ಮಹಾಭಾರತ ಕಥೆಗಳು: ದೂರ್ವಾಸ ಮುನಿಗಳು ಕುಂತಿಗೆ ನೀಡಿದ ವರವೇನು? ಕರ್ಣ ಮಗುವಾಗಿರುವಾಗಲೇ ಗಂಗಾ ನದಿಗೆ ಬಿಟ್ಟಿದ್ದು ಏಕೆ?-indian mythology why kunti left her first son karna to ganga river durvasa muni mahabharata stories rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತ ಕಥೆಗಳು: ದೂರ್ವಾಸ ಮುನಿಗಳು ಕುಂತಿಗೆ ನೀಡಿದ ವರವೇನು? ಕರ್ಣ ಮಗುವಾಗಿರುವಾಗಲೇ ಗಂಗಾ ನದಿಗೆ ಬಿಟ್ಟಿದ್ದು ಏಕೆ?

ಮಹಾಭಾರತ ಕಥೆಗಳು: ದೂರ್ವಾಸ ಮುನಿಗಳು ಕುಂತಿಗೆ ನೀಡಿದ ವರವೇನು? ಕರ್ಣ ಮಗುವಾಗಿರುವಾಗಲೇ ಗಂಗಾ ನದಿಗೆ ಬಿಟ್ಟಿದ್ದು ಏಕೆ?

ದೂರ್ವಾಸ ಮುನಿಗಳು ನೀಡಿದ ವರವನ್ನು ಪರೀಕ್ಷಿಸಲು ಕುಂತಿ, ಸೂರ್ಯನ ಮಂತ್ರವನ್ನು ಹೇಳುತ್ತಾಳೆ. ಅವನ ತೇಜಸ್ಸಿನಿಂದ ಕುಂತಿಗೆ ಗಂಡು ಮಗು ಜನಿಸುತ್ತದೆ. ಆದರೆ ಮದುವೆ ಇಲ್ಲದೆ ಮಗು ಜನಿಸಿದ್ದು ಕುಂತಿಗೆ ಭಯವಾಗುತ್ತದೆ. ಆದ್ದರಿಂದ ಆ ಮಗುವನ್ನು ಒಂದು ಪೆಟ್ಟಿಗೆಯಲ್ಲಿ ಮಲಗಿಸಿ ಗಂಗಾ ನದಿಗೆ ಹರಿಯಬಿಡುತ್ತಾಳೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಮಹಾಭಾರತ ಕಥೆಗಳು: ದೂರ್ವಾಸ ಮುನಿಗಳು ಕುಂತಿಗೆ ನೀಡಿದ ವರವೇನು? ಕರ್ಣ ಮಗುವಾಗಿರುವಾಗಲೇ ಗಂಗಾ ನದಿಗೆ ಬಿಟ್ಟಿದ್ದು ಏಕೆ?
ಮಹಾಭಾರತ ಕಥೆಗಳು: ದೂರ್ವಾಸ ಮುನಿಗಳು ಕುಂತಿಗೆ ನೀಡಿದ ವರವೇನು? ಕರ್ಣ ಮಗುವಾಗಿರುವಾಗಲೇ ಗಂಗಾ ನದಿಗೆ ಬಿಟ್ಟಿದ್ದು ಏಕೆ?

ಯಾರಾದರೂ ದಾನದಲ್ಲಿ ಮುಂದಿದ್ದರೆ ಅವರನ್ನು ದಾನಶೂರ ಕರ್ಣ ಎಂದು ಕರೆಯುವುದುಂಟು. ಕರ್ಣ , ಕುಂತಿಯ ಮೊದಲ ಪುತ್ರ, ಅಂಗದೇಶದ ಅಧಿಪತಿ. ಕರ್ಣ, ಸೂರ್ಯದೇವನ ಪುತ್ರ. ಆದರೆ ದೂರ್ವಾಸ ಮುನಿಗಳು ಕುಂತಿಗೆ ನೀಡಿದ ವರದ ಫಲವಾಗಿ ಹುಟ್ಟಿದವನು. ಕರ್ಣ ಹುಟ್ಟಿದ ಕಥೆ ಹೀಗಿದೆ.

ಕುಂತಿ, ವಯಸ್ಸಿನಲ್ಲಿ ಚಿಕ್ಕವಳಾದರೂ ವಯಸ್ಸಿಗೆ ಮೀರಿದ ಬುದ್ಧಿವಂತಿಕೆ ಚತುರತೆ ಅವಳಲ್ಲಿ ಇರುತ್ತದೆ. ಯಾವುದೇ ವಿಚಾರವನ್ನು ನೋಡಿದಾಕ್ಷಣ ಅದನ್ನು ಆಸಕ್ತಿಯಿಂದ ಕಲಿಯುವಷ್ಟು ಬುದ್ಧಿವಂತಿಕೆ ಅವಳಲ್ಲಿ ಇರುತ್ತದೆ. ಸಂತಾನವಿಲ್ಲದ ಕಾರಣ ಭೋಜನು ಕುಂತಿಯನ್ನು ದತ್ತು ಪಡೆಯುತ್ತಾನೆ. ಆಕೆಯ ಮೇಲೆ ಅಪಾರ ವಿಶ್ವಾಸವಿಟ್ಟು ಅತಿಯಾದ ಪ್ರೀತಿ ವಿಶ್ವಾಸದಿಂದ ಆಕೆಯನ್ನು ಬೆಳೆಸುತ್ತಾನೆ. ಜನಾನುರಾಗಿ ಆದ ಭೋಜನಿಗೆ ಬಿಡುವೆಂಬುದೇ ಇರುವುದಿಲ್ಲ.

ದೂರ್ವಾಸ ಮುನಿಗಳ ಕೋಪ ತಣಿಸಿದ ಕುಂತಿ

ಒಮ್ಮೆ ದೂರ್ವಾಸ ಮುನಿಗಳು ತಮ್ಮ ಶಿಷ್ಯರ ಜೊತೆಗೂಡಿ ಅರಮನೆಗೆ ಆಗಮಿಸುತ್ತಾರೆ. ಆದರೆ ಭೋಜನಿಗೆ ತನ್ನ ಕೆಲಸ ಕಾರ್ಯಗಳ ಒತ್ತಡ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಮನೆಗೆ ಆಗಮಿಸಿದ ದೂರ್ವಾಸರನ್ನು ಸತ್ಕರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ದೂರ್ವಾಸರು ಕೋಪಗೊಳ್ಳುತ್ತಾರೆ. ರಾಜನಿಗೆ ಶಾಪ ನೀಡಲು ಮುಂದಾಗುತ್ತಾರೆ. ಆದರೆ ನಂತರ ನಡೆಯಬಹುದಾದ ಆಪತ್ತನ್ನು ಗ್ರಹಿಸಿದ ಕುಂತಿಯು ದೂರ್ವಾಸರನ್ನು ಗೌರವಾದರಗಳಿಂದ ನಡೆಸಿಕೊಳ್ಳುತ್ತಾರೆ. ಇದರಿಂದ ಒಮ್ಮೆಲೆ ದೂರ್ವಾಸದಲ್ಲಿ ಇದ್ದ ಕೋಪವು ಮರೆಯಾಗುತ್ತದೆ. ದೂರ್ವಾಸ ಮುನಿಗಳ ಪಾದಗಳಿಗೆ ನಮಸ್ಕರಿಸುವ ಕುಂತಿಯು ಅವರ ಆಶೀರ್ವಾದ ಬೇಡುತ್ತಾಳೆ. ಮುನಿಗಳು ಕುಂತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ವಯಸ್ಸು ಚಿಕ್ಕದಾದರೂ ನಿನ್ನ ಒಳ್ಳೆಯತನದಿಂದ ನನ್ನನ್ನು ಸತ್ಕರಿಸಿ ನನ್ನ ಕೋಪವನ್ನೇ ಮರೆಯಾಗಿಸಿದೆ. ನನಗೆ ಬಹಳ ಖುಷಿಯಾಗಿದೆ. ನಿನಗೆ ಅಪರೂಪವಾದ ವರವೊಂದನ್ನು ನೀಡುತ್ತಿದ್ದೇನೆ. ನೀನು ಸದಾಕಾಲ ಸುಖ ಸಂತೋಷಗಳಿಂದ ಇರು ಎನ್ನುತ್ತಾರೆ.

ನಿನಗೆ ಲೋಕವೇ ಮೆಚ್ಚುವಂತಹ ಐವರು ಪುತ್ರರಾಗುತ್ತಾರೆ. ನೀನು ಯಾವ ದೇವತೆಗಳಿಂದ ಸಂತಾನವನ್ನು ಪಡೆಯಲು ಇಷ್ಟ ಪಡುವೆಯೋ ಸ್ವತ: ಅವರೇ ಪ್ರತ್ಯಕ್ಷರಾಗಿ ನಿನಗೆ ಮಕ್ಕಳನ್ನು ಅನುಗ್ರಹಿಸುತ್ತಾರೆ. ಈ ರೀತಿ ಕುಂತಿಯನ್ನು ಆಶೀರ್ವದಿಸಿ ದೂರ್ವಾಸ ಮುನಿಗಳು ಅರಮನೆಯಿಂದ ತೆರಳುತ್ತಾರೆ. ದೂರ್ವಾಸ ಮುನಿಗಳು ನೀಡಿದ ವರದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ ಕುಂತಿಯ ಬುದ್ಧಿಯು ದೊಡ್ಡ ಪ್ರಮಾದವನ್ನೇ ಸೃಷ್ಟಿಸುತ್ತದೆ. ನನ್ನ ವಯಸ್ಸಿನ ಇತರ ಬಾಲಕ ಬಾಲಕಿಯರು ಜೀವವೇ ಇಲ್ಲದ ಬೊಂಬೆಗಳೊಂದಿಗೆ ಆಟವಾಡುತ್ತಿರುತ್ತಾರೆ. ಇದನ್ನು ಕಂಡ ಕುಂತಿಗೆ ಆಕೆಯ ಮನಸ್ಸಿಗೆ ಒಂದು ಯೋಚನೆ ಮೂಡುತ್ತದೆ. ದುರ್ವಾಸ ಮುನಿಗಳು ವರ ನೀಡಿದ್ದಾರೆ. ನಾನೇಕೆ ಬೊಂಬೆಯ ಜೊತೆ ಆಟವಾಡಬೇಕು. ಸಜೀವ ಮಗುವಿನೊಂದಿಗೆ ಆಟವಾಡಿದರೆ ನನಗೂ ಸಂತೋಷವಾಗುತ್ತದೆ. ಹಾಗೆಯೇ ಮುನಿಗಳು ನೀಡಿದ ವರದ ಪರೀಕ್ಷೆಯು ನಡೆದಂತಾಗುತ್ತದೆ ಎಂದು ಯೋಚಿಸುತ್ತಾಳೆ. ಗಂಗಾ ನದಿಯ ತೀರಕ್ಕೆ ಬರುತ್ತಾಳೆ. ಬಿಳಿ ಬಟ್ಟೆಯನ್ನು ಉಟ್ಟು ದೂರ್ವಾಸರು ಹೇಳಿಕೊಟ್ಟ ಸೂರ್ಯನ ಮಂತ್ರವನ್ನುಉಚ್ಚರಿಸುತ್ತಾಳೆ. ಆ ಕ್ಷಣವೇ ಇಡಿ ಲೋಕಕ್ಕೆ ಬೆಳಕನ್ನು ನೀಡುವ ಸೂರ್ಯನು ಪ್ರತ್ಯಕ್ಷನಾಗುತ್ತಾನೆ.

ಭಯದಿಂದ ಮಗುವನ್ನು ಗಂಗಾ ನದಿಗೆ ಬಿಟ್ಟ ಕುಂತಿ

ಭಯದಿಂದ ಬಾಲಕಿಯ ಹೃದಯದಲ್ಲಿ ತಳಮಳ ಉಂಟಾಗುತ್ತದೆ. ಆಕೆಯ ಮನಸ್ಸಿಗೆ ಏನೊಂದು ತೋಚದೆ ಸೂರ್ಯನನ್ನು ಕುರಿತು ನೀನು ಇಲ್ಲಿಂದ ಹೊರಟು ಹೋಗು ಎಂದು ಬೇಡಿಕೊಳ್ಳುತ್ತಾಳೆ. ಸೂರ್ಯದೇವನು ತನ್ನ ಮಾತಿನಿಂದ ಕುಂತಿಯ ಭಯವನ್ನು ಹೋಗಲಾಡಿಸುತ್ತಾನೆ. ಅವಳನ್ನು ಸ್ಪರ್ಶಿಸಿದ ಫಲವಾಗಿ ವಿಶೇಷ ತೇಜಸ್ಸುಳ್ಳ ಮಗು ಜನಿಸುತ್ತದೆ. ಸೂರ್ಯದೇವನು ಕುಂತಿಯನ್ನು ಕುರಿತು ನೀನು ಭಯ ಪಡಬೇಡ. ನಿನಗೆ ಎಲ್ಲಾ ವಿಚಾರಗಳಲ್ಲಿಯೂ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾನೆ.

ಈ ಮಗುವಿನ ಜೊತೆಯಲ್ಲಿ ಅರಮನೆಗೆ ಹೋದರೆ ಅವರು ಕೇಳುವ ಪ್ರಶ್ನೆಗೆ ಏನೆಂದು ಉತ್ತರಿಸಲಿ ಎಂದು ಭಯ ಭೀತಳಾಗುತ್ತಾಳೆ. ನನ್ನನ್ನು ಕಾಪಾಡುವಂತೆ ಗಂಗಾದೇವಿಯನ್ನೇ ಪ್ರಾರ್ಥಿಸಿಕೊಳ್ಳುತ್ತಾಳೆ. ಮಗುವನ್ನು ಮನಸ್ಸಿಲ್ಲದ ಮನಸ್ಸಿನಿಂದ ನದಿಯ ನೀರಿನಲ್ಲಿ ತೇಲಿ ಬಿಡುತ್ತಾಳೆ. ಕುಂತಿಯ ಭಕ್ತಿಗೆ ಮೆಚ್ಚಿದ ಗಂಗೆಯು ಹರಿಯುವ ರಭಸವನ್ನು ಕಡಿಮೆ ಮಾಡುತ್ತಾಳೆ. ನೀರಿನಲ್ಲಿ ತೇಲಿ ಬರುತ್ತಿದ್ದ ಮಗುವನ್ನು ಧೃತರಾಷ್ಟ್ರನ ಸಾರಥಿ ಅಧಿರಥ ನೋಡುತ್ತಾನೆ. ಸಂತಾನವಿಲ್ಲದ ಅದಿರಥನು ಮಗುವನ್ನು ಪ್ರೀತಿಯಿಂದ ಬಿಗಿದಪ್ಪಿ ಮನೆಯ ಕಡೆ ಹೋಗುತ್ತಾನೆ. ನಿನಗೊಂದು ಉಡುಗೊರೆ ತಂದಿದ್ದೇನೆ ಬೇಗ ಬಾ ಎಂದು ಪತ್ನಿಗೆ ಹೇಳುತ್ತಾನೆ. ಹೊರ ಬಂದ ಆಕೆ, ಮಗುವನ್ನು ಕಂಡು ಸಂತೋಷ ವ್ಯಕ್ತಪಡಿಸುತ್ತಾಳೆ. ಆ ಮಗುವು ಜನಿಸಿರುವಾಗಲೇ ಕರ್ಣ ಕುಂಡಲ ಮತ್ತು ಕವಚಗಳನ್ನು ಹೊಂದಿರುತ್ತದೆ. ಮಗು, ನೆರೆಹೊರೆಯವರೊಂದಿಗೆ ಬೆರೆಯುತ್ತಾ ಬೆಳೆಯುತ್ತದೆ. ಮುಂದೆ ಆ ಮಗುವಿಗೆ ಕರ್ಣ ಎಂದು ಹೆಸರಿಡುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.