ಇಲ್ಲಿ ಶಿವಲಿಂಗ ದರ್ಶನ ಮಾಡಲು ನೀರಿನಲ್ಲಿ ಮುಳುಗಿ ಮತ್ತೊಂದು ಬದಿಯಲ್ಲಿ ಏಳಬೇಕು; ಬಾದಾಮಿ ಮಹಾಕೂಟೇಶ್ವರ ದೇವಸ್ಥಾನ ದರ್ಶನ-indian temple karnataka badami mahakuteshwara temple darshan in bagalkot district religious news in kannada rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇಲ್ಲಿ ಶಿವಲಿಂಗ ದರ್ಶನ ಮಾಡಲು ನೀರಿನಲ್ಲಿ ಮುಳುಗಿ ಮತ್ತೊಂದು ಬದಿಯಲ್ಲಿ ಏಳಬೇಕು; ಬಾದಾಮಿ ಮಹಾಕೂಟೇಶ್ವರ ದೇವಸ್ಥಾನ ದರ್ಶನ

ಇಲ್ಲಿ ಶಿವಲಿಂಗ ದರ್ಶನ ಮಾಡಲು ನೀರಿನಲ್ಲಿ ಮುಳುಗಿ ಮತ್ತೊಂದು ಬದಿಯಲ್ಲಿ ಏಳಬೇಕು; ಬಾದಾಮಿ ಮಹಾಕೂಟೇಶ್ವರ ದೇವಸ್ಥಾನ ದರ್ಶನ

Badami Mahakuteshwara Temple: ಬಾಗಲಕೋಟೆ ಬಾದಾಮಿಯ ಮಹಾಕೂಟೇಶ್ವರ ದೇವಸ್ಥಾನ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಇಲ್ಲಿ ಶಿವಲಿಂಗ ದರ್ಶನ ಮಾಡಲು ನೀರಿನಲ್ಲಿ ಮುಳುಗಿ ಮತ್ತೊಂದು ಬದಿಯಲ್ಲಿ ಏಳಬೇಕು. ಈ ದೇವಾಲಯ ಧಾರ್ಮಿಕವಾಗಿ ಮಾತ್ರವಲ್ಲದೆ ಪ್ರವಾಸಿ ತಾಣವಾಗಿ ಕೂಡಾ ಮಾರ್ಪಟ್ಟಿದೆ. ಇಲ್ಲಿ ಅನೇಕ ಅಪರೂಪದ ಔಷಧೀಯ ಸಸ್ಯಗಳು ಇವೆ.

ಬಾದಾಮಿ ಮಹಾಕೂಟೇಶ್ವರ ದೇವಸ್ಥಾನ ದರ್ಶನ
ಬಾದಾಮಿ ಮಹಾಕೂಟೇಶ್ವರ ದೇವಸ್ಥಾನ ದರ್ಶನ (PC: Dr. Vijaya Chitnis @ChitnisVijaya Anil @anildesigner)

ಕರ್ನಾಟಕದಲ್ಲಿ ಬಹಳಷ್ಟು ಪುಣ್ಯಕ್ಷೇತ್ರಗಳಿವೆ. ಈ ದೇವಸ್ಥಾನಗಳು ತನ್ನದೇ ಮಹಿಮೆಯಿಂದ, ವಾಸ್ತುಶಿಲ್ಪಗಳಿಂದ, ಇನ್ನಿತರ ವೈಶಿಷ್ಯಗಳಿಂದಲೇ ಹೆಸರಾಗಿವೆ. ಅವುಗಳಲ್ಲಿ ಬಾದಾಮಿಯ ಮಹಾಕೂಟೇಶ್ವರ ದೇವಸ್ಥಾನ ಕೂಡಾ ಒಂದು. ಬಾದಾಮಿಯಲ್ಲಿ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಮಹಾಕೂಟೇಶ್ವರ ದೇವಾಲಯವು ದಕ್ಷಿಣ ಕಾಶಿ ಎಂದೇ ಹೆಸರಾಗಿದೆ.

ಮಹಾಕೂಟೇಶ್ವರ ದೇವಸ್ಥಾನ ಎಲ್ಲಿದೆ?

ಮಹಾಕೂಟೇಶ್ವರ ದೇವಸ್ಥಾನವು ಬಾದಾಮಿಯ ಪೂರ್ವ ಭಾಗದಿಂದ ಸುಮಾರು 15 ಕಿಮೀ ದೂರದಲ್ಲಿರುವ ನಂದಿಕೇಶ್ವರ ಗ್ರಾಮದಲ್ಲಿದೆ. ಇಲ್ಲಿ ಅನೇಕ ಶಿವ ದೇವಾಲಯಗಳಿರುವುದರಿಂದ ಇದನ್ನು ಮಹಾಕೂಟ ಎಂದು ಕರೆಯುತ್ತಾರೆ. ಚಾಲುಕ್ಯರು ತಮ್ಮ ಆಡಳಿತ ಅವಧಿಯಲ್ಲಿ ನಿರ್ಮಿಸಿದ ಅನೇಕ ದೇವಾಲಯಗಳಲ್ಲಿ ಈ ಮಹಾಕೂಟ ದೇವಸ್ಥಾನ ಕೂಡಾ ಒಂದು. ಮಹಾಕೂಟವು ದೇವಸ್ಥಾನದ ಸಮುಚ್ಛಯಕ್ಕೆ ಮಾತ್ರವಲ್ಲದೆ ಇಲ್ಲಿನ ಔಷಧೀಯ ಸಸ್ಯ ಸಂಪತ್ತಿಗೂ ಹೆಸರಾಗಿದೆ. ಬಹಳ ವಿರಳವಾದ ಗಿಡಮೂಲಿಕೆಗಳನ್ನು ಇಲ್ಲಿ ಕಾಣಬಹುದು.

ಚಾಲುಕ್ಯ ರಾಜ ಮಂಗಳೇಶ ಕಟ್ಟಿಸಿದ ದೇವಸ್ಥಾನ

ಚಾಲುಕ್ಯ ರಾಜ ಮಂಗಳೇಶನು ತಾನು ಯುದ್ಧದಲ್ಲಿ ಗೆದ್ದ ನೆನಪಿಗಾಗಿ ಕ್ರಿಶ 602ರಲ್ಲಿ ಈ ಸ್ಥಳದಲ್ಲಿ ಅನೇಕ ಶಿವಲಿಂಗಳನ್ನು ಪ್ರತಿಷ್ಠಾಪಿಸಿ ದೇವಾಲಯ ಕಟ್ಟಿಸಿದ್ದಾನೆ. ಇದಕ್ಕೂ ಮುನ್ನ ಮಹಾಕೂಟೇಶ್ವರ ದೇವಸ್ಥಾನದ ಮುಂದೆ ಇದ್ದ ಮಂಗಳೇಶನ ಶಾಸನವುಳ್ಳ ಅಷ್ಟಕೋನದ ಶಿಲಾಸ್ತಂಭವನ್ನು ಈಗ ಬಿಜಾಪುರದ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಈ ಶಾಸನದ ಜೊತೆಗೆ ವಿಜಯಾದಿತ್ಯನ ಪ್ರಿಯೆ ವಿನಾಪೋಟಿ ಶಾಸನವೂ ಇದೆ. ಈ ಶಾಸನದಲ್ಲಿ ವಿನಾಪೋಟಿಯು ದೇವರಿಗೆ ಚಿನ್ನದ ಪೀಠ ಹಾಗೂ ಬೆಳ್ಳಿ ಕೊಡೆ ಮಾಡಿಸಿದಳು ಎಂದು ಬರೆಯಲಾಗಿದೆ.

ಈ ಪುಣ್ಯಕ್ಷೇತ್ರದಲ್ಲಿ ಪಾಪ ಮಾಡಿದರೆ ಕ್ಷಮೆಯೇ ಇಲ್ಲ

ದೇವಸ್ಥಾನದಲ್ಲಿ ಅನೇಕ ಶಾಸನಗಳಿವೆ. ಅವುಗಳಲ್ಲಿ ಒಂದು ಶಾಸನದಲ್ಲಿ 'ಅನ್ಯ ಕ್ಷೇತ್ರಗಳಲ್ಲಿ ಮಾಡಿದ ಪಾಪವು ಪುಣ್ಯ ಕ್ಷೇತ್ರಗಳಲ್ಲಿ ತೊಳೆಯಲ್ಪಡುತ್ತದೆ ಆದರೆ ಈ ಪುಣ್ಯಕ್ಷೇತ್ರದಲ್ಲಿ ಪಾಪ ಮಾಡಿದರೆ ಅದು ವಜ್ರಲೇಪದಂತೆ' ಎಂದು ಕೆತ್ತಲಾಗಿದೆ. ಈ ಮೂಲಕ ಈ ಕ್ಷೇತ್ರವನ್ನು ಅಪವಿತ್ರಗೊಳಿಸದಂತೆ ಇಲ್ಲಿ ಬರುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಆದ್ದರಿಂದ ಪುಷ್ಕರಿಣಿಯಲ್ಲಿ ಸ್ನಾನ ಮಾಡುವ ಜನರು ಕೂಡಾ ಸಾಬೂನು, ಶ್ಯಾಂಪೂ ಬಳಸುವುದಿಲ್ಲ, ಬಟ್ಟೆಯನ್ನೂ ಒಗೆಯುವುದಿಲ್ಲ. ಇಲ್ಲಿ ಮಹಾಕೂಟೇಶ್ವರ , ಮಲ್ಲಿಕಾರ್ಜುನ ದೇವಸ್ಥಾನಗಳು ದೊಡ್ಡದಾಗಿದ್ದು ಎರಡನ್ನೂ ಒಂದೇ ರೀತಿ ನಿರ್ಮಿಸಲಾಗಿದೆ. ಜೊತೆಗೆ ಇಲ್ಲಿ ಅಗಸ್ತ್ಯೇಶ್ವರ, ವೀರಭದ್ರೇಶ್ವರ ಸೇರಿದಂತೆ ಅನೇಕ ಚಿಕ್ಕ ಗುಡಿಗಳಿವೆ. ಈ ಸ್ಥಳ ಸುಂದರವಾದ ಶಿಲ್ಪ ಕೆತ್ತನೆಗೆ ಮಾತ್ರವಲ್ಲದೆ, ನೈಸರ್ಗಿಕ ಸೌಂದರ್ಯಕ್ಕೂ ಹೆಸರಾಗಿದೆ. ಇಲ್ಲಿ ಮಹಾಕೂಟೇಶ್ವರ ದೇವಸ್ಥಾನ ದ್ರಾವಿಡ ಶೈಲಿಯಲ್ಲಿದ್ದರೆ ಸಂಗಮೇಶ್ವರ ದೇವಾಲಯ ನಾಗರ ಶೈಲಿಯಲ್ಲಿದೆ.

ಕೋಣೆ ಶಂಕರಲಿಂಗ ದರ್ಶನ

ಮಹಾಕೂಟದಲ್ಲಿರುವ ಪುಷ್ಕರಣಿಯ ಒಂದು ಮೂಲೆ ಭಾಗದಲ್ಲಿ ಕೊಣೆ ಶಂಕರಲಿಂಗ ದರ್ಶನಕ್ಕೆ ವಿಭಿನ್ನವಾದ ವ್ಯವಸ್ಥೆ ಇದೆ. ಪುಷ್ಕರಿಣಿಯಲ್ಲಿ ಸ್ನಾನ ಮಾಡುವವರು ಶಿವನ ದರ್ಶನ ಮಾಡಬೇಕೆಂದರೆ ನೀರಿನಲ್ಲಿ ಮುಳುಗಿ ಉಸಿರುಕಟ್ಟಿ ಗೋಡೆಯ ಮತ್ತೊಂದು ಬದಿಯಲ್ಲಿ ಮೇಲೆ ಏಳಬೇಕು. ಅಲ್ಲಿ ಭಕ್ತರು ಶಿವಲಿಂಗ ದರ್ಶನ ಮಾಡಿ ಮತ್ತೆ ವಾಪಸ್‌ ಅದೇ ರೀತಿ ನೀರಿನಲ್ಲಿ ಮುಳುಗಿ ವಾಪಸ್‌ ಬರಬೇಕು.

ಒಟ್ಟಿನಲ್ಲಿ ಬಾದಾಮಿಯ ಈ ಮಹಾಕೂಟ ದೇವಾಲಯವು ಅನೇಕ ವೈಶಿಷ್ಟ್ಯಗಳಿಗೆ ಹೆಸರಾಗಿದ್ದು ಭಕ್ತರು ಒಮ್ಮೆ ಈ ದೇವಾಲಯಕ್ಕೆ ಹೋಗಿ ಶಿವನ ದರ್ಶನ ಮಾಡಿ ಬನ್ನಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.