ಪಂಜಾಬ್‌, ಆಂಧ್ರಪ್ರದೇಶ ಸೇರಿದಂತೆ ಮಕರ ಸಂಕ್ರಾಂತಿಗೆ ಬೇರೆ ರಾಜ್ಯಗಳಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ, ಆಚರಣೆ ಹೇಗೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪಂಜಾಬ್‌, ಆಂಧ್ರಪ್ರದೇಶ ಸೇರಿದಂತೆ ಮಕರ ಸಂಕ್ರಾಂತಿಗೆ ಬೇರೆ ರಾಜ್ಯಗಳಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ, ಆಚರಣೆ ಹೇಗೆ?

ಪಂಜಾಬ್‌, ಆಂಧ್ರಪ್ರದೇಶ ಸೇರಿದಂತೆ ಮಕರ ಸಂಕ್ರಾಂತಿಗೆ ಬೇರೆ ರಾಜ್ಯಗಳಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ, ಆಚರಣೆ ಹೇಗೆ?

ಜನವರಿ 14, ಮಂಗಳವಾರ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಒಂದೊಂದು ರಾಜ್ಯದಲ್ಲೂ ಒಂದೊಂದು ಹೆಸರಿನಿಂದ ಆಚರಿಸಲಾಗುತ್ತದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಪಂಜಾಬ್‌ನಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ, ಆಚರಣೆ ಹೇಗೆ ನೋಡೋಣ.

ಮಕರ ಸಂಕ್ರಾಂತಿಗೆ ಬೇರೆ ರಾಜ್ಯಗಳಲ್ಲಿ ಇರುವ ಇತರ ಹೆಸರುಗಳು
ಮಕರ ಸಂಕ್ರಾಂತಿಗೆ ಬೇರೆ ರಾಜ್ಯಗಳಲ್ಲಿ ಇರುವ ಇತರ ಹೆಸರುಗಳು (PC: Canva)

ಮಕರ ಸಂಕ್ರಾಂತಿ 2025: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಸಂಭ್ರಮ ಶುರುವಾಗಿದೆ. ಹೊಸ ವರ್ಷ ಆರಂಭವಾಗುತ್ತಿದ್ದಂತೆ ಸಂಕ್ರಾಂತಿ ಆಚರಿಸುವವರ ಮನೆಯಲ್ಲಿ ಎಳ್ಳು, ಬೆಲ್ಲಕ್ಕೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಅಂಗಡಿಯಿಂದ ತಂದರೆ ಇನ್ನೂ ಕೆಲವರು ಮನೆಯಲ್ಲೇ ರೆಡಿ ಮಾಡುತ್ತಿದ್ದಾರೆ. ನೆರೆಹೊರೆಯವರು ಜೊತೆ ಸೇರಿ ಸಕ್ಕರೆ ಅಚ್ಚುಗಳನ್ನು ತಯಾರಿಸುತ್ತಿದ್ದಾರೆ. ಬಟ್ಟೆ, ಅಗತ್ಯ ವಸ್ತುಗಳ ಶಾಪಿಂಗ್ ಮಾಡುತ್ತಿದ್ದಾರೆ.

ಸಂಕ್ರಾಂತಿ ದಕ್ಷಿಣ ಭಾರತದಲ್ಲಿ ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಕೂಡಾ ಈ ಹಬ್ಬವನ್ನು ಬೇರೆ ಹೆಸರಿನಿಂದ ಆಚರಿಸಲಾಗುತ್ತದೆ. ಸಂಕ್ರಾಂತಿಯನ್ನು ವಿವಿಧ ರಾಜ್ಯಗಳಲ್ಲಿ, ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಭಾರತದಲ್ಲಿ ಪ್ರಚಲಿತದಲ್ಲಿರುವ ಸಂಕ್ರಾಂತಿಯ ವಿವಿಧ ಹೆಸರುಗಳು ಮತ್ತು ಅವುಗಳ ವಿಶಿಷ್ಟ ಆಚರಣೆಯ ಬಗ್ಗೆ ತಿಳಿಯೋಣ.

ಮಕರ ಸಂಕ್ರಾಂತಿ

ಕರ್ನಾಟಕ, ಆಂಧ್ರ, ತೆಲಂಗಾಣಗಳಲ್ಲಿ ಸಂಕ್ರಾಂತಿ ಎಂಬ ಹೆಸರಿನಿಂದ ಹಬ್ಬ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಒಂದು ದಿನ ಈ ಹಬ್ಬ ಆಚರಿಸಿದರೆ ಆಂಧ್ರ ಹಾಗೂ ತೆಲಂಗಾಣಗಳಲ್ಲಿ 3 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಮಕ್ಕಳು, ಹಿರಿಯರೆಲ್ಲಾ ಗಾಳಿಪಟ ಹಾರಿಸಿ ಸಂಭ್ರಮಿಸುತ್ತಾರೆ. ಹೊಸ ಬೆಳೆಗೆ ಪೂಜೆ ಮಾಡುತ್ತಾರೆ. ಎಳ್ಳು ಬೆಲ್ಲವನ್ನು ಆತ್ಮೀಯರಿಗೆ ಹಂಚುತ್ತಾರೆ. ರಾಸುಗಳಿಗೆ ಅಲಂಕಾರ ಮಾಡಿ ಕಿಚ್ಚು ಹಾಯಿಸುತ್ತಾರೆ.

ಇದನ್ನೂ ಓದಿ:  ಮಕರ ಸಂಕ್ರಾಂತಿಯಂದು ಮಾಡುವ ದಾನದ ಮಹತ್ವವೇನು?  ಯಾವ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು?

ಪೊಂಗಲ್

ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್‌ ಎಂದು ಕರೆಯುತ್ತಾರೆ. ಹಬ್ಬದ ದಿನ ಹೊಸದಾಗಿ ಕೊಯ್ಲು ಮಾಡಿದ ಅಕ್ಕಿಯನ್ನು ಬೇಯಿಸುತ್ತಾರೆ, ಸಿಹಿ ಅಥವಾ ಖಾರ ಪೊಂಗಲ್‌ ಮಾಡುತ್ತಾರೆ. 4 ದಿನಗಳ ಕಾಲ ಪೊಂಗಲ್ ಆಚರಿಸುತ್ತಾರೆ. ಅನ್ನವನ್ನು ದೇವರಿಗೆ ನೈವೇದ್ಯ ಮಾಡಿ ನಂತರ ಜನರು ಹಂಚುತ್ತಾರೆ.

ಲೋಹ್ರಿ

ಸಂಕ್ರಾಂತಿಯನ್ನು ಪಂಜಾಬ್‌ನಲ್ಲಿ ಲೋಹ್ರಿ ಎಂದು ಕರೆಯುತ್ತಾರೆ. ಇಲ್ಲಿನ ಜನರು ಲೋಹ್ರಿಯನ್ನು ವರ್ಷದ ಅತ್ಯಂತ ಶೀತ ದಿನವೆಂದು ನಂಬುತ್ತಾರೆ. ತಣ್ಣನೆಯ ಗಾಳಿಯಲ್ಲಿ ಬೆಂಕಿಯ ಸುತ್ತಲೂ ಭಾಂಗ್ರಾ ನೃತ್ಯ ಮಾಡುವ ಮೂಲಕ ಆಚರಿಸುತ್ತಾರೆ. ಎಳ್ಳು ಉಂಡೆ ಜೊತೆ ಇತರ ಸಿಹಿಗಳನ್ನು ಮಾಡಿ ಆತ್ಮೀಯರೊಂದಿಗೆ ಒಟ್ಟಿಗೆ ಊಟ ಮಾಡುತ್ತಾರೆ.

ಬಿಹು

ಅಸ್ಸಾಮ್‌ನಲ್ಲಿ ಸಂಕ್ರಾಂತಿಯನ್ನು ಬಿಹು ಹೆಸರಿನಿಂದ ಆಚರಿಸುತ್ತಾರೆ. ಅಸ್ಸಾಮಿ ಜನರಿಗೆ ಇದು ಬಹಳ ಪ್ರಮುಖವಾದ ಹಬ್ಬವಾಗಿದೆ. ವರ್ಷದಲ್ಲಿ 3 ಬಾರಿ ಬಿಹು ಆಚರಿಸಲಾಗುತ್ತದೆ. ಜನವರಿಯಲ್ಲಿ ಮಾಗ್ ಬಿಹು, ಏಪ್ರಿಲ್ ತಿಂಗಳಲ್ಲಿ ರೊಂಗಾಲಿ ಬಿಹು ಹಾಗೂ ಅಕ್ಟೋಬರ್‌ನಲ್ಲಿ ಕೊಂಗಲಿ ಬಿಹು ಎಂದು ಆಚರಿಸಲಾಗುತ್ತದೆ.

ಭೋಗಿ

ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಸಂಕ್ರಾಂತಿ ಹೆಸರಿನಿಂದಲೇ ಈ ಹಬ್ಬವನ್ನು ಆಚರಿಸಿದರೂ, ಅದರ ಹಿಂದಿನ ದಿನ ಭೋಗಿ ಹೆಸರಿನ ಆಚರಣೆ ಮಾಡಲಾಗುತ್ತದೆ. ಈ ದಿನ ಮಳೆಯ ದೇವತೆ ದೇವೇಂದ್ರನನ್ನು ಪೂಜಿಸಲಾಗುತ್ತದೆ. ಇದು ಧನುರ್ಮಾಸದ ಕಡೆಯ ದಿನವಾಗಿದೆ. ಭೂಮಿ ಸುಭಿಕ್ಷವಾಗಲಿ ಎಂದು ಪ್ರಾರ್ಥಿಸಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಎಣ್ಣೆ ಸ್ನಾನ ಮಾಡಿ ಮನೆಯಲ್ಲಿ ದೀಪ ಬೆಳಗಿಸಲಾಗುತ್ತದೆ. ಮೂರನೇ ದಿನ ಕನುಮ ಎಂಬ ಆಚರಣೆ ಇದೆ.

ಸಖ್ರತ್‌/ಕಿಚಡಿ

ಬಿಹಾರ ಹಾಗೂ ಜಾರ್ಖಂಡ್‌ನಲ್ಲಿ ಈ ಹಬ್ಬವನ್ನು ಸಖ್ರತ್‌, ಕಿಚಡಿ ಎಂಬ ಹೆಸರಿನಿಂದ ಆಚರಿಸುತ್ತಾರೆ. ಈ ದಿನ ಜನರು ಮುಂಜಾನೆ ನದಿ ಸ್ನಾನ ಮಾಡಿ ದೀಪೋತ್ಸವ ಮಾಡುತ್ತಾರೆ. ದೀಪಕ್ಕೆ ಎಳ್ಳು ಅರ್ಪಿಸುತ್ತಾರೆ. ಎಳ್ಳು ಬೆಲ್ಲ ಬಳಸಿ ತಿಂಡಿಗಳನ್ನು ತಯಾರಿಸುತ್ತಾರೆ. ಗ್ರಾಮಗಳಲ್ಲಿ ಜನರೆಲ್ಲಾ ಒಟ್ಟಿಗೆ ಸೇರಿ ಈ ಹಬ್ಬವನ್ನು ಆಚರಿಸುತ್ತಾರೆ. ದೆಹಲಿ ಹಾಗೂ ಹರಿಯಾಣಗಳಲ್ಲಿ ಕೂಡಾ ಸಖ್ರತ್‌ ಹೆಸರಿನಿಂದ ಹಬ್ಬ ಆಚರಿಸಲಾಗುತ್ತದೆ.

ಮಾಘ ಸಾಜಿ

ಹಿಮಾಚಲಪ್ರದೇಶದಲ್ಲಿ ಈ ಹಬ್ಬವನು ಮಾಘ ಸಾಜಿ ಎಂದು ಕರೆಯುತ್ತಾರೆ. ಮಾಘ ಎಂಬುದು ತಿಂಗಳ ಹೆಸರು. ಈ ದಿನವು ಋತುಗಳ ಬದಲಾವಣೆಯನ್ನು ಸೂಚಿಸುತ್ತದೆ. ಜನರು ನದಿಗಳಲ್ಲಿ ಸ್ನಾನ ಮಾಡುವ ಮೂಲಕ ವಸಂತವನ್ನು ಸ್ವಾಗತಿಸುತ್ತಾರೆ. ಬೆಲ್ಲ, ಎಳ್ಳಿನಿಂದ ಮಾಡಿದ ಸಿಹಿ ತಿಂಡಿಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ದೇವಾಲಯಗಳಿಗೆ ಭೇಟಿ ಮಾಡಿ, ದಾನ-ಧರ್ಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಂಜೆ ಜಾನಪದ ಹಾಡುಗಳು ಮತ್ತು ನೃತ್ಯಗಳೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ.

ಹಡಗ

ಸಂಕ್ರಾಂತಿಯನ್ನು ಮಹಾರಾಷ್ಟ್ರದಲ್ಲಿ ಹಡಗ ಎಂದು ಆಚರಿಸುತ್ತಾರೆ. ಇದನ್ನು ತಿಲ್ಗುಲ್‌ ಹಬ್ಬ ಎಂದೂ ಕರೆಯುತ್ತಾರೆ. ಉತ್ತಮ ಮುಂಗಾರು ಮತ್ತು ಫಸಲು ಬರಲಿ ಎಂದು ಜನರು ದೇವರನ್ನು ಪ್ರಾರ್ಥಿಸುತ್ತಾರೆ. ಇಂದ್ರನು ಮಳೆಯ ದೇವರು ಆಗಿರುವುದರಿಂದ ಜನರು ಇಂದ್ರನಿಗೆ ಹಾಡುಗಳನ್ನು ಹಾಡುವ ಮೂಲಕ ಪೂಜಿಸುವುದು ಇಲ್ಲಿನ ವಿಶೇಷ.

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.