Hanuman Jayanti: ಅಸಲಿಗೆ ಹನುಮ ಜಯಂತಿ ಆಚರಣೆ ಯಾವಾಗ, ಆಂಜನೇಯನು ಯಾರ ಮಗ? ಇಲ್ಲಿದೆ ಸಂಪೂರ್ಣ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Hanuman Jayanti: ಅಸಲಿಗೆ ಹನುಮ ಜಯಂತಿ ಆಚರಣೆ ಯಾವಾಗ, ಆಂಜನೇಯನು ಯಾರ ಮಗ? ಇಲ್ಲಿದೆ ಸಂಪೂರ್ಣ ಮಾಹಿತಿ

Hanuman Jayanti: ಅಸಲಿಗೆ ಹನುಮ ಜಯಂತಿ ಆಚರಣೆ ಯಾವಾಗ, ಆಂಜನೇಯನು ಯಾರ ಮಗ? ಇಲ್ಲಿದೆ ಸಂಪೂರ್ಣ ಮಾಹಿತಿ

ಹನುಮ ಜಯಂತಿ 2024: ಈ ಬಾರಿ ಹನುಮ ಜಯಂತಿಯನ್ನು ಆಂಜನೇಯನಿಗೆ ಪ್ರಿಯವಾದ ಮಂಗಳವಾರ ಆಚರಿಸಲಾಗುತ್ತಿದೆ. ರಾಮ ನವಮಿ ಆಚರಣೆಯ ಕೆಲವೇ ದಿನಗಳ ನಂತರ ಹನುಮಾನ್‌ ಜಯಂತಿಯನ್ನು ಭಕ್ತರು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಹನುಮ ಜಯಂತಿ 2024
ಹನುಮ ಜಯಂತಿ 2024 (PC: Pixabay)

ಹನುಮ ಜಯಂತಿ: ದೃಕ್ ಪಂಚಾಂಗದ ಪ್ರಕಾರ, ಚೈತ್ರ ಮಾಸ ಶುಕ್ಲಪಕ್ಷ ಪೌರ್ಣಮಿ ತಿಥಿ ಮಂಗಳವಾರ, ಏಪ್ರಿಲ್ 23 ರಂದು ಬರುತ್ತದೆ. ಪ್ರತಿ ವರ್ಷ ಇದೇ ತಿಥಿಯಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ ಹನುಮಂತನ ಜನ್ಮ ವಾರವಾಗಿದ್ದು, ಆ ಮಂಗಳವಾರದಂದು ಚೈತ್ರ ಹುಣ್ಣಿಮೆ ವಿರಳವಾಗಿ ಬರುವುದು ವಿಶೇಷ. ಹನುಮ ಜಯಂತಿ ಬಗ್ಗೆ ಪಂಚಾಗಕರ್ತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ್‌ ಶಾಸ್ತ್ರಿ ಅವರು ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿಸಿದ್ದಾರೆ.

ಹನುಮ ಜಯಂತಿಗೆ ಸಂಬಂಧಿಸಿದಂತೆ ಭಾರತದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿವೆ. ಉತ್ತರ ಭಾರತದಲ್ಲಿ, ಹನುಮ ಜಯಂತಿಯನ್ನು ಚೈತ್ರ ಪೌರ್ಣಮಿ ದಿನದಂದು ಆಚರಿಸಲಾಗುತ್ತದೆ, ಆದರೆ ಕರ್ನಾಟಕದಂತಹ ದಕ್ಷಿಣ ಭಾರತದಲ್ಲಿ, ಹನುಮ ಜಯಂತಿಯನ್ನು ವೈಶಾಖ ತ್ರಯೋದಶಿ ದಿನ ಅಥವಾ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಧನುರ್ಮಾಸದಲ್ಲಿ ತಮಿಳುನಾಡು ಮತ್ತು ಕೇರಳದ ಜನರೆಲ್ಲರೂ ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಭಾರತದ ಅನೇಕ ಭಾಗಗಳಲ್ಲಿ, ಹನುಮ ಜಯಂತಿಯನ್ನು ಚೈತ್ರ ಪೌರ್ಣಮಿ ದಿನ ಆಚರಿಸಲಾಗುತ್ತದೆ. ಮಂಗಳವಾರ ಅಥವಾ ಶನಿವಾರದಂದು ಹನುಮಾನ್‌ ಜಯಂತಿಯನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ.

ಹನುಮಂತನ ಜನ್ಮ ಕಥೆಗಳು?

ಹನುಮನು ಕೇಸರಿ ಮತ್ತು ಅಂಜನಾ ದಂಪತಿಗೆ ಜನಿಸಿದಾತ. ಹನುಮಂತನನ್ನು ವಾಯುವಿನ ಸ್ವರ್ಗೀಯ ಮಗ ಎಂದೂ ಹೇಳಲಾಗುತ್ತದೆ. ಹನುಮಂತನ ತಾಯಿ ಅಂಜನಾದೇವಿ. ಅಪ್ಸರೆಯಾಗಿದ್ದ ಆಕೆ, ಶಾಪಕ್ಕೆ ಗುರಿಯಾಗಿ ವಾನರ ರೂಪವನ್ನು ಪಡೆದು ಮಗುವಿಗೆ ಜನ್ಮ ನೀಡಿದಳು. ಕ್ರಮೇಣ ಆಕೆಗೆ ಶಾಪ ವಿಮೋಚನೆ ಆಯ್ತು. ವಾಲ್ಮೀಕಿ ರಾಮಾಯಣದ ಪ್ರಕಾರ, ಹನುಮಂತನ ತಂದೆ ಕೇಸರಿ ಕಿಷ್ಕಿಂಧಾ ರಾಜ್ಯದ ಸಮೀಪವಿರುವ ಸುಮೇರು ಪ್ರದೇಶದ ರಾಜನಾಗಿದ್ದನು. ಕೇಸರಿಯು ಬೃಹಸ್ಪತಿಯ ಮಗ.

ಕೇಸರಿ ಮತ್ತು ಅಂಜನಾದೇವಿಗೆ ಬಹಳ ದಿನ ಮಕ್ಕಳಾಗಿರಲಿಲ್ಲ. ಪುಷ್ಕರ ಕಾಲದಲ್ಲಿ ಅಂಜನಾದೇವಿಯು ಶಿವನನ್ನು ಕುರಿತು ಘೋರ ತಪಸ್ಸು ಮಾಡಿದಾಗ ಶಿವನು ಪ್ರತ್ಯಕ್ಷನಾಗಿ ಅವಳಿಗೆ ರುದ್ರನ ಲಕ್ಷಣವುಳ್ಳ ಮಗನನ್ನು ಅನುಗ್ರಹಿಸಿದನು. ರಾಮಾಯಣದ ಪ್ರಕಾರ, ದಶರಥ ಮಹಾರಾಜನು ಪುತ್ರಕಾಮೇಷ್ಟಿ ಯಾಗವನ್ನು ಮಾಡಿ ಯಜ್ಞದಿಂದ ಬಂದ ಪಾಯಸವನ್ನು ಎಲ್ಲರಿಗೂ ಹಂಚುತ್ತಿದ್ದಾಗ ಪಕ್ಷಿಯೊಂದು ಪ್ರಸಾದದ ಒಂದು ಭಾಗವನ್ನು ಕಿತ್ತುಕೊಂಡು ಹಾರಿದೆ. ಅಂಜನಾದೇವಿಯು ಪೂಜೆಯಲ್ಲಿ ಮಗ್ನಳಾಗಿದ್ದ ಕಾಡಿನ ಮೇಲೆ ಹಾರುವಾಗ ಪಕ್ಷಿಯು ಪಾಯಸದ ಭಾಗವನ್ನು ಬಾಯಿಯಿಂದ ಬಿಟ್ಟಿದೆ. ನಂತರ ವಾಯುವು ಆ ಪಾಯಸವನ್ನು ಅಂಜನಾದೇವಿಗೆ ಅರ್ಪಿಸಿದನೆಂದು ಹೇಳಲಾಗುತ್ತದೆ. ವಾಯುವಿನ ಮೂಲಕ ಪಡೆದ ಪಾಯಸವನ್ನು ಸ್ವೀಕರಿಸಿದ ಅಂಜನಾದೇವಿಗೆ ಹನುಮಂತನು ಮಗನಾಗಿ ಜನಿಸಿದನು ಎಂಬ ಕಥೆ ಜನಜನಿತವಾಗಿದೆ.

ಹನುಮ ಜಯಂತಿಯನ್ನು ಹೀಗೆ ಆಚರಿಸಿ

ಹನುಮ ಜಯಂತಿಯ ದಿನ ಕೇಸರಿ, ಅಂಜನಾದೇವಿ, ವಾಯುದೇವರುನ್ನು ಸ್ಮರಿಸಿ ಆಂಜನೇಯಸ್ವಾಮಿಯನ್ನು ಪೂಜಿಸುವವರಿಗೆ ಸಂಕಷ್ಟಗಳು ದೂರವಾಗಿ ಅಭೀಷ್ಟ ಸಿದ್ಧಿ ದೊರೆಯುತ್ತದೆ. ಹನುಮ ಜಯಂತಿಯ ದಿನ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುವುದರಿಂದ ಶನಿ ಬಾಧೆ, ಕುಜ ದೋಷ ನಿವಾರಣೆಯಾಗುತ್ತದೆ. ಈ ದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ರಾಮ ನಾಮ ಪಠಣ, ರಾಮಾಯಣ, ಹನುಮಾನ್ ಚಾಲೀಸಾ ಪಠಣ ಮಾಡುವುದು ತುಂಬಾ ಒಳ್ಳೆಯದು. ಸಾಧ್ಯವಾದರೆ ಇಂದು ಹನುಮಾನ್‌ ವ್ರತವನ್ನು ಮಾಡಿ ಷೋಡಶೋಪಚಾರಗಳಿಂದ ಆಂಜನೇಯಸ್ವಾಮಿಯನ್ನು ಪೂಜಿಸಿದರೆ ಆತನ ಕಟಾಕ್ಷ ಪ್ರಾಪ್ತಿಯಾಗುತ್ತದೆ ಎಂದು ಚಿಲಕಮರ್ತಿ ಪ್ರಭಾಕರ ಶಾಸ್ತ್ರಿ ಹೇಳುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.