ಶ್ರಾವಣ ಮಾಸದ ಮೊದಲ ಶನಿವಾರದೊಂದಿಗೆ ಕಲ್ಕಿ ಜಯಂತಿಯನ್ನೂ ಆಚರಿಸುತ್ತಿರುವ ಭಕ್ತರು, ಈ ದಿನ ಬೇರೆ ಏನೆಲ್ಲಾ ಆಚರಣೆ ಇದೆ ನೋಡಿ - ದಿನ ವಿಶೇಷ
ಶ್ರಾವಣ ಮಾಸದ ಮೊದಲ ಹಬ್ಬ ಮುಗಿದಿದೆ. ಇಂದು ಶ್ರಾವಣ ಶನಿವಾರ. ಈ ದಿನ ಕೆಲವೆಡೆ ವೆಂಕಟೇಶ್ವರನನ್ನು ಪೂಜಿಸಿದರೆ, ಕೆಲವೆಡೆ ಹನುಮಂತ, ಶನಿದೇವನನ್ನು ಪೂಜಿಸಲಾಗುತ್ತದೆ. ಶ್ರಾವಣ ಶನಿವಾರಗಳಲ್ಲಿ ಮನೆ ಮನೆಗೂ ತೆರಳಿ ಭಿಕ್ಷಾಟನೆ ಮಾಡಿ ಅದರಿಂದ ಬಂದ ವಸ್ತುಗಳಿಂದ ಅಡುಗೆ ತಯಾರಿಸಿ ತಿನ್ನುವ ಪದ್ಧತಿ ಕೂಡಾ ಇದೆ.
ಶ್ರಾವಣ ಆರಂಭವಾಗಿದೆ. ಸಾಲು ಸಾಲು ಹಬ್ಬಗಳನ್ನು ಶ್ರಾವಣ ಹೊತ್ತು ತಂದಿದೆ. ಆಗಸ್ಟ್ 9, ಶುಕ್ರವಾರ ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿಯನ್ನು ಅಚರಿಸಲಾಗಿದೆ. ಈ ದಿನ ಭಕ್ತರು ನಾಗದೇವತೆಗಳಿಗೆ, ಶಿವ ಪಾರ್ವತಿಯರ ಆರಾಧನೆ ಮಾಡಿ ನಾಗ ದೋಷ ಕಳೆಯುವಂತೆ ಪ್ರಾರ್ಥಿಸಿದ್ದಾರೆ. ಇಂದು ಶನಿವಾರ. ಶ್ರಾವಣ ಮಾಸದ ಮೊದಲ ದಿನ. ಈ ದಿನ ವೆಂಕಟೇಶ್ವರ ಸ್ವಾಮಿ , ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.
ಅರಳಿ ಮರಕ್ಕೆ ವಿಶೇಷ ಪೂಜೆ, ಶನಿ ದೇವರ ಆರಾಧನೆ
ಶ್ರಾವಣ ಶನಿವಾರ ಅರಳಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಶ್ವತ್ಥ ವೃಕ್ಷದಲ್ಲಿ ಲಕ್ಷೀ ಹಾಗೂ ಶ್ರೀ ವಿಷ್ಣು ವಾಸ ಮಾಡುವುದರಿಂದ ವಿಷ್ಣು ಮೂಲ ಮಂತ್ರವನ್ನು ಹೇಳಿಕೊಂಡು ಅರಳಿ ಮರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ ಈ ದಿನ ಶನಿ ದೇವರ ಪೂಜೆ ಮಾಡಲಾಗುತ್ತದೆ. ಶನಿ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ಅರ್ಪಿಸಿ ಶನಿಯನ್ನು ಪೂಜಿಸಲಾಗುತ್ತದೆ. ಶನಿ ಅಷ್ಟೋತ್ತರ ಶತನಾಮಾವಳಿ, ಶನಿ ಮಂತ್ರವನ್ನು ಪಠಸಿ ಶನಿ ದೃಷ್ಟಿಯಿಂದ ಬಿಡುಗಡೆ ನೀಡುವಂತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಜೊತೆಗೆ ಶನಿವಾರ ಅನೇಕ ಕಡೆ ಆಂಜನೇಯ ಸ್ವಾಮಿಯನ್ನು ಆರಾಧಿಸಲಾಗುತ್ತದೆ. ಹನುಮಾನ್ ಚಾಲೀಸಾ ಪಠಣೆ ಮಾಡಲಾಗುತ್ತದೆ. ಇನ್ನೂ ಕೆಲವರು ವೆಂಕಟೇಶ್ವರನನ್ನು ಪೂಜಿಸುತ್ತಾರೆ. ರಾಜ್ಯದ ಪ್ರಮುಖ ವೆಂಕಟೇಶ್ವರ ದೇವಾಲಯಗಳಲ್ಲಿ ದೀಪಾರಾಧನೆ ಮಾಡಲಾಗುತ್ತದೆ.
ಮನೆ ಮನೆಗೂ ತೆರಳಿ ಬಿಕ್ಷಾಟನೆ ಮಾಡುವ ಪದ್ದತಿ
ಶ್ರಾವಣ ಶನಿವಾರದಂದು ಹರಕೆ ಹೊತ್ತ ಕೆಲವರು ಮನೆ ಮನೆಗೂ ತೆರಳಿ ಭಿಕ್ಷಾಟನೆ ಮಾಡುತ್ತಾರೆ. ವೆಂಕಟೇಶ್ವರನ ಹೆಸರಿನಲ್ಲಿ ಭಿಕ್ಷಾಟನೆ ಮಾಡಿ, ಅದರಿಂದ ಬಂದ ವಸ್ತುಗಳಿಂದ ಅಡುಗೆ ಮಾಡಿ ತಿನ್ನುವುದು ಕೆಲವೆಡೆ ಪದ್ಧತಿಯಾಗಿ ನಡೆದುಕೊಂಡು ಬಂದಿದೆ. ಜನರು ಕೂಡಾ ಈ ಸಮಯದಲ್ಲಿ ತಮ್ಮ ಮನೆಗೆ ಭಿಕ್ಷಾಟನೆಗೆ ಬರುವವರಿಗೆ ಅಕ್ಕಿ, ಗೋಧಿಹಿಟ್ಟು ಸೇರಿದಂತೆ ವಿವಿಧ ವಸ್ತುಗಳನ್ನು ದಾನವಾಗಿ ನೀಡುತ್ತಾರೆ. ಹೀಗೆ ನೀಡಿದ ವಸ್ತು ದೇವರಿಗೆ ಅರ್ಪಿಸಿದಷ್ಟೇ ಶ್ರೇಷ್ಠ ಎಂಬ ನಂಬಿಕೆ ಇದೆ. ಕೆಲವೆಡೆ ಹೀಗೆ ಭಿಕ್ಷಾಟನೆ ಮಾಡುವುದು ಪದ್ಧತಿಯಾಗಿದೆ. ಶ್ರಾವಣ ಶನಿವಾರದ ಹಿನ್ನೆಲೆ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಗುತ್ತದೆ. ಸಾವಿರಾರು ಭಕ್ತರು ಶ್ರೀನಿವಾಸನ ದರ್ಶನಕ್ಕೆ ಆಗಮಿಸುತ್ತಾರೆ.
ಕಲ್ಕಿ ಜಯಂತಿ
ಶ್ರಾವಣ ಮಾಸದ ಮೊದಲ ಶನಿವಾರ ಕಲ್ಕಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಕಲ್ಕಿಯನ್ನು ಭಗವಾನ್ ವಿಷ್ಣುವಿನ 10ನೇ ಅವತಾರವೆಂದು ನಂಬಲಾಗಿದೆ. ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಕಲ್ಕಿ ಜಯಂತಿಯನ್ನು ಆಚರಿಸಲಾಗುವುದು. ಕಲ್ಕಿ ಪುರಾಣದಲ್ಲಿ ಕಲ್ಕಿಯ ಅವತಾರದ ಬಗ್ಗೆ ವಿವರಿಸಲಾಗಿದೆ.
ಪುರಾಣದ ಪ್ರಕಾರ, ಕಲಿಯುಗದಲ್ಲಿ ಅಧರ್ಮದ ಪ್ರಾಬಲ್ಯ ಹೆಚ್ಚಾದಾಗ ಮತ್ತು ಸದಾಚಾರದ ಅವನತಿ ಪ್ರಾರಂಭವಾದಾಗ, ಧರ್ಮವನ್ನು ಸ್ಥಾಪಿಸಲು ಮತ್ತು ರಾಕ್ಷಸರನ್ನು ನಾಶ ಮಾಡಲು ಭಗವಾನ್ ಕಲ್ಕಿಯು ಷಷ್ಠಿಯಂದು ಅವತರಿಸುತ್ತಾನೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷ ಷಷ್ಠಿಯಂದು ಭಗವಾನ್ ಕಲ್ಕಿಯನ್ನು ಪೂಜಿಸಲಾಗುತ್ತದೆ.
ಶುಭ ಯೋಗಗಳು
ಕಲ್ಕಿ ಜಯಂತಿಯಂದು ಸಾಧ್ಯ ಯೋಗ ರಚನೆಯಾಗುತ್ತಿದೆ. ಈ ಯೋಗವು ಮಧ್ಯಾಹ್ನ 2:52 ರವರೆಗೆ ಇರುತ್ತದೆ. ಇದಾದ ನಂತರ ಶುಭ ಯೋಗ ಪ್ರಾರಂಭವಾಗುತ್ತದೆ. ಈ ದಿನ ರವಿ ಯೋಗ ಹಾಗೂ ಶಿವಸ್ ಯೋಗ ಕೂಡಾ ರೂಪುಗೊಳ್ಳುತ್ತಿದೆ. ಒಟ್ಟಿನಲ್ಲಿ ಹೇಳುವುದಾದರೆ, ಕಲ್ಕಿ ಜಯಂತಿಯಂದು ಸಾಧ್ಯ, ಶುಭ ಮತ್ತು ರವಿ ಯೋಗಗಳನ್ನು ರಚಿಸಲಾಗುತ್ತಿದೆ. ಈ ಯೋಗಗಳ ಸಮಯದಲ್ಲಿ ಭಗವಾನ್ ಕಲ್ಕಿಯನ್ನು ಪೂಜಿಸುವುದರಿಂದ ಭಕ್ತನು ಬಯಸಿದ ವರವನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ. ಪೂಜೆಗೆ ಆಗಸ್ಟ್ 10 ರಂದು ಸಂಜೆ ಸಂಜೆ 4:25 ರಿಂದ 7:05 ರವರೆಗೆ ಶುಭ ಮುಹೂರ್ತವಿದೆ. ಷಷ್ಠಿ ತಿಥಿಯು ಆಗಸ್ಟ್ 10 ಬೆಳಗ್ಗೆ 3:14 ರಂದು ಆರಂಭವಾಗಿ 11 ಆಗಸ್ಟ್ ಬೆಳಗ್ಗೆ 5:44 ವರೆಗೂ ಇರುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.