ಮಹಾಭಾರತ ಕಥೆಗಳು: ಗಂಗೆಯ ಸೌಂದರ್ಯ ಕಂಡು ಮಾರುಹೋದ ಶಂತನು ಮಹಾರಾಜ; ಮದುವೆ ಬೇಡಿಕೆಗೆ ಗಂಗೆ ವಿಧಿಸಿದ ಷರತ್ತು ಏನು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತ ಕಥೆಗಳು: ಗಂಗೆಯ ಸೌಂದರ್ಯ ಕಂಡು ಮಾರುಹೋದ ಶಂತನು ಮಹಾರಾಜ; ಮದುವೆ ಬೇಡಿಕೆಗೆ ಗಂಗೆ ವಿಧಿಸಿದ ಷರತ್ತು ಏನು?

ಮಹಾಭಾರತ ಕಥೆಗಳು: ಗಂಗೆಯ ಸೌಂದರ್ಯ ಕಂಡು ಮಾರುಹೋದ ಶಂತನು ಮಹಾರಾಜ; ಮದುವೆ ಬೇಡಿಕೆಗೆ ಗಂಗೆ ವಿಧಿಸಿದ ಷರತ್ತು ಏನು?

ಒಮ್ಮೆ ಬೇಟೆಯಾಡಲು ಕಾಡಿಗೆ ಹೋಗುವ ಚಂದ್ರವಂಶದ ದೊರೆ ಶಂತನು ಗಂಗೆಯ ಸೌಂದರ್ಯ ನೋಡಿ ಮೆಚ್ಚುತ್ತಾನೆ. ಆಕೆಗೆ ಪ್ರೇಮ ನಿವೇದನೆ ಮಾಡಿ ಮದುವೆ ಆಗುವಂತೆ ಕೇಳುತ್ತಾನೆ. ಆದರೆ ಗಂಗೆಯು, ಶಂತನುವನ್ನು ಮದುವೆಯಾಗಲು ಒಂದು ಷರತ್ತನ್ನು ವಿಧಿಸುತ್ತಾಳೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)


ಮಹಾಭಾರತ ಕಥೆಗಳು: ಗಂಗೆಯ ಸೌಂದರ್ಯ ಕಂಡು ಮಾರುಹೋದ ಶಂತನು; ಮದುವೆ ಬೇಡಿಕೆಗೆ ಗಂಗೆ ವಿಧಿಸಿದ ಷರತ್ತು ಏನು?
ಮಹಾಭಾರತ ಕಥೆಗಳು: ಗಂಗೆಯ ಸೌಂದರ್ಯ ಕಂಡು ಮಾರುಹೋದ ಶಂತನು; ಮದುವೆ ಬೇಡಿಕೆಗೆ ಗಂಗೆ ವಿಧಿಸಿದ ಷರತ್ತು ಏನು? (PC: Wikicommons)

ಚಂದ್ರವಂಶದ ದೊರೆ ದುಷ್ಯಂತ ಲಾಕ್ಷಿ ಎಂಬಾಕೆಯನ್ನು ವಿವಾಹವಾಗುತ್ತಾನೆ. ಆದರೆ ಈ ದಂಪತಿಗೆ ಹಲವು ವರ್ಷಗಳು ಕಳೆದರೂ ಸಂತಾನ ಭಾಗ್ಯವಿರುವುದಿಲ್ಲ. ಇವೆಲ್ಲದರ ಮಧ್ಯೆ ತನ್ನ ಕರ್ತವ್ಯ ಪಾಲನೆಗಾಗಿ ದುಷ್ಯಂತ ಮಹಾರಾಜನು ಬೇಟೆಗಾಗಿ ಕಾಡಿಗೆ ತೆರಳುತ್ತಾನೆ. ಬೇಟೆಯಾಡುತ್ತಾ ಅವನಿಗೆ ಹಸಿವು ಬಾಯಾರಿಕೆ ಕಾಡುತ್ತದೆ. ಆಗ ಅರಣ್ಯದ ನಡುವೆ ಕಣ್ವ ಮಹರ್ಷಿಗಳ ಆಶ್ರಮ ಕಾಣುತ್ತದೆ. ಕಣ್ವ ಮಹರ್ಷಿಗಳ ಅನುಪಸ್ಥಿತಿಯಲ್ಲಿ ಆತನ ಸಾಕು ಮಗಳಾದ ಶಕುಂತಲೆಯು ದುಷ್ಯಂತ ಮಹಾರಾಜನಿಗೆ ಕುಡಿಯಲು ಹಾಲು, ತಿನ್ನಲು ಹಣ್ಣು ಹಂಪಲನ್ನು ನೀಡುತ್ತಾಳೆ.

ಚಂದ್ರ ವಂಶದಲ್ಲಿ ಜನಿಸಿದ ಶಂತನು

ಮಹರ್ಷಿ ವಿಶ್ವಾಮಿತ್ರ ಮತ್ತು ಮೇನಕೆಯ ಸಮಾಗಮದಿಂದ ಜನಿಸಿದ ಶಕುಂತಲೆ ನೋಡಲು ಅತ್ಯಂತ ಸುಂದರವಾಗಿ ಕಾಣುತ್ತಾಳೆ. ಈಕೆ ಸೌಂದರ್ಯಕ್ಕೆ ಮಾರು ಹೋದ ಮಹಾರಾಜನು ವಿಶ್ವಾಮಿತ್ರನನ್ನು ಒಪ್ಪಿಸಿ ಈಕೆಯನ್ನು ವಿವಾಹವಾಗುತ್ತಾನೆ. ಇವರ ಮಗನೇ ಭರತ. ಇವನೆಂತಹ ಪರಾಕ್ರಮಿ ಎಂದರೆ ಚಿಕ್ಕ ವಯಸ್ಸಿನಲ್ಲಿಯೇ ಸಿಂಹದ ಬಾಯಿಯನ್ನು ಅಗಲಿಸಿ ಅದರ ಹಲ್ಲುಗಳ ಲೆಕ್ಕಾಚಾರ ಮಾಡುತ್ತಾನೆ. ಮುಂದೆ ಭರತನು ತನ್ನ ನಿಸ್ವಾರ್ಥ ಆಡಳಿತಕ್ಕೆ ಎಲ್ಲರ ಮೆಚ್ಚುಗೆ ಗಳಿಸುತ್ತಾನೆ. ಇವನು ಚಂದ್ರ ವಂಶದ ರಾಜನಾಗಿ ಬಾಳುತ್ತಾನೆ. ಆದರೆ ಈತನಿಗೆ ಸಂತಾನ ಭಾಗ್ಯ ಇರುವುದಿಲ್ಲ. ಆದ್ದರಿಂದ ಯಮುನಾ ನದಿಯ ದಡದಲ್ಲಿ ಹಲವು ಬಾರಿ ಅಶ್ವಮೇಧ ಯಾಗ ಆಚರಿಸುತ್ತಾನೆ. ದೈವಾನುಗ್ರಹದಿಂದ ಇವನಿಗೆ ಭಾರದ್ವಾಜ ಎಂಬ ಪುತ್ರ ಜನಿಸುತ್ತಾನೆ. ಇವರ ವಂಶದಲ್ಲಿ ಜನಿಸುವವನೇ ಶಂತನು. ಕಾಲ ಕ್ರಮೇಣ ಶಂತನು ಮಹಾರಾಜನು ಚಂದ್ರ ವಂಶದ ಕೀರ್ತಿಯನ್ನು ನಾಲ್ಕು ದಿಕ್ಕುಗಳಲ್ಲಿಯೂ ಪಸರಿಸುವಂತೆ ಮಾಡುತ್ತಾನೆ.

ಗಂಗೆಯ ಸೌಂದರ್ಯಕ್ಕೆ ಮಾರು ಹೋದ ಶಂತನು

ಶಂತನು ಒಮ್ಮೆ ತನ್ನ ನಿತ್ಯ ರೂಢಿಯಂತೆ ಬೇಟೆಗಾಗಿ ಕಾಡಿಗೆ ತೆರಳುತ್ತಾನೆ. ಕಾಡಿನಲ್ಲಿ ಅಲೆದಾಡಿ ಕೊನೆಗೆ ಗಂಗಾ ನದಿಯ ದಡದ ಬಳಿ ಬರುತ್ತಾನೆ. ಅತಿಯಾಗಿ ಬಳಲಿದ್ದ ಶಂತನು ಆ ನದಿಯ ಸೌಂದರ್ಯವನ್ನು ಕಂಡು ಖುಷಿಯಾಗುತ್ತಾನೆ. ಗಂಗಾ ನದಿಯ ಸೌಂದರ್ಯವು ಇವನ ಮನಸ್ಸಿಗೆ ನಾಟುತ್ತದೆ. ಈತನ ಮನಸ್ಸಿಗೆ ನದಿಯ ನೀರಿನ ಮದ್ಯೆಯಿಂದ ಸುಂದರವಾದ ಕನ್ಯಾಮಣಿ ಒಬ್ಬಳು ಎದ್ದು ಬಂದಂತೆ ಭಾಸವಾಗುತ್ತದೆ. ಇವನ ಮನಸ್ಸಿನ ಆಸೆಗಳಿಗೆ ಮಿತಿಯೇ ಇಲ್ಲದಂತಾಗುತ್ತದೆ. ಆ ಸುಂದರಿಯೊಂದಿಗೆ ಮಾತನಾಡಲು ಆರಂಭಿಸುತ್ತಾನೆ. ಕಣ್ಣಿಗೆ ಕಂಡೂ ಕಾಣದಂತಿರುವ ನೀನು ಯಾರೆಂದು ಪ್ರಶ್ನೆಸುತ್ತಾನೆ. ಆ ಸುಂದರಿ ಸಹ ಸಂತನು ಬಗ್ಗೆ ವಿಚಾರಿಸುತ್ತಾನೆ. ಆಗ ಶಂತನು ತಾನು ಚಂದ್ರ ವಂಶದ ಚಕ್ರವರ್ತಿ. ಕ್ರೂರ ಮೃಗಗಳ ಬೇಟೆಯಾಡಲು ಬಂದಿದ್ದೇನೆ. ನಿನ್ನನ್ನು ಕಂಡ ನಂತರ ನನ್ನ ಮನಸ್ಸಿನಲ್ಲಿ ಹೊಸ ಆಸೆ ಮೂಡುತ್ತಿದೆ. ನೀನು ನನ್ನನ್ನು ವರಿಸಿದರೆ ಅದು ನನ್ನ ಪುಣ್ಯ ಎಂದು ಮನಸ್ಸಿನ ಆಸೆ ತಿಳಿಸುತ್ತಾನೆ.

ಶಂತನುವನ್ನು ಮದುವೆ ಆಗಲು ಗಂಗೆ ವಿಧಿಸಿದ ಷರತ್ತು ಏನು?

ಇವನ ಮಾತುಗಳನ್ನು ಕೇಳಿ ಗಂಗೆಗೆ ಸಂತಸವಾಗುತ್ತದೆ. ನಿನ್ನ ಆಶಯದಂತೆ ನಿನ್ನನ್ನು ವರಿಸಲು ಸಿದ್ಧವಾಗಿದ್ದೇನೆ. ಆದರೆ ಈ ವಿಚಾರವು ನಾವಿಬ್ಬರು ಅಂದುಕೊಂಡಂತೆ ಸುಲಭವಲ್ಲ ಎನ್ನುತ್ತಾಳೆ. ಅವಳ ಮಾತು ಅರ್ಥವಾಗದ್ದರಿಂದ ಶಂತನು, ನಿನ್ನ ಮನಸ್ಸಿನಲ್ಲಿ ಏನಿದೆ ತಿಳಿಸು. ಯಾವುದೇ ಬೇಡಿಕೆಗಳಿದ್ದಲ್ಲಿ ಅಥವಾ ನಿರ್ಬಂಧವಿದ್ದಲ್ಲಿ ಅದನ್ನು ಪೂರೈಸಲು ನಾನು ಸದಾ ಸಿದ್ಧ ಎನ್ನುತ್ತಾನೆ. ಆಗ ಗಂಗೆಯು ನನ್ನಲ್ಲಿರುವ ಬೇಡಿಕೆ ಒಂದೇ. ಇದು ನನ್ನ ಮನದ ಆಸೆಯೂ ಹೌದು. ವಿವಾಹದ ನಾನು ಏನು ಮಾಡಿದರೂ ಅದನ್ನು ನೀನು ವಿರೋಧಿಸಬಾರದು. ನನ್ನ ಮನಸ್ಸನ್ನು ನೋಯಿಸಿದರೆ ಆ ಕ್ಷಣವೇ ನಾನು ನಿನ್ನ ಅರಮನೆಯನ್ನು ತೊರೆದು ಹೊರಬರುತ್ತೇನೆ ಎಂದು ಎಚ್ಚರಿಸುತ್ತಾಳೆ. ಗಂಗೆಯ ಮಾತಿಗೆ ಒಪ್ಪಿಗೆ ನೀಡುವ ಶಂತನು ಆಕೆಯ ಕೈ ಹಿಡಿಯುತ್ತಾನೆ. ನಂತರ ಗಂಗೆಯನ್ನು ತನ್ನ ಅರಮನೆಗೆ ಕರೆ ತರುತ್ತಾನೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.