ಮಹಾಭಾರತ ಕಥೆಗಳು: ಕಿಂದಮ ಋಷಿ ಶಾಪವನ್ನೂ ಮರೆತು ಪತ್ನಿಯೊಂದಿಗೆ ಸೇರಿ ಸಾವನ್ನಪ್ಪಿದ ಪಾಂಡುರಾಜ; ಪಶ್ಚಾತಾಪದಿಂದ ಪತಿಯ ಚಿತೆಗೆ ಹಾರಿದ ಮಾದ್ರಿ
ಪಾಂಡು ರಾಜ ತನಗೆ ಕಿಂದಮ ಋಷಿ ನೀಡಿದ ಶಾಪವನ್ನು ಮರೆತು ಮಾದ್ರಿಯೊಂದಿಗೆ ಸೇರಿದಾಗ ಸಾವನ್ನಪ್ಪುತ್ತಾನೆ. ಪತಿಯ ಸಾವಿಗೆ ನಾನೇ ಕಾರಣವೆಂದು ಪಶ್ಚಾತಾಪದಿಂದ ಮಾದ್ರಿ ಪತಿಯ ಚಿತೆಗೆ ಹಾರಿ ಸಾವನ್ನಪ್ಪುತ್ತಾಳೆ. ಭೀಷ್ಮರ ಸಲಹೆಯಂತೆ ಕುಂತಿ, ಐವರು ಮಕ್ಕಳೊಂದಿಗೆ ಹಸ್ತಿನಾಪುರಕ್ಕೆ ವಾಪಸ್ ತೆರಳುತ್ತಾಳೆ (ಬರಹ: ಎಚ್. ಸತೀಶ್, ಜ್ಯೋತಿಷಿ)
ದೇವತೆಗಳ ಸಹಾಯದಿಂದ ಕುಂತಿ ಹಾಗೂ ಮಾದ್ರಿ ಪಂಚ ಪಾಂಡವರಿಗೆ ಜನ್ಮ ನೀಡುತ್ತಾರೆ. ಹಸ್ತಿನಾಪುರವನ್ನು ಮರೆತು ಪಾಂಡು ರಾಜ ಪತ್ನಿಯರು, ಮಕ್ಕಳೊಂದಿಗೆ ಕಾಡಿನಲ್ಲಿ ಸಂತೋಷವಾಗಿ ವಾಸವಾಗಿರುತ್ತಾನೆ. ಪಾಂಡು ಕುಮಾರರಿಗೆ 16 ವರ್ಷಗಳು ತುಂಬುತ್ತವೆ. ಎಲ್ಲೆಡೆ ಸಂತೋಷದ ವಾತಾವರಣ ತುಂಬಿರುತ್ತದೆ. ಪಾಂಡವರ ಆಟ ಪಾಠಗಳನ್ನು ಕಂಡು ಪಾಂಡುರಾಜ, ಕುಂತಿ ಮತ್ತು ಮಾದ್ರಿ ಸಂತೋಷದಿಂದ ಕಾಲ ಕಳೆಯುತ್ತಾರೆ.
ಪತ್ನಿಯ ಸೌಂದರ್ಯ ನೋಡಿ ತನಗಿದ್ದ ಶಾಪವನ್ನೇ ಮರೆತ ಪಾಂಡು ರಾಜ
ಮಾದ್ರಿ ಬಹಳ ಸೌಂದರ್ಯವತಿಯಾದ್ದರಿಂದ ಪಾಂಡು ರಾಜನಿಗೆ ಆಕೆಯ ಮೇಲೆ ವಿಶೇಷ ಪ್ರೀತಿ ವಿಶ್ವಾಸ. ಒಮ್ಮೆ ಮಾದ್ರಿಯು ಅಲಂಕಾರ ಮಾಡಿಕೊಂಡು ಪಾಂಡು ರಾಜನ ಬಳಿ ಬರುತ್ತಾಳೆ. ಆಗ ಪಾಂಡುರಾಜನಿಗೆ ಮಾದ್ರಿಯ ಮೇಲೆ ಅನುರಾಗ ಉಂಟಾಗುತ್ತದೆ. ಆ ಕ್ಷಣದಲ್ಲಿ ಪಾಂಡು ರಾಜ ತನಗಿದ್ದ ಶಾಪ ಕೂಡಾ ಮರೆತು ಹೋಗುತ್ತದೆ. ಆದರೆ ಮಾದ್ರಿಗೆ ಭಯ ಕಾಡುತ್ತದೆ. ನಿಮ್ಮ ತಪ್ಪಿನಿಂದ ನಿಮ್ಮ ಸಾವನ್ನು ನೀವೇ ತಂದುಕೊಳ್ಳುವಿರಿ. ಮನಸ್ಸಿನ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ ಎಂದು ಎಚ್ಚರಿಸುತ್ತಾಳೆ. ಆದರೆ ಪಾಂಡುರಾಜನಿಗೆ ಇದರ ಪರಿವೇ ಇರುವುದಿಲ್ಲ. ಆ ಕ್ಷಣದಲ್ಲಿಯೇ ಅವನಿಗಿದ್ದ ಶಾಪವು ಒಮ್ಮೆಲೆ ಅವನನ್ನು ಆವರಿಸುತ್ತದೆ. ಇದ್ದಕ್ಕಿದ್ದಂತೆ ಅವನ ದೇಹದಲ್ಲಿನ ರಕ್ತ ಸಂಚಾರ ನಿಂತು ಹೋಗುತ್ತದೆ. ಇಡೀ ದೇಹದಲ್ಲಿ ರಕ್ತವು ಹೆಪ್ಪುಗಟ್ಟುತ್ತದೆ. ಆ ಕ್ಷಣವೇ ಪಾಂಡು ರಾಜ ಸಾವನ್ನಪ್ಪುತ್ತಾನೆ.
ಪಶ್ಚಾತಾಪ, ದುಃಖದಿಂದ ಪತಿ ಪಾಂಡು ಚಿತೆಗೆ ಹಾರಿ ಸಾವನ್ನಪ್ಪಿದ ಮಾದ್ರಿ
ಪಾಂಡು ರಾಜನು ಮಾಡಿದ ತಪ್ಪನ್ನು ನೆನೆದು ಕುಂತಿ ಮತ್ತು ಮಾದ್ರಿಯರು ಶೋಕದಲ್ಲಿ ಮುಳುಗುತ್ತಾರೆ. ಅಲ್ಲಿಯೇ ಇದ್ದ ಋಷಿಮುನಿಗಳು ಇಬ್ಬರನ್ನು ಸಮಾಧಾನಪಡಿಸುತ್ತಾರೆ. ಕುಂತಿಯು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ತನ್ನ ಮನಸ್ಸನ್ನು ಗಟ್ಟಿ ಮಾಡಿಕೊಳ್ಳುತ್ತಾಳೆ. ಆದರೆ ಮಾದ್ರಿಯು ಪಾಂಡುರಾಜನ ಮರಣಕ್ಕೆ ತಾನೇ ಕಾರಣನಾದನೆಂದು ಪಶ್ಚಾತಾಪ ಪಡುತ್ತಾಳೆ. ಯಾರ ಸಮಾಧಾನವು ಮಾದ್ರಿಯ ನೋವನ್ನು ಮರೆಸುವುದಿಲ್ಲ. ಕಡೆಗೆ ಅವಳೊಂದು ದಿಟ್ಟ ನಿರ್ಧಾರಕ್ಕೆ ಬರುತ್ತಾಳೆ. ಆಕೆಯ ಮಕ್ಕಳಾದ ನಕುಲ ಮತ್ತು ಸಹದೇವರನ್ನು ಕರೆದುಕೊಂಡು ಬಂದು ಕುಂತಿಯ ಬಳಿ ನಿಲ್ಲಿಸಿ, ಇನ್ನು ಮುಂದೆ ಇವರಿಬ್ಬರನ್ನು ನಿನ್ನ ಮಕ್ಕಳೆಂದರೆ ಭಾವಿಸು, ಧರ್ಮರಾಯನೇ ನೀನು ಇವರ ಅಣ್ಣನಲ್ಲ ಇವರೆಲ್ಲರನ್ನು ತಂದೆಯಂತೆಯೇ ನೀನು ಸಾಕಬೇಕು. ಹೀಗೆಂದು ಹೇಳಿ ಒಮ್ಮೆಲೇ ಪತಿಯ ಚಿತೆಗೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಈ ವಿಚಾರ ತಿಳಿದ ಹಸ್ತಿನಾವತಿಯ ಜನರು ದುಃಖ ವ್ಯಕ್ತಪಡಿಸುತ್ತಾರೆ.
ಭೀಷ್ಮನ ಸಲಹೆಯಂತೆ ಮತ್ತೆ ಹಸ್ತಿನಾಪುರಕ್ಕೆ ಮಕ್ಕಳೊಂದಿಗೆ ಹೊರಡುವ ಕುಂತಿ
ಕ್ರಮೇಣ ಕುಂತಿಯು ಎಲ್ಲವನ್ನೂ ಮರೆತು ಕರ್ತವ್ಯದತ್ತ ಗಮನ ಹರಿಸುತ್ತಾಳೆ. ಪಾಂಡವರಿಗೆ ಒದಗಿದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹಿರಿಯರಾದ ಭೀಷ್ಮಚಾರರು ಕಾಡಿಗೆ ತೆರಳುತ್ತಾರೆ. ಕುಂತಿಯನ್ನು ಸಮಾಧಾನಪಡಿಸಿ ಪಾಂಡವರನ್ನು ಮತ್ತು ಕುಂತಿಯನ್ನು ಮರಳಿ ಹಸ್ತಿನಾವತಿಗೆ ಕರೆದುಕೊಂಡು ಬರುತ್ತಾರೆ. ಪಾಂಡು ರಾಜನಿಲ್ಲದ ಅರಮನೆಯನ್ನು ಪ್ರವೇಶಿಸಲು ಕುಂತಿಯು ಒಪ್ಪುವುದಿಲ್ಲ. ಆದರೆ ಮಕ್ಕಳ ಮೇಲಿನ ಪ್ರೀತಿ ಹಟವನ್ನು ತೊರೆಯುವಂತೆ ಮಾಡುತ್ತದೆ. ಭೀಷ್ಮಾಚಾರ್ಯರು ಪಾಂಡವರಿಗೆ ಆಟ ಪಾಠಗಳನ್ನು ಕಲಿಸಲು ಆರಂಭಿಸುತ್ತಾರೆ.
ಆರಂಭದಲ್ಲಿ ಭೀಮ ಮತ್ತು ದುರ್ಯೋಧರ ನಡುವೆ ಸೋದರ ಭಾಂದವ್ಯ ಇರುತ್ತದೆ. ಆದರೆ ದಿನ ಕಳೆದಂತೆ ಸೋದರಿಕೆಯು ಮರೆಯಾಗಿ ಪರಸ್ಪರ ಒಬ್ಬರ ಮೇಲೊಬ್ಬರು ದ್ವೇಷ ಬೆಳೆಸಿಕೊಳ್ಳುತ್ತಾರೆ. ಆದರೂ ಪಾಂಡವರಲ್ಲಿ ತಾಳ್ಮೆಯ ಗುಣವಿರುತ್ತದೆ. ಆದರೆ ದುರ್ಯೋಧನನು ಚಿಕ್ಕ ವಯಸ್ಸಿನಲ್ಲಿಯೇ ಪಾಂಡವರ ಮುಖ ನೋಡಿದರೆ ಸಾಕು ಸಿಡುಕುತನದಿಂದ ವರ್ತಿಸಲು ಆರಂಭಿಸುತ್ತಾನೆ. ಸತ್ಯವತಿ, ಅಂಬಿಕೆ ಮತ್ತು ಅಂಬಾಲಿಕೆಯರು ತಮ್ಮ ಇಳಿವಯಸಿನಲ್ಲಿ ಸುಖ ಸಂತೋಷದಿಂದ ಇರಲು ಕಾಡಿಗೆ ತೆರಳುತ್ತಾರೆ. ಆದರೆ ಕೆಲವೆ ದಿನಗಳಲ್ಲಿ ವಿಧಿಯ ಆಟವೆಂಬಂತೆ ಸತ್ಯವತಿ ಇಹಲೋಕ ತ್ಯಜಿಸುತ್ತಾಳೆ. ಈ ನೋವನ್ನು ಬರಿಸಲಾಗದ ಅಂಬಿಕೆ ಮತ್ತು ಅಂಬಾಲಿಕೆಯರು ಸಹ ಪ್ರಾಣತ್ಯಾಗ ಮಾಡುತ್ತಾರೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).