ಕನ್ನಡ ಸುದ್ದಿ  /  Astrology  /  Indian Festival What Is Papamochani Ekadashi When It Celebrates On 2024 Worship Of Lord Vishnu Hindu Religion Rsm

Papamochani Ekadashi 2024: ಭಗವಾನ್‌ ವಿಷ್ಣುವನ್ನು ಆರಾಧಿಸುವ ಪಾಪಮೋಚನಿ ಏಕಾದಶಿ ಎಂದರೇನು, ಈ ಬಾರಿ ಆಚರಣೆ ಯಾವಾಗ?

Papamochani Ekadashi 2024: ಒಂದು ವರ್ಷದಲ್ಲಿ ಬರುವ 24 ಏಕಾದಶಿಗಳಲ್ಲಿ ಪಾಪ ವಿಮೋಚನಿ ಏಕಾದಶಿ ಕೂಡಾ ಪ್ರಮುಖವಾದದ್ದು. ಈ ದಿನ ಭಗವಾನ್‌ ವಿಷ್ಣುವನ್ನು ಪೂಜಿಸಿದರೆ ಸಕಲ ಪಾಪಗಳಿಂದ ಮುಕ್ತಿ ಹೊಂದಬಹುದು ಎಂದ ನಂಬಿಕೆ ಇದೆ.

ಪಾಪಮೋಚನಿ ಏಕಾದಶಿಯ ಮಹತ್ವ, ವಿಧಿ ವಿಧಾನ
ಪಾಪಮೋಚನಿ ಏಕಾದಶಿಯ ಮಹತ್ವ, ವಿಧಿ ವಿಧಾನ

Papamochani Ekadashi 2024: ಹಿಂದೂಗಳು ಆಚರಿಸುವ ಆಚರಣೆಗಳಲ್ಲಿ ಪಾಪಮೋಚನಿ ಏಕಾದಶಿ ಕೂಡಾ ಒಂದು. ಭಕ್ತರು ಈ ಆಚರಣೆಯನ್ನು ಭಗವಾನ್‌ ವಿಷ್ಣುವಿಗಾಗಿ ಸಮರ್ಪಿಸಿದ್ದಾರೆ. ಫಾಲ್ಗುಣ ಮಾಸದ ಮೊದಲ ಏಕಾದಶಿಯನ್ನು ಪಾಪಮೋಚನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ವ್ರತವನ್ನು ಆಚರಿಸುವುದರಿಂದ ಮನುಷ್ಯ ತನ್ನ ಪಾಪಗಳಿಂದ ಮುಕ್ತಿ ಹೊಂದುತ್ತಾನೆ ಎಂಬ ನಂಬಿಕೆ ಇದೆ.

ಈ ಬಾರಿ ಏಕಾದಶಿ ಯಾವಾಗ?

ಹಿಂದೂ ಕ್ಯಾಲೆಂಡರ್‌ ಪ್ರಕಾರ ಪಾಪಮೋಚನಿ ಏಕಾದಶಿಯನ್ನು ಚೈತ್ರ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ಬಾರಿ ಪಾಪಮೋಚನಿ ಏಕಾದಶಿಯನ್ನು ಏಪ್ರಿಲ್‌ 5 ರಂದು ಆಚರಿಸಲಾಗುತ್ತಿದೆ. ಏಪ್ರಿಲ್‌ 4 ಶುಕ್ರವಾರ ಸಂಜೆ 04:14 ರಿಂದ ಏಕಾದಶಿ ತಿಥಿ ಆರಂಭವಾಗಲಿದ್ದು, ಏಪ್ರಿಲ್‌ 5 ಮಧ್ಯಾಹ್ನ 01:28ಕ್ಕೆ ಏಕಾದಶಿ ತಿಥಿ ಮುಕ್ತಾಯಗೊಳ್ಳುತ್ತದೆ.

ಪಾಪಮೋಚನಿ ಏಕಾದಶಿ ಎಂದರೇನು, ಮಹತ್ವವೇನು?

ಮೊದಲೇ ತಿಳಿಸಿದಂತೆ ಪಾಪಮೋಚನಿ ಏಕಾದಶಿಯಂದು ಭಕ್ತರು ಭಗವಾನ್‌ ವಿಷ್ಣುವನ್ನು ಆರಾಧಿಸುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಒಂದು ವರ್ಷದಲ್ಲಿ, ಒಟ್ಟು 24 ಏಕಾದಶಿಗಳನ್ನು ಆಚರಿಸಲಾಗುತ್ತದೆ. ಅದರಲ್ಲಿ ಪಾಪಮೋಚನಿ ಏಕಾದಶಿ ಕೊನೆಯದು. ಪಾಪಮೋಚನಿ ಎಂದರೆ ಪಾಪವನ್ನು ಹೋಗಲಾಡಿಸುವವನು ಎಂದು ಅರ್ಥ. ಈ ದಿನ ಭಕ್ತರು ತಮ್ಮ ಪಾಪಗಳನ್ನು ಕಳೆದುಕೊಳ್ಳಲು ಉಪವಾಸ ವ್ರತವನ್ನು ಆಚರಿಸುತ್ತಾರೆ. ಆಧ್ಯಾತ್ಮಿಕ ಶುದ್ಧೀಕರಣ ಮತ್ತು ದೈವಿಕ ಭಕ್ತಿಯ ಆಚರಣೆಯಲ್ಲಿ ಏಕಾದಶಿ ಕೂಡಾ ಪ್ರಮುಖ ಪಾತ್ರ ಪಡೆದಿದೆ.

ಮನುಷ್ಯನು ತಿಳಿದೋ, ತಿಳಿಯದೆಯೋ ಬಹಳ ತಪ್ಪು ಮಾಡುತ್ತಾನೆ. ಆ ತಪ್ಪಿನ, ಕರ್ಮದ ಫಲಗಳಿಂದ ಹೊರ ಬರಲು ದೇವರ ಮೊರೆ ಹೋಗುತ್ತಾನೆ. ವಿವಿಧ ಪೂಜೆ ಪುನಸ್ಕಾರ ಮಾಡುತ್ತಾನೆ. ಅದರಲ್ಲಿ ಒಂದು ಪಾಪಮೋಚನಿ ಏಕಾದಶಿ. ಈ ವ್ರತವನ್ನು ಆಚರಿಸುವುದರಿಂದ ಚಿನ್ನಾಭರಣ, ಹಣ ಕಳವು, ಮದ್ಯಪಾನ, ನಿಂದನೆ, ಗರ್ಭಪಾತದಂತ ಪಾಪಗಳು ದೂರಾಗುತ್ತವೆ ಎಂಬ ನಂಬಿಕೆ ಇದೆ.

ಪಾಪಮೋಚನಿ ಏಕಾದಶಿಗೆ ಸಂಬಂಧಿಸಿದ ಕಥೆ

ಶಿವನ ಭಕ್ತ ಮೇಧಾವಿ ಎಂಬಾತ ಒಮ್ಮೆ ಕಾಡಿನಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಇಂದ್ರನು, ಮೇಧಾವಿಯ ತಪಸ್ಸನ್ನು ಭಂಗ ಮಾಡುವ ಉದ್ದೇಶದಿಂದ ಮಂಜುಘೋಷ ಎಂಬ ಅಪ್ಸರೆಯನ್ನು ಕಳಿಸುತ್ತಾನೆ. ಸತತ ಪ್ರಯತ್ನದ ನಂತರ ಮನ್ಮಥನ ಸಹಾಯದ ಮೂಲಕ ಮೇಧಾವಿಯನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಾಳೆ. ಆದರೆ ಬಹಳ ದಿನಗಳ ನಂತರ ಮೇಧಾವಿಗೆ ತನ್ನ ತಪ್ಪಿನ ಅರಿವಾಗುತ್ತದೆ. ತನ್ನ ತಪಸ್ಸಿಗೆ ಭಂಗ ಮಾಡಿದ ಅಪ್ಸರೆಗೆ ಮೇಧಾವಿಯು ರಕ್ತಪಿಶಾಚಿ ಆಗುವಂತೆ ಶಾಪ ನೀಡುತ್ತಾನೆ. ಆದರೆ ತನ್ನದಲ್ಲದ ತಪ್ಪಿಗೆ ಮಂಜುಘೋಷ ಬಹಳ ಪಶ್ಚಾತಾಪ ಪಡುತ್ತಾಳೆ. ಪಾಪದಿಂದ ಮುಕ್ತಳಾಗಲು ದೇವರನ್ನು ಪ್ರಾರ್ಥಿಸುತ್ತಾಳೆ. ಆಕೆಯ ಕಷ್ಟವನ್ನು ಅರಿತ ನಾರದ ಮಹರ್ಷಿಯು ಪಾಪಮೋಚನಿ ಏಕಾದಶಿಯನ್ನು ಆಚರಿಸುವಂತೆ ಸಲಹೆ ನೀಡುತ್ತಾರೆ. ಅದರಂತೆ ಮಂಜುಘೋಷ, ವ್ರತವನ್ನು ಆಚರಿಸಿ ತನ್ನ ಪಾಪದಿಂದ ಮುಕ್ತಿ ಹೊಂದಿ, ಶಾಪ ವಿಮೋಚನೆ ಪಡೆಯುತ್ತಾಳೆ.

ಪಾಪವಿಮೋಚನಿ ಏಕಾದಶಿ ವಿಧಿ ವಿಧಾನ

  • ಏಕಾದಶಿಯಂದು ಸೂರ್ಯೋದಯಕ್ಕೆ ಮುಂಚೆ ಎದ್ದು ನಿತ್ಯಕರ್ಮಗಳನ್ನು ಪೂರೈಸಿ ಸ್ನಾನ ಸಂಧ್ಯಾವಂದನೆ ಮುಗಿಸಬೇಕು.
  • ಬೆಳಗಿನಿಂದ ರಾತ್ರಿವರೆಗೂ ಉಪವಾಸ ಇರಬೇಕು, ಅನಾರೋಗ್ಯದಿಂದ ಬಳಲುವವರು ಹಣ್ಣು, ಹಂಫಲುಗಳನ್ನು ಸೇವಿಸಬಹುದು.
  • ಉಪವಾಸವಿದ್ದು ಧೂಪ ದೀಪ ನೈವೇದ್ಯವನ್ನಿರಿಸಿ ಭಗವಾನ್‌ ವಿಷ್ಣುವನ್ನು ಪೂಜಿಸಬೇಕು.
  • ಈ ದಿನ ಬಡವರಿಗೆ ಸಹಾಯ ಮಾಡಬೇಕು, ಬ್ರಾಹ್ಮಣರಿಗೆ ದಾನ ಮಾಡಿದರೆ ಇನ್ನಷ್ಟು ಫಲ ಪ್ರಾಪ್ತಿಯಾಗುತ್ತದೆ.
  • ಏಕಾದಶಿಯಂದು ಭಗವಾನ್‌ ವಿಷ್ಣುವಿನ ಓಂ ನಮೋ ಭಗವತೇ ವಾಸುದೇವಾಯ ಮಂತ್ರವನ್ನು ಜಪಿಸಿದರೆ ದುಪ್ಪಟ್ಟು ಫಲ ದೊರೆಯುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.