ದೇಗುಲ ದರ್ಶನ: ವಿಷ್ಣು ನರಕಾಸುರನಿಂದ ವೇದಗಳನ್ನು ಮರಳಿ ಪಡೆದ ಜಾಗ, ಅಸ್ಸಾಂನ ಹಯಗ್ರೀವ ದೇವಸ್ಥಾನದ ವೈಶಿಷ್ಟ್ಯ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೇಗುಲ ದರ್ಶನ: ವಿಷ್ಣು ನರಕಾಸುರನಿಂದ ವೇದಗಳನ್ನು ಮರಳಿ ಪಡೆದ ಜಾಗ, ಅಸ್ಸಾಂನ ಹಯಗ್ರೀವ ದೇವಸ್ಥಾನದ ವೈಶಿಷ್ಟ್ಯ ತಿಳಿಯಿರಿ

ದೇಗುಲ ದರ್ಶನ: ವಿಷ್ಣು ನರಕಾಸುರನಿಂದ ವೇದಗಳನ್ನು ಮರಳಿ ಪಡೆದ ಜಾಗ, ಅಸ್ಸಾಂನ ಹಯಗ್ರೀವ ದೇವಸ್ಥಾನದ ವೈಶಿಷ್ಟ್ಯ ತಿಳಿಯಿರಿ

ಭಾರತವು ದೇಗುಲಗಳ ನಗರ. ಇಲ್ಲಿ ಹಲವು ವೈಶಿಷ್ಟ್ಯಗಳ ದೇವಾಲಯಗಳಿವೆ. ಇಲ್ಲಿನ ದೇಗುಲಗಳಲ್ಲಿ ಪೂಜೆ ಸಲ್ಲಿಸುವುದರಿಂದ ವಿಶೇಷ ಫಲಗಳು ಲಭಿಸುತ್ತವೆ. ಅಸ್ಸಾಂನ ಹಜೋ ಎಂಬಲ್ಲಿ ಹಯಗ್ರಿವ ದೇವಸ್ಥಾನವಿದೆ. ಇಲ್ಲಿ ಪೂಜೆ ಮಾಡುವುದರಿಂದ ವಿದ್ಯಾಭ್ಯಾಸ ಕಂಟಕಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ದೇಗುಲದ ವೈಶಿಷ್ಟ್ಯಗಳನ್ನು ತಿಳಿಯಿರಿ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

 ಅಸ್ಸಾಂನ ಹಯಗ್ರೀವ ದೇವಸ್ಥಾನ
ಅಸ್ಸಾಂನ ಹಯಗ್ರೀವ ದೇವಸ್ಥಾನ (PC: Government of Assam)

ಅಸ್ಸಾಂ ರಾಜ್ಯದಲ್ಲಿ ಅಮ್ರೂಪ್ ಎಂಬ ಬಹುಮುಖ್ಯ ಜಿಲ್ಲೆಯಿದೆ. ಇಲ್ಲಿನ ಹಜೋ ಎಂಬ ಸ್ಥಳದಲ್ಲಿರುವ ದೇವಾಲಯವೇ ಶ್ರೀ ಹಯಗ್ರೀವ ದೇವಾಲಯ. ಈ ದೇವಾಲಯವನ್ನು ಹಯಗ್ರೀವ ಮಾಧವ ದೇವಾಲಯ ಎಂದು ಕರೆಯುತ್ತೇವೆ. ಈ ದೇವಾಲಯವು ಮೋನಿಕುಟ್ ಬೆಟ್ಟದ ಮೇಲೆ ನೆಲೆಯಾಗಿದೆ. ರಾಜ ರಘುದೇವ ನಾರಾಯಣನು 1583ರಲ್ಲಿ ಈ ದೇವಾಲಯವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ಈ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ. ಹಯಗ್ರೀವ ಮಾಧವ ದೇವಾಲಯ ಮತ್ತು ಬುದ್ಧನ ನಡುವೆ ವಿಶೇಷವಾದ ಅನುಬಂಧ ಇತ್ತೆಂದು ತಿಳಿದು ಬರುತ್ತದೆ. ಇಲ್ಲಿನ ಪ್ರಧಾನ ದೇವತೆಯು ವಿಷ್ಣುವಾಗಿದ್ದು ಮೂಲ ವಿಗ್ರಹಗಳನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದೆ.

ಈ ದೇವಾಲಯದಲ್ಲಿನ ಕೆತ್ತನೆಯ ಕೆಲಸವು ಅಜಂತ ಎಲ್ಲೋರವನ್ನು ಹೋಲುತ್ತದೆ. ರಾಮಾಯಣ ಮತ್ತು ಮಹಾಭಾರತದ ಸನ್ನಿವೇಶದ ಚಿತ್ರಣಗಳು ಮನಮೋಹಕವಾಗಿವೆ. ದೇವಸ್ಥಾನದ ಬಳಿಯಲ್ಲಿಯೇ ದೊಡ್ಡ ಕೊಳವಿದೆ. ಪ್ರತಿ ವರ್ಷವೂ ಈ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ವಿಶೇಷವಾದ ಪೂಜೆ ನಡೆಯುತ್ತದೆ. ಈ ದೇವಾಲವಿರುವ ಪ್ರದೇಶವು ದತ್ತಿಯಾಗಿ ಬಂದವೆಂದು ತಿಳಿದುಬರುತ್ತದೆ. ಮುಖ್ಯವಾದ ವಿಚಾರವೆಂದರೆ ಈ ದೇವಾಲಯದ ಗರ್ಭಗುಡಿಯಲ್ಲಿನ ದೀಪಗಳಿಗೆ ಕೊಳವೆಗಳ ಮೂಲಕ ದೀಪದ ಎಣ್ಣೆಯನ್ನು ಹರಿಸಲಾಗುತ್ತದೆ. ಆದ್ದರಿಂದ ಸದಾಕಾಲವು ದೀಪವು ಆರದೆ ಉರಿಯುತ್ತಿರುತ್ತದೆ.

ಒಮ್ಮೆ ವಿಷ್ಣುವು ಲಕ್ಷ್ಮಿಯ ಜೊತೆಯಲ್ಲಿ ಸಂತೋಷದ ಕ್ಷಣಗಳನ್ನು ಕಳೆಯುತ್ತಿರುತ್ತಾನೆ. ಆಗ ಕೋಪಗೊಂಡ ಲಕ್ಷ್ಮಿಯು ವಿಷ್ಣುವಿಗೆ ನಿನ್ನ ತಲೆಯು ಕತ್ತರಿಸಲ್ಪಟ್ಟು ನೆಲದ ಮೇಲೆ ಉರುಳಲಿ ಎಂದು ಶಪಿಸುತ್ತಾಳೆ. ವಿಷ್ಣುವಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಲಕ್ಷ್ಮಿಗೆ ತನ್ನ ದುಡುಕಿನ ಅರಿವಾಗುತ್ತದೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

ಅದೇ ವೇಳೆಗೆ ಮಧುಕೈಟಬರ ಹಾವಳಿಯಿಂದ ದೇವಾನು ದೇವತೆಗಳು ಕಂಗೆಟ್ಟುಹೋಗಿರುತ್ತಾರೆ. ಬ್ರಹ್ಮ ಮತ್ತು ಶಿವರ ಸಲಹೆಯಂತೆ ಈ ತೊಂದರೆಯಿಂದ ಪಾರಾಗಲು ಭಗವಾನ್ ವಿಷ್ಣುವನ್ನು ಭೇಟಿ ಮಾಡಲು ಬರುತ್ತಾರೆ. ಆದರೆ ಶ್ರೀ ವಿಷ್ಣುವು ಕ್ಷೀರಸಾಗರದಲ್ಲಿ ಸುಖನಿದ್ರೆಯಲ್ಲಿ ಇರುತ್ತಾನೆ. ಆದಿಶೇಷನನ್ನೇ ದಿಂಬನ್ನಾಗಿ ಮಾಡಿಕೊಂಡಿರುತ್ತಾನೆ. ವಿಷ್ಣುವಿನ ಸುಖನಿದ್ರೆಯನ್ನು ಕಂಡ ದೇವತೆಗಳಿಗೆ ಎಚ್ಚರ ಮಾಡುವ ದಾರಿ ತೋರುವುದಿಲ್ಲ. ಆಗ ದೇವತೆಗಳು ಗೆದ್ದಲು ಹುಳುಗಳಿಗೆ ಹವಿಸ್ಸನ್ನು ನೀಡುವ ಭರವಸೆಯನ್ನು ನೀಡುತ್ತಾರೆ. ಆಗ ಅಕಸ್ಮಿಕವಾಗಿ ವಿಷ್ಣುವಿನ ತಲೆಯು ಕತ್ತರಿಸಿ ಹೋಗುತ್ತದೆ. ದೇವತೆಗಳು ಕುದುರೆಯ ಮುಖವೊಂದನ್ನು ಇಡುತ್ತಾರೆ. ಇದರಿಂದಾಗಿ ಹಯಗ್ರೀವ ಎಂಬ ಹೆಸರು ಬರುತ್ತದೆ.

ನರಕಾಸುರನಿಗೆ ಸೇನಾಧಿಪತಿಯೊಬ್ಬ ಇರುತ್ತಾನೆ. ಅವನ ಹೆಸರೇ ಹಯಗ್ರೀವಾಸುರ. ಇವನಿಗೆ ಒಂದು ವರವಿರುತ್ತದೆ. ಅದರ ಪ್ರಕಾರ ಇವನಿಗೆ ಇವನ ಹೆಸರಿರುವ ವ್ಯಕ್ತಿಯಿಂದ ಮರಣ ಉಂಟಾಗುತ್ತದೆ. ಈ ಕಾರಣದಿಂದಲೇ ವಿಷ್ಣುವು ಹಯಗ್ರೀವನ ಅವತಾರದಲ್ಲಿ ಅಸುರನ ಸಂಹಾರ ಮಾಡುತ್ತಾನೆ. ಅಗಸ್ತ್ಯಮಹಾಮುನಿಗಳಿಗೆ ಸಾಕ್ಷಾತ್ ಹಯಗ್ರೀವರಿಂದ ಲಲಿತಾಸಹಸ್ರನಾಮದ ಬೋಧನೆ ಆಗುತ್ತದೆ. ವಾದಿರಾಜಸ್ವಾಮಿಗಳಿಗೆ ಹಯಗ್ರೀವರು ಸಂದರ್ಶನ ನೀಡುತ್ತಾರೆ.‌‌

ಮತ್ತೊಂದು ಪೌರಾಣಿಕ ಕತೆಯ ಪ್ರಕಾರ ನರಕಾಸುರನು ಬ್ರಹ್ಮದೇವನಿಂದ ವೇದಗಳನ್ನು ಕಳ್ಳತನ ಮಾಡುತ್ತಾನೆ. ಯಾರೊಬ್ಬರ ಕೈಗೂ ಸಿಲುಕದೆ ಓಡಿಹೋಗುತ್ತಾನೆ. ಆಗ ವಿಧಿ ಇಲ್ಲದೆ ಬ್ರಹ್ಮನು ಶಿವನ ಸಹಾಯವನ್ನು ಬೇಡುತ್ತಾನೆ. ಎಲ್ಲಾ ದೇವತೆಗಳ ಸಹಾಯದ ನಡುವೆಯೂ ವೇದಗಳನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಆಗ ದೇವತೆಗಳೆಲ್ಲರೂ ವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ವಿಷ್ಣುವು ಹಯಗ್ರೀವರ ಅವತಾರದಲ್ಲಿ ಯುದ್ಧ ಮಾಡಿ ನರಕಾಸುರನಿಂದ ವೇದಗಳನ್ನು ಪಡೆದು ಮರಳಿ ಬ್ರಹ್ಮನಿಗೆ ನೀಡುತ್ತಾರೆ. ಸಕಲ ವಿಚಾರಗಳು ವೇದದಲ್ಲಿ ಅಡಗಿದೆ ಎಂಬುದು ತಿಳಿದ ವಿಚಾರ. ಆದ್ದರಿಂದ ಈ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿದಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನ ಲಭಿಸುತ್ತದೆ. ಅಲ್ಲದೆ ಪ್ರತಿಯೊಬ್ಬರ ಯೋಚನಾಲಹರಿಯು ಸರಿಯಾದ ಹಾದಿಯಲ್ಲಿ ನಡೆಯುತ್ತದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.