ಮಹಾಭಾರತ ಕಥೆಗಳು: ತಂದೆ ಪರೀಕ್ಷಿತನ ಸಾವಿಗೆ ಸೇಡು ತೀರಿಸಿಕೊಳ್ಳಲು ಸರ್ಪ ಸಂಕುಲವನ್ನೇ ನಾಶ ಮಾಡಲು ನಿರ್ಧರಿಸಿದ ಜನಮೇಜಯ, ಮುಂದೇನಾಯ್ತು?-indian mythology king janamejaya decided to take revenge on snakes for father death mahabharata stories sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತ ಕಥೆಗಳು: ತಂದೆ ಪರೀಕ್ಷಿತನ ಸಾವಿಗೆ ಸೇಡು ತೀರಿಸಿಕೊಳ್ಳಲು ಸರ್ಪ ಸಂಕುಲವನ್ನೇ ನಾಶ ಮಾಡಲು ನಿರ್ಧರಿಸಿದ ಜನಮೇಜಯ, ಮುಂದೇನಾಯ್ತು?

ಮಹಾಭಾರತ ಕಥೆಗಳು: ತಂದೆ ಪರೀಕ್ಷಿತನ ಸಾವಿಗೆ ಸೇಡು ತೀರಿಸಿಕೊಳ್ಳಲು ಸರ್ಪ ಸಂಕುಲವನ್ನೇ ನಾಶ ಮಾಡಲು ನಿರ್ಧರಿಸಿದ ಜನಮೇಜಯ, ಮುಂದೇನಾಯ್ತು?

ತನ್ನ ತಂದೆಯನ್ನು ಸಾಯಿಸಿದ ಸರ್ಪಗಳ ಸಂಕುಲವನ್ನು ನಾಶ ಮಾಡಲು ಜನಮೇಜಯ ನಿರ್ಧರಿಸುತ್ತಾನೆ. ಇದಕ್ಕಾಗಿ ಆತ ಯಾಗ ಮಾಡಲು ಮುಂದಾಗುತ್ತಾನೆ. ಇದಕ್ಕೆ ಹೆದರುವ ಸರ್ಪಗಳ ರಾಜ ತಕ್ಷಕ ಆಸ್ತಿಕನನ್ನು ಕಳಿಸಿ ಆ ಯಾಗವನ್ನು ನಿಲ್ಲಿಸಲು ಮನವಿ ಮಾಡುವಂತೆ ಸೂಚಿಸುತ್ತಾನೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ತಂದೆ ಪರೀಕ್ಷಿತನ ಸಾವಿಗೆ ಸೇಡು ತೀರಿಸಿಕೊಳ್ಳಲು ಸರ್ಪ ಸಂಕುಲವನ್ನೇ ನಾಶ ಮಾಡಲು ನಿರ್ಧರಿಸಿದ ಜನಮೇಜಯ; ಮುಂದೇನಾಯ್ತು?
ತಂದೆ ಪರೀಕ್ಷಿತನ ಸಾವಿಗೆ ಸೇಡು ತೀರಿಸಿಕೊಳ್ಳಲು ಸರ್ಪ ಸಂಕುಲವನ್ನೇ ನಾಶ ಮಾಡಲು ನಿರ್ಧರಿಸಿದ ಜನಮೇಜಯ; ಮುಂದೇನಾಯ್ತು?

ಪರೀಕ್ಷಿತ ಮಹಾರಾಜನನ್ನು ಸರ್ಪ ಕಚ್ಚಿದ ಕ್ಷಣದಿಂದ ಎಲ್ಲರಿಗೂ ಭಯದ ವಾತಾವರಣ ಉಂಟಾಗುತ್ತದೆ. ಈ ವಿಚಾರ ತಿಳಿದ ಹಸ್ತಿನಾವತಿಯ ಜನರಿಗೆ ಬಹಳ ದುಃಖವುಂಟಾಗುತ್ತದೆ. ಆದರೆ ಕರ್ತವ್ಯಕ್ಕೆ ಓಗೊಟ್ಟ ಹಲವರು ರಾಜ್ಯದ ಆಗು ಹೋಗುಗಳ ಬಗ್ಗೆ ಗಮನ ನೀಡುತ್ತಾರೆ. ರಾಜ್ಯಕ್ಕೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಪರಕ್ಷಿತನ ಮಗ, ವಯಸ್ಸಿನಲ್ಲಿ ಚಿಕ್ಕವನಾದ ಜನಮೇಜಯನಿಗೆ ರಾಜ್ಯದ ಪಟ್ಟಾಭಿಷೇಕವನ್ನು ಮಾಡುತ್ತಾರೆ.

ಜನಮೇಜಯನ ಪಟ್ಟಾಭಿಷೇಕ

ದಿನ ಕಳೆದಂತೆ ಜನಮೇಜಯನು ಯೌವನಾವಸ್ಥೆಗೆ ಬರುತ್ತಾನೆ. ಅವನು ಪ್ರಬುದ್ಧನಾಗುತ್ತಾನೆ. ಇವನು ತನ್ನ ತಂದೆಯ ಮರಣಕ್ಕೆ ಕಾರಣ ಏನೆಂಬುದನ್ನು ತಿಳಿಯಲು ಇಷ್ಟಪಡುತ್ತಾನೆ. ಹಿರಿಯರಿಂದ ಪರೀಕ್ಷಿತನು ಮಾಡಿದ ತಪ್ಪು ಮತ್ತು ಮುನಿಕುಮಾರ ನೀಡಿದ ಶಾಪದ ಬಗ್ಗೆ ತಿಳಿಯುತ್ತಾನೆ. ತನ್ನ ತಂದೆ ಹಾವು ಕಚ್ಚಿ ಸತ್ತಿದ್ದನ್ನು ತಿಳಿದಾಕ್ಷಣ ಶೋಕದಲ್ಲಿ ಮುಳುಗುತ್ತಾನೆ. ಹಾಗೇ ಸರ್ಪದ ಮೇಲೆ ಸಿಟ್ಟಾಗುತ್ತಾನೆ. ತಂದೆಗೆ ಸಾವಿಗೆ ಸೇಡು ತೀರಿಸಿಕೊಳ್ಳುವ ತೀರ್ಮಾನ ಮಾಡುತ್ತಾನೆ. ಇಡೀ ಸರ್ಪ ಸಂಕುಲವನ್ನುನಾಶ ಮಾಡಬೇಕೆಂಬ ತೀರ್ಮಾನಕ್ಕೆ ಬರುತ್ತಾನೆ. ಈ ಕಾರ್ಯಕ್ಕೆ ಆತ್ಮೀಯರು ವಿರೋಧ ವ್ಯಕ್ತಪಡಿಸಿದರೂ ಜನಮೇಜಯ ನಿರ್ಧಾರ ಬದಲಿಸುವುದಿಲ್ಲ. ಪ್ರತಿಕಾರದ ಅಂಧಕಾರದಿಂದ ಹೋಮ ಆರಂಭಿಸುತ್ತಾನೆ. ಇದರಿಂದ 14 ಲೋಕಗಳಲ್ಲಿದ್ದ ಸರ್ಪಗಳು ಪ್ರಾಣತ್ಯಾಗ ಮಾಡುತ್ತವೆ.

ಜನಮೇಜಯ ಮಾಡುತ್ತಿರುವ ಯಾಗಕ್ಕೆ ಹೆದರಿದ ಸರ್ಪಗಳ ರಾಜ ತಕ್ಷಕನು ಆಸ್ತಿಕನನ್ನು ಕರೆಸಿಕೊಳ್ಳುತ್ತಾನೆ. ಆತನಿಗೆ ಜನಮೇಜಯ ಆಪ್ತನಾಗಿದ್ದರಿಂದ ಆತನನ್ನು ಕಳಿಸಿದರೆ ಈ ಯಾಗವನ್ನು ತಪ್ಪಿಸಬಹುದು ಎಂದುಕೊಳ್ಳುತ್ತಾನೆ. ಸರ್ಪರಾಜನ ಸೂಚನೆಯಂತೆ ಆಸ್ತಿಕನು ಜನಮೇಜಯ ನಡೆಸುತ್ತಿದ್ದ ಯಾಗ ಮಂಟಪವನ್ನು ಪ್ರವೇಶಿಸುತ್ತಾನೆ. ಆಸ್ತಿಕನನ್ನು ನೋಡಿ ಜನಮೇಜಯ ಖುಷಿಯಾಗುತ್ತಾನೆ. ಮಹಾರಾಜನು ಆಸ್ತಿಕನನ್ನು ಸಕಲ ಗೌರವ ಮರ್ಯಾದೆಗಳೊಂದಿಗೆ ಬರ ಮಾಡಿಕೊಳ್ಳುತ್ತಾನೆ. ಆದರೆ ತನ್ನ ಕುಲದ ತಪ್ಪನ್ನು ಮನ್ನಿಸಿ ಸರ್ಪಸಂಕುಲವನ್ನು ಕಾಪಾಡಬೇಕೆಂಬ ಮನವಿಯನ್ನು ಮಾತ್ರ ಒಪ್ಪುವುದಿಲ್ಲ.

ತಂದೆ ಸಾವಿಗೆ ಸೇಡು ತೀರಿಸಿಕೊಳ್ಳಲು ಮುಂದಾದ ಜನಮೇಜಯ

ಜನಮೇಜಯನ ನಿರ್ಧಾರ ಬದಲಿಸದೆ ಇರುವುದನ್ನು ಕಂಡು ತಕ್ಷಕನು ಗಾಬರಿಯಾಗುತ್ತಾನೆ. ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಆಪ್ತನಾದ ಇಂದ್ರನ ಬಳಿ ಹೋಗುತ್ತಾನೆ. ಅಲ್ಲಿ ನಮ್ಮ ಸಂಕುಲಕ್ಕೆ ಒದಗಿರುವ ತೊಂದರೆಯನ್ನು ವಿವರಿಸುತ್ತಾನೆ. ಒಬ್ಬರು ಮಾಡಿದ ತಪ್ಪಿಗೆ ಇಡೀ ಸರ್ಪ ಕುಲವನ್ನು ಆಹುತಿ ತೆಗೆದುಕೊಳ್ಳಲು ಜನಮೇಜಯನು ಸರ್ಪ ಯಾಗವನ್ನು ಹೇಗಾದರೂ ಮಾಡಿ ನಿಲ್ಲಿಸುವಂತೆ ಮನವಿ ಮಾಡಿಕೊಳ್ಳುತ್ತಾನೆ. ದೈವಾನುಗ್ರಹದಿಂದ ನಾವು ಜನಿಸಿದ್ದೇವೆ. ಅಷ್ಟೇ ಏಕೆ ವಿಷ್ಣು ಮತ್ತು ಪರಮೇಶ್ವರರಿಗೆ ನಾವು ಬಹಳ ಹತ್ತಿರವಾಗಿದ್ದೇವೆ. ಆದ್ದರಿಂದ ನಮ್ಮ ಜೀವವನ್ನು ಕಾಪಾಡಲು ನೀನು ನಮಗೆ ಸಹಾಯ ಮಾಡಲೇಬೇಕು ಎಂದು ಮನವಿ ಮಾಡಿಕೊಳ್ಳುತ್ತಾನೆ. ತಕ್ಷನನ್ನು ಸಮಾಧಾನ ಮಾಡುವ ಇಂದ್ರ, ನೀನು ನನ್ನ ಬಳಿ ಬಂದ ನಂತರ ನಿನಗೆ ಆಶ್ರಯ ನೀಡುವುದು ನನ್ನ ಕರ್ತವ್ಯ. ಅದು ಧರ್ಮವೂ ಹೌದು. ಆದ್ದರಿಂದ ಯೋಚನೆ ಮಾಡಬೇಡ, ನಿನ್ನ ಪ್ರಾಣ ಕಾಪಾಡುವ ಹೊಣೆ ನನ್ನದು ಎಂದು ಧೈರ್ಯ ಹೇಳುತ್ತಾನೆ.

ಆಕಾಶ ಮಾರ್ಗದಲ್ಲಿ ತಕ್ಷಕನು ಇಂದ್ರನ ಜೊತೆ ಪ್ರಯಾಣ ಬೆಳೆಸುತ್ತಾನೆ. ಇತ್ತ ಯಾಗದ ಹೊಣೆ ಹೊತ್ತ ಋತ್ವೀಕ, ಆಸ್ತಿಕನಿಗೆ ಇಂದ್ರನು ತಕ್ಷಕನಿಗೆ ಸಹಾಯ ಮಾಡುತ್ತಿರುವುದು ತಿಳಿದುಬರುತ್ತದೆ. ಋತ್ವೀಕರು ಮಂತ್ರ ಹೇಳುವ ಮೂಲಕ ತಕ್ಷಕನು ಹೋಮ ಕುಂಡಕ್ಕೆ ಬೀಳಿಸುವ ಪ್ರಯತ್ನ ಮಾಡುತ್ತಾರೆ. ಆದರೆ ತಕ್ಷಕನಿಗೆ ಇಂದ್ರನ ರಕ್ಷಣೆ ಇದ್ದಿದ್ದರಿಂದ ಅದು ಸಾಧ್ಯವಾಗುವುದಿಲ್ಲ. ಆಗ ಋತ್ವೀಕರು ಇಂದ್ರನ ಸಹಿತ ತಕ್ಷಕನನ್ನು ಹೋಮ ಕುಂಡಕ್ಕೆ ಆಹ್ವಾನಿಸುತ್ತಾರೆ. ಇದನ್ನು ಅರಿತ ಇಂದ್ರನು ತಕ್ಷಕನನ್ನು ಆಕಾಶ ಮಧ್ಯದಲ್ಲಿ ಬಿಟ್ಟು ಹೊರಟು ಹೋಗುತ್ತಾನೆ. ಆಸ್ತಿಕನು ತನ್ನ ಕೊನೆಯ ಪ್ರಯತ್ನ ಎಂಬಂತೆ ತಕ್ಷಕನನ್ನು ಉಳಿಸಲು ಜನಮೇಜಯನ ಬಳಿಯೇ ವಿನಂತಿಸಿಕೊಳ್ಳುತ್ತಾನೆ. ಆಗ ಜನಮೇಜಯ ಮನಸ್ಸು ಬದಲಿಸಿ ಯಾಗವನ್ನು ಕೈ ಬಿಡುತ್ತಾನೆ. ಈ ಕಾರಣದಿಂದಲೇ ಸರ್ಪಗಳ ಕಾಟವಿದ್ದಲ್ಲಿ ಮುಂಬಾಗಿನ ಮೇಲೆ ಆಸ್ತಿಕನಾಣೆ ಎಂದು ಕೆಲವೆಡೆ ಬರೆಯುವುದನ್ನು ನೋಡಿದ್ದೇವೆ. ಆಸ್ತಿಕನು ಸರ್ಪಗಳನ್ನು ಕಾಪಾಡಿದ ಕಾರಣ. ಆತನ ಹೆಸರು ಹೇಳಿದರೆ ಯಾವುದೇ ತೊಂದರೆ ಉಂಟಾಗದು ಎಂಬುದು ನಮ್ಮ ನಂಬಿಕೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.