ಮಹಾಭಾರತ ಕಥೆಗಳು: ಕುರು ವಂಶದ ರಾಜ ಪಾಂಡುವಿನ ಜನನವೇ ಸ್ವಾರಸ್ಯಕರ: ವೇದವ್ಯಾಸರಿಂದ ಜನಿಸಿದ ಈತ ವಿಚಿತ್ರವೀರ್ಯನ ಪತ್ನಿ ಅಂಬಾಲಿಕೆಯ ಪುತ್ರ
ಸಂತಾನವಿಲ್ಲದೆ ಸಾವನ್ನಪ್ಪುವ ವಿಚಿತ್ರ ವೀರ್ಯನ ವಂಶವನ್ನು ನಡೆಸಲು ತಾಯಿ ಸತ್ಯವತಿ ವೇದವ್ಯಾಸರ ಸಹಾಯ ಬೇಡುತ್ತಾಳೆ. ವೇದವ್ಯಾಸರ ಸಹಾಯದಿಂದ ಅಂಬಿಕೆಗೆ ಧೃತರಾಷ್ಟ್ರ ಜನಿಸಿದರೆ, ಅಂಬಾಲಿಕೆಗೆ ಪಾಂಡು ಹಾಗೂ ವಿದುರ ಜನಿಸುತ್ತಾರೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಭೀಷ್ಮನ ಸಹಾಯದಿಂದ ಸಹೋದರ ವಿಚಿತ್ರ ವೀರ್ಯನು ನೆಮ್ಮದಿಯಿಂದ ರಾಜ್ಯವನ್ನು ನಡೆಸಿಕೊಂಡು ಬರುತ್ತಾನೆ. ಇವನ ಪತ್ನಿಯರಾದ ಅಂಬಿಕೆ ಮತ್ತು ಅಂಬಾಲಿಕೆಯರು ಇವನೊಂದಿಗೆ ಸಂತೋಷದ ಜೀವನ ನಡೆಸುತ್ತಿರುತ್ತಾರೆ. ತನ್ನ ಸುತ್ತಮುತ್ತಲ ರಾಜ್ಯಗಳಲ್ಲಿ ವಿಚಿತ್ರವೀರ್ಯನನ್ನು ಜನಪ್ರಿಯತೆ ಮತ್ತು ವಿಶೇಷವಾದ ಗೌರವ ಗಳಿಸುತ್ತಾನೆ.
ಸಂತಾನವಿಲ್ಲದೆ ಸಾವನ್ನಪ್ಪುವ ವಿಚಿತ್ರ ವೀರ್ಯ
ಕೊನೆಗೆ ಸಂತಾನವೇ ಇಲ್ಲದೆ ವಿಚಿತ್ರವೀರ್ಯನು ಇಹಲೋಕ ತ್ಯಜಿಸುತ್ತಾನೆ. ಸತ್ಯವತಿಯು ಭೀಷ್ಮನನ್ನು ಕರೆದು ಅವನ ಸೇವಾ ಮನೋಭಾವನೆಯನ್ನು ಮನಸಾರೆ ಪ್ರಶಂಶಿಸುತ್ತಾಳೆ. ನಿನಗಿಂತಲೂ ಸಮರ್ಥವಾದ ಆಡಳಿತಗಾರ ಬೇರಾರು ನಮಗೆ ಸಿಗುವುದಿಲ್ಲ. ಆದ್ದರಿಂದ ಚಂದ್ರವಂಶವನ್ನು ಉಳಿಸಲು ಮತ್ತು ಬೆಳೆಸಲು ರಾಜ್ಯದ ಆಡಳಿತವೂ ನಿನ್ನ ಪಾಲಾಗಲೇಬೇಕು. ಆದ್ದರಿಂದ ಇಂದಿನಿಂದ ಹಸ್ತಿನಾವತಿಯ ಚಕ್ರವರ್ತಿಯಾಗಿ ರಾಜ್ಯಭಾರ ಮಾಡು ಎಂದು ಕೋರುತ್ತಾಳೆ.
ಇದನ್ನು ಕೇಳಿದ ಭೀಷ್ಮನಿಗೆ ತಾಯಿ ಬಗ್ಗೆ ಇದ್ದ ಗೌರವ ಮತ್ತಷ್ಟು ಹೆಚ್ಚುತ್ತದೆ. ತಾಯಿ ಈ ಬದುಕು ಎಂಬುದು ಜೇಡಿ ಮಣ್ಣಿನಂತೆ. ಅದಕ್ಕೆ ನಾವೇ ಕಷ್ಟಪಟ್ಟು ಉತ್ತಮ ಆಕಾರವನ್ನು ನೀಡಬೇಕು. ಆದ್ದರಿಂದ ಈಗ ದೊರೆಯುವ ಅಲ್ಪ ಸುಖವನ್ನು ಒಪ್ಪಿಕೊಂಡರೆ ನನಗೆ ದೊರೆಯಬೇಕಿದ್ದ ಬೇಕಾದ ಶಾಶ್ವತವಾದ ಯಶಸ್ಸು ಮರೀಚಿಕೆಯಾಗುತ್ತದೆ. ನಮ್ಮ ರಾಜ್ಯದ ಸ್ತ್ರೀಯರನ್ನು ತಾಯಿಯಂತೆ ಗೌರವಿಸುತ್ತಾ ಬಂದಿದ್ದೇನೆ. ನನ್ನ ಭಾವನೆಯನ್ನಾಗಲಿ ಅಥವ ತೆಗೆದುಕೊಂಡ ಪ್ರತಿಜ್ಞೆಯನ್ನಾಗಲಿ ಮರೆಯಲು ಸಾಧ್ಯವಿಲ್ಲ. ಆದರೆ ನೀವು ಋಷಿಮುನಿಗಳ ಅನುಗ್ರಹದಿಂದ ವಂಶವನ್ನು ಉದ್ಧಾರ ಮಾಡುವಂತಹ ಮಕ್ಕಳನ್ನು ಪಡೆಯಬಹುದು ಎಂದು ತಿಳಿಸುತ್ತಾನೆ. ನಾನು ವಿವಾಹವಾಗುವುದಾಗಲಿ ಅಥವ ರಾಜನಾಗುವುದು ಕನಸಿನ ಮಾತು ಎಂದು ಭೀಷ್ಮನು ತಿಳಿಸುತ್ತಾನೆ.
ವಂಶ ಉದ್ಧಾರಕ್ಕೆ ವೇದ ವ್ಯಾಸರ ಸಹಾಯ ಕೇಳಿದ ಸತ್ಯವತಿ
ಭೀಷ್ಮನ ಮಾತನ್ನು ಗೌರವಿಸಿ ಸತ್ಯವತಿಯು ವೇದವ್ಯಾಸರನ್ನು ಸ್ಮರಿಸುತ್ತಾಳೆ. ಆಗ ವೇದವ್ಯಾಸರು ಪ್ರತ್ಯಕ್ಷರಾಗುತ್ತಾರೆ. ಆಗ ಸತ್ಯವತಿಯು ವಂಶವನ್ನು ನಡೆಸಲು ಸಂತಾನವೇ ಇಲ್ಲ. ಆದ್ದರಿಂದ ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಪುತ್ರ ಸಂತಾನ ವಾಗುವಂತೆ ಅನುಗ್ರಹ ನೀಡು ಎಂದು ಹೇಳುತ್ತಾಳೆ. ಆಗ ಮಹಾಮುನಿಗಳು ಅಂಬೆ ಮತ್ತು ಅಂಬಿಕೆಯರು ಒಂದು ವರ್ಷದ ಕಾಲ ವ್ರತವನ್ನು ಆಚರಿಸಲಿ. ಆನಂತರ ನಿನ್ನ ಮನಸ್ಸಿನ ಅಭಿಲಾಷೆಯು ಸಂಪೂರ್ಣವಾಗುತ್ತದೆ ಎಂದು ಹೇಳುತ್ತಾರೆ. ಸತ್ಯವತಿಯು ಒಂದು ವರ್ಷದ ಕಾಲ ಕಾಯಲು ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ.
ಮುನಿಗಳ ಆದೇಶದಂತೆ ಅಂದಿನ ದಿನ ಋಷಿಗಳ ಆಗಮನವನ್ನು ನಿರೀಕ್ಷಿಸುತ್ತಾ ಕೋಣೆಯಲ್ಲಿ ಕುಳಿತಿರುತ್ತಾರೆ. ಆಗ ಶ್ರೀ ವೇದವ್ಯಾಸರು ಪ್ರತ್ಯಕ್ಷರಾಗುತ್ತಾರೆ. ಇವರನ್ನು ನೋಡಿದ ಅಂಬಿಕೆಯು ಹೆದರಿ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾಳೆ. ಆದಕಾರಣ ದೃಷ್ಟಿ ಇಲ್ಲದ ಮಗನ ಜನನವಾಗುತ್ತದೆ. ಇವನೇ ಧೃತರಾಷ್ಟ್ರ. ಇದರಿಂದ ಸತ್ಯವರ್ತಿಗೆ ಸಮಾಧಾನವಾಗುವುದಿಲ್ಲ. ಮಾರನೆಯ ದಿನ ವೇದವ್ಯಾಸದಿಂದ ಅಂಬಾಲಿಕೆಯು ಮಕ್ಕಳನ್ನು ಪಡೆಯುವಂತೆ ತಿಳಿಸುತ್ತಾಳೆ. ಅಂದಿನ ದಿನ ಮುನಿಗಳನ್ನು ಕಂಡ ಅಂಬಾಲಿಕೆಯು ಭಯದಿಂದ ಬೆವರುತ್ತಾಳೆ. ಅವಳ ಮೈ ಬಿಳುಪಾಗುತ್ತದೆ. ಆಗ ಬಿಳುಪಿನ ಬಣ್ಣದ ಸಂತಾನವು ಆಕೆಗೆ ಲಭಿಸುತ್ತದೆ. ಇವನೇ ಪಾಂಡುರಾಜ. ಮತ್ತೊಂದು ಸಂತಾನವನ್ನು ಪಡೆಯುವ ಆಸೆ ಉಂಟಾಯಿತು. ಆಗ ಮುನಿಗಳ ಕೃಪೆಯಿಂದ ಹರಿಭಕ್ತನಾದ ಮಗುವನ್ನಾಗಿ ಪಡೆಯುತ್ತಾರೆ. ಇವನೇ ವಿಧುರ.
ಸೋದರನ ಮಕ್ಕಳ ಅಭಿವೃದ್ಧಿಗೆ ಜೀವನ ಮುಡುಪಾಗಿಡುವ ಭೀಷ್ಮ
ಮೂವರು ಸೋದರನ ಮಕ್ಕಳ ಅಭಿವೃದ್ಧಿಗೆ ಭೀಷ್ಮನು ತನ್ನ ಜೀವನವನ್ನೇ ಮುಡುಪಾಗಿ ಇಡುತ್ತಾನೆ. ಕುರು ಸಾಮ್ರಾಜ್ಯದ ರಾಜಧಾನಿಯಾದ ಹಸ್ತಿನಾವತಿಯು ಪ್ರತಿಯೊಂದು ವಿಚಾರದಲ್ಲಿಯೂ ಅಭಿವೃದ್ಧಿಗೊಳ್ಳಲು ಭೀಷ್ಮನ ಸಹಾಯ ಸಹಕಾರ ದೊರೆಯುತ್ತದೆ. ದೇವರ ಅನುಗ್ರಹದಿಂದ ಮತ್ತು ಸಮೃದ್ಧಿಯಾದ ಮಳೆಯಿಂದ ವೃಕ್ಷಸಂಪತ್ತು ಹೇರಳವಾಗುತ್ತದೆ. ಧನ ಧಾನ್ಯಕ್ಕೆ ಯಾವುದೇ ತೊಂದರೆ ಕಂಡುಬರುವುದಿಲ್ಲ. ಶ್ರೀಮಂತರು ತಮ್ಮಲ್ಲಿರುವ ಹಣವನ್ನಾಗಲಿ ಅಥವಾ ಇನ್ನಿತರ ವಸ್ತುಗಳನ್ನು ದಾನವಾಗಿ ನೀಡುವುದರಿಂದ ರಾಜ್ಯದ ಜನತೆಯು ನೆಮ್ಮದಿಯ ಜೀವನವನ್ನು ನಡೆಸುತ್ತಾರೆ. ಇದರ ನಡುವೆ ಧೃತರಾಷ್ಟ್ರ ಮತ್ತು ಗಾಂಧಾರಿಯ ವಿವಾಹವಾಗುತ್ತದೆ. ಪತಿಗೆ ದೃಷ್ಟಿ ಇರದ ಕಾರಣ ಗಾಂಧಾರಿಯು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ತಾನು ಕತ್ತಲೆಯಲ್ಲಿಯೇ ಜೀವನದಲ್ಲಿ ನಡೆಸುತ್ತಾಳೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).