ಶಿವ ಪಾರ್ವತಿಯರನ್ನು ಆರಾಧಿಸುವ ಜ್ಯೋತಿರ್ಭೀಮೇಶ್ವರ ವ್ರತ ಯಾವಾಗ, ಪತಿಯ ಪಾದ ಪೂಜೆ ಮಾಡುವುದರ ಹಿನ್ನೆಲೆ ಏನು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶಿವ ಪಾರ್ವತಿಯರನ್ನು ಆರಾಧಿಸುವ ಜ್ಯೋತಿರ್ಭೀಮೇಶ್ವರ ವ್ರತ ಯಾವಾಗ, ಪತಿಯ ಪಾದ ಪೂಜೆ ಮಾಡುವುದರ ಹಿನ್ನೆಲೆ ಏನು?

ಶಿವ ಪಾರ್ವತಿಯರನ್ನು ಆರಾಧಿಸುವ ಜ್ಯೋತಿರ್ಭೀಮೇಶ್ವರ ವ್ರತ ಯಾವಾಗ, ಪತಿಯ ಪಾದ ಪೂಜೆ ಮಾಡುವುದರ ಹಿನ್ನೆಲೆ ಏನು?

ಆಷಾಢದಲ್ಲಿ ಆಚರಿಸುವ ಹಬ್ಬಗಳಲ್ಲಿ ಜ್ಯೋತಿರ್ಭೀಮೇಶ್ವರ ವ್ರತ ಕೂಡಾ ಒಂದು. ಈ ಬಾರಿ ಆಗಸ್ಟ್‌ 4 ರಂದು ಈ ವ್ರತವನ್ನು ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಭೀಮನ ಅಮಾವಾಸ್ಯೆ, ಪತಿ ಸಂಜೀವಿನಿ ವ್ರತ, ಆಟಿ ಅಮವಾಸ್ಯೆ, ದಿನಸಿ ಗೌರಿ ಪೂಜೆ ವ್ರತ, ಜ್ಯೋತಿಸ್ತಂಭ ಗೌರಿ ವ್ರತ, ಭಂಡಾರದ ಹಬ್ಬ ಎಂದೂ ಕರೆಯಲಾಗುತ್ತದೆ.

ಶಿವ ಪಾರ್ವತಿಯರನ್ನು ಆರಾಧಿಸುವ ಜ್ಯೋತಿರ್ಭೀಮೇಶ್ವರ ವ್ರತ ಯಾವಾಗ, ಪತಿಯ ಪಾದ ಪೂಜೆ ಮಾಡುವುದರ ಹಿನ್ನೆಲೆ ಏನು?
ಶಿವ ಪಾರ್ವತಿಯರನ್ನು ಆರಾಧಿಸುವ ಜ್ಯೋತಿರ್ಭೀಮೇಶ್ವರ ವ್ರತ ಯಾವಾಗ, ಪತಿಯ ಪಾದ ಪೂಜೆ ಮಾಡುವುದರ ಹಿನ್ನೆಲೆ ಏನು? (PC: Pranitha Subhash FB)

ಇನ್ನು ಕೆಲವೇ ದಿನಗಳಲ್ಲಿ ಆಷಾಢ ಮಾಸ ಮುಕ್ತಾಯಗೊಳ್ಳಲಿದೆ. ಆಷಾಢ ಮಾಸದಲ್ಲಿ ಮದುವೆ, ನಿಶ್ಚಿತಾರ್ಥ, ಗೃಹಪ್ರವೇಶದಂಥ ಯಾವುದೇ ಶುಭ ಕಾರ್ಯಗಳನ್ನು ಆಚರಿಸದಿದ್ದರೂ ದೇವರ ಪೂಜೆಗೆ ಇದು ಬಹಳ ವಿಶೇಷವಾದ ಮಾಸವಾಗಿದೆ. ಆಷಾಢದಲ್ಲಿ ಆಚರಿಸಲಾಗುವ ಹಬ್ಬಗಳಲ್ಲಿ ಜ್ಯೋತಿರ್ಭೀಮೇಶ್ವರ ವ್ರತ ಕೂಡಾ ಒಂದು.

ಈ ಬಾರಿ ಭೀಮನ ಅಮಾವಾಸ್ಯೆ ಯಾವಾಗ?

ಜ್ಯೋತಿರ್ಭೀಮೇಶ್ವರ ವ್ರತವು ಆಷಾಢ ಅಮವಾಸ್ಯೆಯಂದು ಆಚರಿಸಲಾಗುವ ಮಂಗಳಕರ ವ್ರತವಾಗಿದೆ. ಶ್ರಾವಣ ಕೃಷ್ಣ ಅಮಾವಾಸ್ಯೆ ಆಗಸ್ಟ್‌ 3 ಸಂಜೆ 03:50ರಿಂದ ಆರಂಭವಾಗಿ ಆಗಸ್ಟ್‌ 4 ರಂದು ಸಂಜೆ 04:42 ಕ್ಕೆ ಮುಕ್ತಾಯವಾಗುತ್ತದ. ಆದ್ದರಿಂದ ಈ ಬಾರಿ ಆಗಸ್ಟ್‌ 4, ಭಾನುವಾರ ಈ ವ್ರತವನ್ನು ಆಚರಿಸಲಾಗುತ್ತಿದೆ. ಅಮಾವಾಸ್ಯೆಯಂದು ಆಷಾಢ ಮುಕ್ತಾಯವಾಗುತ್ತದೆ.

ಜ್ಯೋತಿರ್ಭೀಮೇಶ್ವರ ವ್ರತದ ಮಹತ್ವ

ಜ್ಯೋತಿರ್ಭೀಮೇಶ್ವರ ವ್ರತವನ್ನು ಭೀಮನ ಅಮಾವಾಸ್ಯೆ, ಪತಿ ಸಂಜೀವಿನಿ ವ್ರತ, ಆಟಿ ಅಮವಾಸ್ಯೆ, ದಿನಸಿ ಗೌರಿ ಪೂಜೆ ವ್ರತ, ಜ್ಯೋತಿಸ್ತಂಭ ಗೌರಿ ವ್ರತ, ಭಂಡಾರದ ಹಬ್ಬ ಎಂದೂ ಕರೆಯಲಾಗುತದೆ. ಒಂದೊಂದು ಪ್ರದೇಶಗಳಲ್ಲಿ ಈ ವ್ರತವನ್ನು ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಪತಿಗೆ ಧೀರ್ಘಾಯುಷ್ಯ ನೀಡಲೆಂದು ಪ್ರಾರ್ಥಿಸಿ ಮುತ್ತೈದೆಯರು ಈ ದಿನವನ್ನು ಆಚರಿಸಿದರೆ, ಅವಿವಾಹಿತ ಯುವತಿಯರು ಮದುವೆ ನಿಶ್ಚಯವಾಗಲೆಂದು ಪ್ರಾರ್ಥಿಸಿ ಈ ವ್ರತವನ್ನು ಆಚರಿಸುತ್ತಾರೆ. ಈ ದಿನ ಶಿವ ಪಾರ್ವತಿಯನ್ನು ಆರಾಧಿಸಲಾಗುತ್ತದೆ. 

ಕೆಲವೆಡೆ ಈ ಹಬ್ಬವನ್ನು ಆಟಿ ಅಮಾವಾಸ್ಯೆ ಹೆಸರಿನಲ್ಲಿ ಆಚರಿಸುತ್ತಾರೆ. ಇದು ಮಳೆಗಾಲವಾದ್ದರಿಂದ ರೋಗ ರುಜಿನ ಹರಡಬಾರದು ಎಂಬ ಕಾರಣಕ್ಕೆ ಈ ದಿನ ಹಾಲೆ ಮರದ ಕಷಾಯವನ್ನು ಸೇವಿಸಲಾಗುತ್ತದೆ. ಇದು ದೇಹಕ್ಕೆ ಬೇಕಾದ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ ಎಂಬ ನಂಬಿಕೆ ಇದೆ. ಧಾರ್ಮಿಕವಾಗಿ ಹೇಳುವುದಾದರೆ ಈ ಮರಕ್ಕೆ ದೈವಿಕ ಶಕ್ತಿ ಇದ್ದು, ಇದನ್ನು ಸೇವಿಸಿದರೆ ದೇವರ ಆಶೀರ್ವಾದ ದೊರೆತಂತೆ ಆಗುವುದು ಎಂಬ ನಂಬಿಕೆ ಇದೆ.

ಮದುವೆ ನಂತರ ಮಹಿಳೆಯರು ಸತತ 5 ವರ್ಷಗಳ ಕಾಲ ಈ ವ್ರತವನ್ನು ಆಚರಿಸುತ್ತಾರೆ, ಕೆಲವೆಡೆ 9, 16 ವರ್ಷಗಳ ಕಾಲ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ ಗಂಡನ ಪಾದ ಪೂಜೆ ಮಾತ್ರ ಮಾಡುವುದಲ್ಲದೆ, ಆ ದಿನ ಶಿವ ಪಾರ್ವತಿಯರನ್ನು ಪೂಜಿಸುವುದು ಬಹಳ ಮುಖ್ಯ. ಹೊಸದಾಗಿ ಮದುವೆ ಆದ ಹೆಣ್ಣು ಮಕ್ಕಳು ಆಷಾಢದಲ್ಲಿ ಗಂಡನ ಮನೆಯಿಂದ ತವರು ಮನೆಗೆ ಹೋಗುತ್ತಾರೆ. ಭೀಮನ ಅಮಾವಾಸ್ಯೆಯಂದು ಮತ್ತೆ ಗಂಡನ ಮನೆಗೆ ವಾಪಸಾಗಿ ಗಂಡನ ಮನೆಯಲ್ಲಿ ವ್ರತವನ್ನು ಆಚರಿಸುತ್ತಾರೆ.

ಜ್ಯೋತಿರ್ಭೀಮೇಶ್ವರ ವ್ರತಕ್ಕೆ ಸಂಬಂಧಿಸಿದ ಕಥೆ

ಹಿಂದೆ ರಾಜನೊಬ್ಬ ತನ್ನ ಸತ್ತ ಮಗನ ಮದುವೆ ಮಾಡಲು ನಿಶ್ಚಯಿಸುತ್ತಾನೆ. ಶವ ಸಂಸ್ಕಾರ ಮಾಡುವ ಮುನ್ನ ಮಗನಿಗೆ ಮದುವೆ ಮಾಡಬೇಕೆಂದೂ ಬದಲಿಗೆ ಆ ಹೆಣ್ಣಿಗೆ ಹಣ, ಆಸ್ತಿ ನೀಡುವುದಾಗಿ ಡಂಗೂರ ಸಾರಿಸುತ್ತಾನೆ. ದುರಾಸೆಯ ಅಣ್ಣನೊಬ್ಬ ತನ್ನ ತಂಗಿಯನ್ನು ರಾಜನ ಸತ್ತ ಮಗನ ಶವದೊಂದಿಗೆ ವಿವಾಹ ಮಾಡಲು ಒಪ್ಪುತ್ತಾನೆ. ಮದುವೆಯೂ ನಡೆಯುತ್ತದೆ. ಶವವನ್ನು ಸುಡಲು ಎಲ್ಲರೂ ಭಾಗೀರಥಿ ನದಿ ದಂಡೆಗೆ ಬರುತ್ತಾರೆ. ಆದರೆ ಆಗ ಮಳೆ ಬಂದಿದ್ದರಿಂದ ಎಲ್ಲರೂ ಶವವನ್ನು ಬಿಟ್ಟು ಅಲ್ಲಿಂದ ಓಡುತ್ತಾರೆ. ಆದರೆ ಆ ಯುವತಿ ಮಾತ್ರ ಶವದ ಮುಂದೆ ಕಣ್ಣೀರಿಡುತ್ತಾಳೆ.

ಆ ದಿನ ಅಮಾವಾಸ್ಯೆ ಆಗಿದ್ದು, ತನ್ನ ತಾಯಿಯು ಪತಿಯ ಪೂಜೆ ಮಾಡಿದ್ದನ್ನು ನೆನಪಿಸಿಕೊಳ್ಳುವ ಯುವತಿ ತಾನೂ ಸತ್ತ ಪತಿಯ ಶವದ ಪಾದಪೂಜೆ ಮಾಡುತ್ತಾಳೆ. ಆಕೆಯ ಭಕ್ತಿಗೆ ಮೆಚ್ಚಿ ಶಿವ ಪಾರ್ವತಿಯರು ಪ್ರತ್ಯಕ್ಷರಾಗಿ ವರ ಕೇಳುವುದಾಗಿ ಹೇಳಿದಾಗ ಆ ಯುವತಿ, ಪತಿಯನ್ನು ಬದುಕಿಸುವಂತೆ ಪ್ರಾರ್ಥಿಸುತ್ತಾಳೆ. ಅದರಂತೆ ಶಿವ ಪಾರ್ವತಿಯರು ಆಕೆಗೆ ವರ ನೀಡುತ್ತಾರೆ. ಅಂದಿನಿಂದ ಈ ವ್ರತವನ್ನು ಪತಿ ಸಂಜೀವಿನಿ ವ್ರತ ಎಂದು ಕರೆಯಲಾಗುತ್ತಿದೆ. ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಈ ವ್ರತ ಮಾಡುತ್ತಾ ಬಂದಿದ್ದಾರೆ.

ಸಹೋದರರ ಒಳಿತಿಗಾಗಿ ಮಾಡುವ ಹಬ್ಬ

ಕರ್ನಾಟಕದ ಕೆಲವೆಡೆ ಭೀಮನ ಅಮಾವಾಸ್ಯೆಯನ್ನು ಭಂಡಾರದ ಹಬ್ಬ ಎಂದು ಆಚರಿಸಲಾಗುತ್ತದೆ. ಈ ದಿನ ಹೆಣ್ಣು ಮಕ್ಕಳು ತಮ್ಮ ಸಹೋದರರ ಒಳಿತಿಗಾಗಿ ಹಬ್ವನ್ನು ಆಚರಿಸುತ್ತಾರೆ. ಹಾಗೇ ಗಂಡು ಮಕ್ಕಳು ತಮ್ಮ ಅಕ್ಕ-ತಂಗಿಯರ ಜೀವನ ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಈ ದಿನದಂದು ಮೈದಾಹಿಟ್ಟು, ತೆಂಗಿನಕಾಯಿ ಹೂರದಿಂದ ಕಡುಬು ತಯಾರಿಸುತ್ತಾರೆ. ಹೀಗೆ ತಯಾರಿಸುವಾಗ ಅದರೊಳಗೆ ನಾಣ್ಯಗಳನ್ನು ಇರಿಸಲಾಗುತ್ತದೆ. ನಂತರ ಈ ಕಡುಬನ್ನು ಹೊಸಿಲಿನ ಮೇಲೆ ಇಟ್ಟು ಮನೆಯವರೆಲ್ಲರೂ ಪೂಜೆ ಮಾಡುತ್ತಾರೆ. ಸಹೋದರರು ಈ ಕಡುಬನ್ನು ತಮ್ಮ ಮೊಣಕೈನಿಂದ ಒಡೆಯುತ್ತಾರೆ, ಇದನ್ನು ಭಂಡಾರ ಒಡೆಯುವುದು ಎಂದು ಕರೆಯುತ್ತಾರೆ. ಮೇಲಿಟ್ಟು ಪೂಜೆ ಮಾಡಲಾಗುತ್ತದೆ. ನಂತರ ಅಣ್ಣ ಅಥವಾ ತಮ್ಮ, ಮೊಣಕೈಯಿಂದ ಆ ಭಂಡಾರವನ್ನು ಒಡೆಯಬೇಕು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

 

 

 

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.