ಮಹಾಭಾರತ ಕಥೆಗಳು: ತುಂಬಿದ ಸಭೆಯಲ್ಲಿ ಅವಮಾನ; ದ್ರುಪದನ ವಿರುದ್ದ ಸೇಡು ತೀರಿಸಿಕೊಳ್ಳುವಂತೆ ದ್ರೋಣಾಚಾರ್ಯ ಪ್ರತಿಜ್ಞೆ-indian mythology dronacharya pledge to take revenge against drupada maharaja mahabharata stories sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತ ಕಥೆಗಳು: ತುಂಬಿದ ಸಭೆಯಲ್ಲಿ ಅವಮಾನ; ದ್ರುಪದನ ವಿರುದ್ದ ಸೇಡು ತೀರಿಸಿಕೊಳ್ಳುವಂತೆ ದ್ರೋಣಾಚಾರ್ಯ ಪ್ರತಿಜ್ಞೆ

ಮಹಾಭಾರತ ಕಥೆಗಳು: ತುಂಬಿದ ಸಭೆಯಲ್ಲಿ ಅವಮಾನ; ದ್ರುಪದನ ವಿರುದ್ದ ಸೇಡು ತೀರಿಸಿಕೊಳ್ಳುವಂತೆ ದ್ರೋಣಾಚಾರ್ಯ ಪ್ರತಿಜ್ಞೆ

ಕೌರವರು, ಪಾಂಡವರ ಗುರುಗಳಾದ ದ್ರೋಣಾಚಾರ್ಯರು, ವಿವಿಧ ವಿದ್ಯೆಯಲ್ಲಿ ಪಾರಂಗತರಾದರೂ ಸರಸ್ವತಿ ವಿನ: ಲಕ್ಷ್ಮಿ ಒಲಿಯಲಿಲ್ಲ. ಬಡತನವಿದ್ದರಿಂದ ಸಹಾಯ ಕೇಳಲು ದ್ರುಪದ ಅರಮನೆಗೆ ಹೋದಾಗ ಅಲ್ಲಿ ಅವರಿಗೆ ಅವಮಾನವಾಗುತ್ತದೆ. ಇದರಿಂದ ಮನನೊಂದ ದ್ರೋಣರು, ದ್ರುಪದನ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡುತ್ತಾರೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಮಹಾಭಾರತ ಕಥೆಗಳು: ತುಂಬಿದ ಸಭೆಯಲ್ಲಿ ಅವಮಾನ; ದ್ರುಪದನ ವಿರುದ್ದ ಸೇಡು ತೀರಿಸಿಕೊಳ್ಳುವಂತೆ ದ್ರೋಣಾಚಾರ್ಯ ಪ್ರತಿಜ್ಞೆ
ಮಹಾಭಾರತ ಕಥೆಗಳು: ತುಂಬಿದ ಸಭೆಯಲ್ಲಿ ಅವಮಾನ; ದ್ರುಪದನ ವಿರುದ್ದ ಸೇಡು ತೀರಿಸಿಕೊಳ್ಳುವಂತೆ ದ್ರೋಣಾಚಾರ್ಯ ಪ್ರತಿಜ್ಞೆ (PC: Sagarworld Blog)

ದ್ರೋಣಾಚಾರ್ಯ, ಪಾಂಡವ ಮತ್ತು ಕೌರವರಿಗೆ ಯುದ್ಧ ಕಲೆಗಳನ್ನು ಕಲಿಸಿದ ಗುರು. ಇವರು ಭಾರದ್ವಾಜ ಋಷಿಯ ಪುತ್ರ. ವಿವಿಧ ರೀತಿಯ ಸಮರ ಕಲೆಗಳಲ್ಲಿ ದ್ರೋಣಾಚಾರ್ಯರು ಜ್ಞಾನ ಮತ್ತು ಪ್ರಾವೀಣ್ಯತೆಯನ್ನು ಹೊಂದಿದ್ದರು. ಆದರೆ ದ್ರೋಣರು ಎಲ್ಲಾ ವಿದ್ಯೆಯನ್ನೂ ಪರಶುರಾಮರಿಂದ ಕಲಿಯುತ್ತಾರೆ.

ಪರಶುರಾಮರಿಂದ ವಿದ್ಯೆ ಕಲಿತ ದ್ರೋಣಾಚಾರ್ಯರು

ಪರಶುರಾಮರು ಸಂಪೂರ್ಣ ವಿದ್ಯಾವಂತರು. ಅವರಿಗೆ ವಿಶೇಷವಾದಂತಹ ಪಾಂಡಿತ್ಯವಿತ್ತು. ಇಂತಹ ಗುರುವಿನಿಂದ ದ್ರೋಣಾಚಾರ್ಯರು ಅನೇಕ ರೀತಿಯ ಅಸ್ತ್ರಗಳನ್ನು ಪ್ರಯೋಗಿಸುವ ವಿಧಾನವನ್ನು ಕಲಿತುಕೊಳ್ಳುತ್ತಾರೆ. ಆ ಅಸ್ತ್ರಗಳಿಗೆ ಸಂಬಂಧಪಟ್ಟ ಅಧಿದೇವತೆಗಳನ್ನು ಒಲಿಸಿಕೊಳ್ಳುವ ತಂತ್ರವನ್ನು ಪೂರ್ಣವಾಗಿ ಕಲಿಯುತ್ತಾರೆ. ಈ ಕಾರಣದಿಂದಾಗಿ ದ್ರೋಣಾಚಾರ್ಯರನ್ನು ಸಮರ ವಿದ್ಯೆಯಲ್ಲಿ ಅದರಲ್ಲಿಯೂ ಧನುರ್ವಿದ್ಯೆಯಲ್ಲಿ ಸರಿಗಟ್ಟುವ ವೀರ ಮತ್ತೊಬ್ಬನಿರುವುದಿಲ್ಲ. ಎಷ್ಟೇ ವಿದ್ಯಾವಂತರಾದರೂ ದ್ರೋಣಾಚಾರ್ಯರ ಬಡತನವು ನಿವಾರಣೆಯಾಗಲಿಲ್ಲ. ಮಗನಿಗೆ ಕುಡಿಯುವ ಹಾಲನ್ನೂ ಹೊಂದಿಸಲು ಸಾಧ್ಯವಾಗದೆ ಸಹಾಯ ಕೇಳಲು ತನ್ನೊಡನೆ ವಿದ್ಯೆ ಕಲಿತ ದೃಪದನ ಆಸ್ಥಾನಕ್ಕೆ ಬರುತ್ತಾರೆ.

ಸಹಾಯ ಕೇಳಲು ಗೆಳೆಯ ದ್ರುಪದನ ಆಸ್ಥಾನಕ್ಕೆ ತೆರಳಿದ ದ್ರೋಣರು

ದ್ರೋಣಾಚಾರ್ಯರು ನೇರವಾಗಿ ರಾಜ್ಯಸಭೆಯನ್ನು ಪ್ರವೇಶಿಸುತ್ತಾರೆ. ದ್ರುಪದನ ಜೊತೆಯಲ್ಲಿ ಎಂದಿನಂತೆ ಸ್ನೇಹ ಪ್ರೀತಿಯಿಂದ ಮಾತನಾಡುತ್ತಾರೆ. ಆದರೆ ದ್ರುಪದ, ದ್ರೋಣರೊಂದಿಗೆ ಸ್ನೇಹದಿಂದ ವರ್ತಿಸುವುದಿಲ್ಲ. ಇದರಿಂದ ದ್ರೋಣಾಚಾರ್ಯರಿಗೆ ನಿರಾಸೆಯುಂಟಾಗುತ್ತದೆ. ಆದರೂ ಅದನ್ನು ಸಹಿಸಿಕೊಂಡು ಮಹಾರಾಜ ನಿನಗೆ ನನ್ನ ನೆನಪಿಲ್ಲವೇ ಎಂದು ಕೇಳುತ್ತಾರೆ. ವಿದ್ಯಾರ್ಥಿಗಳಾಗಿದ್ದಾಗ ನಾವಿಬ್ಬರೂ ಜೊತೆಗೂಡಿ ಧನುರ್ವಿದ್ಯೆಯನ್ನು ಅಭ್ಯಾಸ ಮಾಡಿದ್ದೇವೆ. ನಿನಗೆ ವಿದ್ಯೆಯ ಜೊತೆ ಲಕ್ಷ್ಮಿ ಬಂದಳು. ಬಡತನದ ನೆರಳೇ ನಿನಗಿಲ್ಲ. ಆದರೆ ನನಗೆ ಸರಸ್ವತಿ ಒಲಿದಳೇ ಹೊರತು ಲಕ್ಷ್ಮಿ ಒಳಿಯಲೇ ಇಲ್ಲ. ಈ ಕಾರಣದಿಂದಾಗಿ ಇಂದಿಗೂ ನಾನು ಬಡತನದ ಬೇಗೆಯಲ್ಲಿ ನಲುಗುತ್ತಿದ್ದೇನೆ. ಆದ್ದರಿಂದ ನಿನ್ನ ಮೇಲೆ ಅಪಾರ ವಿಶ್ವಾಸವಿಟ್ಟು ಸ್ನೇಹಿತನಾಗಿ ಸಹಾಯ ಕೇಳಲು ಬಂದಿದ್ದೇನೆ ಎಂದು ತಿಳಿಸುತ್ತಾರೆ. ದೃಪದನಿಗೆ ದ್ರೋಣಾಚಾರ್ಯ ಗೊತ್ತಿದ್ದರೂ, ಕಡು ಬಡವನನ್ನು ಸ್ನೇಹಿತ ಎಂದು ಹೇಳಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ. ಆದ್ದರಿಂದ ದ್ರೋಣಾಚಾರ್ಯರ ನೆನಪೇ ಇಲ್ಲದಂತೆ ದ್ರುಪದ ವರ್ತಿಸುತ್ತಾನೆ.

ದ್ರುಪದನಿಂದ ದ್ರೋಣರಿಗೆ ಅಪಮಾನ

ದ್ರುಪದ, ದ್ರೋಣಾಚಾರ್ಯರನ್ನು ಕುರಿತು ನನ್ನಂತ ರಾಜ ಎಂದಿಗೂ ನಿನ್ನಂತ ಕಡು ಬಡವನೊಂದಿಗೆ ಸ್ನೇಹ ಬೆಳೆಸುವುದಿಲ್ಲ. ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ನಾವಿಬ್ಬರೂ ಜೊತೆಯಲ್ಲಿರಬಹುದು. ಅದನ್ನೇ ನೀನು ಸ್ನೇಹ ಎಂದು ತಿಳಿದರೆ ಅದು ನನ್ನ ತಪ್ಪಲ್ಲ ಎಂದು ಹೇಳುತ್ತಾನೆ. ಇದರಿಂದಾಗಿ ಜೀವಮಾನ ಪರ್ಯಂತ ನಾವುಗಳು ಸ್ನೇಹಿತರಾಗುವ ಅವಶ್ಯಕತೆ ಇಲ್ಲ. ಇಡೀ ಪಾಂಚಾಲ ದೇಶದ ಮಹಾರಾಜನಾಗಿರುವ ನನಗೂ, ಜನರಿಗೆ ಬೇಕಾದ ಧಾರ್ಮಿಕ ಕೆಲಸಗಳನ್ನು ಮಾಡಿಕೊಡುತ್ತಿರುವ ನಿನಗೂ ಎಲ್ಲಿಯ ಸಂಬಂಧ? ಒಂದು ಹೊತ್ತಿನ ಅನ್ನಕ್ಕೂ ಕಷ್ಟಪಡುತ್ತಿರುವ ನೀನು ನನಗೆ ಸ್ನೇಹಿತನಾಗಲು ಯೋಗ್ಯನಲ್ಲ ಎಂದು ಹೀಯಾಳಿಸುತ್ತಾನೆ. ವೈಭವದ ಜೀವನವನ್ನು ನಡೆಸುತ್ತಿರುವ ನನಗೂ ತಿನ್ನಲು ಅನ್ನವಿಲ್ಲದೆ ಕಷ್ಟ ಪಡುತ್ತಿರುವ ನಿನಗೂ ಸಂಬಂಧವೇ ಇಲ್ಲ. ನೀನು ಯಾರೆಂದೇ ನನಗೆ ತಿಳಿಯದು. ಆದ್ದರಿಂದ ಬಂದ ದಾರಿಗೆ ಸುಂಕವಿಲ್ಲವೆಂದು ತಿಳಿದು ಇಲ್ಲಿಂದ ನೀನು ವಾಪಸ್‌ ಹೊರಡು ಎನ್ನುತ್ತಾನೆ. ಆದರೆ ದ್ರೋಣರು ದೃಪದನಿಂದ ಎಂದಿಗೂ ಈ ಮಾತುಗಳನ್ನು ನಿರೀಕ್ಷಿಸಿರುವುದಿಲ್ಲ. ಇದರಿಂದ ಅವರು ಬಹಳ ನಿರಾಶರಾಗುತ್ತಾರೆ. ತನಗೆ ಈ ರೀತಿ ಅವಮಾನ ಮಾಡಿದ್ದಕ್ಕೆ ಕೋಪಗೊಳ್ಳುತ್ತಾರೆ.

ಸೇಡು ತೀರಿಸಿಕೊಳ್ಳುವಂತೆ ಪ್ರತಿಜ್ಞೆ

ದ್ರುಪದನ ಮಾತುಗಳಿಗೆ ಪ್ರತಿಕ್ರಿಯಿಸುವ ದ್ರೋಣಾಚಾರ್ಯರು. ಹಿಂದಿನ ದಿನಗಳನ್ನು ಮರೆತು ಈ ತುಂಬಿದ ಸಭೆಯಲ್ಲಿ ನನ್ನನ್ನು ಅವಮಾನಿಸಿದೆ. ನನ್ನನ್ನು ಬಡವನೆಂದು ಹೀಯಾಳಿಸಿದೆ. ಇಂದು ಒಂದು ಶಪಥವನ್ನು ಮಾಡುತ್ತಿದ್ದೇನೆ. ಮುಂದೊಂದು ದಿನ ಕ್ಷತ್ರಿಯ ಕುಮಾರನನ್ನು ನನ್ನ ಶಿಷ್ಯನನ್ನಾಗಿ ಸ್ವೀಕಾರ ಮಾಡುತ್ತೇನೆ. ನಾನು ಕಷ್ಟಪಟ್ಟು ಕಲಿತಿರುವ ವಿದ್ಯೆಯನ್ನೆಲ್ಲಾ ಅವನಿಗೆ ದಾರೆ ಎರೆಯುತ್ತೇನೆ. ಅವನ ಮೂಲಕ ನಿನ್ನನ್ನು ಬಂಧಿಸಿ ನನ್ನ ಕಾಲ ಬಳಿಗೆ ಬೀಳಿಸಲಿಲ್ಲ ಎಂದಾದರೆ, ನಾನು ದ್ರೋಣಾಚಾರ್ಯನೇ ಅಲ್ಲ ಎಂದು ಹೇಳುತ್ತಾರೆ. ದ್ರೋಣಾಚಾರ್ಯರ ಈ ಬಿರುಸಿನ ಮಾತು ರಾಜ್ಯಸಭೆಯಲ್ಲಿ ಇದ್ದವರಲ್ಲಿ ನಡಕವನ್ನೇ ಉಂಟುಮಾಡುತ್ತದೆ. ಆದರೆ ದ್ರುಪದನಿಗೆ ಇದು ಅರ್ಥವಾಗುವುದಿಲ್ಲ. ತಾನಾಗಿಯೇ ಸೋಲನ್ನು ತನ್ನ ಬೆನ್ನಿಗೆ ಕಟ್ಟಿಕೊಳ್ಳುತ್ತಾನೆ.

ಮುಂದೆ ದ್ರೋಣಾಚಾರ್ಯರು ಭೀಷ್ಮರನ್ನು ಭೇಟಿ ಮಾಡುತ್ತಾರೆ. ತಮ್ಮ ಬಡತನ, ದ್ರುಪದರ ಜೊತೆಗಿನ ಪ್ರತಿಜ್ಞೆ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಭೀಷ್ಮನ ಸೂಚನೆಯಂತೆ ಕೌರವರು ಹಾಗೂ ಪಾಂಡವರಿಗೆ ವಿದ್ಯೆ ಕಲಿಸಲು ಒಪ್ಪುತ್ತಾರೆ. ಭೀಷ್ಮ, ತಾನು ಒಪ್ಪಿಕೊಂಡರೆ ದ್ರೋಣರ ಪತಿ, ಮಗನಿಗೆ ರಾಜಾತಿಥ್ಯ ನೀಡುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.