ಮಹಾಭಾರತ ಕಥೆಗಳು: ಮಕ್ಕಳಿಲ್ಲದ ಕೊರತೆ ನೀಗಿಸಲು ಯಮಧರ್ಮನ ಮಂತ್ರ ಜಪಿಸಿ ಧರ್ಮರಾಯನಿಗೆ ಜನ್ಮ ನೀಡಿದ ಕುಂತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತ ಕಥೆಗಳು: ಮಕ್ಕಳಿಲ್ಲದ ಕೊರತೆ ನೀಗಿಸಲು ಯಮಧರ್ಮನ ಮಂತ್ರ ಜಪಿಸಿ ಧರ್ಮರಾಯನಿಗೆ ಜನ್ಮ ನೀಡಿದ ಕುಂತಿ

ಮಹಾಭಾರತ ಕಥೆಗಳು: ಮಕ್ಕಳಿಲ್ಲದ ಕೊರತೆ ನೀಗಿಸಲು ಯಮಧರ್ಮನ ಮಂತ್ರ ಜಪಿಸಿ ಧರ್ಮರಾಯನಿಗೆ ಜನ್ಮ ನೀಡಿದ ಕುಂತಿ

ಕಿಂದಮ ಋಷಿಯ ಶಾಪದಿಂದ ಪತ್ನಿಯರಿಂದ ಮಕ್ಕಳು ಆಗುವುದಿಲ್ಲ ಎಂದು ಪಾಂಡು ರಾಜ ದುಃಖಿತನಾಗುತ್ತಾನೆ. ಅಗ ಕುಂತಿ ದೂರ್ವಾಸ ಮುನಿಗಳು ತನಗೆ ನೀಡಿದ ವರದ ಬಗ್ಗೆ ತಿಳಿಸಿ ಯಮಧರ್ಮರಾಯನ ಸಹಾಯದಿಂದ ಧರ್ಮರಾಯನಿಗೆ ಜನ್ಮ ನೀಡುತ್ತಾಳೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಮಹಾಭಾರತ ಕಥೆಗಳು: ಮಕ್ಕಳಿಲ್ಲದ ಕೊರತೆ ನೀಗಿಸಲು ಯಮಧರ್ಮನ ಮಂತ್ರ ಜಪಿಸಿ ಧರ್ಮರಾಯನಿಗೆ ಜನ್ಮ ನೀಡಿದ ಕುಂತಿ (ಸಾಂದರ್ಭಿಕ ಚಿತ್ರ)
ಮಹಾಭಾರತ ಕಥೆಗಳು: ಮಕ್ಕಳಿಲ್ಲದ ಕೊರತೆ ನೀಗಿಸಲು ಯಮಧರ್ಮನ ಮಂತ್ರ ಜಪಿಸಿ ಧರ್ಮರಾಯನಿಗೆ ಜನ್ಮ ನೀಡಿದ ಕುಂತಿ (ಸಾಂದರ್ಭಿಕ ಚಿತ್ರ)

ಕಿಂದಮ ಋಷಿ ಶಾಪ ನೀಡಿದ ನಂತರ ಪಾಡು ರಾಜ, ಅದನ್ನೇ ಯೋಚಿಸುತ್ತಾ ರಾಜ್ಯವನ್ನು ತೊರೆದು ಕಾಡಿಗೆ ಬರುತ್ತಾನೆ. ಆದರೂ ಅವನ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಮಕ್ಕಳಿಲ್ಲವೆಂದರೆ ಬ್ರಹ್ಮನ ಆಸ್ಥಾನಕ್ಕೆ ಪ್ರವೇಶವಿಲ್ಲ ಎಂಬ ಭಾವನೆ ಅವನಲ್ಲಿ ಇತ್ತು.

ಪಾಂಡು ರಾಜನಿಗೆ ಮಕ್ಕಳಿಲ್ಲದ ಕೊರತೆ

ಇಬ್ಬರು ಪತ್ನಿಯರು ಇದ್ದರೂ ಕಿಂದಮ ಋಷಿಯ ಶಾಪವು ಇವನನ್ನು ಪತ್ನಿಯರಿಂದ ದೂರವಿರುವಂತೆ ಮಾಡಿತ್ತು. ಅಂತಿಮವಾಗಿ ತನ್ನ ಮನಸ್ಸಿನ ಯೋಚನೆಯನ್ನು ಪತ್ನಿಯರಿಗೆ ತಿಳಿಸುತ್ತಾನೆ. ಮಾದ್ರಿಯು ಅವನನ್ನು ಸಮಾಧಾನಪಡಿಸುತ್ತಾಳೆ. ಆದರೆ ಪಾಂಡುರಾಜುನು ನನಗೆ ಮಕ್ಕಳಾದಲ್ಲಿ ಮಾತ್ರ ಪಿತೃ ಋಣವನ್ನು ತೀರಿಸಬಹುದಾಗಿದೆ ಇಲ್ಲವಾದಲ್ಲಿ ಅದು ಕನಸಿನ ಮಾತಾಗಿ ಬಿಡುತ್ತದೆ ಎಂದು ಹೇಳುತ್ತಾನೆ. ಪತಿಯ ನೋವನ್ನು ಕಂಡು ಕುಂತಿ ಬೇಸರ ವ್ಯಕ್ತಪಡಿಸುತ್ತಾಳೆ.

ಆದರೂ ಸಾವರಿಸಿಕೊಂಡು ತನ್ನ ಚಿಕ್ಕ ವಯಸ್ಸಿನಲ್ಲಿ ದೂರ್ವಾಸ ಮುನಿಗಳಿಂದ ಪಡೆದ ವರದ ಬಗ್ಗೆ ಪಾಂಡುರಾಜನಿಗೆ ತಿಳಿಸುತ್ತಾಳೆ. ಪತಿಯನ್ನುಕುರಿತು ಒಂದು ವೇಳೆ ನೀವು ಇಷ್ಟಪಟ್ಟಿದ್ದೇ ಆದಲ್ಲಿ, ನಾನು ನನಗಿಷ್ಟವಾದ ದೇವತೆಯನ್ನು ಕುರಿತ ಮಂತ್ರವನ್ನು ಜಪಿಸಿದರೆ, ಸ್ವತ: ಆ ದೇವತೆಯೇ ಬಂದು ಮಗನನ್ನು ದಯ ಪಾಲಿಸುತ್ತಾರೆ ಎಂದು ತಿಳಿಸುತ್ತಾಳೆ. ಕುಂತಿಯ ಈ ಮಾತುಗಳನ್ನು ಕೇಳಿದ ಪಾಂಡುರಾಜನಿಗೆ ಸ್ವರ್ಗವೇ ಕೈಗೆ ಸಿಕ್ಕಂತಾಗುತ್ತದೆ. ಕುಂತಿಯನ್ನು ಕುರಿತು ಇದರಿಂದ ನಿನ್ನ ತಪ್ಪೇನು ಆಗುವುದಿಲ್ಲ. ಆದ್ದರಿಂದ ನಿನಗೆ ಇಷ್ಟವಾದ ದೇವತೆಗಳ ಮೂಲಕ ಸಂತಾನವನ್ನು ಪಡೆಯಲು ನನ್ನ ಒಪ್ಪಿಗೆ ಇದೆ ಎಂದು ತಿಳಿಸುತ್ತಾನೆ.

ಯಮಧರ್ಮನ ಮಂತ್ರ ಜಪಿಸಿ ಧರ್ಮರಾಯನಿಗೆ ಜನ್ಮ ನೀಡಿದ ಕುಂತಿ

ಕೇವಲ ಮಂತ್ರದ ಸಹಾಯದಿಂದ ಮಕ್ಕಳನ್ನು ಪಡೆದ ಕಾರಣ ಸ್ವತಃ ನಾನೇ ಆ ಮಗುವಿನ ತಂದೆಯಾಗುತ್ತೇನೆ. ಇದರಿಂದ ನನ್ನ ವಂಶವೃದ್ದಿ ಆಗುತ್ತದೆ. ಈ ಕಾರಣದಿಂದ ದೂರ್ವಾಸರು ನೀಡಿರುವ ವರವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೋ ಎಂದು ಕುಂತಿಗೆ ತಿಳಿಸುತ್ತಾನೆ. ಕುಂತಿಯು ಸ್ನಾನ ಪೂಜೆ ಮುಗಿಸಿದ ನಂತರ ಭಯ ಭಕ್ತಿಯಿಂದ ಕುಳಿತು ಯಮ ಧರ್ಮನಿಗೆ ಸಂಬಂಧಿಸಿದ ಮಂತ್ರವನ್ನು ಜಪಿಸುತ್ತಾಳೆ. ಆ ಕ್ಷಣ ಸಾಕ್ಷಾತ್ ಯಮಧರ್ಮನು ಪ್ರತ್ಯಕ್ಷನಾಗುತ್ತಾನೆ. ಪತಿಯ ಒಪ್ಪಿಗೆ ಇದ್ದ ಕಾರಣ ಕುಂತಿಗೆ ಯಾವುದೇ ರೀತಿಯ ಅಂಜಿಕೆ ಇರುವುದಿಲ್ಲ. ಯಮಧರ್ಮನ ಸಹಾಯದಿಂದ ಅಶ್ವೀಜ ಮಾಸದ ಶುಕ್ಲ ಪಕ್ಷದ ಪಂಚಮಿಯ ದಿನ ಜೇಷ್ಠ ನಕ್ಷತ್ರದ ದಿನ ಗಂಡುಮಗು ಜನಿಸುತ್ತದೆ. ಇವನೊಬ್ಬ ಪ್ರಖ್ಯಾತ ರಾಜನಾಗುವನು. ಇವನು ಶತ್ರುಗಳೇ ಇಲ್ಲದೆ ಬಾಳುತ್ತಾನೆ ಎಂಬ ಅಶರೀರವಾಣಿ ಕೇಳಿ ಬರುತ್ತದೆ. ಇವನು ಧರ್ಮರಾಯ ಎಂಬ ಹೆಸರಿನಿಂದ ಪ್ರಸಿದ್ಧಿಯಾಗುತ್ತಾನೆ. ಧರ್ಮರಾಯ ಹುಟ್ಟಿದ ವಿಚಾರ ಗೂಢಾಚಾರರಿಂದ ಹಸ್ತಿನಾವತಿಗೆ ವಿಚಾರ ತಲುಪುತ್ತದೆ. ಇದನ್ನು ಕೇಳಿದ ಭೀಷ್ಮ,ವಿಧುರ ಮತ್ತು ಇನ್ನಿತರರು ಸಂತೋಷ ವ್ಯಕ್ತಪಡಿಸುತ್ತಾರೆ. ಆದರೆ ಧೃತರಾಷ್ಟ್ರನ ಮನಸ್ಸಿನಲ್ಲಿ ಕಳವಳ ಉಂಟಾಗುತ್ತದೆ. ಸಹಜವಾಗಿ ಗಾಂಧಾರಿಗೆ ಕುಂತಿಯ ಬಗ್ಗೆ ಮತ್ಸರ ಹೆಚ್ಚುತ್ತದೆ.

100 ಮಕ್ಕಳಿಗೆ ಜನ್ಮ ನೀಡುವ ಗಾಂಧಾರಿ

ಗಾಂಧಾರಿಗೆ ಬಹಳ ದಿನಗಳಾದರೂ ಸಂತಾನವಾಗಿರುವುದಿಲ್ಲ. ಇದರಿಂದಾದ ನಿರಾಸೆ ತಾಳಲಾರದೆ ಗಾಂಧಾರಿಯು ತನ್ನ ಗರ್ಭಕ್ಕೆ ಎರಡು ಕೈಗಳಿಂದ ಜೋರಾಗಿ ಹೊಡೆದುಕೊಳ್ಳುತ್ತಾಳೆ. ಆಗ ಅವಳ ಉದರದಿಂದ ದೊಡ್ಡ ಮಾಂಸದ ಮುದ್ದೆಯು ಹೊರ ಬರುತ್ತದೆ. ಆ ಕ್ಷಣ ಮಹರ್ಷಿ ವೇದವ್ಯಾಸರು ಪ್ರತ್ಯಕ್ಷರಾಗಿ ಗಾಂಧಾರಿಯನ್ನು ಕುರಿತು ನಿನ್ನ ಪಾಲಿಗೆ ದೇವರಿದ್ದಾನೆ, ಆದರೆ ಅದೃಷ್ಟವೆಂಬುದೇ ಇಲ್ಲ. ನಿನ್ನ ಮಕ್ಕಳನ್ನು ನೀನೇ ಕೊಂದ ಪಾಪವು ನಿನಗೆ ಬಂದಿದೆ. ಮುಂದೊಂದು ದಿನ ಇದರ ಫಲವನ್ನು ನೀನು ಅನುಭವಿಸುವೆ ಎನ್ನುತ್ತಾರೆ. ನಾಳೆ ಹುಟ್ಟುವ ನಿನ್ನ ಮಕ್ಕಳಿಗೂ ನಿನ್ನ ಬುದ್ಧಿಯೇ ಬಂದರೆ ಅಚ್ಚರಿ ಇಲ್ಲ. ವಿಧುರನನ್ನು ಕರೆದು ಗಾಂಧಾರಿ ಮಾಡಿದ ತಪ್ಪನ್ನು ತಿಳಿಸಿ ಆ ಮಾಂಸದ ಮುದ್ದೆಯನ್ನು ಶುದ್ಧವಾದ ನೀರಿನಿಂದ ಸ್ವಚ್ಚಗೊಳಿಸಲು ತಿಳಿಸುತ್ತಾರೆ. ಆ ಮಾಂಸದ ಮುದ್ದೆ ನೂರು ಸಣ್ಣ ಸಣ್ಣ ತುಂಡುಗಳಾಗುತ್ತವೆ. ಪ್ರತಿಯೊಂದು ಚೂರುಗಳನ್ನು ಬೇರೆ ಬೇರೆ ಪಾತ್ರೆಗಳಲ್ಲಿ ಇಟ್ಟು ತುಪ್ಪವನ್ನು ಹಾಕಿ ಮಂತ್ರಗಳನ್ನು ಹೇಳುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.