯ ಜೀವನ ಇನ್ನಷ್ಟು ಸುಖ ಸಂತೋಷದಿಂದ ಕೂಡಿರುತ್ತದೆ.

ಈ ದಿನ ಹೆಣ್ಣು ಮಕ್ಕಳಿಗೆ ಹಳದಿ ವಸ್ತ್ರವನ್ನು ದಾನ ಮಾಡುವುದರಿಂದ, ಅವರಿಗೆ ಮೆಚ್ಚಿನ ಆಭರಣಗಳನ್ನು ನೀಡುವುದರಿಂದ ಕೂಡಾ ಶುಭ ಫಲ ದೊರೆಯಲಿದೆ ಎಂದು ನಂಬಲಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.