ಜಾತಕದಲ್ಲಿನ ದೋಷ ನಿವಾರಣೆ, ಸಂತಾನ ಫಲ ಪ್ರಾಪ್ತಿಗೆ ಹೆಸರುವಾಸಿ ಈ ಕಾಕಣಿ ಕ್ಷೇತ್ರ; ದೇವಾಲಯದ ರೋಚಕ ಕಥೆ ಇಲ್ಲಿದೆ
ಆಂಧ್ರ ಪ್ರದೇಶದಲ್ಲಿ ಮಹಿಮೆಗೆ ಹೆಸರಾದ ಅನೇಕ ಪುಣ್ಯಕ್ಷೇತ್ರಗಳಿವೆ. ಅದರಲ್ಲಿ ಕಾಕಣಿ ದೇವಾಲಯ ಕೂಡಾ ಒಂದು. ಜಾತಕದಲ್ಲಿನ ದೋಷ ನಿವಾರಣೆ, ಸಂತಾನ ಫಲ ಪ್ರಾಪ್ತಿಗೆ ಈ ಕಾಕಣಿ ಕ್ಷೇತ್ರ ಹೆಸರುವಾಸಿಯಾಗಿದೆ. ದೇವಾಲಯ ಕುರಿತಾದ ಒಂದು ರೋಚಕ ಕಥೆ ಇಲ್ಲಿದೆ.
ಭಾರತದಲ್ಲಿ ಅನೇಕ ದೇವಾಲಯಗಳಿವೆ. ಅದರಲ್ಲಿ ಕೆಲವು ಅದ್ಭುತ ಶಿಲ್ಪಕಲೆಗೆ ಹೆಸರುವಾಸಿಯಾಗಿದ್ದರೆ, ಕೆಲವು ಮಹಿಮೆಗೆ ಹೆಸರಾಗಿದೆ. ಬಹಳಷ್ಟು ದೇವಸ್ಥಾನಗಳು ಜಾತಕದಲ್ಲಿನ ದೋಷ ನಿವಾರಣೆಗೆ ಹೆಸರುವಾಸಿಯಾಗಿದೆ. ಕೆಲವು ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿದರೆ ಸರ್ಪದೋಷ ನಿವಾರಣೆಯಾಗುತ್ತದೆ. ಕೆಲವೆಡೆ ಮದುವೆಗೆ ಇದ್ದ ಅಡೆತಡೆಗಳು ದೂರಾಗುತ್ತದೆ. ಹಾಗೇ ಕೆಲವು ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿದರೆ ಎಷ್ಟೋ ವರ್ಷಗಳಿಂದ ಮಕ್ಕಳಾದವರಿಗೆ ಮಕ್ಕಳಾಗುತ್ತದೆ. ಅವುಗಳಲ್ಲಿ ಕಾಕಣಿ ಕ್ಷೇತ್ರ ಕೂಡಾ ಒಂದು.
ಕಾಕಣಿ ಕ್ಷೇತ್ರ ಗುಂಟೂರು ಜಿಲ್ಲೆಯಲ್ಲಿರುವ ಪುಣ್ಯಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರಕ್ಕೆ ಹೋಗಿ ಪೂಜೆ ಸಲ್ಲಿಸಿದರೆ ಗ್ರಹಬಾಧೆ ನಿವಾರಣೆಯಾಗುತ್ತದೆ. ಕಾಳಸರ್ಪ ದೋಷ, ರಾಹು ಕೇತುಗಳಂತಹ ದೋಷಗಳನ್ನು ನಿವಾರಿಸಲು ಮತ್ತು ಸಂತಾನಹೀನತೆಯಿಂದ ಉಂಟಾಗುವ ದೋಷಗಳನ್ನು ತೊಡೆದುಹಾಕಲು ಅತ್ಯಂತ ಪವಿತ್ರವಾದ ಸ್ಥಳವಾಗಿದೆ ಎಂದು ಖ್ಯಾತ ಆಧ್ಯಾತ್ಮ ಮತ್ತು ಜ್ಯೋತಿಷಿ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಮಾಹಿತಿ ನೀಡಿದ್ದಾರೆ.
ಗ್ರಹ ಬಾಧೆಗಳು ಕಳೆಯುತ್ತದೆ
ಈ ಕ್ಷೇತ್ರದ ದರ್ಶನದಿಂದ ರಾಹು ಕೇತುಗಳಂತಹ ಗ್ರಹ ಬಾಧೆಗಳು , ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಶ್ರೀ ಭಮರಾಂಬ ಹಾಗೂ ಮಲ್ಲೇಶ್ವರ ಸ್ವಾಮಿ ದೇವರು ಸಾಕಷ್ಟು ಮಹಿಮೆಗೆ ಹೆಸರಾಗಿದ್ದಾರೆ. ಇಲ್ಲಿರುವ ಮಲ್ಲೇಶ್ವರ ಸ್ವಾಮಿ ಶ್ರೀ ಶೈಲ ಮಲ್ಲೇಶ್ವರನ ಮುಖ್ಯ ದೇಹವೆಂದು ಪರಿಗಣಿಸಲಾಗಿದೆ. ಈ ಲಿಂಗವು ಶ್ರೀಶೈಲಲಿಂಗವನ್ನು ಹೊಂದಿರುವುದರಿಂದ ದ್ವಾದಶ ಜ್ಯೋತಿರ್ಲಿಂಗಗಳಷ್ಟೇ ಪ್ರಾಮುಖ್ಯತೆ ಪಡೆದಿದೆ. ಇದಕ್ಕೆ ಸಂಬಂಧಿಸಿದ ಪುರಾತನ ಕಥೆಯೊಂದನ್ನು ಚಿಲಕಮರ್ತಿ ಪ್ರಭಾಕರ ಚಕ್ರವರ್ತಿಶರ್ಮಾ ಬಹಳ ಚೆನ್ನಾಗಿ ವಿವರಿಸಿದ್ದಾರೆ.
ಭಾರದ್ವಾಜ ಮಹಾಮುನಿಯು ಕಾಕಣಿ ಕ್ಷೇತ್ರಕ್ಕೆ ಭೇಟಿ ನೀಡಿ ಈಶ್ವರನನ್ನು ಪೂಜಿಸಿದರು. ನಂತರ ಇಲ್ಲಿ ದೇವರ ಅನುಗ್ರಹ ಪಡೆಯಲು ಯಜ್ಞ ಮಾಡಲು ಇಚ್ಛಿಸಿದನು. ಇತರ ಋಷಿಗಳನ್ನು ಆಹ್ವಾನಿಸಿ ಯಜ್ಞಶಾಲೆಗಳನ್ನು ನಿರ್ಮಿಸಿ ಯಜ್ಞವನ್ನು ಆರಂಭಿಸುತ್ತಾನೆ. ಯಜ್ಞ ಮುಗಿಸಿ ದೇವತೆಗಳಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಭಾರದ್ವಾಜನು ನೈವೇದ್ಯ ಸಮರ್ಪಿಸುತ್ತಿರುವಾಗ ಕಾಗೆಯೊಂದು ಬಂದು ದೇವತೆಗಳಿಗೆ ಅರ್ಪಿಸುತ್ತಿದ್ದ ನೈವೇದ್ಯವನ್ನು ತಿನ್ನುತ್ತದೆ. ಕಾಗೆ ಮೇಲೆ ಕೋಪಗೊಳ್ಳುವ ಭಾರದ್ವಾಜ ಮಹಾಮುನಿಯು ಅದನ್ನು ಕೊಲ್ಲಲು ಹೋಗುತ್ತಾನೆ.
ಕಾಗೆಯ ಶಾಪ ವಿಮೋಚನೆ ಮಾಡಿದ ಭಾರಧ್ವಾಜ ಮಹಾಮುನಿ
ಆಗ ಕಾಗೆಯು ಮನುಷ್ಯನಂತೆ ಮಾತನಾಡಿ, ಮಹರ್ಷಿಯೇ, ನಾನು ಕಾಕಾಸುರನೆಂಬ ರಾಕ್ಷಸ. ಬ್ರಹ್ಮನ ವರದಿಂದ ನಾನು ದೇವತೆಗಳ ಆಸೆಗಳನ್ನು ಈಡೇರಿಸಬಹುದು. ನೀವು ನನ್ನನ್ನು ಏಕೆ ದ್ವೇಷಿಸುತ್ತಿದ್ದೀರಿ ನಿಮ್ಮ ಯಜ್ಞವನ್ನು ಯಶಸ್ವಿಗೊಳಿಸಲು ಉಪಾಯವನ್ನು ಹೇಳುತ್ತೇನೆ. ಪವಮಾನ ಮತ್ತು ಅಘಮರ್ಷನದ ಶ್ಲೋಕಗಳನ್ನು ಹೇಳುತ್ತಾ ನೀನು ಪುಣ್ಯಜಲದಿಂದ ಅಭಿಷೇಕ ಮಾಡಿದ ನೀರನ್ನು ನನ್ನ ಮೇಲೆ ಚಿಮುಕಿಸಿ. ಹಿಂದೆ ಋಷಿಯೊಬ್ಬರು ನೀಡಿದ ಶಾಪದಿಂದ ನಾನು ಈ ರೂಪದಲ್ಲಿದ್ದೇನೆ. ನೀವು ಮಾಡಿದ ಅಭಿಷೇಕದ ನೀರಿನಿಂದ ನನ್ನ ಶಾಪ ವಿಮೋಚನೆಯಾಗಿ ಮೋಕ್ಷವನ್ನು ಪಡೆಯುತ್ತೇನೆ. ಯಾವುದೇ ತಡೆ ಇಲ್ಲದೆ ಯಜ್ಞ ಕೂಡಾ ಪೂರ್ಣಗೊಳ್ಳುತ್ತದೆ ಎಂದು ಹೇಳುತ್ತದೆ.
ಕಾಗೆ ಹೇಳಿದ ಹಾಗೆ ಭಾರದ್ವಾಜ ಮುನಿಯು ಅಭಿಷೇಕದ ನೀರನ್ನು ಕಾಗೆ ಮೇಲೆ ಚಿಮುಕಿಸುತ್ತಾರೆ. ಆಗ ಕಾಗೆಯ ಶಾಪ ನಿವಾರಣೆ ಆಗುತ್ತದೆ. ನಂತರ ಮುನಿಗಳು ಮಲ್ಲಿಗೆ ಹೂಗಳಿಂದ ಶಿವನನ್ನು ಪೂಜಿಸಿ ಅಲ್ಲಿಂದ ಹೊರಡುತ್ತಾರೆ. ಮಲ್ಲಿಗೆ ಹೂಗಳಿಂದ ಪೂಜಿಸುವ ಕಾರಣ ದೇವರಿಗೆ ಮಲ್ಲಿಕಾರ್ಜುನ ಎಂದೂ, ಕಾಗೆಯ ಶಾಪ ವಿಮೋಚನೆ ಆದ್ದರಿಂದ ಕಾಕಣಿ ಎಂದು ಕರೆಯುತ್ತಾರೆ. ಈ ಕ್ಷೇತ್ರಕ್ಕೆ ದೂರದ ಊರುಗಳಿಂದ ಅನೇಕ ಭಕ್ತರು ಬರುತ್ತಾರೆ. ಅಭಿಷೇಕ, ಅನ್ನಪ್ರಾಶನ, ಮುಡಿ ಕೀಳುವುದು, ಮದುವೆ, ವಾಹನ ಪೂಜೆ, ಪೊಂಗಲಿ ನಿವೇದನೆ, ದೀಪ ಹಚ್ಚುವುದು ಸೇರಿದಂತೆ ಅನೇಕ ಶುಭ ಕಾರ್ಯಗಳನ್ನು ಇಲ್ಲಿ ನೆರವೇರಿಸುತ್ತಾರೆ.
ಭಾನುವಾರ ಈ ಕ್ಷೇತ್ರದಲ್ಲಿ ವಿಶೇಷ ಪೂಜೆ ಇರುತ್ತದೆ. ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಲಕ್ಷಾಂತರ ಭಕ್ತರು ಶಿವರಾತ್ರಿಯಂದು ಇಲ್ಲಿ ಬಂದು ದೇವರ ದರ್ಶನ ಪಡೆಯುತ್ತಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)