ತಮಿಳುನಾಡು ಕೂತನೂರಿನ ತಿಲತರ್ಪಣಪುರಿ ಗ್ರಾಮದಲ್ಲಿದೆ ಭಾರತದಲ್ಲೇ ವಿಶೇಷವಾದ ಆದಿ ವಿನಾಯಕ ದೇವಸ್ಥಾನ; ಈ ಗಣಪತಿಗಿದೆ ಮನುಷ್ಯನ ಮುಖ!
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತಮಿಳುನಾಡು ಕೂತನೂರಿನ ತಿಲತರ್ಪಣಪುರಿ ಗ್ರಾಮದಲ್ಲಿದೆ ಭಾರತದಲ್ಲೇ ವಿಶೇಷವಾದ ಆದಿ ವಿನಾಯಕ ದೇವಸ್ಥಾನ; ಈ ಗಣಪತಿಗಿದೆ ಮನುಷ್ಯನ ಮುಖ!

ತಮಿಳುನಾಡು ಕೂತನೂರಿನ ತಿಲತರ್ಪಣಪುರಿ ಗ್ರಾಮದಲ್ಲಿದೆ ಭಾರತದಲ್ಲೇ ವಿಶೇಷವಾದ ಆದಿ ವಿನಾಯಕ ದೇವಸ್ಥಾನ; ಈ ಗಣಪತಿಗಿದೆ ಮನುಷ್ಯನ ಮುಖ!

Adi Vinayaka Temple: ತಮಿಳುನಾಡಿನ ಕೂತನೂರಿನ ಬಳಿಯ ತಿಲತರ್ಪಣಪುರಿಯಲ್ಲಿರುವ ವಿನಾಯಕ ದೇವಸ್ಥಾನದಲ್ಲಿ ನರಮುಖ ವಿನಾಯಕನ ವಿಗ್ರಹವಿದೆ. ಈ ಗಣೇಶನಿಗೆ ಮಾನವನ ತಲೆಯಿದೆ. ಆದಿ ವಿನಾಯಕ ದೇವಾಲಯವು ಕುಂಭಕೋಣಂ-ಮೈಲಾಡುತುರೈ ರಸ್ತೆಯಲ್ಲಿದೆ, ಕುಂಭಕೋಣಂನಿಂದ ಸುಮಾರು 18 ಕಿಮೀ ಹಾಗೂ ಮೈಲಾಡುತುರೈನಿಂದ 24 ಕಿಮೀ ದೂರದಲ್ಲಿದೆ.

ತಮಿಳುನಾಡಿನ  ಕೂತನೂರಿನ ತಿಲತರ್ಪಣಪುರಿಯಲ್ಲಿರುವ ಆದಿ ವಿನಾಯಕ ದೇವಸ್ಥಾನದಲ್ಲಿರುವ ಮಾನವನ ಮುಖವಿರುವ ಗಣೇಶ (ಬಲಚಿತ್ರ).
ತಮಿಳುನಾಡಿನ ಕೂತನೂರಿನ ತಿಲತರ್ಪಣಪುರಿಯಲ್ಲಿರುವ ಆದಿ ವಿನಾಯಕ ದೇವಸ್ಥಾನದಲ್ಲಿರುವ ಮಾನವನ ಮುಖವಿರುವ ಗಣೇಶ (ಬಲಚಿತ್ರ). (PC: Twitter)

ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯುತ್ತೇವೆ. ಗಣೇಶನ ಆರಾಧನೆಯಿಂದ ಅಡೆತಡೆಗಳು ದೂರವಾಗುತ್ತವೆ ಮತ್ತು ನಾವು ಅಂದುಕೊಂಡ ಕಾರ್ಯಗಳು ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆ ಇದೆ. ಪ್ರಥಮ ಪೂಜೆಗೆ ಅಧಿಪತಿ ಗಣೇಶನಿಗೆ ಏಕದಂತ, ಲಂಬೋದರ, ಬೆನಕ ಸೇರಿದಂತೆ ಅನೇಕ ಹೆಸರುಗಳಿವೆ. ಪಾರ್ವತಿ ಪರಮೇಶ್ವರನ ಪುತ್ರ ಗಣೇಶನನ್ನು ಪೂಜಿಸುವುದರಿಂದ ಜೀವನದಲ್ಲಿ ಎಲ್ಲಾ ಕಷ್ಟಗಳು ದೂರವಾಗಿ ಸಂತೋಷ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಶಿವನು ಗಣೇಶನ ತಲೆ ಕತ್ತರಿಸಿದ ಕಥೆ

ಗಣೇಶನಿಗೆ ಆನೆ ತಲೆ ಬಂದಿದ್ದು ಏಕೆ ಎಂಬ ಕಥೆ ಬಹುತೇಕ ಎಲ್ಲರಿಗೂ ಗೊತ್ತು. ಪುರಾಣಗಳ ಪ್ರಕಾರ, ಶಿವನು ಧ್ಯಾನದಲ್ಲಿರುವಾಗ ಪಾರ್ವತಿ ದೇವಿಯು ವಿನಾಯಕನನ್ನು ಸೃಷ್ಟಿಸಿ ಜೀವ ನೀಡುತ್ತಾಳೆ. ಪಾರ್ವತಿ ದೇವಿ ಸ್ನಾನಕ್ಕೆ ಹೋಗುವಾಗ ಗಣೇಶ, ಬಾಗಿಲಲ್ಲಿ ಕಾಯುತ್ತಿರುತ್ತಾನೆ. ಆ ಸಮಯದಲ್ಲಿ ಶಿವನು ಅಲ್ಲಿಗೆ ಬಂದು ಒಳಗೆ ಹೋಗಲು ಪ್ರಯತ್ನಿಸುತ್ತಾನೆ. ಆದರೆ ಶಂಕರನನ್ನು ಗಣೇಶ ತಡೆಯುತ್ತಾನೆ. ಅವನು ಪಾರ್ವತಿ ಸೃಷ್ಟಿಸಿದ ತಮ್ಮ ಮಗ ಎಂದು ತಿಳಿಯದೆ ಶಿವ ಕೋಪಗೊಳ್ಳುತ್ತಾನೆ. ಗಣೇಶನ ತಲೆಯನ್ನು ಬೇರ್ಪಡಿಸುತ್ತಾನೆ.

ಇದನ್ನು ತಿಳಿದ ಪಾರ್ವತಿಯು ಗಣೇಶನಿಗೆ ಮರುಜೀವ ಕೊಡುವಂತೆ ಶಿವನ ಬಳಿ ರೋಧಿಸುತ್ತಾಳೆ. ಆಗ ಶಿವನು ಪಾರ್ವತಿಯ ಮನವಿಗೆ ಮನ್ನಿಸಿ, ತನ್ನ ಭಟರಿಗೆ ಉತ್ತರ ದಿಕ್ಕಿಗೆ ಹೋಗಿ ಅಲ್ಲಿ ನಿಮ್ಮ ಕಣ್ಣಿಗೆ ಕಾಣುವ ಪ್ರಾಣಿಯ ತಲೆಯನ್ನು ತರಲು ಆಜ್ಞಾಪಿಸುತ್ತಾನೆ. ಶಿವನ ಆಜ್ಞೆಯಂತೆ ಪಾಲಕರು, ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದ ಆನೆಯ ತಲೆಯನ್ನು ತರುತ್ತಾರೆ. ಶಿವನು ಆ ಬಾಲಕನ ಮುಂಡಕ್ಕೆ ಆನೆಯ ತಲೆಯನ್ನು ಜೋಡಿಸಿ ಮರುಜೀವ ನೀಡುತ್ತಾನೆ. ಇದು ಪ್ರಚಲಿತದಲ್ಲಿರುವ ಕಥೆ.

ತಮಿಳುನಾಡಿನ ತಿಲತರ್ಪಣಪುರಿಯಲ್ಲಿರುವ ವಿನಾಯಕ ದೇವಸ್ಥಾನ

ಬಹುತೇಕ ನಾವು ಹೋಗುವ ಎಲ್ಲಾ ಗಣೇಶನ ದೇವಸ್ಥಾನದಲ್ಲೂ ಆನೆ ತಲೆ ಇರುವ ಗಣೇಶನನ್ನು ನಾವು ನೋಡುತ್ತೇವೆ. ಆದರೆ ತಮಿಳುನಾಡಿನ ಒಂದು ದೇವಾಲಯದಲ್ಲಿ ಗಣೇಶನಿಗೆ ಮಾನವನ ತಲೆಯಿದೆ. ಈ ಮುಖವು ಅವನ ಮೂಲ ಮುಖವಾಗಿದೆ ಎಂದು ನಂಬಲಾಗಿದೆ. ತಮಿಳುನಾಡಿನ ಕೂತನೂರಿನ ಬಳಿಯ ತಿಲತರ್ಪಣಪುರಿಯಲ್ಲಿರುವ ವಿನಾಯಕ ದೇವಸ್ಥಾನದಲ್ಲಿ ನರಮುಖ ವಿನಾಯಕನ ವಿಗ್ರಹವಿದೆ. ಈ ಗಣೇಶನಿಗೆ ಮಾನವನ ತಲೆಯಿದೆ. ಗ್ರಾನೈಟ್‌ನಿಂದ ಕೆತ್ತಿದ 5 ಅಡಿ ಎತ್ತರದ ಗಣೇಶನ ವಿಗ್ರಹವಿದೆ. ಇದೊಂದು ಅದ್ಭುತ ಕಲಾಕೃತಿ ಎಂದೇ ಹೇಳಬಹುದು.ಇದನ್ನು 7 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು ತಮಿಳುನಾಡಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ದಂತ ಕಥೆಗಳ ಪ್ರಕಾರ, ಉತ್ತರಾಖಂಡದ ಅತೀಂದ್ರಿಯ ಗುಹೆಯಲ್ಲಿ ಇಂದಿಗೂ ಗಣೇಶನ ನಿಜವಾದ ತಲೆಯನ್ನು ಕಾಣಬಹುದು.

ಆದಿ ವಿನಾಯಕನ ದೇವಸ್ಥಾನಕ್ಕೆ ಹೋಗುವುದು ಹೇಗೆ?

ಆದಿ ವಿನಾಯಕ ದೇವಾಲಯವು ಕುಂಭಕೋಣಂ-ಮೈಲಾಡುತುರೈ ರಸ್ತೆಯಲ್ಲಿದೆ, ಕುಂಭಕೋಣಂನಿಂದ ಸುಮಾರು 18 ಕಿಮೀ ಹಾಗೂ ಮೈಲಾಡುತುರೈನಿಂದ 24 ಕಿಮೀ ದೂರದಲ್ಲಿದೆ. ನೀವು ಚೆನ್ನೈನಿಂದ ಚೆಂಗಲ್ಪಟ್ಟು, ತಿಂಡಿವನಂ, ವಿಲ್ಲುಪುರಂ, ಚಿದಂಬರಂ ಮತ್ತು ಸಿರ್ಕಾಜಿ ಮೂಲಕ ದೇವಾಲಯವನ್ನು ತಲುಪಬಹುದು. ಈ ದೇವಸ್ಥಾನದಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಮೈಲಾಡುತುರೈ, ಇಲ್ಲಿಗೆ ಸಮೀಪವಾದ ರೈಲು ನಿಲ್ದಾಣವಾಗಿದೆ. ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತಿಲತರ್ಪಣಪುರಿಗೆ ಹೋಗಬಹುದು. ದೇವಾಲಯದಿಂದ ಸುಮಾರು 110 ಕಿಮೀ ದೂರದಲ್ಲಿರುವ ತಿರುಚಿರಾಪಳ್ಳಿ ಹತ್ತಿರದ ವಿಮಾನ ನಿಲ್ದಾಣವಿದೆ. ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತಿಲತರ್ಪಣಪುರಿಗೆ ಹೋಗಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.