ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ugadi 2024: ಯುಗಾದಿಯಂದು ದೇವರ ಪೂಜೆ ಹೇಗಿರಬೇಕು; ಈ ದಿನ ಬ್ರಹ್ಮದೇವನಿಗೆ ಪೂಜೆ ಸಲ್ಲಿಸುವ ಉದ್ದೇಶವೇನು; ಇಲ್ಲಿದೆ ಮಾಹಿತಿ

Ugadi 2024: ಯುಗಾದಿಯಂದು ದೇವರ ಪೂಜೆ ಹೇಗಿರಬೇಕು; ಈ ದಿನ ಬ್ರಹ್ಮದೇವನಿಗೆ ಪೂಜೆ ಸಲ್ಲಿಸುವ ಉದ್ದೇಶವೇನು; ಇಲ್ಲಿದೆ ಮಾಹಿತಿ

ಹಿಂದೂಗಳ ಹೊಸ ವರ್ಷ ಯುಗಾದಿಯಂದು ದೇವರ ಪೂಜೆ ಮಾಡುವ ಕ್ರಮಗಳೇನು, ಈ ದಿನ ಯಾವೆಲ್ಲಾ ವಿಧಾನಗಳನ್ನು ಪಾಲಿಸಬೇಕು, ಬೇವು-ಬೆಲ್ಲ ತಿನ್ನುವ ಜೊತೆಗೆ ಬ್ರಹ್ಮದೇವನನ್ನು ಪೂಜಿಸುವ ಉದ್ದೇಶವೇನು? ಇಲ್ಲಿದೆ ಸಂಪೂರ್ಣ ಮಾಹಿತಿ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಯುಗಾದಿಯಂದು ದೇವರ ಪೂಜೆ ಹೇಗಿರಬೇಕು; ಈ ದಿನ ಬ್ರಹ್ಮದೇವನಿಗೆ ಪೂಜೆ ಸಲ್ಲಿಸುವ ಉದ್ದೇಶವೇನು
ಯುಗಾದಿಯಂದು ದೇವರ ಪೂಜೆ ಹೇಗಿರಬೇಕು; ಈ ದಿನ ಬ್ರಹ್ಮದೇವನಿಗೆ ಪೂಜೆ ಸಲ್ಲಿಸುವ ಉದ್ದೇಶವೇನು

ಹಬ್ಬಗಳ ನಾಡು ಭಾರತದಲ್ಲಿ ಯುಗಾದಿ ಹಬ್ಬಕ್ಕೆ ವಿಶೇಷ ಪ್ರಾಮುಖ್ಯವಿದೆ. ಇದು ಹಿಂದೂಗಳ ಹೊಸ ವರ್ಷವೂ ಹೌದು. ಯುಗದ ಆದಿ ಯಗಾದಿ, ಅಂದರೆ ಹೊಸ ಯುಗದ ಆರಂಭ ಎಂಬ ಅರ್ಥವೂ ಇದೆ. ಸದ್ಯ ಶೋಭಕೃತ್‌ನಾಮ ಸಂವತ್ಸರ ನಡೆಯುತ್ತಿದ್ದು, ಏಪ್ರಿಲ್‌ 9ರ ಯುಗಾದಿಯಿಂದ ಕ್ರೋಧಿನಾಮ ಸಂವತ್ಸರ ಆರಂಭವಾಗಲಿದೆ. ಯುಗಾದಿ ಹಬ್ಬವನ್ನು ಭಾರತದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಸಮಯದಲ್ಲಿ ಪೂಜೆಗೂ ಕೂಡ ಮಹತ್ವವಿದೆ. ಹಾಗಾದರೆ ಯುಗಾದಿಯಂದು ದೇವರಪೂಜೆ ಮಾಡಲು ಯಾವೆಲ್ಲಾ ಕ್ರಮ ಅನುಸರಿಸಬೇಕು, ಪೂಜೆ ವಿಧಾನ ಹೇಗಿರಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.

ಯುಗಾದಿಯಂದು ಹೀಗಿರಲಿ ಪೂಜಾ ಕ್ರಮ

ಯುಗಾದಿ ದಿನದಂದು ಸೂರ್ಯೋದಯದ ಮುಂಚೆಯೇ ಏಳಬೇಕು. ಆ ದಿನ ಚಿಕ್ಕವರು ದೊಡ್ಡವರೆನ್ನದೆ ಪ್ರತಿಯೊಬ್ಬರು ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು ಮನೆಯ ಹಿರಿಯರ ಕೈಯಲ್ಲಿ ಹಣೆಗೆ ಕುಂಕುಮವನ್ನು ಹೆಚ್ಚಿಸಿಕೊಳ್ಳಬೇಕು. ಅನಂತರ ಎಣ್ಣೆಯನ್ನು ಹಚ್ಚಿಕೊಂಡು ಸೀಗೆಕಾಯಿಪುಡಿ ಬಳಸಿ ತಲೆಸ್ನಾನ ಮಾಡಬೇಕು. ಇನ್ನೊಂದು ಮುಖ್ಯ ವಿಚಾರವೆಂದರೆ ಒಂದೇ ದಿನ ಸೀಗೆಪುಡಿ ಮತ್ತು ಎಣ್ಣೆಯನ್ನು ಮನೆಗೆ ತರಬಾರದು. ಹಾಗೆಯೇ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ತವರು ಮನೆಯಿಂದ ಸೀಗೆಪುಡಿ, ಚಿಗರೆ ಪುಡಿ ಅಥವಾ ಯಾವುದೇ ರೀತಿಯ ಎಣ್ಣೆಯನ್ನು ತರಬಾರದು. ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಿರುವಂತೆ ಯುಗಾದಿಯ ದಿನದಂದು ಎಣ್ಣೆ ಸ್ನಾನವನ್ನು ಮಾಡದೇ ಹೋದಲ್ಲಿ ನರಕ ಪ್ರಾಪ್ತಿಆಗುತ್ತದೆ. ತಲೆಸ್ನಾನ ಮಾಡಿದ ನಂತರ ಮನೆಯ ಬಾಗಿಲಿಗೆ ಮಾವಿನ ಎಲೆಯಿಂದ ತೋರಣವನ್ನು ಕಟ್ಟಬೇಕು. ತೋರಣದ ಎರಡು ತುದಿಗಳಲ್ಲಿ ಬೇವಿನ ಕುಡಿಗಳನ್ನು ಸಿಕ್ಕಿಸಬೇಕು. ಆದರೆ ಯಾವುದೇ ಕಾರಣಕ್ಕೂ ಒಂದು ಅಥವಾ ಮೂರು ಕಡೆ ತೋರಣವನ್ನು ಕಟ್ಟಬಾರದು. ಹೊಸ್ತಿಲು ಮತ್ತು ಮುಖ್ಯದ್ವಾರದ ಮೇಲ್ಭಾಗದಲ್ಲಿ ಅರಿಶಿನ ಮತ್ತು ಕುಂಕುಮಗಳನ್ನು ಲೇಪಿಸಬೇಕು. ಆದರೆ ಮನೆಯ ಒಳಗೆ ನಿಂತು ಅರಿಶಿನ, ಕುಂಕುಮ ಮತ್ತು ಗಂಧವನ್ನು ಲೇಪಿಸಬಾರದು.

ಪೂಜೆಯನ್ನು ಆರಂಭಿಸುವ ಮುನ್ನ ಕುಟುಂಬದಲ್ಲಿರುವ ಹಿರಿಯರ ಆಶೀರ್ವಾದವನ್ನು ತೆಗೆದುಕೊಳ್ಳಬೇಕು. ಪಾಡ್ಯ ಆದರೂ ಸಹ ಹೊಸ ಬಟ್ಟೆ ಧರಿಸಿದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಯುಗಾದಿಯ ಪೂಜೆಗೆ ಅವಶ್ಯವಾಗಿ ಬೇಳೆ ಒಬ್ಬಟ್ಟನ್ನು ಮಾಡಬೇಕು. ಉಳಿದಂತೆ ಹಬ್ಬದ ಅಡುಗೆಯನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಬೇಕು. ಯಾವುದೇ ಧರ್ಮ ಗ್ರಂಥಗಳಲ್ಲಿ ಪಂಚಾಂಗವನ್ನು ಪೂಜಿಸಬೇಕೆಂದು ಎಂದು ತಿಳಿಸಿಲ್ಲ. ಆದರೆ ಹಿಂದಿನ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಪಂಚಾಂಗವನ್ನು ದೇವರ ಮುಂದೆ ಇಟ್ಟು ಅದನ್ನು ಪೂಜಿಸಬೇಕು. ಅನಂತರ ಮನೆಮಂದಿ ಎಲ್ಲಾ ಕುರಿತು ಪಂಚಾಂಗ ಶ್ರವಣವನ್ನು ಮಾಡಬೇಕಾಗುತ್ತದೆ. ಪಂಚಾಂಗದ ಒಳಭಾಗದಲ್ಲಿ ಹಣವನ್ನು ಇಡಬೇಕು.

ಬೇವು ಬೆಲ್ಲ ತಿನ್ನುವ ಉದ್ದೇಶ

ಈ ದಿನದಂದು ಬೆಲ್ಲದ ಜೊತೆಯಲ್ಲಿ ಬೇವಿನ ಕುಡಿಯನ್ನು ಪ್ರಸಾದವನ್ನಾಗಿ ಸೇವಿಸಬೇಕು. ಕಾರಣವೆಂದರೆ ಯುಗಾದಿಯ ದಿನದಿಂದ ಕೆಲವೆಡೆ ನವರಾತ್ರಿಯನ್ನು ಆಚರಿಸಲಾಗುತ್ತದೆ. ಅಂದರೆ ಪೂಜೆಯನ್ನು ಒಂಬತ್ತು ದಿನಗಳು ಆಚರಿಸುತ್ತಾರೆ. ಧಾರ್ಮಿಕ ಗ್ರಂಥಗಳ ಅನುಗುಣವಾಗಿ ಬೇವಿನ ಮರದಲ್ಲಿ ದುರ್ಗಾಮಾತೆಯು ನೆಲೆಸಿರುತ್ತಾಳೆ. ಈ ಕಾರಣದಿಂದ ಬೇವಿನ ಕುಡಿಯನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತೇವೆ. ಬೆಲ್ಲ ಎಂದರೆ ಮಹಾಮೃತ್ಯುಂಜಯ. ಆದ್ದರಿಂದ ಬೇವಿನ ಕುಡಿಯ ಜೊತೆಯಲ್ಲಿ ಬೆಲ್ಲವನ್ನು ಸೇವಿಸಿದಲ್ಲಿ ಅಪಮೃತ್ಯು ಪರಿಹಾರವಾಗುತ್ತದೆ.

ಬೇವಿನಕುಡಿಗೆ ಉತ್ತಮ ವೈದ್ಯಕೀಯ ಗುಣಗಳಿವೆ. ಇದರ ಸೇವನೆಯಿಂದ ಮಧುಮೇಹ ರೋಗದ ತೊಂದರೆಯು ನಿವಾರಣೆಯಾಗುತ್ತದೆ. ನಮ್ಮ ದೇಹದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ಇದೇ ರೀತಿ ಬೆಲ್ಲದ ಸೇವನೆಯಿಂದಲೂ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡಬಹುದು. ಇದಲ್ಲದೆ ವೈದ್ಯಕೀಯ ಕ್ಷೇತ್ರವು ಎಷ್ಟೇ ಮುಂದುವರೆದಿದ್ದರೂ ದೇವರನ್ನು ನಂಬಿದವರು ಮಕ್ಕಳಿಗೆ ಅಮ್ಮ (ಚರ್ಮದೋಷ ) ಬಂದಾಗ ಹಸುವಿನ ಗಂಜಲ ಮತ್ತು ಬೇವಿನ ಸೊಪ್ಪನ್ನು ತಲೆಯ ಬಳಿ ಇಡುತ್ತಾರೆ.

ಬ್ರಹ್ಮದೇವನಿಗೆ ವಿಶೇಷ ಪೂಜೆ

ಇದೇ ದಿನದಂದು ಬ್ರಹ್ಮದೇವನು ಪ್ರಪಂಚವನ್ನು ಸೃಷ್ಟಿಸಿರುತ್ತಾನೆ. ಆದ್ದರಿಂದ ಇಂದು ಬ್ರಹ್ಮದೇವನ ಪೂಜೆಯನ್ನು ಮಾಡಬೇಕು. ಅನಂತರ ಮನೆ ಮಂದಿಯೆಲ್ಲಾ ಒಂದಾಗಿ ನೆಲದ ಮೇಲೆ ಕುಳಿತು ಭೋಜನವನ್ನು ಸ್ವೀಕರಿಸಬೇಕು. ಪಂಚಾಂಗ ಶ್ರವಣವನ್ನು ಸಹ ಬೆಳಗಿನ ವೇಳೆ ಮಾಡಬೇಕಾಗುತ್ತದೆ. ಸಾಧ್ಯವಿಲ್ಲದ ಪಕ್ಷದಲ್ಲಿ ಮಾತ್ರ ಸಂಜೆಯ ವೇಳೆ ದೇವರಮನೆಯ ದೀಪವನ್ನು ಬೆಳಗಿ ಪಂಚಾಂಗ ಶ್ರವಣವನ್ನು ಮಾಡಬೇಕು. ಪಂಚಾಂಗ ಶ್ರವಣ ನಡೆದ ನಂತರ ಹೊಸ ಪಂಚಾಂಗವನ್ನು ದಕ್ಷಿಣೆ ಸಮೇತ ದಾನ ನೀಡುವ ಸಂಪ್ರದಾಯವು ನಮ್ಮಲ್ಲಿದೆ.

ಬೇವು ಮತ್ತು ಬೆಲ್ಲದ ಸೇವನೆ ಮಾಡುವ ವೇಳೆ ಕೆಳಕಂಡ ಮಂತ್ರವನ್ನು ಜಪಿಸಬೇಕು.

ಶತಾಯುರ್ ವಜ್ರ ದೇಹಾಯ

ಸರ್ವ ಸಂಪತ್ಕರಾಯಚ

ಸರ್ವಾರಿಷ್ಟ ವಿನಾಶಾಯ

ನಿಂಬಕಂ ದಳ ಭಕ್ಷಣಂ