ಮಹಾಭಾರತ ಕಥೆಗಳು: ಭೀಮನನ್ನು ಕೊಲ್ಲಲು ಸಂಚು ಮಾಡಿದ ದುರ್ಯೋಧನ; ನಾಗಲೋಕಕ್ಕೆ ತೆರಳಿ ನೂರು ಆನೆಗಳ ಬಲ ಪಡೆದ ಕುಂತಿಪುತ್ರ-indian mythology bhima went nagaloka when duryodhana attempt to kill him mahabharata stories sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತ ಕಥೆಗಳು: ಭೀಮನನ್ನು ಕೊಲ್ಲಲು ಸಂಚು ಮಾಡಿದ ದುರ್ಯೋಧನ; ನಾಗಲೋಕಕ್ಕೆ ತೆರಳಿ ನೂರು ಆನೆಗಳ ಬಲ ಪಡೆದ ಕುಂತಿಪುತ್ರ

ಮಹಾಭಾರತ ಕಥೆಗಳು: ಭೀಮನನ್ನು ಕೊಲ್ಲಲು ಸಂಚು ಮಾಡಿದ ದುರ್ಯೋಧನ; ನಾಗಲೋಕಕ್ಕೆ ತೆರಳಿ ನೂರು ಆನೆಗಳ ಬಲ ಪಡೆದ ಕುಂತಿಪುತ್ರ

ಬಾಲ್ಯದಲ್ಲಿ ಪಾಂಡವರೊಂದಿಗೆ ಒಗ್ಗಟ್ಟಿನಿಂದ ಬೆಳೆಯುವ ಕೌರವರು ಕ್ರಮೇಣ ಅವರ ವಿರುದ್ಧ ಹಗೆ ಸಾಧಿಸುತ್ತಾರೆ. ದುರ್ಯೋಧನ ಭೀಮನನ್ನು ಕೊಲ್ಲಲು ಅನೇಕ ಬಾರಿ ಸಂಚು ಹೂಡುತ್ತಾನೆ. ಮೊದಲ ಬಾರಿ ಭೀಮನನ್ನು ಕೊಲ್ಲಲು ಪ್ರಯತ್ನಿಸಿದಾಗ ಅವನು ನಾಗಲೋಕಕ್ಕೆ ಹೋಗಿ ನೂರು ಆನೆಗಳ ಬಲವನ್ನು ಪಡೆದು ಹಿಂತಿರುಗಿ ಬರುತ್ತಾನೆ. (ಬರಹ: ಎಚ್. ಸತೀಶ್, ಜ್ಯೋತಿಷಿ)

ಮಹಾಭಾರತ ಕಥೆಗಳು: ಭೀಮನನ್ನು ಕೊಲ್ಲಲು ಸಂಚು ಮಾಡಿದ ದುರ್ಯೋಧನ; ನಾಗಲೋಕಕ್ಕೆ ತೆರಳಿ ನೂರು ಆನೆಗಳ ಬಲ ಪಡೆದ ಕುಂತಿಪುತ್ರ
ಮಹಾಭಾರತ ಕಥೆಗಳು: ಭೀಮನನ್ನು ಕೊಲ್ಲಲು ಸಂಚು ಮಾಡಿದ ದುರ್ಯೋಧನ; ನಾಗಲೋಕಕ್ಕೆ ತೆರಳಿ ನೂರು ಆನೆಗಳ ಬಲ ಪಡೆದ ಕುಂತಿಪುತ್ರ

ಕುಂತಿಯು ವಾಯುದೇವನ ಅನುಗ್ರಹದಿಂದ ಭೀಮನಿಗೆ ಜನ್ಮ ನೀಡಿದರೆ, ಅದೇ ದೀನ ಗಾಂಧಾರಿಯು ದುರ್ಯೋಧನನಿಗೆ ಜನ್ಮ ನೀಡುತ್ತಾಳೆ. ಪಾಂಡುರಾಜ , ಮಾದ್ರಿ ನಿಧನದ ನಂತರ ಕುಂತಿ ಐವರು ಮಕ್ಕಳೊಂದಿಗೆ ಹಸ್ತಿನಾಪುರಕ್ಕೆ ಬರುತ್ತಾಳೆ. ಬಾಲ್ಯದಲ್ಲಿ ಕೌರವರು ಹಾಗೂ ಪಾಂಡವರು ಅನ್ಯೋನ್ಯವಾಗಿರುತ್ತಾರೆ. ಆದರೆ ಕ್ರಮೇಣ ದುರ್ಯೋಧನ ಭೀಮನ ಬಗ್ಗೆ ದ್ವೇಷ ಬೆಳೆಸಿಕೊಳ್ಳುತ್ತಾನೆ.

ಭೀಮನನ್ನು ಕೊಲ್ಲಲು ದುರ್ಯೋಧನ ವಿಫಲ ಯತ್ನ

ಪಾಂಡವರ ಜವಾಬ್ದಾರಿಯನ್ನು ಭೀಷ್ಮ ವಹಿಸಿಕೊಳ್ಳುತ್ತಾರೆ. ಇದರಿಂದ ಪಾಂಡವರಲ್ಲಿ ಸಹಜವಾಗಿ ನ್ಯಾಯ ನೀತಿಯನ್ನು ಗೌರವಿಸುವ, ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವ ಮನಸ್ಥಿತಿ ಬೆಳೆಯತೊಡಗಿತು. ಅದೆಷ್ಟೋ ಬಾರಿ ಕೌರವರನ್ನು ಭೀಮನೊಬ್ಬನೇ ಏಕಾಂಗಿಯಾಗಿ ಆಟ ಪಾಠಗಳಲ್ಲಿ ಸೋಲಿಸಿ ಬಿಡುತ್ತಾನೆ. ಭೀಮನೊಬ್ಬನೇ ಕೌರವರಿಗೆ ಎದುರಾಳಿ ಎಂಬ ಮಾತು ಒಬ್ಬರಿಂದ ಒಬ್ಬರಿಗೆ ಹರಡಿತು. ಇದರಿಂದ ದುರ್ಯೋಧನನಿಗೆ ಚಿಂತೆ ಆರಂಭವಾಯಿತು. ಭೀಮನ ವಿರುದ್ಧ ಜಯ ಸಾಧಿಸಲು ಅವನ ಮೇಲೆ ಸೇಡು ತೀರಿಸಿಕೊಳ್ಳಲು ದುರ್ಯೋಧನ ಕಾಯುತ್ತಿರುತ್ತಾನೆ.

ಒಂದು ವೇಳೆ ನ್ಯಾಯವಾಗಿ ಭೀಮನನ್ನು ಸೋಲಿಸಲು ಸಾಧ್ಯವಾಗದೇ ಹೋದಲ್ಲಿ ಅಡ್ಡದಾರಿ ಹಿಡಿದರೂ ಸರಿ ಅವನನ್ನು ಸೋಲಿಸಲೇಬೇಕೆಂದು ತೀರ್ಮಾನಿಸುತ್ತಾನೆ. ದುರ್ಯೋಧನ ಭೀಮನನ್ನು ಕೊಲ್ಲುವ ಸಲುವಾಗಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡು ಉದ್ಯಾನವನಕ್ಕೆ ಆಹ್ವಾನಿಸುತ್ತಾನೆ. ಆ ಉದ್ಯಾನವನದಲ್ಲಿ ಜಲಕ್ರೀಡೆಯಾಗಲು ಎಲ್ಲರೂ ಸಿದ್ದರಾಗುತ್ತಾರೆ. ಭೀಮನನ್ನು ಏಕಾಂಗಿಯಾಗಿ ದುರ್ಯೋಧನನು ತನ್ನೊಡನೆ ಕರೆದುಕೊಂಡು ಹೋಗುತ್ತಾನೆ. ವಿಷ ಬೆರೆಸಿದ ಆಹಾರವನ್ನು ಭೀಮನಿಗೆ ನೀಡುತ್ತಾನೆ. ಅದನ್ನು ತಿನ್ನುವ ಭೀಮ ಕೆಲವೇ ಕ್ಷಣದಲ್ಲಿ ಮೂರ್ಛೆ ಹೋಗುತ್ತಾನೆ. ಆಗ ದುರ್ಯೋಧನ ಭೀಮನನ್ನು ಗಿಡ ಬಳ್ಳಿಗಳಿಂದ ಸುತ್ತಿ ನದಿಗೆ ಎಸೆಯುತ್ತಾನೆ. ಇನ್ನು ಭೀಮ ಸತ್ತಂತೆ ಎಂದು ತಿಳಿದು ಅರಮನೆಗೆ ಹೊರಟು ಹೋಗುತ್ತಾರೆ.

ನಾಗಲೋಕಕ್ಕೆ ಹೋಗಿ ನೂರು ಆನೆಗಳ ಶಕ್ತಿ ಪಡೆದ ಭೀಮ

ಭೀಮನ ಶರೀರವು ನಾಗಲೋಕವನ್ನು ಪ್ರವೇಶಿಸುತ್ತದೆ. ಅಲ್ಲಿದ್ದ ಸರ್ಪಗಳು ಭೀಮನನ್ನು ಕಚ್ಚಲು ಪ್ರಾರಂಭಿಸುತ್ತವೆ. ಆರ್ಯಕ ಎಂಬ ಸರ್ಪರಾಜನು ಕುಂತಿಯ ಮುತ್ತಾತನಾಗಿರುತ್ತಾನೆ. ಆದ್ದರಿಂದ ಭೀಮನನ್ನು ರಕ್ಷಿಸಿ ಅವನಿಗೆ 1000 ಆನೆಗಳ ಶಕ್ತಿಯುಳ್ಳ ಅಮೃತದಿಂದ ತುಂಬಿರುವ ಕೊಡವನ್ನು ನೀಡುತ್ತಾನೆ. ಸರ್ಪಗಳು ಮೃಷ್ಟಾನ್ನ ಭೋಜನವನ್ನು ಮಾಡಿಸಿ ಶುಭ ಕೋರುತ್ತವೆ. ಭೀಮಸೇನನು ದಣಿವಾರಿಸಿಕೊಂಡು ಕೆಲವು ದಿನಗಳ ನಂತರ ಹತ್ತಿನಾವತಿಗೆ ಹೊರಡಲು ಸಿದ್ದನಾಗುತ್ತಾನೆ. ದುರ್ಯೋಧನನು ಭೀಮನಿಗೆ ಕೆಟ್ಟದ್ದನ್ನು ಮಾಡಲು ಹೋದರೂ, ಒಳ್ಳೆಯದೇ ಆಗಿರುತ್ತದೆ. ಸಾಮಾನ್ಯ ಮಾನವನಾಗಿ ಹೋದ ಭೀಮನು ಸಾವಿರ ಆನೆಯ ಬಲದಿಂದ ಮರಳಿ ಬರುತ್ತಾನೆ.

ಭೀಮ ನಾಪತ್ತೆಯಾದಾಗಿನಿಂದ ಎಲ್ಲರೂ ಅವನ ಸುಳಿವಿಲ್ಲದೆ ಕಳವಳಕ್ಕೆ ಒಳಗಾಗುತ್ತಾರೆ. ಆದರೆ ದುರ್ಯೋಧನ ಮನಸ್ಸಿನಲ್ಲೇ ಸಂತೋಷ ಪಡುತ್ತಾನೆ. ಕುಂತಿಯು ಅಳುತ್ತಾ ಧರ್ಮರಾಜ ಮತ್ತು ವಿದುರನಿಗೆ ತನ್ನ ಸಂಕಟವನ್ನು ತಿಳಿಸುತ್ತಾಳೆ. ಅಲ್ಲದೆ ದುರ್ಯೋಧನನಿಗೆ ಭೀಮನ ಮೇಲೆ ದ್ವೇಷ ಇರುವ ಕಾರಣ ಅವನೇ ಭೀಮನನ್ನು ಕೊಂದಿರಬಹುದು ಎಂದು ಶಂಕೆ ವ್ಯಕ್ತಪಡಿಸುತ್ತಾಳೆ. ಚಿಕ್ಕವರು ದೊಡ್ಡವರು ಎನ್ನದೆ ಪ್ರತಿಯೊಬ್ಬರೂ ಅವಳನ್ನು ಸಮಾಧಾನಿಸುತ್ತಾರೆ. ಭೀಮ ಮರೆಯಾಗಿರುವ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲವೆಂದು ದುರ್ಯೋಧನ ತಿಳಿಸುತ್ತಾನೆ.

ವಿಷ ಬೆರೆಸಿದ ಲಡ್ಡು ತಿಂದರೂ ಬದುಕುಳಿದ ಬಲ ಭೀಮ

ಎಲ್ಲರೂ ಹೀಗೆ ಚಿಂತಿಸುತ್ತಾ ಇರುವಾಗ ಅಮ್ಮ ಎಂದು ಯಾರೋ ಕುಂತಿಯನ್ನು ಕೂಗಿದಂತೆ ಆಗುತ್ತದೆ. ಭೀಮನು ವಾಯುವೇಗದಿಂದ ನಾಗಲೋಕದಿಂದ ಹಸ್ತಿನಾವತಿಗೆ ಧಾವಿಸಿ ಬರುತ್ತಾನೆ. ಬಂದವನೇ ತಾಯಿಯ ಪಾದವನ್ನು ಮುಟ್ಟಿ ನಮಸ್ಕಾರ ಮಾಡುತ್ತಾನೆ. ಕುಂತಿಯು ಮಗನನ್ನು ಪ್ರೀತಿಯಿಂದ ಅಪ್ಪಿ ಮುದ್ದಾಡುತ್ತಾಳೆ. ಯುಧಿಷ್ಠಿರನು ಭೀಮನನ್ನು ಆಲಂಗಿಸಿಕೊಳ್ಳುತ್ತಾನೆ. ಎಲ್ಲರಿಗೂ ಭೀಮನು ತಾನು ಸಾವಿರ ಆನೆಗಳ ಬಲವನ್ನು ಬಳುವಳಿಯಾಗಿ ಪಡೆದಿರುವುದಾಗಿ ತಿಳಿಸುತ್ತಾನೆ. ಈ ವಿಚಾರ ದುರ್ಯೋಧನನಿಗೂ ತಲುಪುತ್ತದೆ. ಆ ಕ್ಷಣವೇ ಕೋಪಗೊಂಡ ದುರ್ಯೋಧನನು ಭೀಮನ ರಥದ ಸಾರಥಿಯನ್ನು ಕೊಲ್ಲಿಸುತ್ತಾನೆ.

ಭೀಮನಿಗೆ ಲಾಡು ಎಂದರೆ ಬಹಳ ಇಷ್ಟ. ಆದ್ದರಿಂದ ಅದರಲ್ಲಿ ವಿಷ ಬೆರೆಸಿ ಭೀಮನನ್ನು ಕೊಲ್ಲಲು ದುರ್ಯೋಧನನು ಸಂಚು ರೂಪಿಸುತ್ತಾನೆ. ಆದರೆ ಅವನ ಸೋದರ ಯುಯುತ್ಸುವು ಈ ವಿಚಾರವನ್ನು ಎಲ್ಲರಿಗೂ ತಿಳಿಸುತ್ತಾನೆ. ವಿಷ ಇರುವುದನ್ನು ತಿಳಿದರೂ ಸಹ ಭೀಮನು ಆಸೆಯಿಂದ ಲಾಡು ತಿನ್ನುತ್ತಾನೆ. ಆದರೆ ಅವನಿಗೆ ಬೇರೆ ಏನೂ ಸಮಸ್ಯೆ ಆಗುವುದಿಲ್ಲ. ಈ ರೀತಿ ದುರ್ಯೋಧನನ ಎಲ್ಲಾ ಉಪಾಯಗಳೂ ವಿಫಲವಾಗುತ್ತದೆ. ಕೌರವರಿಗೆ ಕೃಪಾಚಾರ್ಯರು ವೇದ, ಉಪನಿಷತ್ ಮುಂತಾದ ಪುರಾಣಗಳ ಬಗ್ಗೆ ಪಾಠ ಮಾಡುತ್ತಾರೆ. ಗೌತಮ ಋಷಿಗಳು ಶಸ್ತ್ರಾಭ್ಯಾಸದ ಬಗ್ಗೆ ತಿಳಿಸಿಕೊಡುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.