ಮಹಾಭಾರತ ಕಥೆಗಳು: ಪತ್ನಿಯೊಂದಿಗೆ ಸೇರಿದಾಗ ನಿನಗೆ ಮರಣ: ಕುರು ವಂಶದ ರಾಜ ಪಾಂಡುವಿಗೆ ಋಷಿ ಕಿಂದಮ ಶಾಪ ನೀಡಿದ್ದು ಏಕೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತ ಕಥೆಗಳು: ಪತ್ನಿಯೊಂದಿಗೆ ಸೇರಿದಾಗ ನಿನಗೆ ಮರಣ: ಕುರು ವಂಶದ ರಾಜ ಪಾಂಡುವಿಗೆ ಋಷಿ ಕಿಂದಮ ಶಾಪ ನೀಡಿದ್ದು ಏಕೆ?

ಮಹಾಭಾರತ ಕಥೆಗಳು: ಪತ್ನಿಯೊಂದಿಗೆ ಸೇರಿದಾಗ ನಿನಗೆ ಮರಣ: ಕುರು ವಂಶದ ರಾಜ ಪಾಂಡುವಿಗೆ ಋಷಿ ಕಿಂದಮ ಶಾಪ ನೀಡಿದ್ದು ಏಕೆ?

ಮಹಾಭಾರತ ಕಥೆಗಳು: ಬೇಟೆಗೆ ಹೋಗುವ ಪಾಂಡು ಮಹಾರಾಜ, ತಿಳಿಯದೆ ಜಿಂಕೆಗಳ ರೂಪದಲ್ಲಿದ್ದ ಕಿಂದಮ ಋಷಿ ದಂಪತಿಗೆ ಬಾಣ ಬಿಡುತ್ತಾನೆ. ಗಂಭೀರವಾಗಿ ಗಾಯಗೊಂಡ ಕಿಂದಮನು, ನೀನು ನಿನ್ನ ಪತ್ನಿಯನ್ನು ಸೇರುವಾಗ ಮರಣ ಪ್ರಾಪ್ತಿಯಾಗುತ್ತದೆ ಎಂದು ಶಾಪ ನೀಡುತ್ತಾನೆ. ((ಬರಹ: ಎಚ್‌. ಸತೀಶ್, ಜ್ಯೋತಿಷಿ)

ಮಹಾಭಾರತ ಕಥೆಗಳು: ಪತ್ನಿಯೊಂದಿಗೆ ಸೇರಿದಾಗ ನಿನಗೆ ಮರಣ: ಕುರು ವಂಶದ ರಾಜ ಪಾಂಡುವಿಗೆ ಋಷಿ ಕಿಂದಮ ಶಾಪ ನೀಡಿದ್ದು ಏಕೆ? (ಸಾಂದರ್ಭಿಕ ಚಿತ್ರ)
ಮಹಾಭಾರತ ಕಥೆಗಳು: ಪತ್ನಿಯೊಂದಿಗೆ ಸೇರಿದಾಗ ನಿನಗೆ ಮರಣ: ಕುರು ವಂಶದ ರಾಜ ಪಾಂಡುವಿಗೆ ಋಷಿ ಕಿಂದಮ ಶಾಪ ನೀಡಿದ್ದು ಏಕೆ? (ಸಾಂದರ್ಭಿಕ ಚಿತ್ರ)

ದೂರ್ವಾಸ ಮುನಿಗಳು ನೀಡಿದ ವರವನ್ನು ಪರೀಕ್ಷಿಸಲು ಕುಂತಿಯು ಅವರು ಹೇಳಿಕೊಟ್ಟ ಮಂತ್ರವನ್ನು ಜಪಿಸಿ ಸೂರ್ಯನಿಂದ ಗಂಡು ಮಗುವನ್ನು ಪಡೆಯುತ್ತಾಳೆ. ಆದರೆ ಮದುವೆ ಆಗದೆ ಮಗು ಪಡೆದಿದ್ದಕ್ಕೆ ಭಯಗೊಂಡು, ಸಮಾಜಕ್ಕೆ ಹೆದರಿ ಆ ಮಗುವನ್ನು ಗಂಗಾ ನದಿಯಲ್ಲಿ ಹರಿಯಬಿಡುತ್ತಾಳೆ. ಆ ಮಗುವೇ ಕರ್ಣ. ಸಂತಾನವಿಲ್ಲದ ಅದಿರಥ ದಂಪತಿ ಮಗುವನ್ನು ಎತ್ತಿಕೊಂಡು ಸಾಕಲು ಆರಂಭಿಸುತ್ತಾರೆ.

ಸ್ವಯಂವರದಲ್ಲಿ ಪಾಂಡುವನ್ನು ವರಿಸಿದ ಕುಂತಿ

ಇತ್ತ ದಿನ ಕಳೆದಂತೆ ಕುಂತಿಯು ಯೌವನಾವಸ್ಥೆಗೆ ಬರುತ್ತಾಳೆ. ತರುಣಿಯಾದ ಕುಂತಿಯು ತನ್ನ ಒಳ್ಳೆಯ ಕೆಲಸ ಕಾರ್ಯಗಳಿಂದ ಎಲ್ಲರ ಮನಸ್ಸನ್ನು ಸೆಳೆಯುತ್ತಾಳೆ. ಈ ನಡುವೆ ರಾಜ ಭೋಜನಿಗೆ ಕುಂತಿಗೆ ವಿವಾಹ ಮಾಡಲು ನಿರ್ಧರಿಸುತ್ತಾನೆ. ಈ ಕಾರಣದಿಂದ ಸ್ವಯಂವರ ಏರ್ಪಡಿಸುತ್ತಾನೆ. ಸ್ವಯಂವರಕ್ಕೆ ರಾಜಾಧಿರಾಜರುಗಳನ್ನು ಆಹ್ವಾನಿಸುತ್ತಾನೆ. ಪಾಂಡು ಮಹಾರಾಜನಿಗೂ ಆಹ್ವಾನ ತಲುಪುತ್ತದೆ. ಎಲ್ಲದಂತೆ ತಾನೂ ಕೂಡಾ ವಿವಾಹ ಆಕಾಂಕ್ಷಿಯಾಗಿ ಸ್ವಯಂವರ ಮಂಟಪವನ್ನು ತಲುಪುತ್ತಾನೆ. ಮಹಾ ಸಾಧ್ವಿ ಕುಂತಿಯು ಅನೇಕ ರಾಜ ಮಹಾರಾಜರ ನಡುವೆ ಪಾಂಡುವಿಗೆ ಸ್ವಯಂವರದ ಹಾರ ಹಾಕಿ ಅವನನ್ನು ವರಿಸುತ್ತಾಳೆ.

ಪಾಂಡುವಿನ ಅಣ್ಣ ಧೃತರಾಷ್ಟ್ರನಿಗೆ ದೃಷ್ಟಿ ಇರದ ಕಾರಣ ಮನಸ್ಸಿಲ್ಲದೇ ಹೋದರೂ ಎಲ್ಲರ ಒತ್ತಾಯಕ್ಕೆ ಅನಿವಾರ್ಯವಾಗಿ ಪಾಂಡುವೇ ಚಕ್ರವರ್ತಿಯಾಗುತ್ತಾನೆ. ಪಾಂಡು ರಾಜನಾದ ನಂತರ ಆಸ್ಥಾನದಲ್ಲಿ ಧೃತರಾಷ್ಟ್ರನಿಗೆ ವಿಶೇಷ ಸ್ಥಾನಮಾನ ದೊರೆಯುತ್ತದೆ. ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನವಾದವೂ ಅದರ ಅಂತಿಮ ನಿರ್ಧಾರವು ಧೃತರಾಷ್ಟ್ರನದ್ದೇ ಆಗಿರುತ್ತದೆ. ಕೌಟುಂಬಿಕ ವಿಚಾರವಾಗಲಿ, ರಾಜತಾಂತ್ರಿಕ ವಿಚಾರವಾಗಲೀ ಧೃತರಾಷ್ಟ್ರನ ಒಪ್ಪಿಗೆ ಇಲ್ಲದೆ ಪಾಂಡು ಮುಂದುವರೆಯುತ್ತಿರಲಿಲ್ಲ. ಪಾಂಡುವಿನ ಈ ನಡವಳಿಕೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದ.

ಪಾಂಡುವಿಗೆ ಕಿಂದಮ ಋಷಿ ದಂಪತಿಯ ಶಾಪ

ಭೀಷ್ಮನ ಒಪ್ಪಿಗೆ ಪಡೆದ ಪಾಂಡುರಾಜನು ಶಲ್ಯ ಮಹಾರಾಜನ ತಂಗಿ ಮಾದ್ರಿಯನ್ನು ಎರಡನೆಯ ಪತ್ನಿಯಾಗಿ ಸ್ವೀಕರಿಸುತ್ತಾನೆ. ಈ ನಡುವೆ ಗಾಂಧಾರಿಯು ನನಗೆ ನೂರು ಮಕ್ಕಳು ಬೇಕೆಂದು ಗುರುಗಳಲ್ಲಿ ವಿನಂತಿಸಿಕೊಳ್ಳುತ್ತಾಳೆ. ಗುರುವಿನ ಅನುಗ್ರಹದಂತೆ ಗಾಂಧಾರಿ ಗರ್ಭಿಣಿಯಾಗುತ್ತಾಳೆ. ಎಂದಿನಂತೆ ತನ್ನ ಕರ್ತವ್ಯ ಪಾಲನೆಗಾಗಿ ಪಾಂಡು ರಾಜನು ಕಾಡು ಮೃಗಗಳ ಬೇಟೆಗಾಗಿ ಕಾಡಿಗೆ ತೆರಳುತ್ತಾನೆ.

ಕಾಡಿನಲ್ಲಿ ಕಿಂದಮ ಋಷಿ ದಂಪತಿ ಇರುತ್ತಾರೆ. ಅವರು ಜಿಂಕೆಯ ರೂಪದಲ್ಲಿ ಸಂತೋಷದಿಂದ ಸಮಯ ಕಳೆಯುತ್ತಿರುತ್ತಾರೆ. ಆಗ ಪಾಂಡುರಾಜನು ಪ್ರಾಣಿಗಳ ಬೇಟೆಯಾಡುತ್ತಾ ಅಲ್ಲಿಗೆ ಬರುತ್ತಾನೆ. ಇವನಿಗೆ ಅರಿವಿಲ್ಲದೆ ಋಷಿ ದಂಪತಿಗಳಿಗೆ ಬಾಣದಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸುತ್ತಾನೆ. ಇದರಿಂದ ಕೋಪಗೊಂಡ ಋಷಿ ದಂಪತಿ ಪಾಂಡು ರಾಜನನ್ನು ಶಪಿಸುತ್ತಾರೆ. ರಾಜನಾದವನು ಮೃಗಗಳನ್ನು ಬೇಟೆಯಾಡಬೇಕು. ಅದು ತಪ್ಪಲ್ಲ. ಆದರೆ ನೀನು ಸಂತೋಷದಿಂದ ಕಾಲ ಕಳೆಯುತ್ತಿದ್ದ ದಂಪತಿಯಾದ ನಮಗೆ ಬಾಣವನ್ನು ಹೂಡಿ ತೊಂದರೆ ನೀಡಿರುವೆ. ಇದು ಅಕ್ಷಮ್ಯ ಅಪರಾಧ. ಆದ್ದರಿಂದ ನನ್ನ ಶಾಪವನ್ನು ನೀನು ಅನುಭವಿಸಲೇಬೇಕು. ನಿನ್ನ ಸತಿಯ ಜೊತೆ ಎಂದು ನೀನು ಸೇರುವೆಯೋ ಅಂದೇ ನಿನಗೆ ಮರಣ ಪ್ರಾಪ್ತಿಯಾಗುತ್ತದೆ ಎಂದು ಶಪಿಸುತ್ತಾರೆ.

ಪತ್ನಿಯರೊಂದಿಗೆ ಕಾಡಿಗೆ ತೆರಳುವ ಪಾಂಡು

ಋಷಿ ದಂಪತಿ ನೀಡಿದ ಶಾಪವನ್ನು ಕೇಳಿ ಪಾಂಡುರಾಜನು ಧೈರ್ಯಗೆಡುತ್ತಾನೆ. ತಾನು ಅರಿಯದೆ ಮಾಡಿದ ತಪ್ಪಿಗೆ ನೀವು ನೀಡಿದ ಶಿಕ್ಷೆ ಸರಿಯೇ ಎಂದು ಋಷಿ ದಂಪತಿಯನ್ನು ಪ್ರಶ್ನಿಸುತ್ತಾನೆ. ಜೀವನದಲ್ಲಿ ಬಂದಿದ್ದನ್ನು ಒಪ್ಪಿಕೊಳ್ಳಲೇಬೇಕು. ತಿಳಿದೊ ತಿಳಿಯದೆಯೋ ಮಾಡಿದ ತಪ್ಪು ತಪ್ಪೇ. ನನ್ನ ಶಾಪವನ್ನು ನಾನು ಮರಳಿ ಪಡೆಯಲಾರೆ. ಇದನ್ನು ನೀನು ಅನುಭವಿಸಿಯೇ ತೀರಬೇಕು ಎನ್ನುತ್ತಾರೆ. ಇದರಿಂದ ಮನ ನೊಂದ ಪಾಂಡುರಾಜನು ಮರಳಿ ಅರಮನೆಯ ಕಡೆ ನಡೆಯುತ್ತಾನೆ. ಭೀಷ್ಮನನ್ನು ಭೇಟಿ ಮಾಡಿ ನಡೆದ ವಿಚಾರವನ್ನು ತಿಳಿಸುತ್ತಾನೆ. ಅಲ್ಲದೆ ತನ್ನ ಉಳಿದ ಆಯುಷ್ಯವನ್ನು ಕಾಡಿನಲ್ಲಿಯೇ ಕಳೆಯಲು ತೀರ್ಮಾನಿಸುತ್ತಾನೆ.

ಪಾಂಡು, ಅಣ್ಣನಾದ ಧೃತರಾಷ್ಟ್ರನ ಒಪ್ಪಿಗೆ ಪಡೆದ ನಂತರ ತನ್ನ ಪತ್ನಿಯರಾದ ಕುಂತಿ ಮತ್ತು ಮಾದ್ರಿಯರೊಂದಿಗೆ ಕಾಡಿಗೆ ತೆರಳುತ್ತಾನೆ. ಮನಸ್ಸಿಗೆ ಶಾಂತಿ ನೆಮ್ಮದಿ ಇಲ್ಲದೆ ಸುತ್ತಾಡುತ್ತಾನೆ. ವಿಧಿಯನ್ನು ಎದುರಿಸಿ ಬಾಳಲು ಯಾರಿಂದಲೂ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾನೆ. ಕೊನೆಗೆ ಒಂದು ಪರ್ವತಕ್ಕೆ ಪತ್ನಿಯರ ಜೊತೆಗೂಡಿ ಬರುತ್ತಾನೆ. ಕೆಲವು ದಿನಗಳ ನಂತರ ಹಂಸಕೂಟ ಶ್ರೇಣಿಯನ್ನು ದಾಟಿ ಶತಶೃಂಗಪರ್ವತದ ತಪ್ಪಲಿಗೆ ಬರುತ್ತಾನೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.