ಇಂದು ವರ ಮಹಾಲಕ್ಷ್ಮಿ ಹಬ್ಬ; ಮೂಲ ನಕ್ಷತ್ರ ಇರುವುದರಿಂದ ಲಕ್ಷ್ಮೀಯೊಂದಿಗೆ ಸರಸ್ವತಿ ಪೂಜೆಗೂ ಶುಭ ದಿನ
Vaŗamahalakshmi Festival 2024: ಇಂದು ನಾಡಿನಾದ್ಯಂತ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಗುತ್ತಿದೆ. ಈ ದಿನ ಲಕ್ಷ್ಮೀ ಪೂಜೆ ಜೊತೆ ಸರಸ್ವತಿ ಪೂಜೆಗೂ ಶುಭ ಮುಹೂರ್ತವಿದೆ. ಸರಸ್ವತಿಯು ಮೂಲ ನಕ್ಷತ್ರದಲ್ಲಿ ಜನಿಸಿದ್ದು ಇಂದು ಅದೇ ನಕ್ಷತ್ರ ಇದೆ. ಆದ್ದರಿಂದ ಈ ದಿನ ಸರಸ್ವತಿ ಪೂಜೆಯನ್ನೂ ಮಾಡಲಾಗುತ್ತಿದೆ.
ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಒಂದು. ಪ್ರತಿ ವರ್ಷವೂ ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಬಹಳ ದಿನಗಳ ಮುನ್ನವೇ ಮಹಿಳೆಯರು ಶಾಪಿಂಗ್ ಮುಗಿಸಿದ್ದಾರೆ. ಗುರುವಾರ ಕೂಡಾ ಪ್ರಮುಖ ನಗರಗಳಲ್ಲಿ ಮಾರುಕಟ್ಟೆ ಜನಸಂದಣಿಯಿಂದ ತುಂಬಿ ತುಳುಕುತ್ತಿತ್ತು. ಜನರು ಹೂವು, ಹಣ್ಣು, ಬಾಳೆದಿಂಡು, ಸೀರೆಗಳನ್ನು ಕೊಳ್ಳುವಲ್ಲಿ ನಿರತರಾಗಿದ್ದರು.
ಕೆಲವರು ಇಂದು ಬ್ರಹ್ಮ ಮುಹೂರ್ತದಲ್ಲಿ ಪೂಜೆ ನೆರವೇರಿಸಿದ್ದಾರೆ. ನಿನ್ನೆ ಸಂಜೆಯೇ ವರಮಹಾಲಕ್ಷ್ಮಿಗೆ ಸೀರೆ ಉಡಿಸಿ, ಅಲಂಕಾರ ಮಾಡಿ, ತಳಿರು ತೋರಣ ಕಟ್ಟಿ, ಇಂದು ಕಳಶ ಪ್ರತಿಷ್ಟಾಪನೆ ಮಾಡಿ ಪೂಜೆ ಆರಂಭಿಸಿದ್ದಾರೆ. ಚಕ್ಕುಲಿ, ಪಾಯಸ, ಒಬ್ಬಟ್ಟು ಸೇರಿದಂತೆ ವರಮಹಾಲಕ್ಷ್ಮೀಗೆ ವಿವಿಧ ರೀತಿಯ ನೈವೇದ್ಯ ಮಾಡಿ ಪೂಜೆ ಮಾಡಲಾಗಿದೆ. ಎಲ್ಲರ ಮನೆ ಮುಂದೆ ಬಣ್ಣದ ರಂಗೋಲಿ ರಾರಾಜಿಸುತ್ತಿದೆ. ಇಂದು ಸಂಜೆ ಕೂಡಾ ವಿಶೇಷ ಪೂಜೆ ಇದ್ದು ಮಹಿಳೆಯರು ತಮ್ಮ ನೆರೆ ಹೊರೆಯವರನ್ನು ಕರೆದು ಅರಿಶಿನ, ಕುಂಕುಮ, ಸಿಹಿ ನೀಡಿ ಸಂಭ್ರಮಿಸಲು ಕಾಯುತ್ತಿದ್ದಾರೆ.
ವರಮಹಾಲಕ್ಷ್ಮೀ ವ್ರತವನ್ನು ಮೊದಲು ಆಚರಿಸಿದ್ದು ಯಾರು?
ಶಿವನು ಪಾರ್ವತಿಗೆ ಹೇಳಿದ ವರಮಹಾಲಕ್ಷ್ಮೀ ವ್ರತ ಕಥೆ ಹೀಗಿದೆ. ವಿದರ್ಭ ದೇಶದ ಕುಂಡಿನ ನಗರದಲ್ಲಿ ಚಾರುಮತಿ ಎಂಬ ದೈವ ಭಕ್ತೆ ಇದ್ದಳು. ಹುಟ್ಟಿದ ಮನೆಯಲ್ಲಿ ಮಾತ್ರವಲ್ಲದೆ ಮದುವೆ ಆದ ನಂತರ ಪತಿಯ ಮನೆಯಲ್ಲೂ ಚಾರುಮತಿ ಎಲ್ಲರ ಸೇವೆ ಮಾಡುತ್ತಿದ್ದಳು. ಎಲ್ಲರೊಂದಿಗೆ ನಗು ನಗುತ್ತಾ ಇರುತ್ತಿದ್ದಳು. ಬಡತನವಿದ್ದರೂ ಸಂತೋಷಕ್ಕೆ ಕೊರತೆ ಇರಲಿಲ್ಲ. ಎಷ್ಟೇ ಕಷ್ಟ ಇದ್ದರೂ ಚಾರುಮತಿ ಪೂಜೆ ಪುನಸ್ಕಾರಗಳನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. ಈಕೆಯ ಭಕ್ತಿಗೆ ಮೆಚ್ಚಿದ ಮಹಾಲಕ್ಷ್ಮೀ ಒಮ್ಮೆ ಚಾರುಮತಿ ಕನಸಿನಲ್ಲಿ ಬಂದು ವರಮಹಾಲಕ್ಷ್ಮೀ ವ್ರತವನ್ನು ಮಾಡುವಂತೆ ಹೇಳುತ್ತಾಳೆ. ಮನೆಯವರಿಗೆ ತನ್ನ ಕನಸಿನಲ್ಲಿ ನಡೆದದ್ದನ್ನು ವಿವರಿಸುತ್ತಾಳೆ.
ಮನೆಯವರ ಜೊತೆ ಸೇರಿ ಚಾರುಮತಿ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾಳೆ. ಆಡಂಬರವಾಗಿ ಅಲ್ಲದಿದದ್ದರೂ ಶಕ್ತ್ಯಾನುಸಾರ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿ, ನೆರೆ ಹೊರೆಯವರು, ಬಂಧು ಬಳಗದವರನ್ನು ಕರೆದು ಊಟ ಉಪಚಾರ ಮಾಡುತ್ತಾಳೆ. ಈ ವ್ರತದಿಂದ ಲಕ್ಷ್ಮೀ ಸಂತುಷ್ಟಳಾಗಿ ಚಾರುಮತಿಗೆ ಸಕಲ ಐಶ್ವರ್ಯ, ಸಂಪತ್ತು, ಸುಖ ನೀಡಿ ಆಶೀರ್ವದಿಸುತ್ತಾಳೆ. ಅಂದಿನಿಂದ ಸಂತೋಷದಿಂದ ಜೀವನ ನಡೆಸುವ ಚಾರುಮತಿ ನಂತರ ವಿಷ್ಣು ಲೋಕದಲ್ಲಿ ಸ್ಥಾನ ಪಡೆಯುತ್ತಾಳೆ ಎಂದು ಶಿವನು ಪಾರ್ವತಿಗೆ ವ್ರತಕಥೆಯನ್ನು ಹೇಳುತ್ತಾನೆ. ಅಂದಿನಿಂದ ಇದುವರೆಗೂ ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮೀ ವ್ರತವನ್ನು ಆಚರಿಸುತ್ತಾ ಬರಲಾಗಿದೆ.
ಸರಸ್ವತಿ ಪೂಜೆಗೂ ಇಂದು ಶುಭ ದಿನ
ಲಕ್ಷ್ಮೀ ಸಂಪತ್ತನ್ನು ನೀಡಿದರೆ, ಸರಸ್ವತಿ ವಿದ್ಯೆ ನೀಡುತ್ತಾಳೆ. ಲಕ್ಷ್ಮೀ, ಸರಸ್ವತಿ ಒಂದೇ ಕಡೆ ಇರುವುದಿಲ್ಲ ಎಂಬುದು ಲೋಕಾರೂಢಿ ಮಾತು. ಆದರೆ ಈ ಬಾರಿ ವರಮಹಾಲಕ್ಷ್ಮೀ ಹಬ್ಬದಂದು ಮೂಲ ನಕ್ಷತ್ರವಿದ್ದು ಆ ದಿನ ಸರಸ್ವತಿ ಪೂಜೆಗೆ ಶುಭ ದಿನವಿದೆ. ಸರಸ್ವತಿಯು ಮೂಲ ನಕ್ಷತ್ರದಲ್ಲಿ ಜನಿಸಿರುವುದರಿಂದ ಸಾಮಾನ್ಯವಾಗಿ ಆ ನಕ್ಷತ್ರ ಇರುವ ದಿನ ಸರಸ್ವತಿ ಪೂಜೆಗೆ ಆದ್ಯತೆ ನೀಡಲಾಗುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.