Ugadi 2025: ಈ ವರ್ಷ ಯುಗಾದಿ ಯಾವಾಗ? ಹಬ್ಬದ ಮಹತ್ವ, ಐತಿಹ್ಯ, ಆಚರಣೆಯ ಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ugadi 2025: ಈ ವರ್ಷ ಯುಗಾದಿ ಯಾವಾಗ? ಹಬ್ಬದ ಮಹತ್ವ, ಐತಿಹ್ಯ, ಆಚರಣೆಯ ಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ

Ugadi 2025: ಈ ವರ್ಷ ಯುಗಾದಿ ಯಾವಾಗ? ಹಬ್ಬದ ಮಹತ್ವ, ಐತಿಹ್ಯ, ಆಚರಣೆಯ ಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ

ಹಿಂದೂಗಳು ಆಚರಿಸುವ ಪ್ರಮುಖ ಹಬ್ಬ ಯುಗಾದಿ. ಇದನ್ನು ಹಿಂದೂಗಳ ಹೊಸ ವರ್ಷ ಎಂದೂ ಕರೆಯಲಾಗುತ್ತದೆ. ಈ ವರ್ಷ ಯುಗಾದಿ ಯಾವಾಗ, ಈ ಆಚರಣೆಯ ಮಹತ್ವ, ಐತಿಹ್ಯದ ಬಗ್ಗೆ ವಿವರ ಇಲ್ಲಿದೆ.

ಯುಗಾದಿ 2025
ಯುಗಾದಿ 2025 (PC: Canva)

ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹೊಸ ವರ್ಷದ ಮೊದಲ ದಿನ. ಆ ಕಾರಣಕ್ಕೆ ಯುಗಾದಿ ಹಬ್ಬವನ್ನು ಹಿಂದೂಗಳು ಹೊಸ ವರ್ಷ ಎಂದು ಆಚರಿಸುತ್ತಾರೆ. ಪ್ರತಿ ವರ್ಷ ಪ್ರಪಂಚದಾದ್ಯಂತ ಇರುವ ಹಿಂದೂಗಳು ಬೇವು–ಬೆಲ್ಲ ಹಂಚುವ ಮೂಲಕ ಯುಗಾದಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಕರ್ನಾಟಕ, ತಮಿಳುನಾಡು, ಆಂಧ್ರಪದ್ರೇಶ, ತೆಲಂಗಾಣ ಹಾಗೂ ಗೋವಾ ಭಾಗದಲ್ಲಿ ಯುಗಾದಿ ಹಬ್ಬದ ಆಚರಣೆ ಬಲು ಜೋರು. ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದ ಕಡೆ ಈ ಹಬ್ಬವನ್ನು ಗುಡಿ ಪಾಡ್ವಾ ಎಂದೂ ಕರೆಯುತ್ತಾರೆ. ಯುಗಾದಿ ಹಬ್ಬಕ್ಕೆ ತಿಂಗಳು ಇರುವಾಗಲೇ ಎಲ್ಲಾ ಕಡೆಗಳಲ್ಲಿ ಸಿದ್ಧತೆಗಳು ಆರಂಭವಾಗುತ್ತದೆ. ಹಾಗಾದರೆ 2025ರಲ್ಲಿ ಯುಗಾದಿ ಯಾವಾಗ, ಈ ಹಬ್ಬದ ಮಹತ್ವವೇನು, ಇದನ್ನು ಹೇಗೆಲ್ಲಾ ಆಚರಿಸಬಹುದು ಎಂಬ ವಿವರ ಇಲ್ಲಿದೆ.

2025ರಲ್ಲಿ ಯುಗಾದಿ ಯಾವಾಗ?

ಚಾಂದ್ರಮಾನ ಕ್ಯಾಲೆಂಡರ್‌ನ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಪ್ರತಿವರ್ಷ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ ಯುಗಾದಿ ಹಬ್ಬ ಬರುತ್ತದೆ. ಈ ವರ್ಷ ಮಾರ್ಚ್ 30, ಭಾನುವಾರ ಯುಗಾದಿ ಹಬ್ಬ ಬರುತ್ತದೆ.

ಯುಗಾದಿ ಎಂದರೇನು?

ಯುಗದ ಆದಿ ಅಂದರೆ ಹೊಸ ಯುಗದ ಆರಂಭವನ್ನು ಯುಗಾದಿ ಎಂದು ಕರೆಯಲಾಗುತ್ತದೆ. ‘ಯುಗ‘ (ವರ್ಷ) ಮತ್ತು ‘ಆದಿ‘ (ಆರಂಭ) ಎಂಬರ್ಥ. ಇವು ಸಂಸ್ಕೃತ ಮೂಲದ ಪದಗಳಾಗಿವೆ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ ಬರುವ ಈ ದಿನವು ಹಿಂದೂಗಳಲ್ಲಿ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಯುಗಾದಿ ದಿನ ಬೇವು–ಬೆಲ್ಲ ಹಂಚುವುದು ಪದ್ಧತಿ. ಇದು ಬದುಕು ಕೂಡ ಬೇವು–ಬೆಲ್ಲದಂತೆ ಸಿಹಿ ಕಹಿ ಎರಡನ್ನೂ ಸಮನಾಗಿ ಹೊಂದಿರುತ್ತದೆ ಎಂಬುದನ್ನು ಸಂಕೇತಿಸುತ್ತದೆ. ಈ ದಿನ ಮನೆಯನ್ನೆಲ್ಲಾ ಚೆನ್ನಾಗಿ ಗುಡಿಸಿ, ಒರೆಸಿ ತೋರಣಗಳಿಂದ ಅಲಂಕಾರ ಮಾಡಿ, ರಂಗೋಲಿ ಬಿಡಿಸಿ ಸಿಂಗರಿಸಲಾಗುತ್ತದೆ. ಯುಗಾದಿ ಹಬ್ಬದಲ್ಲಿ ವಿಶೇಷ ಅಡುಗೆಗಳನ್ನು ಮಾಡಿ ಬಡಿಸಲಾಗುತ್ತದೆ. ಯುಗಾದಿಗೆ ವಿಶೇಷವಾಗಿ ಪಚಡಿ ಎನ್ನುವ ಖಾದ್ಯವನ್ನು ತಯಾರಿಸುವ ಪದ್ಧತಿ ಕೆಲವೆಡೆ ಇದೆ. ಈ ದಿನ ದೇವಾಲಯಗಳಿಗೆ ಭೇಟಿ ನೀಡುವುದು ವಿಶೇಷ.

ಯುಗಾದಿ ಐತಿಹ್ಯ ಹೀಗಿದೆ

ಹಿಂದೂ ಪುರಾಣದ ಪ್ರಕಾರ, ಬ್ರಹ್ಮ ದೇವರು ಈ ದಿನ ವಿಶ್ವವನ್ನು ಸೃಷ್ಟಿಸಿದರು. ನಂತರ ಅವರು ದಿನಗಳು, ವಾರಗಳು, ತಿಂಗಳುಗಳು ಮತ್ತು ವರ್ಷಗಳನ್ನು ಸೃಷ್ಟಿಸಿದರು. ಆದ್ದರಿಂದ, ಯುಗಾದಿಯನ್ನು ವಿಶ್ವ ಸೃಷ್ಟಿಯ ಮೊದಲ ದಿನ ಎಂದು ನಂಬಲಾಗಿದೆ.

ಯುಗಾದಿ ಆಚರಣೆ

 ಸಾಮಾನ್ಯವಾಗಿ ಯುಗಾದಿಗೆ ಒಂದು ವಾರದ ಮೊದಲು ಸಿದ್ಧತೆಗಳು ಪ್ರಾರಂಭವಾಗುತ್ತದೆ. ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ, ಅಲಂಕರಿಸಲು ಪ್ರಾರಂಭಿಸುತ್ತಾರೆ.

ಹೊಸ ವರ್ಷವು ರಂಗೋಲಿಯ ವಿವಿಧ ಬಣ್ಣಗಳಂತೆ ಪ್ರಕಾಶಮಾನವಾಗಿ ಮತ್ತು ವರ್ಣಮಯವಾಗಿರುತ್ತದೆ ಎಂದು ನಂಬಲಾಗಿರುವುದರಿಂದ ಬಹುತೇಕ ಮನೆಗಳ ಪ್ರವೇಶದ್ವಾರಗಳನ್ನು ವರ್ಣರಂಜಿತ ರಂಗೋಲಿ ವಿನ್ಯಾಸಗಳಿಂದ ಅಲಂಕರಿಸಲಾಗುತ್ತದೆ.

ಹಬ್ಬದ ದಿನ ಜನರು ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸಾಂಪ್ರದಾಯಿಕವಾಗಿ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ.

ದೇವಾಲಯಗಳು, ಮನೆಗಳು ಮತ್ತು ಅಂಗಡಿಗಳ ಪ್ರವೇಶದ್ವಾರಗಳಲ್ಲಿ ಮಾವಿನ ಎಲೆಗಳಿಂದ ತೋರಣ ಕಟ್ಟಲಾಗುತ್ತದೆ.

ಯುಗಾದಿಯನ್ನು ಹೊಸದನ್ನು ಪ್ರಾರಂಭಿಸಲು ಸಮೃದ್ಧ ದಿನವೆಂದು ಪರಿಗಣಿಸಲಾಗಿರುವುದರಿಂದ ಈ ದಿನದಂದು ಹೊಸ ವ್ಯಾಪಾರ ಉದ್ಯಮಗಳು ಮತ್ತು ಅಂಗಡಿಗಳು, ಮುಂಗಟ್ಟುಗಳನ್ನು ಆರಂಭಿಸಲಾಗುತ್ತದೆ. 

ಯಗಾದಿ ಹಬ್ಬಕ್ಕೆ ಹೋಳಿಗೆ, ಪಾಯಸದ ಜೊತೆ ಹಲವು ಬಗೆಯ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇದರಲ್ಲಿ ಆರು ವಿಭಿನ್ನ ರುಚಿಗಳನ್ನು ಸೇರಿಸುವ ಮೂಲಕ ತಯಾರಿಸಲಾದ ಪಚಡಿ ಕೂಡ ಬಹಳ ವಿಶೇಷ.  ಬೇವಿನ ಹೂವುಗಳು, ಕಾಳುಮೆಣಸಿನ ಪುಡಿ, ಹುಣಸೆಹಣ್ಣು, ಮಾವು, ಬೆಲ್ಲ ಮತ್ತು ಉಪ್ಪು ಬೆರೆಸಿ ಇದನ್ನು ತಯಾರಿಸಲಾಗುತ್ತದೆ.

ಹಬ್ಬದ ಮತ್ತೊಂದು ಪ್ರಮುಖ ಅಂಶವೆಂದರೆ ಪಂಚಾಂಗವನ್ನು ಕೇಳುವುದು - ಪುರೋಹಿತರು, ಜ್ಯೋತಿಷಿಗಳು ಅಥವಾ ಕುಟುಂಬದ ಹಿರಿಯ ಸದಸ್ಯರು ಭವಿಷ್ಯವನ್ನು ನುಡಿಯುತ್ತಾರೆ.  

ಕುಟುಂಬ ಸದಸ್ಯರು ಮತ್ತು ಸಂಬಂಧಿಕರಲ್ಲಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವಂತಹ ಸಾಂಪ್ರದಾಯಿಕ ಪದ್ಧತಿಗಳು ಸಹ ಸಾಮಾನ್ಯವಾಗಿದೆ.

ಯುಗಾದಿ ಎಂದರೆ ಭೂತಕಾಲವನ್ನು ಬಿಟ್ಟು ಜೀವನದಲ್ಲಿ ಹೊಸ ಹಂತದ ಆರಂಭವನ್ನು ಸಕಾರಾತ್ಮಕ ಮನಸ್ಸಿನೊಂದಿಗೆ ಸ್ವೀಕರಿಸುವುದು. ಸಂತೋಷದಾಯಕ ಹಬ್ಬವಾದ ಯುಗಾದಿಯನ್ನು ಜನರು ಶಾಂತಿ, ಸಂತೋಷ ಮತ್ತು ಸಮೃದ್ಧಿಯ ಮುನ್ಸೂಚಕವಾಗಿ ನೋಡುತ್ತಾರೆ. 

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.