ನಾಗರ ಪಂಚಮಿ ಯಾವಾಗ? ಕಾಳಸರ್ಪ ದೋಷದಿಂದ ಮುಕ್ತಿ ಹೊಂದಿ, ರಾಹು ಕೇತುವಿನ ಆಶೀರ್ವಾದ ಪಡೆಯಲು ಈ ದಿನ ಏನು ಮಾಡಬೇಕು?
ಈ ಬಾರಿ ಆಗಸ್ಟ್ 9 ರಂದು ದೇಶಾದ್ಯಂತ ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದೆ. ರಾಹು ಕೇತುವಿನ ಆಶೀರ್ವಾದ ಪಡೆಯಲು, ಕಾಳ ಸರ್ಪ ದೋಷದಿಂದ ವಿಮುಕ್ತಿ ಹೊಂದಲು ಈ ದಿನ ಏನು ಮಾಡಬೇಕು? ಯಾವ ಪೂಜೆ ಮಾಡಬೇಕು? ಇಲ್ಲಿದೆ ಮಾಹಿತಿ.
ನಾಗರ ಪಂಚಮಿ 2024: ನವಗ್ರಹಗಳಲ್ಲಿ ರಾಹು ಮತ್ತು ಕೇತುವನ್ನು ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಈ ಎರಡು ಗ್ರಹಗಳು ನಿಮ್ಮ ಜಾತಕದಲ್ಲಿ ಉತ್ತಮವಾಗಿದ್ದರೆ ನಿಮ್ಮ ಜೀವನದಲ್ಲಿ ರಾಜಯೋಗವನ್ನು ತರುತ್ತವೆ. ಆದರೆ ರಾಹು ಮತ್ತು ಕೇತುಗಳ ಸ್ಥಾನಗಳು ಕೆಟ್ಟದಾಗಿದ್ದರೆ, ನಿಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜಾತಕದಲ್ಲಿ ಈ ಎರಡೂ ಛಾಯಾಗ್ರಹಗಳ ಕೆಟ್ಟ ಸ್ಥಾನದಿಂದಾಗಿ, ವ್ಯಕ್ತಿಯು ಜೀವನದಲ್ಲಿ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಕಠಿಣ ಪರಿಸ್ಥಿತಿಗಳು ಎದುರಾದಾಗ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೂಡಾ ಸಾಧ್ಯವಾಗುವುದಿಲ್ಲ.
ನಿಮ್ಮ ಜಾತಕದಲ್ಲಿ ರಾಹು ಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ವಿದೇಶಕ್ಕೆ ಹೋಗುವ ಅವಕಾಶವಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ನಿಮ್ಮ ವೃತ್ತಿಜೀವನ ಉತ್ತಮವಾಗಿರುತ್ತದೆ. ನಿಮ್ಮ ಎಲ್ಲಾ ನಿರ್ಧಾರ ಉತ್ತಮವಾಗಿರುತ್ತದೆ. ಜಾತಕದಲ್ಲಿ ರಾಹು ಕೇತು ದೋಷ ನಿವಾರಣೆಗೆ ನಾಗರ ಪಂಚಮಿ ಅತ್ಯುತ್ತಮ ದಿನ ಎಂದು ಹೇಳಲಾಗುತ್ತದೆ. ಆ ದಿನ ನಾಗ ದೇವತೆಯನ್ನು ಪೂಜಿಸುವುದರಿಂದ ರಾಹು ಕೇತು ದೋಷ ಮತ್ತು ಕಾಳ ಸರ್ಪ ದೋಷ ನಿವಾರಣೆಯಾಗುತ್ತದೆ. ನಿಮ್ಮ ಜಾತಕದಲ್ಲಿ ಇರುವ ದೋಷಗಳಿಂದ ಹೊರ ಬರಲು ನಾಗ ಪಂಚಮಿಯ ದಿನದಂದು ಇವುಗಳಿಂದ ಹೊರ ಬರಲು ಯಾವ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ನಾಗರ ಪಂಚಮಿ ಯಾವಾಗ?
ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಪಂಚಮಿ ತಿಥಿಯ ಪ್ರಕಾರ ಆಗಸ್ಟ್ 9 ನೇ ಶುಕ್ರವಾರದಂದು ನಾಗ ಪಂಚಮಿಯನ್ನು ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ, ಶ್ರಾವಣ ಮಾಸವು ಆಗಸ್ಟ್ 8-9 ರಂದು ಶುಕ್ಲ ಪಕ್ಷ ನವಮಿಯಂದು ಬೆಳಗ್ಗೆ12:36 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 10 ರಂದು ಬೆಳಗ್ಗೆ 03:14 ಬೆಳಗ್ಗೆ ಕೊನೆಗೊಳ್ಳುತ್ತದೆ. ಆದ್ದರಿಂದ ಆಗಸ್ಟ್ 09 ರಂದು ನಾಗ ಪಂಚಮಿಯನ್ನು ಆಚರಿಸಲಾಗುತ್ತದೆ.
ದೋಷ ನಿವಾರಣೆಗೆ ಏನು ಮಾಡಬೇಕು?
ಈ ದಿನ ಶಿವನ ಆರಾಧನೆ ಮತ್ತು ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಕಾಳ ಸರ್ಪ ದೋಷ ನಿವಾರಣೆಯಾಗುತ್ತದೆ. ಗಂಗಾಜಲದಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಶಿವನಿಗೆ ಅಭಿಷೇಕ ಮಾಡಿ. ಬೆಳ್ಳಿ ಅಥವಾ ತಾಮ್ರದಿಂದ ಮಾಡಿದ ಒಂದು ಜೋಡಿ ಹಾವುಗಳನ್ನು ಪವಿತ್ರ ನದಿಯಲ್ಲಿ ಬಿಡಬೇಕು. ಅಥವಾ ಶಿವಲಿಂಗದ ಮೇಲೆ ಅರ್ಪಿಸಬಹುದು. ಹೀಗೆ ಮಾಡುವುದರಿಂದ ಕಾಳ ಸರ್ಪದೋಷದ ಪರಿಣಾಮ ಕಡಿಮೆಯಾಗುತ್ತದೆ.
ರಾಹುಕೇತು ದೋಷ ತಡೆಯಲು ನಾಗ ಪಂಚಮಿಯಂದು ತುಳಸಿ ಗಿಡ ನೆಟ್ಟು ಪೂಜೆ ಮಾಡಬೇಕು. ಈ ದಿನ ಗಿಡ ನೆಟ್ಟು ಸೇವೆ ಮಾಡುವುದರಿಂದ ರಾಹು ಸಂತುಷ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅದರ ಹೊರತಾಗಿ ಇಂದು ಮಣ್ಣಿನ ಹಾವನ್ನು ಮಾಡಿ ಅರಳಿ ಮರದ ಕೆಳಗೆ ಇಟ್ಟು ಪೂಜಿಸಬೇಕು. ರಾಹುವಿನ ದುಷ್ಪರಿಣಾಮಗಳನ್ನು ನಿವಾರಿಸಲು ಬಡವರಿಗೆ ದಾನ ಮಾಡಿ. ನವನಾಗ ಸ್ತೋತ್ರವನ್ನು ಪಠಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ರಾಹು ಮತ್ತು ಕೇತುಗಳನ್ನು ಒಲಿಸಿಕೊಳ್ಳಲು ಮಂತ್ರಗಳನ್ನು ಪಠಿಸಿ.
ಇಂದು ನಾಗ ದೇವತೆಯನ್ನು ಪೂಜಿಸುವುದರಿಂದ ಜಾತಕದಲ್ಲಿ ರಾಹು ಮತ್ತು ಕೇತುಗಳಿಗೆ ಸಂಬಂಧಿಸಿದ ದೋಷಗಳು ನಿವಾರಣೆಯಾಗುತ್ತವೆ. ಪಂಚಮಿಯ ದಿನದಂದು ನಾಗ ದೇವತೆಯನ್ನು ಆರಾಧಿಸುವುದರಿಂದ ಎಲ್ಲಾ ರೀತಿಯ ಅನಿಷ್ಟಗಳು ದೂರವಾಗುತ್ತವೆ ಮತ್ತು ಮನುಷ್ಯರು ಹಾವಿನ ಭಯದಿಂದ ಮುಕ್ತರಾಗುತ್ತಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.