ವರ ಮಹಾಲಕ್ಷ್ಮಿ ಹಬ್ಬ ಆಚರಣೆ ಆರಂಭವಾಗಿದ್ದು ಹೇಗೆ? ಮೊದಲು ಈ ವ್ರತ ಆಚರಿಸಿದ್ದು ಯಾರು? ಶಿವನು ಪಾರ್ವತಿಗೆ ಹೇಳಿದ ವ್ರತ ಕಥೆ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವರ ಮಹಾಲಕ್ಷ್ಮಿ ಹಬ್ಬ ಆಚರಣೆ ಆರಂಭವಾಗಿದ್ದು ಹೇಗೆ? ಮೊದಲು ಈ ವ್ರತ ಆಚರಿಸಿದ್ದು ಯಾರು? ಶಿವನು ಪಾರ್ವತಿಗೆ ಹೇಳಿದ ವ್ರತ ಕಥೆ ಹೀಗಿದೆ

ವರ ಮಹಾಲಕ್ಷ್ಮಿ ಹಬ್ಬ ಆಚರಣೆ ಆರಂಭವಾಗಿದ್ದು ಹೇಗೆ? ಮೊದಲು ಈ ವ್ರತ ಆಚರಿಸಿದ್ದು ಯಾರು? ಶಿವನು ಪಾರ್ವತಿಗೆ ಹೇಳಿದ ವ್ರತ ಕಥೆ ಹೀಗಿದೆ

ಪ್ರತಿ ವರ್ಷ ಶ್ರಾವಣದಲ್ಲಿ ವರಮಹಾಲಕ್ಷ್ಮಿ ಹಬ್ವವನ್ನು ಆಚರಿಸುತ್ತೇವೆ. ಆದರೆ ಈ ಹಬ್ಬದ ಆಚರಣೆ ಶುರುವಾಗಿದ್ದು ಹೇಗೆ? ಈ ವ್ರತವನ್ನು ಮೊದಲು ಮಾಡಿದ್ದು ಯಾರು? ಸಾಕ್ಷಾತ್‌ ಪರಶಿವನು ಪಾರ್ವತಿಗೆ ಹೇಳಿದ ವ್ರತ ಕಥೆ ಹೀಗಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ವರ ಮಹಾಲಕ್ಷ್ಮಿ ಹಬ್ಬ ಆಚರಣೆ ಆರಂಭವಾಗಿದ್ದು ಹೇಗೆ? ಶಿವನು ಪಾರ್ವತಿಗೆ ಹೇಳಿದ ವ್ರತ ಕಥೆ ಹೀಗಿದೆ
ವರ ಮಹಾಲಕ್ಷ್ಮಿ ಹಬ್ಬ ಆಚರಣೆ ಆರಂಭವಾಗಿದ್ದು ಹೇಗೆ? ಶಿವನು ಪಾರ್ವತಿಗೆ ಹೇಳಿದ ವ್ರತ ಕಥೆ ಹೀಗಿದೆ

ಈ ವರ್ಷದ ವರ ಮಹಾಲಕ್ಷ್ಮಿ ವ್ರತವನ್ನು ಆಚರಿಸಲು ಹೆಂಗಳೆಯರು ಕಾಯುತ್ತಿದ್ದಾರೆ. ಈಗಾಗಲೇ ಹಬ್ಬದ ತಯಾರಿ ಆರಂಭಿಸಿದ್ದಾರೆ. ಈ ಬಾರಿ ಯಾವ ರೀತಿ ಡೆಕೊರೇಷನ್‌ ಮಾಡುವುದು? ಎಷ್ಟು ಜನರನ್ನು ಮನೆಗೆ ಆಹ್ವಾನಿಸಬೇಕು? ರಿಟನ್‌ ಗಿಫ್ಟ್‌ ಏನು ಕೊಡಬೇಕು? ಯಾವ ಬಣ್ಣದ ಸೀರೆ ತರಬೇಕು? ಹೀಗೆ ಹಬ್ಬಕ್ಕೆ ಭರ್ಜರಿ ತಯಾರಿಯಲ್ಲಿದ್ದಾರೆ.

ಈ ಬಾರಿ ಆಗಸ್ಟ್‌ 16 ರಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಹೆಣ್ಣು ಮಕ್ಳಳು ಈ ಹಬ್ವನ್ನು ಆಚರಿಸಿ ತಮ್ಮ ನೆರೆ ಹೊರೆಯವರನ್ನು, ಬಂಧುಗಳನ್ನು ಮನೆಗೆ ಆಹ್ವಾನಿಸುತ್ತಾರೆ. ಮನೆಯಲ್ಲಿ ಸುಖ , ಸಂಪತ್ತು, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ. ಹಸರೇ ಹೇಳುವಂತೆ ಬೇಡಿದ ಭಕ್ತರಿಗೆ ವರವನ್ನು ಕರುಣಿಸುವ ವರಮಹಾಲಕ್ಷ್ಮಿ ಹಬ್ಬಕ್ಕೆ ಸಂಬಂಧಿಸಿದಂತೆ ಒಂದು ಕಥೆ ಇದೆ.

ಸೂತ ಪುರಾಣಿಕರು ಸನಕಾದಿ ಋಷಿಗಳಿಗೆ ಹೇಳಿದ ಕಥೆ

ಒಮ್ಮೆ ಸೂತ ಪುರಾಣಿಕರು ಸನಕಾದಿ ಋಷಿಗಳ ಆಶ್ರಮಕ್ಕೆ ಆಗಮಿಸುತ್ತಾರೆ. ಸೂತರನ್ನು ಅರ್ಘ್ಯ ಪಾದಗಳಿಂದ ಗೌರವಿಸುತ್ತಾರೆ. ಆನಂತರ ಸನಕಾದಿ ಋಷಿಗಳು ಸೂತ ಪುರಾಣಿಕರನ್ನು ಕುರಿತು ಲೋಕ ಕಲ್ಯಾಣಕ್ಕಾಗಿ ಆಚರಿಸಬಹುದಾದ ಯಾವುದಾದರೊಂದು ವ್ರತಾಚರಣೆಯ ಬಗ್ಗೆ ತಿಳಿಸಲು ಕೇಳುತ್ತಾರೆ. ಆಗ ಸೂತ ಪುರಾಣಿಕರು ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳು ದೂರವಾಗಿ ದಾರಿದ್ಯ ನಿವಾರಣೆಯಾಗಿ ಧನ ಕನಕ ಸೌಭಾಗ್ಯಗಳು ದೊರೆಯುವ ಕತೆಯೊಂದನ್ನು ಹೇಳುವೆನೆಂದು ತಿಳಿಸುತ್ತಾರೆ. ಸಾಕ್ಷಾತ್ ಪರ ಶಿವನು ಪಾರ್ವತಿಗೆ ಹೇಳಿದ ವ್ರತಾಚರಣೆಯನ್ನು ತಿಳಿಸುತ್ತೇನೆ ಎಂದು ಹೇಳಿ ಕಥೆಯನ್ನು ಆರಂಭಿಸುತ್ತಾರೆ.

ಒಮ್ಮೆ ಕೈಲಾಸದಲ್ಲಿ ಶಿವ ಪಾರ್ವತಿ ಸಮೇತ ಎಲ್ಲರೂ ಸಂತಸದಿಂದ ಇರುತ್ತಾರೆ. ಕಲ್ಪವೃಕ್ಷ, ಶಿವಗಣ ಮತ್ತು ಕಾಮಧೇನುವಿನ ಆದಿಯಾಗಿ ಎಲ್ಲರೂ ಖುಷಿಯಿಂದ ಇರುತ್ತಾರೆ. ಇಡೀ ಕೈಲಾಸವೆಲ್ಲಾ ನೋಡಲು ಅತಿ ಸೊಗಸಾಗಿ ಕಾಣುತ್ತಿರುವ ಈ ಸಂದರ್ಭದಲ್ಲಿ ಸ್ವಯಂ ಪಾರ್ವತಿಯು ಶಿವನನ್ನು ಕುರಿತು ಲೋಕದ ಪ್ರಗತಿಗಾಗಿ ಫಲದಾಯಕವಾದ ಯಾವುದಾದರೂ ವ್ರತವನ್ನು ಮತ್ತು ಅದರ ಆಚರಣೆಯ ವಿಧಾನವನ್ನು ತಿಳಿಸಬೇಕೆಂದು ಕೇಳುತ್ತಾಳೆ. ಅದರಿಂದ ಸಂತಸಗೊಂಡ ಶಿವನು ಶ್ರೀ ವರಮಹಾಲಕ್ಷ್ಮಿ ವ್ರತದ ಬಗ್ಗೆ ತಿಳಿಸುತ್ತಾನೆ.

ಚಾರುಮತಿ ಎಂಬ ಪತಿವ್ರತೆ ಕನಸಿನಲ್ಲಿ ವರಮಹಾಲಕ್ಷ್ಮಿ

ಈ ಕತೆಯು ಚಾರುಮತಿ ಎಂಬ ಪತಿವ್ರತೆಯ ಜೀವನವನ್ನು ಆಧರಿಸಿದ್ದಾಗಿದೆ. ಹಿಂದಿನ ಕಾಲದಲ್ಲಿ ವಿದರ್ಭ ಎಂಬ ದೇಶವೊಂದಿತ್ತು. ಆ ದೇಶದಲ್ಲಿ ಕುಂಡಿನ ಎಂಬ ನಗರ ಒಂದಿತ್ತು. ಈ ದೇಶವು ಎಲ್ಲಾ ರೀತಿಯ ಅನುಕೂಲತೆಗಳಿಂದ ಸಕಲ ಸೌಭಾಗ್ಯಗಳಿಂದ ಕೂಡಿತ್ತು. ಇಲ್ಲಿನ ಜನರು ಸಹ ಸಂತೋಷದಿಂದ ತಮ್ಮ ಜೀವನ ನಡೆಸುತ್ತಿದ್ದರು. ಈ ನಗರದಲ್ಲಿ ನೆಲೆಸಿದ್ದವಳೇ ಚಾರುಮತಿ. ಈಕೆಯಲ್ಲಿನ ಪತಿ ವ್ರತಗುಣವು ಎಲ್ಲರ ಗಮನ ಸೆಳೆದಿತ್ತು. ಯಾರ ಮನಸ್ಸಿಗೆ ನೋವಾಗದಂತೆ ಮೃದುವಾದ ಮಾತುಗಳಿಂದ ಜೀವನ ಸಾಗಿಸುತ್ತಿದ್ದರು. ಆದರೆ ವಿಧಿ ಬಯಸಿನಂತೆ ಇವರು ಅತಿಯಾದ ಬಡತನದಿಂದ ಜೀವನ ನಡೆಸುತ್ತಿದ್ದರು. ಆದರೂ ಸಹ ಈಕೆಯೂ ತನ್ನ ನಿತ್ಯ ಪೂಜೆ ಮತ್ತು ಇತರ ಹವ್ಯಾಸಗಳನ್ನು ಮರೆತಿರುವುದಿಲ್ಲ. 

ಇದರಿಂದ ಸಂತುಷ್ಟಳಾದ ಮಹಾಲಕ್ಷ್ಮಿಯು ಒಮ್ಮೆ ಈಕೆಯ ಕನಸಿನಲ್ಲಿ ಬಂದು ನಿನ್ನ ಈ ಪುಣ್ಯದ ಕೆಲಸದಿಂದ ನಾನು ಸಂತಸ ಕೊಂಡಿದ್ದೇನೆ. ಆದ್ದರಿಂದ ನಿನ್ನ ಈ ಕಷ್ಟದ ಜೀವನಕ್ಕೆ ಮುಕ್ತಿ ನೀಡಲು ನಿನಗೆ ವ್ರತವೊಂದನ್ನು ತಿಳಿಸುತ್ತೇನೆ. ಯಾರೇ ಆದರೂ ಶ್ರಾವಣ ಮಾಸದ ಎರಡನೇ ಶುಕ್ರವಾರ ನನ್ನನ್ನು ನಿಯಮ ಬದ್ಧವಾಗಿ ಪೂಜಿಸಿದಲ್ಲಿ ಅವರ ದಾರಿದ್ಯ್ರವು ದೂರವಾಗಿ ಧನ ಕನಕಾದಿ ಸೌಭಾಗ್ಯವು ಲಭಿಸುವುದು. ಕೇವಲ ಪುಣ್ಯವಂತರಿಗೆ ಮಾತ್ರ ಈ ವ್ರತವನ್ನು ಆಚರಿಸುವ ಅವಕಾಶ ದೊರೆಯುತ್ತದೆ ಎಂದು ತಿಳಿಸುತ್ತಾಳೆ. ಸ್ತ್ರೀಯರು ಮಾತ್ರವಲ್ಲದೆ ಪುರುಷರು ಸಹ ಈ ಹಬ್ಬವನ್ನು ಆಚರಿಸಬಹುದು. ಇದರಿಂದಾಗಿ ಸಮಾಜದಲ್ಲಿ ಅವರ ಕೀರ್ತಿ ಪ್ರತಿಷ್ಠೆಗಳು ಹೆಚ್ಚುತ್ತವೆ ಎಂದು ಲಕ್ಷ್ಮಿ ಅದೃಶ್ಯಳಾಗುತ್ತಾಳೆ.

ವರಮಹಾಲಕ್ಷ್ಮಿ ವ್ರತದಿಂದ ಸಕಲ ಸಂತೋಷ ಗಳಿಸಿದ ಚಾರುಮತಿ

ನಿದ್ರೆಯಿಂದ ಎಚ್ಚೆತ್ತ ಚಾರುಮತಿ ತನ್ನ ಪತಿ ಮತ್ತು ನೆರೆಹೊರೆಯವರೊಂದಿಗೆ ಬಂಧು ಬಳಗದವರೊಂದಿಗೆ ಈ ಕನಸಿನ ವಿಚಾರವನ್ನು ಹಂಚಿಕೊಳ್ಳುತ್ತಾಳೆ. ಎಲ್ಲರೂ ಇದರ ಬಗ್ಗೆ ಸಂತಸದ ಮಾತುಗಳನ್ನು ಆಡುತ್ತಾರೆ. ಲಕ್ಷ್ಮಿಯ ಅಣತಿಯಂತೆ ಶ್ರಾವಣ ಮಾಸದ ಎರಡನೆಯ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾಳೆ. ಬಂಧು ಬಳಗದವರನ್ನು ಮತ್ತು ಆತ್ಮೀಯರನ್ನು ಪೂಜೆಗೆ ಆಹ್ವಾನಿಸುತ್ತಾಳೆ. ಬಂದವರಿಗೆ ಪ್ರಸಾದ ರೂಪವಾಗಿ ಭೋಜನ ವ್ಯವಸ್ಥೆ ಮಾಡುತ್ತಾಳೆ. ಇದರಿಂದಾಗಿ ಚಾರುಮತಿಯು ಸಕಲ ಐಶ್ವರ್ಯಗಳನ್ನು ಪಡೆದು ಸುಖ ಸಂತೋಷದಿಂದ ಜೀವನವನ್ನು ನಡೆಸಿ ಕೊನೆಗೆ ವಿಷ್ಣು ಲೋಕದಲ್ಲಿ ಸ್ಥಾನ ಪಡೆದಳು ಎಂದು ಶಿವನು ಪಾರ್ವತಿಗೆ ತಿಳಿಸುತ್ತಾನೆ.

ಪಾರ್ವತಿಯು ಶಿವನನ್ನು ಕುರಿತು ಈ ವ್ರತಾಚರಣೆಗೆ ಇರುವ ವಿಧಿ ವಿಧಾನಗಳನ್ನು ತಿಳಿಸಲು ತಿಳಿಸಿ ಕೇಳುತ್ತಾಳೆ. ಆಗ ಶಿವನು ಈ ವ್ರತ ಆಚರಿಸುವವರು ಮುಂಜಾನೆಯೇ ಎದ್ದು ಗೋತೀರ್ಥ ಅಥವಾ ಗೋಮಯದಿಂದ ಮನೆಯನ್ನು ಶುಚಿಗೊಳಿಸಬೇಕು. ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿದ ನಂತರ ಹೊಸ ಬಟ್ಟೆ ಧರಿಸಿ, ಮಂಟಪವನ್ನು ಇಟ್ಟು ಅಷ್ಟದಳದ ಪದ್ಮವನ್ನು ಬರೆದು ಕಲ್ಪೋಕ್ತ ಪ್ರಕಾರ ಪೂಜಿಸಬೇಕು. ಪೂಜೆ ಎಲ್ಲವೂ ಮುಗಿದ ನಂತರ ಸುವಾಸಿನಿಯರಿಗೆ ಭೋಜನ ಮಾಡಿಸಿದಲ್ಲಿ ಎಲ್ಲಾ ರೀತಿಯ ಕಷ್ಟಗಳು ದೂರವಾಗುತ್ತವೆ ಎಂದು ಶಿವನು ಹೇಳುತ್ತಾನೆ. ಈ ಕಥೆಯನ್ನು ಸನಕಾದಿ ಋಷಿಗಳು ಸೂತ ಪುರಾಣಿಕರಿಗೆ ಹೇಳುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.