ಸಂಬಂಧವಲ್ಲ ಭಾವನೆ ಮುಖ್ಯ, ಚರಿತ್ರೆಯ ಪುಟ ತಿರುವಿದಾಗಲೂ ರಾಖಿಗೆ ಇದೆ ಮಹತ್ವ; ಸೋದರತೆಯ ಪ್ರತೀಕವೇ ರಕ್ಷಾಬಂಧನ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂಬಂಧವಲ್ಲ ಭಾವನೆ ಮುಖ್ಯ, ಚರಿತ್ರೆಯ ಪುಟ ತಿರುವಿದಾಗಲೂ ರಾಖಿಗೆ ಇದೆ ಮಹತ್ವ; ಸೋದರತೆಯ ಪ್ರತೀಕವೇ ರಕ್ಷಾಬಂಧನ

ಸಂಬಂಧವಲ್ಲ ಭಾವನೆ ಮುಖ್ಯ, ಚರಿತ್ರೆಯ ಪುಟ ತಿರುವಿದಾಗಲೂ ರಾಖಿಗೆ ಇದೆ ಮಹತ್ವ; ಸೋದರತೆಯ ಪ್ರತೀಕವೇ ರಕ್ಷಾಬಂಧನ

ರಕ್ಷಾ ಬಂಧನ ಹಬ್ಬಕ್ಕೆ ತನ್ನದೇ ಮಹತ್ವ ಇದೆ. ಇಂದು ನಿನ್ನೆಯಲ್ಲ ಪುರಾಣ, ಚರಿತ್ರೆಯ ಪುಟ ತಿರುವಿದಾಗ ರಕ್ಷಾ ಬಂಧನದ ಪ್ರಾಮುಖ್ಯತೆ ಎಷ್ಟೆಂದು ತಿಳಿಯುತ್ತದೆ. ಈ ಬಾರಿ ಶ್ರಾವಣ ಮಾಸದ ಶುಕ್ಲಪಕ್ಷದ ಕಡೆಯ ದಿನ ಅಂದರೆ ಹುಣ್ಣಿಮೆಯಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಸಂಬಂಧವಲ್ಲ ಭಾವನೆ ಮುಖ್ಯ, ಚರಿತ್ರೆಯ ಪುಟ ತಿರುವಿದಾಗಲೂ ರಾಖಿಗೆ ಇದೆ ಮಹತ್ವ; ಸೋದರತೆಯ ಪ್ರತೀಕವೇ ರಕ್ಷಾಬಂಧನ
ಸಂಬಂಧವಲ್ಲ ಭಾವನೆ ಮುಖ್ಯ, ಚರಿತ್ರೆಯ ಪುಟ ತಿರುವಿದಾಗಲೂ ರಾಖಿಗೆ ಇದೆ ಮಹತ್ವ; ಸೋದರತೆಯ ಪ್ರತೀಕವೇ ರಕ್ಷಾಬಂಧನ (PC: Unsplash)

ಪ್ರತಿ ವರ್ಷದ ಶ್ರಾವಣ ಮಾಸದ ಶುಕ್ಲಪಕ್ಷದ ಕಡೆಯ ದಿನ ಅಂದರೆ ಹುಣ್ಣಿಮೆಯಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತೇವೆ. 2024 ರ ಆಗಸ್ಟ್ ತಿಂಗಳ ಸೋಮವಾರದಂದು 19 ನೇ ದಿನಾಂಕದಂದು ಹುಣ್ಣಿಮೆಯು ರಾತ್ರಿ 12.30 ರವರೆಗೂ ಇರುತ್ತದೆ. ಆದ್ದರಿಂದ ಈ ವರ್ಷದಲ್ಲಿ ರಕ್ಷಾಬಂಧನವನ್ನು ಇದೇ ದಿನ ಆಚರಿಸಬೇಕು.

ಸೋದರತೆಗೆ ಇದೆ ವಿಶೇಷ ಪ್ರಾಮುಖ್ಯತೆ

ರಕ್ಷಾಬಂಧನ ಹಬ್ಬವನ್ನು ವಯಸ್ಸಿನ ಅಂತರವಿಲ್ಲದೆ ಜಾತಿ ಭೇದವಿಲ್ಲದೆ ಆಚರಿಸಲಾಗುತ್ತದೆ. ಈ ಹಬ್ಬವು ಸೋದರತೆಯ ಪ್ರತೀಕವಾಗಿದೆ. ಈ ಹಬ್ಬದ ದಿನ ಸೋದರ ಸೋದರಿಯರ ನಡುವೆ ಮನಸ್ತಾಪವಿದ್ದರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಸೋದರ ಸೋದರಿಯರ ಪ್ರೀತಿಯ ಆಳವನ್ನು ಹೇಳಲು ಅಸಾಧ್ಯ. ಪುರಾಣದ ಕಾಲ ಆಗಲಿ ಅಥವಾ ಭಾರತೀಯ ಇತಿಹಾಸವಾಗಲಿ ಸೋದರತೆಗೆ ವಿಶೇಷ ಪ್ರಾಮುಖ್ಯತೆ ಇದೆ. ಒಮ್ಮೆ ರಕ್ಷಾಬಂಧನವನ್ನು ಕಟ್ಟಿದಲ್ಲಿ ಜೀವವಿರುವರೆಗೂ ಸೋದರಿಯನ್ನು ಕಾಪಾಡುವುದು ಸೋದರನ ಕರ್ತವ್ಯವಾಗುತ್ತದೆ.

ಶ್ರೀ ಕೃಷ್ಣ ಮತ್ತು ದ್ರೌಪದಿಯ ನಡುವಿನ ಬಾಂಧವ್ಯ, ನಂಬಿಕೆ ಎಲ್ಲರಿಗೂ ತಿಳಿದ ವಿಚಾರ. ದ್ರೌಪತಿಯು ಕಷ್ಟದಲ್ಲಿ ಇದ್ದಾಗ ಶ್ರೀಕೃಷ್ಣನು ವಸ್ತ್ರವನ್ನು ನೀಡಿ ಆಕೆಯ ಮಾನ ಸಂರಕ್ಷಿಸುತ್ತಾನೆ. ಹಾಗೆಯೇ ಕೃಷ್ಣನ ಕೈಗೆ ಗಾಯವಾದಾಗ ದ್ರುಪದ ನಂದಿನಿಯು ತನ್ನ ಸೀರೆಯನ್ನು ಹರಿದು ಮಾಧವನಿಗೆ ಕಟ್ಟಿ ಸಹಾಯ ಮಾಡುತ್ತಾಳೆ. ಬ್ರಿಟೀಷರು ರಾಣಾ ಪ್ರತಾಪ ಸಿಂಹನನ್ನು ಕೊಲ್ಲಲು ಬಂದಾಗ ನಡೆಯುವ ಹೋರಾಟದಲ್ಲಿ ಮಹಿಳೆಯೊಬ್ಬಳು ಹೋರಾಡಿ ಆತನ ಪ್ರಾಣವನ್ನು ಕಾಪಾಡುತ್ತಾಳೆ. ಕೊನೆಯವರೆಗೂ ಅವರಿಬ್ಬರ ನಡುವೆ ಸೋದರ ಪ್ರೇಮ ಉಳಿಯುತ್ತದೆ. ಪರನಾರಿ ಸೋದರ ಎಂಬ ಬಿರುದನ್ನು ಗಳಿಸಿದ ಮದಕರಿ ನಾಯಕ ನಮ್ಮೆಲ್ಲರಿಗೂ ಮಾದರಿ.  ಒಟ್ಟಾರೆ ನಮ್ಮ ಭಾರತದ ಮಹಿಳೆಯರು ಪ್ರಪಂಚಕ್ಕೆ ಸೋದರತೆಯ ಪಾಠ ಮಾಡುವಲ್ಲಿ ಶಕ್ತ್ಯರಾಗಿದ್ದಾರೆ.

ಸಂಬಂಧವಲ್ಲ, ಭಾವನೆ ಮುಖ್ಯ

ಇದರಿಂದಾಗಿ ನಮಗೆ ತಿಳಿಯುವ ಒಂದು ಮುಖ್ಯ ವಿಚಾರ ಎಂದರೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಲು ಸಂಬಂಧವೊಂದೇ ಮುಖ್ಯವಲ್ಲ. ಸಂಬಂಧದಷ್ಟೇ ಮನೋಭಾವನೆಯೂ ಮುಖ್ಯವಾಗುತ್ತದೆ. ಇದು ಗಣೇಶ ಚತುರ್ಥಿ, ಗೌರಿ ಹಬ್ಬ, ದೀಪಾವಳಿಯಂತೆ ಪ್ರತಿಯೊಬ್ಬರೂ ಆಚರಿಸಬೇಕಾದ ಹಬ್ಬವಾಗಿದೆ. ನಮ್ಮ ದೇಶದಲ್ಲಿ ಒಬ್ಬರು ಮತ್ತೊಬ್ಬರನ್ನು ಭೇಟಿ ಮಾಡುವಾಗ ಏನಾದರೂ ಉಡುಗೊರೆ ಕೊಡುವುದು ಸಾಮಾನ್ಯವಾಗಿದೆ. ಅದೇ ರೀತಿಯಲ್ಲಿ ರಕ್ಷಾ ಬಂಧನ ಹಬ್ಬದ ದಿನದಂದು ಪರಸ್ಪರ ಸೋದರ ಸೋದರಿಯರು ಉಡುಗೊರೆಯನ್ನು ಕೊಡುತ್ತಾರೆ.

ಕೈಗೆ ಕಟ್ಟುವ ರಾಕಿ ಒಂದು ರೀತಿಯ ರಣಕಂಕಣದಂತೆ. ಚರಿತ್ರೆಯ ದಿನಗಳಲ್ಲಿ ರಾಖಿ ಕಟ್ಟಿದ ಕ್ಷಣದಿಂದಲೇ ಆ ಮಹಿಳೆಯ ರಕ್ಷಣೆ ಸಂಪೂರ್ಣವಾಗಿ ಆ ವ್ಯಕ್ತಿಯದ್ದು. ಸೋದರರು ಸೋದರಿಯರ ಸಂಪೂರ್ಣ ರಕ್ಷಣೆಗೆ ಬದ್ಧರಾಗುತ್ತಾರೆ. ಅದೇ ರೀತಿ ಸಹೋದರಿಯರು ಸಹೋದರರ ದೀರ್ಘಾಯಸ್ಸು ಮತ್ತು ಯಶಸ್ಸನ್ನು ಕೋರುತ್ತಾರೆ. ರಕ್ಷಾ ಬಂಧನದಂದು ಬೆಳಗಿನ ಜಾವ ಎದ್ದು ಎಣ್ಣೆನೀರಿನ ಸ್ನಾನವನ್ನು ಮಾಡಬೇಕು. ಹೊಸ ಬಟ್ಟೆ ತೊಟ್ಟು, ತಮ್ಮ ಬಳಿ ಇರುವ ರಾಖಿಯನ್ನು ದೇವರ ಬಳಿ ಇಟ್ಟು ಪೂಜಿಸಬೇಕು. ಸೋದರರನ್ನು ಪೂರ್ವಭಿಮುಖವಾಗಿ ಕೂರಿಸಿ, ಹೆಣ್ಣು ಮಕ್ಕಳು ರಾಖಿ ಕಟ್ಟುವ ಮುನ್ನ ದೇವರಲ್ಲಿ ಸೋದರರ ಧೀರ್ಘಾಯಸ್ಸು ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಬೇಕು.

ಸಾಧ್ಯವಾದಷ್ಟು ಕಪ್ಪು ಬಣ್ಣವುಳ್ಳ ರಾಖಿಗಳನ್ನು ಕಟ್ಟಬಾರದು. ಅದೇ ರೀತಿಯಲ್ಲಿ ಆಯುಧಗಳ ಚಿನ್ಹೆ ಇರುವ ರಾಖಿಗಳನ್ನು ಕಟ್ಟಬಾರದು. ರಾಖಿಯಲ್ಲಿ ಬೆಂಕಿಯ ಚಿತ್ರಗಳೂ ಇರಬಾರದು. ಪರಸ್ಪರ ಸೋದರ ಸೋದರಿಯರು ಸಿಹಿಯನ್ನು ತಿಂದು ಆನಂತರ ಕುಟುಂಬದ ಎಲ್ಲರಿಗೂ ಸಿಹಿಯನ್ನು ಹಂಚಬೇಕು. ಒಟ್ಟಾರೆ ನಾವು ಆಚರಿಸುವ ರಕ್ಷಾಬಂಧನ ಹಬ್ಬಕ್ಕೆ ಧಾರ್ಮಿಕ, ಪೌರಾಣಿಕ ಮತ್ತು ಚಾರಿತ್ರಿಕ ಹಿನ್ನೆಲೆ ಇದೆ. ಧಾರ್ಮಿಕ ಆಚರಣೆಗಳನ್ನು ಅರ್ಥ ಪೂರ್ಣವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.