ವಿವಾಹಿತ ಮಹಿಳೆಯರು ವಟ ಸಾವಿತ್ರಿ ವ್ರತ ಮಾಡುವುದೇಕೆ, ಆಲದ ಮರ ಪೂಜಿಸುವ ಕಾರಣವೇನು? ಇಲ್ಲಿದೆ ಮಾಹಿತಿ-indian festival why married women perform vat savitri vrat significance of worship banyan tree rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಿವಾಹಿತ ಮಹಿಳೆಯರು ವಟ ಸಾವಿತ್ರಿ ವ್ರತ ಮಾಡುವುದೇಕೆ, ಆಲದ ಮರ ಪೂಜಿಸುವ ಕಾರಣವೇನು? ಇಲ್ಲಿದೆ ಮಾಹಿತಿ

ವಿವಾಹಿತ ಮಹಿಳೆಯರು ವಟ ಸಾವಿತ್ರಿ ವ್ರತ ಮಾಡುವುದೇಕೆ, ಆಲದ ಮರ ಪೂಜಿಸುವ ಕಾರಣವೇನು? ಇಲ್ಲಿದೆ ಮಾಹಿತಿ

ಯಮನನ್ನು ಪ್ರಾರ್ಥಿಸಿ ತನ್ನ ಪತಿಯ ಪ್ರಾಣವನ್ನು ವಾಪಸ್‌ ಪಡೆದ ಸಾವಿತ್ರಿಯನ್ನು ನೆನೆದು ಮಹಿಳೆಯರು ಪ್ರತಿ ವರ್ಷ ವಟ ಸಾವಿತ್ರಿ ವ್ರತ ಆಚರಿಸುತ್ತಾರೆ. ವಿವಾಹಿತ ಮಹಿಳೆಯರು ವಟ ಸಾವಿತ್ರಿ ವ್ರತ ಮಾಡುವುದೇಕೆ, ಆಲದ ಮರ ಪೂಜಿಸುವ ಕಾರಣವೇನು? ಈ ಬಾರಿ ವಟ ಸಾವಿತ್ರಿ ವ್ರತಾಚರಣೆ ಯಾವಾಗ? ಇಲ್ಲಿದೆ ಮಾಹಿತಿ

ವಿವಾಹಿತ ಮಹಿಳೆಯರು ವಟ ಸಾವಿತ್ರಿ ವ್ರತ ಮಾಡುವುದೇಕೆ, ಆಲದ ಮರ ಪೂಜಿಸುವ ಕಾರಣವೇನು? ಇಲ್ಲಿದೆ ಮಾಹಿತಿ
ವಿವಾಹಿತ ಮಹಿಳೆಯರು ವಟ ಸಾವಿತ್ರಿ ವ್ರತ ಮಾಡುವುದೇಕೆ, ಆಲದ ಮರ ಪೂಜಿಸುವ ಕಾರಣವೇನು? ಇಲ್ಲಿದೆ ಮಾಹಿತಿ

ವಟ ಸಾವಿತ್ರಿ ವ್ರತ 2024: ಹಿಂದೂ ಸಂಪ್ರದಾಯದಲ್ಲಿ ಪ್ರತಿ ತಿಂಗಳು ಒಂದಲ್ಲಾ ಒಂದು ವಿಶೇಷ ಇದ್ದೇ ಇರುತ್ತದೆ. ಜೂನ್‌ 6 ರಂದು ಶನಿ ಜಯಂತಿ ಇದೆ. ವಿಶೇಷ ಎಂದರೆ ಅದೇ ದಿನ ವಟ ಸಾವಿತ್ರಿ ವ್ರತ ಕೂಡಾ ಇದೆ. ವಿವಾಹಿತ ಮಹಿಳೆಯರು ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ ಈ ವ್ರತವನ್ನು ಆಚರಿಸುತ್ತಾರೆ. ಉಪವಾಸವಿದ್ದು ಆಲದ ಮರವನ್ನು ಪೂಜಿಸುತ್ತಾರೆ.

ವಟ ಸಾವಿತ್ರಿ ವ್ರತದ ಶುಭ ಮುಹೂರ್ತ

ಈ ಬಾರಿ ಜೂನ್‌ 6 ರಂದು ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತಿದೆ. ಹಿಂದೂ ಪಂಚಾಂಗದ ಪ್ರಕಾರ, ಜ್ಯೇಷ್ಠ ಅಮಾವಾಸ್ಯೆ ತಿಥಿಯು ಜೂನ್ 5 ರಂದು ರಾತ್ರಿ 7.54 ಕ್ಕೆ ಪ್ರಾರಂಭವಾಗುತ್ತದೆ. ಜೂನ್ 6 ಸಂಜೆ 6.07 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ಜೂನ್ 6 ರಂದು ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತದೆ. ಆ ದಿನ ಬೆಳಗ್ಗೆ 8.24 ರಿಂದ 10.06 ವರೆಗೆ ಗುಳಿಕ ಕಾಲ, ಬೆಳಗ್ಗೆ 11.21 ರಿಂದ ಮಧ್ಯಾಹ್ನ 12.16, ಹಾಗೂ ಬೆಳಗ್ಗೆ 10.06 ರಿಂದ ಮಧ್ಯಾಹ್ನ 3.13ವರೆಗೆ ಅಮೃತ ಕಾಲವಿದ್ದು ಈ ಮೂರೂ ಮುಹೂರ್ತಗಳು ಪೂಜೆಗೆ ಶುಭ ಸಮಯವಾಗಿದೆ.

ಆಲದ ಮರವನ್ನು ಪೂಜಿಸುವುದೇಕೆ?

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ನಾವು ಅರಳಿ ಮರವನ್ನು ಕಾಣುತ್ತೇವೆ. ಅದಕ್ಕೆ ಪ್ರದಕ್ಷಿಣಿ ಹಾಕಿ ಪೂಜಿಸುತ್ತೇವೆ. ಅರಳಿ ಮರದಷ್ಟೇ ಪ್ರಾಮುಖ್ಯತೆ ಆಲದ ಮರಕ್ಕೂ ಇದೆ. ವಟ ಸಾವಿತ್ರಿ ವ್ರತದ ದಿನ ಎಲ್ಲರೂ ವಟ ವೃಕ್ಷ, ಅಂದರೆ ಆಲದ ಮರವನ್ನು ಪೂಜಿಸುತ್ತಾರೆ. ಆ ದಿನ ಮಹಿಳೆಯರು ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಮನೆಯಲ್ಲಿ ಪೂಜೆ, ಮುಗಿಸಿ ನಂತರ ಆಲದ ಮರದ ಬಳಿ ತೆರಳಿ ಪೂಜೆ ಸಲ್ಲಿಸುತ್ತಾರೆ. ಆಲದ ಮರದ ಕೆಳಗೆ ಬ್ರಹ್ಮ ಹಾಗೂ ಸಾವಿತ್ರಿಯ ವಿಗ್ರಹವನ್ನು ಇಟ್ಟ ಬುಟ್ಟಿಯನ್ನು ಇಟ್ಟು ಪೂಜಿಸುವುದು ವಾಡಿಕೆ. ಮೊದಲು ಬ್ರಹ್ಮನನ್ನು ಪೂಜಿಸಿದ ನಂತರ ಸಾವಿತ್ರಿಯನ್ನು ಪೂಜಿಸುತ್ತಾರೆ.

ಆಲದ ಮರಕ್ಕೆ ನೀರು, ರೊಟ್ಟಿ, ಬೇಳೆ, ಬೆಲ್ಲ ಮತ್ತು ಧೂಪ ದೀಪದಿಂದ ಪೂಜಿಸಬೇಕು. ನೈವೇದ್ಯ ಮಾಡಿದ ನಂತರ ಹಳದಿ ಅಥವಾ ಕೆಂಪು ದಾರವನ್ನು ಕಟ್ಟಿ 3 ಬಾರಿ ಮರವನ್ನು ಪ್ರದಕ್ಷಿಣೆ ಮಾಡಬೇಕು. ನಂತರ ಆಲದ ಮರದ ಎಲೆಗಳಿಂದ ಮಾಡಿದ ಮಾಲೆಯನ್ನು ಧರಿಸಿ ವಟ ಸಾವಿತ್ರಿ ವ್ರತದ ಕಥೆಯನ್ನು ಕೇಳಬೇಕು. ಸಾವಿತ್ರಿಯು ಆಲದ ಮರದ ಕೆಳಗೆ ಇದ್ದಾಗ ಯಮನನ್ನು ಪ್ರಾರ್ಥಿಸಿ ಪತಿ ಸತ್ಯವಂತನ ಜೀವವನ್ನು ಮರಳಿ ಪಡೆದಳು. ಅಂದಿನಿಂದ ಇಬ್ಬರೂ ಈ ಮರದ ಕೆಳಗೆ ವಾಸಿಸುತ್ತಾರೆ. ಆದ್ದರಿಂದಲೇ ಈ ಮರವನ್ನು ಪೂಜಿಸಿದರೆ ಸಕಲ ಸೌಭಾಗ್ಯ ದೊರೆಯುತ್ತದೆ ಎಂದು ನಂಬಲಾಗಿದೆ.

ಆಲದ ಮರದ ಮಹತ್ವ

ಅರಳಿ ಮರದಂತೆ ಆಲದ ಮರಕ್ಕೂ ವಿಶೇಷ ಮಹತ್ವವಿದೆ. ಪುರಾಣಗಳ ಪ್ರಕಾರ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಈ ವಟ ವೃಕ್ಷದಲ್ಲಿ ವಾಸಿಸುತ್ತಾರೆ. ಆದ್ದರಿಂದಲೇ ಆಲದ ಮರವನ್ನು ಪೂಜಿಸಿ, ಪ್ರಾರ್ಥನೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತದೆ. ದೀರ್ಘಾಯುಷ್ಯ ಸಿಗುತ್ತದೆಂದು ನಂಬಲಾಗಿದೆ. ಈ ಮರವನ್ನು ಅಕ್ಷಯವತ್ ಎಂದೂ ಕರೆಯುತ್ತಾರೆ. ಆಲದ ಮರವನ್ನು ಪೂಜಿಸುವುದರಿಂದ ದೀರ್ಘಾಯುಷ್ಯ, ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ. ಕುಟುಂಬದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸುವಂತೆ ಪ್ರಾರ್ಥಿಸಿ ಮರದ ಬೇರುಗಳಿಗೆ ಹಸಿ ಹಾಲು ಹಾಗೂ ನೀರನ್ನು ಅರ್ಪಿಸಲಾಗುತ್ತದೆ. ಮರದ ಸುತ್ತಲೂ ದಾರವನ್ನು ನೋಡುತ್ತಾ ಏಳು ಬಾರಿ ಪ್ರದಕ್ಷಿಣೆ ಮಾಡುವುದರಿಂದ ಕುಟುಂಬದಲ್ಲಿ ಯಾವುದೇ ನಕರಾತಾತ್ಮಕ ಶಕ್ತಿಗಳು ಇದ್ದರೂ ತೊಲಗುತ್ತವೆ ಎಂಬ ನಂಬಿಕೆಯಿದೆ.

ವಟ ಸಾವಿತ್ರಿ ವ್ರತದ ಕಥೆ

ಸಾವಿತ್ರಿಯು ಅಶ್ವಪತಿಯ ಏಕೈಕ ಮಗಳು. ದ್ಯುಮಥೇನನ ಮಗ ಸತ್ಯವಂತ. ಆತ ಅಲ್ಪಾಯುಷಿ ಎಂದು ತಿಳಿದಿದ್ದರೂ ಸಾವಿತ್ರಿ ಸತ್ಯವಂತನನ್ನು ಮದುವೆಯಾಗಲು ನಿರ್ಧರಿಸುತ್ತಾಳೆ. ಅರಮನೆಯಲ್ಲಿ ಸಕಲ ಸೌಕರ್ಯಗಳ ವೈಭವ ಅನುಭವಿಸಿದ ಸಾವಿತ್ರಿ ಮದುವೆಯ ನಂತರ ಪತಿಯೊಂದಿಗೆ ಕಾಡಿನಲ್ಲಿ ವಾಸಿಸುತ್ತಾಳೆ. ಸಾವಿತ್ರಿ ಆಲದ ಮರದ ಕೆಳಗೆ ಕುಳಿತಿದ್ದಾಗ ಒಂದು ದಿನ ರಾಜ ಯಮನು ಅವನ ಪ್ರಾಣ ತೆಗೆಯಲು ಬರುತ್ತಾನೆ. ಪತಿಯ ಪ್ರಾಣ ತೆಗೆಯದಂತೆ ಎಷ್ಟು ಮನವಿ ಮಾಡಿದರೂ ಯಮ ಒಪ್ಪುವುದಿಲ್ಲ. ಸತ್ಯವಂತನ ಪ್ರಾಣವನ್ನು ತನ್ನೊಂದಿಗೆ ಕೊಂಡೊಯ್ಯುತ್ತಾನೆ. ಆದರೆ ಸಾವಿತ್ರಿ ಮಾತ್ರ ಯಮನನ್ನು ಹಿಂಬಾಲಿಸುತ್ತಾ ಪತಿಯ ಪ್ರಾಣವನ್ನು ಮರಳಿ ಕೊಡುವಂತೆ ಯಮನನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಪತಿಯ ಮೇಲಿನ ಪ್ರೀತಿಯನ್ನು ಕಂಡು ಯಮನು ಕನಿಕರದಿಂದ ಸಾವಿತ್ರಿಗೆ 3 ವರಗಳನ್ನು ಕೇಳಲು ಹೇಳುತ್ತಾನೆ.

ಸಾವಿತ್ರಿಯು ಸತ್ಯವಂತನ ಹೆತ್ತವರಿಗೆ ಕಣ್ಣುಗಳನ್ನು ಕೊಡುವಂತೆ, ಅವರು ಶತ್ರುಗಳ ಕೈಯಲ್ಲಿರುವ ತಮ್ಮ ರಾಜ್ಯವನ್ನು ಮರಳಿ ದೊರೆಯುವಂತೆ, ಮೂರನೆಯ ಆಸೆಯಾಗಿ ನೂರು ಗಂಡುಮಕ್ಕಳನ್ನು ಕೇಳುತ್ತಾಳೆ. ಸಾವಿತ್ರಿಯ ಭಕ್ತಿಗೆ ಮೆಚ್ಚಿದ ಯಮ ಧರ್ಮರಾಜ ಅವಳ ಪತಿಯ ಪ್ರಾಣವನ್ನು ಹಿಂದಿರುಗಿಸುತ್ತಾನೆ. ಹಾಗೂ ಆಕೆ ಬೇಡಿದ ವರಗಳನ್ನು ಕೇಳುತ್ತಾನೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.