ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Sita Navami 2024: ಈ ವರ್ಷ ಸೀತಾ ನವಮಿ ಯಾವಾಗ ಆಚರಿಸಲಾಗುತ್ತದೆ? ಈ ಶುಭ ದಿನದಂದು ಅನುಸರಿಸಬೇಕಾದ ನಿಯಮಗಳೇನು?

Sita Navami 2024: ಈ ವರ್ಷ ಸೀತಾ ನವಮಿ ಯಾವಾಗ ಆಚರಿಸಲಾಗುತ್ತದೆ? ಈ ಶುಭ ದಿನದಂದು ಅನುಸರಿಸಬೇಕಾದ ನಿಯಮಗಳೇನು?

Sita Navami 2024: ಪ್ರತಿವರ್ಷ ರಾಮ ನವಮಿಯನ್ನು ಆಚರಿಸುವಂತೆಯೇ ಸೀತಾ ನವಮಿ ಕೂಡಾ ಆಚರಿಸಲಾಗುತ್ತದೆ. ಈ ಬಾರಿ ಮೇ 16 ರಂದು ಸೀತಾ ನವಮಿ ಅಥವಾ ಜಾನಕಿ ನವಮಿಯನ್ನು ಆಚರಿಸಲಾಗುತ್ತದೆ. ಈ ದಿನ ಪತಿಪತ್ನಿಯರು ಉಪವಾಸವಿದ್ದು, ಪೂಜಾ ವಿಧಿ ವಿಧಾನಗಳನ್ನು ಪಾಲಿಸಿದರೆ ದಾಂಪತ್ಯ ಜೀವನದಲ್ಲಿನ ಸಂಕಷ್ಟಗಳು ದೂರವಾಗುತ್ತವೆ.

ಈ ವರ್ಷ ಸೀತಾ ನವಮಿ ಯಾವಾಗ ಆಚರಿಸಲಾಗುತ್ತದೆ?
ಈ ವರ್ಷ ಸೀತಾ ನವಮಿ ಯಾವಾಗ ಆಚರಿಸಲಾಗುತ್ತದೆ?

ಸೀತಾ ನವಮಿ 2024: ಇತ್ತೀಚೆಗಷ್ಟೇ ರಾಮ ನವಮಿ, ಹನುಮ ಜಯಂತಿಯನ್ನು ನಾಡಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗಿದೆ. ಇದೀಗ ಭಕ್ತರು ಸೀತಾ ನವಮಿ ಆಚರಣೆಗೆ ಕಾಯುತ್ತಿದ್ದಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸೀತಾ ದೇವಿಯು ವೈಶಾಖ ಮಾಸದ 9ನೇ ದಿನದಂದು ಜನಿಸಿದಳು. ಸೀತಾದೇವಿಯ ಜನ್ಮದಿನವನ್ನು ಸೀತಾ ನವಮಿ ಅಥವಾ ಜಾನಕಿ ನವಮಿ ಎಂದೂ ಕರೆಯುತ್ತಾರೆ.

ಪುರಾಣಗಳ ಪ್ರಕಾರ, ದೇವಿಯು 108 ರೂಪಗಳನ್ನು ಹೊಂದಿದ್ದಾಳೆ. ಅವುಗಳಲ್ಲಿ, ಲಕ್ಷ್ಮಿ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂದು ಪೂಜಿಸಲಾಗುತ್ತದೆ. ತ್ರೇತಾಯುಗದಲ್ಲಿ ಬರಗಾಲ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಎಲ್ಲಾ ಜೀವಿಗಳ ಕಲ್ಯಾಣಕ್ಕಾಗಿ ವೈಶಾಖ ಮಾಸದ 9 ದಿನದಂದು ಲಕ್ಷ್ಮಿ ದೇವಿಯು ಮಿಥಿಲಾ ನಗರದಲ್ಲಿ ಸೀತಾದೇವಿಯಾಗಿ ಅವತರಿಸಿದಳು ಎಂದು ಹೇಳಲಾಗುತ್ತದೆ. ಶ್ರೀರಾಮ ನವಮಿಯ ಒಂದು ತಿಂಗಳ ನಂತರ ಸೀತಾ ನವಮಿ ಬರುತ್ತದೆ . ಈ ಎರಡೂ ಹಬ್ಬಗಳು ನವಮಿ ತಿಥಿಯಂದು ಬರುವುದು ವಿಶೇಷ.

ಈ ವರ್ಷ ಸೀತಾ ನವಮಿ ಮೇ 16 ರಂದು ಬರುತ್ತದೆ. ಸೀತಾ ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಇಂದು ಉಪವಾಸ ಮಾಡುತ್ತಾರೆ. ಸೀತಾದೇವಿಯನ್ನು ಫಲವತ್ತತೆ, ಶುದ್ಧತೆ ಮತ್ತು ಶುಚಿತ್ವದ ಸಂಕೇತವೆಂದು ಪರಿಗಣಿಸಲಾಗಿದೆ. ಸೀತಾ ಮಾತೆ ಎಲ್ಲಾ ಜೀವಿಗಳ ತಾಯಿ ಎಂದು ಭಕ್ತರು ನಂಬುತ್ತಾರೆ. ಸೀತೆಯು ತನ್ನ ಭಕ್ತರಿಗೆ ಸಂಪತ್ತು , ಆರೋಗ್ಯ, ಬುದ್ಧಿವಂತಿಕೆ, ಸಮೃದ್ಧಿ ಇತ್ಯಾದಿಗಳನ್ನು ನೀಡುತ್ತಾಳೆ.

ಸೀತಾ ನವಮಿಯು ಶುಭ ಸಮಯ

ನವಮಿ ತಿಥಿಯು ಮೇ 16 ರಂದು ಬೆಳಗ್ಗೆ 6.22 ರಿಂದ ಪ್ರಾರಂಭವಾಗುತ್ತದೆ. ಮೇ 17 ರಂದು ಬೆಳಗ್ಗೆ 8:48 ಕ್ಕೆ ನವಮಿ ತಿಥಿ ಕೊನೆಗೊಳ್ಳುತ್ತದೆ. ಬೆಳಗ್ಗೆ 10.56 ರಿಂದ ಮಧ್ಯಾಹ್ನ 1.39 ರವರೆಗೆ ಶುಭ ಮುಹೂರ್ತವಿದೆ.

ಶುಭ ಯೋಗಗಳಿಂದ ಕೂಡಿದ ಸೀತಾ ನವಮಿ

ಈ ವರ್ಷ ಸೀತಾ ನವಮಿಯನ್ನು ಎರಡು ಅದ್ಭುತ ಯೋಗಗಳೊಂದಿಗೆ ಆಚರಿಸಲಾಗುತ್ತದೆ. ಧ್ರುವ ಯೋಗವು ಬೆಳಗ್ಗೆ 8.23 ​​ಕ್ಕೆ ಸಂಭವಿಸುತ್ತದೆ. ಹಾಗೆಯೇ ಸಂಜೆ 6.14 ರಿಂದ ಮರುದಿನ ಬೆಳಗ್ಗೆ 5.29 ರವರೆಗೆ ರವಿಯೋಗವಿದೆ. ಅಷ್ಟೇ ಅಲ್ಲ ಮಾಘ ನಕ್ಷತ್ರ ಬೆಳಗ್ಗೆಯಿಂದ ಸಂಜೆ 6.14ರವರೆಗೆ ಇರುತ್ತದೆ. ಮುಂದೆ ಪೂರ್ವ ಫಲ್ಗುಣಿ ನಕ್ಷತ್ರ ಬರುತ್ತದೆ .

ಸೀತಾ ನವಮಿ ದಿನದಂದು ಅನುಸರಿಸಬೇಕಾದ ನಿಯಮಗಳು

ಸೀತಾ ನವಮಿಯಂದು ಉಪವಾಸ ಮಾಡುವುದು ಬಹಳ ಮುಖ್ಯ. ಈ ಶುಭ ದಿನದಂದು ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಪತಿ-ಪತ್ನಿಯರು ಸೀತಾನವಮಿ ವ್ರತವನ್ನು ಒಟ್ಟಿಗೆ ಆಚರಿಸಿ ಪೂಜೆ ಮಾಡಿದರೆ ದಾಂಪತ್ಯ ಜೀವನದಲ್ಲಿನ ಎಲ್ಲಾ ಕಷ್ಟಗಳು ದೂರವಾಗುತ್ತವೆ. ವೈವಾಹಿಕ ಜೀವನವು ಸುಖ, ಸಂತೋಷದಿಂದ ಕೂಡಿರುತ್ತದೆ. ವಿವಾದಗಳು ಮತ್ತು ತಪ್ಪುಗ್ರಹಿಕೆಗಳು ದೂರವಾಗುತ್ತವೆ. ಪೂಜೆಯ ಸಮಯದಲ್ಲಿ ಓಂ ಸೀತಾಯೈ ನಮಃ ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು.

ಸೀತಾ ನವಮಿಯಂದು ಸೀತಾ ದೇವಿಯ ಜೊತೆಗೆ ರಾಮ , ಲಕ್ಷ್ಮಣ ಮತ್ತು ಹನುಮಂತನನ್ನು ಪೂಜಿಸಲಾಗುತ್ತದೆ . ಉತ್ತರ ಪ್ರದೇಶದ ಅಯೋಧ್ಯೆ, ಬಿಹಾರದ ಸೀತಾ ಸಮಿತಿ ಮತ್ತು ಭದ್ರಾಚಲಂ ತಮಿಳುನಾಡಿನ ರಾಮೇಶ್ವರಂನಲ್ಲಿ ಸೀತಾ ನವಮಿಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಸೀತಾ ನವಮಿಯ ದಿನ ಶ್ರೀರಾಮ ದರ್ಬಾರ್ ಫೋಟೋವನ್ನು ಕೂಡಾ ಪೂಜಿಸಿದರೆ ಇನ್ನಷ್ಟು ಫಲ ಪ್ರಾಪ್ತಿಯಾಗುತ್ತದೆ. ಕೆಲವೆಡೆ ರಾಮ ದರ್ಬಾರ್ ಮೂರ್ತಿಯನ್ನು ರಥದಲ್ಲಿಟ್ಟು ಶೋಭಾ ಯಾತ್ರೆ ನಡೆಸಲಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.