ಇಂದು ದೇವಶಯನಿ ಏಕಾದಶಿ; ಈ ದಿನ ಅನ್ನ ಏಕೆ ಸೇವಿಸಬಾರದು, ಇದರ ಹಿಂದಿರುವ ಕಾರಣವೇನು? ಇಲ್ಲಿದೆ ಮಾಹಿತಿ
ಇಂದು ಆಷಾಢ ಮಾಸದ ಏಕಾದಶಿ. ಇದನ್ನು ದೇವಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಏಕಾದಶಿಯ ಮಹತ್ವವೇನು? ಈ ದಿನ ಏಕೆ ಅನ್ನ ಸೇವಿಸಬಾರದು? ಚಾತುರ್ಮಾಸ ಎಂದರೆ ಯಾವ ಮಾಸಗಳು ಸೇರಿರುತ್ತವೆ? ಇಲ್ಲಿದೆ ಮಾಹಿತಿ.
ಆಷಾಢ ಮಾಸದಲ್ಲಿ ಬರುವ ಶುದ್ಧ ಏಕಾದಶಿ ಇತರ ಏಕಾದಶಿಗಳಿಗಿಂತ ಬಹಳ ವಿಶೇಷವಾಗಿದೆ. ಮೊದಲ ಏಕಾದಶಿಯು ವರ್ಷಾರಂಭದ ಸೂಚಕ ಎಂದು ಪುರಾಣಗಳು ಹೇಳುತ್ತವೆ. ಶ್ರೀ ಮಹಾ ವಿಷ್ಣುವು ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗೆ ಯೋಗನಿದ್ರೆಯಲ್ಲಿರುವುದರಿಂದ ಈ ಏಕಾದಶಿಯನ್ನು ಶಯನ ಏಕಾದಶಿ ಎಂದೂ ಕರೆಯುತ್ತಾರೆ. ಈ ದಿನ ದೇವಸ್ಥಾನಕ್ಕೆ ತೆರಳಿ ಭಗವಂತನ ದರ್ಶನ ಮಾಡಿದರೆ ಪಾಪಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ದೇವಶಯನಿ ಏಕಾದಶಿಯ ಮಹತ್ವ
ಒಂದು ವರ್ಷದಲ್ಲಿ 24 ಏಕಾದಶಿಗಳಿವೆ. ಮೊದಲ ಏಕಾದಶಿಯನ್ನು ಪ್ರಥಮ ಏಕಾದಶಿ, ಶಯನ ಏಕಾದಶಿ ಎಂದು ಕರೆಯಲಾಗುತ್ತದೆ. ಇದನ್ನು ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಏಕಾದಶಿ ಮಂಗಳವಾರ ರಾತ್ರಿ 8:34 ಕ್ಕೆ ಪ್ರಾರಂಭವಾಗಿ ಬುಧವಾರ ರಾತ್ರಿ 9:03 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಈ ದಿನ ಭಕ್ತರು ಉಪವಾಸ ದೀಕ್ಷೆ ಮಾಡುತ್ತಾರೆ. ಪುರಾಣಗಳ ಪ್ರಕಾರ ವಿಷ್ಣುವು ಇಂದಿನಿಂದ ಹಾಲಿನ ಕಡಲಿನಲ್ಲಿ ವಿಶ್ರಾಂತಿ ಪಡೆಯುತ್ತಾನೆ. ಅವರು ನಾಲ್ಕು ತಿಂಗಳು ನಿದ್ರೆಗೆ ಜಾರುತ್ತಾನೆ. ಭಗವಾನ್ ವಿಷ್ಣುವಿನ ನಿದ್ರೆಯನ್ನು ಯೋಗನಿದ್ರೆ ಎಂದು ಕರೆಯಲಾಗುತ್ತದೆ.
ಈ ಸಮಯದಲ್ಲಿ ಅನೇಕರು ಚಾತುರ್ಮಾಸ ದೀಕ್ಷೆಗಳನ್ನು ಪ್ರಾರಂಭಿಸುತ್ತಾರೆ. ಇದು ಶ್ರಾವಣ, ಭಾದ್ರಪದ, ಅಶ್ವಿನಿ ಮತ್ತು ಕಾರ್ತಿಕ ಮಾಸಗಳನ್ನು ಒಳಗೊಂಡಿದೆ. ಈ ಸಮಯದಲ್ಲಿ ದೇವತೆಗಳು ಧ್ಯಾನ ಮತ್ತು ಯೋಗನಿದ್ರೆಯ ಮೂಲಕ ಕಳೆದುಕೊಂಡ ಶಕ್ತಿಯನ್ನು ಪುನಃಸ್ಥಾಪಿಸುತ್ತಾರೆ. ಹೀಗೆ ಭಗವಾನ್ ವಿಷ್ಣುವು ಶಯನ ಏಕಾದಶಿಯಂದು ಮಲಗುತ್ತಾನೆ ಮತ್ತು ಕಾರ್ತಿಕ ಶುದ್ಧ ಏಕಾದಶಿಯಂದು ಯೋಗನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಇಂದು ಮಹಾವಿಷ್ಣುವಿನ ದರ್ಶನ ಮಾಡಿದರೆ ಪುಣ್ಯ ಫಲ ಸಿಗುತ್ತದೆ ಎಂದು ಪುರಾಣಗಳು ಹೇಳುತ್ತವೆ.
ಏಕಾದಶಿಯಂದು ಅನ್ನವನ್ನು ಏಕೆ ಸೇವಿಸಬಾರದು?
ಈ ಏಕಾದಶಿ ಆಚರಣೆ ಹಿಂದೆ ಒಂದು ಕಥೆ ಇದೆ. ಮೇಧಾ ಎಂಬ ಮಹರ್ಷಿಯು ಶಕ್ತಿದೇವತೆಯ ಕೋಪದಿಂದ ಪಾರಾಗಲು ತನ್ನ ದೇಹವನ್ನು ತ್ಯಾಗ ಮಾಡುತ್ತಾನೆ. ಒಂದು ಏಕಾದಶಿ ದಿನ ಮಹರ್ಷಿಯ ದೇಹವು ಭೂಮಿಯಲ್ಲಿ ದೊರೆಯುತ್ತದೆ. ನಂತರ ಮೇಧಾ ಅಕ್ಕಿಯ ರೂಪದಲ್ಲಿ ಮರುಜನ್ಮ ಪಡೆಯುತ್ತಾನೆ. ಆದ್ದರಿಂದ ಅಕ್ಕಿಯನ್ನು ಜೀವಿಗಳಂತೆ ಪರಿಗಣಿಸಲಾಗುತ್ತದೆ. ಏಕಾದಶಿಯಂದು ಅಕ್ಕಿಯಿಂದ ಮಾಡಿದ ಅನ್ನ ಅಥವಾ ಮತ್ತಾವುದೇ ಆಹಾರವನ್ನು ಸೇವಿಸಿದರೆ ಅದು ಮಹರ್ಷಿ ಮೇಧಾ ಮಾಂಸ ಹಾಗೂ ರಕ್ತವನ್ನು ಸೇವಿಸಿದಂತೆ. ಆದ್ದರಿಂದ ಏಕಾದಶಿ ಆಚರಣೆ ಮಾಡುವವರು ಅನ್ನ ಸೇವಿಸುವುದಿಲ್ಲ.
ಚಾತುರ್ಮಾಸ ದೀಕ್ಷೆಗಳನ್ನು ಮಾಡುವ ಭಕ್ತರು ವಿಷ್ಣುವಿನ ಆರಾಧನೆ ಮಾಡುತ್ತಾರೆ. ಓಂ ನಮೋ ನಾರಾಯಣಾಯ ಎಂಬ ಮಂತ್ರವನ್ನು ಜಪಿಸುತ್ತಾರೆ. ಈ ದಿನ ಕೆಲವರು ವಿಷ್ಣುವನ್ನು ಆರಾಧಿಸಿದರೆ ಬಹುತೇಕ ದೇವಾಲಯಗಳಲ್ಲಿ ವಿಷ್ಣುವಿನ ಅವತಾರವಾದ ವೆಂಕಟೇಶ್ವರನನ್ನು ಪೂಜಿಸುತ್ತಾರೆ. ಕರ್ನಾಟಕದ ಬಹುತೇಕ ದೇವಸ್ಥಾನಗಳಲ್ಲಿ ಇಂದು ಶ್ರೀನಿವಾಸ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.