ಜಗನ್ನಾಥ ರಥಯಾತ್ರೆ 2024; ವೈಭವದ ರಥಯಾತ್ರೆಯ ಹಿಂದಿರುವ ಸ್ವಾರಸ್ಯಕರ ಸಂಗತಿಗಳನ್ನು ತಿಳಿಯಿರಿ
Jagannath rathayatra 2024: ಈ ವರ್ಷ ಜಗನ್ನಾಥ ರಥಯಾತ್ರೆಯು ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿ, ಜುಲೈ 7ರಂದು ನಡೆಯಲಿದೆ. ಧಾರ್ಮಿಕ ಮಾನ್ಯತೆಗಳ ಅನುಸಾರ ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಜಗನ್ನಾಥ ರಥಯಾತ್ರೆಗೆ ಸಂಬಂಧಿಸಿದ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ. (ಬರಹ: ಅರ್ಚನಾ ವಿ ಭಟ್)
ಜಗನ್ನಾಥನ ಸನ್ನಿಧಿ ಒಡಿಶಾ ರಾಜ್ಯದ ಪುರಿಯಲ್ಲಿದೆ. ಪ್ರತಿ ವರ್ಷ ಜಗನ್ನಾಥ ದೇಗುಲದಲ್ಲಿ ನಡೆಯುವ ವೈಭವದ ರಥಯಾತ್ರೆಯನ್ನು ವೀಕ್ಷಿಸಲು ಪ್ರಪಂಚದಾದ್ಯಂತ ಭಕ್ತರು ಆಗಮಿಸುತ್ತಾರೆ. ಇದು ಎಲ್ಲರ ಗಮನ ಸೆಳೆಯುವ ಮತ್ತು ಜನಪ್ರಿಯ ಮಹಾ ರಥಯಾತ್ರೆಯಾಗಿದೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ಜಗನ್ನಾಥ ರಥಯಾತ್ರೆ ನಡೆಯುತ್ತದೆ. ಇದು ಈ ವರ್ಷ ಜುಲೈ 7 ರಿಂದ ಪ್ರಾರಂಭವಾಗಲಿದೆ.
ಅಂದು ಜಗನ್ನಾಥ ತನ್ನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯೊಂದಿಗೆ ಗುಂಡಿಚಾ ದೇವಸ್ಥಾನಕ್ಕೆ ಹೋಗುತ್ತಾನೆ. ಅಲ್ಲಿ ಸ್ವಾಮಿಗೆ ವಿವಿಧ ಬಗೆಯ ಖಾದ್ಯಗಳನ್ನು ಬಡಿಸಲಾಗುತ್ತದೆ. ಅಲ್ಲಿ ಸ್ವಾಮಿಯು ಒಂಬತ್ತು ದಿನಗಳ ಕಾಲ ನೆಲೆಸುತ್ತಾನೆ. ತದನಂತರ ಅವನು ತನ್ನ ಚಿಕ್ಕಮ್ಮನ ಮನೆಯಿಂದ ತನ್ನ ದೇವಸ್ಥಾನಕ್ಕೆ ಹಿಂತಿರುಗುತ್ತಾನೆ ಎಂಬ ನಂಬಿಕೆ ಇದೆ. ಈ ರಥ ಯಾತ್ರೆಯು ಜಗನ್ನಾಥ ದೇವಾಲಯದಿಂದ ಪ್ರಾರಂಭವಾಗಿ ಪುರಿ ಪಟ್ಟಣದ ಮೂಲಕ ಸಾಗಿ ಗುಂಡಿಚಾ ದೇವಾಲಯವನ್ನು ತಲುಪುತ್ತದೆ. ಇಲ್ಲಿ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆ ಏಳು ದಿನಗಳ ಕಾಲ ವಿಶ್ರಮಿಸುತ್ತಾರೆ.
ರಥಯಾತ್ರೆಯ ಹಿಂದಿರುವ ಸ್ವಾರಸ್ಯಕರ ಕಥೆ
ರಥಯಾತ್ರೆ ಪ್ರಾರಂಭವಾಗುವ ಮೊದಲು, ಜಗನ್ನಾಥನು ಹುಣ್ಣಿಮೆಯಿಂದ ಜ್ಯೇಷ್ಠ ಮಾಸದ ಅಮಾವಾಸ್ಯೆಯವರೆಗೆ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಆ ಸಂದರ್ಭದಲ್ಲಿ ಹದಿನೈದು ದಿನಗಳ ಕಾಲ ದೇವಾಲಯದ ಬಾಗಿಲು ಮುಚ್ಚಿರುತ್ತದೆ. ಇದನ್ನು ದೇವಾಲಯದ ಭಾಷೆಯಲ್ಲಿ ಅನಸರ್ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ದೇವರ ದರ್ಶನ ಇರುವುದಿಲ್ಲ. ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಈ ಸಂಪ್ರದಾಯ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ರಥಯಾತ್ರೆ ಪ್ರಾರಂಭವಾಗುವ ಒಂದು ದಿನದ ಮೊದಲು ಜಗನ್ನಾಥ ಸ್ವಾಮಿ ಆರೋಗ್ಯವಾಗುತ್ತಾನೆ. ನಂತರ ಸ್ವಾಮಿಯನ್ನು ಮತ್ತೆ ದೇವಾಲಯದ ಗರ್ಭಗುಡಿಗೆ ಕರೆತರಲಾಗುತ್ತದೆ. ಗುಂಡಿಚಾ ದೇವಾಲಯವು ಜಗನ್ನಾಥನ ಚಿಕ್ಕಮ್ಮನ ವಾಸಸ್ಥಾನವೆಂದು ಹೇಳಲಾಗುತ್ತದೆ. ಪುರಾಣದ ನಂಬಿಕೆಗಳ ಪ್ರಕಾರ, ದೇವಶಿಲ್ಪಿ ವಿಶ್ವಕರ್ಮನು ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರೆಯ ವಿಗ್ರಹಗಳನ್ನು ನಿರ್ಮಿಸಿದನು. ಆಷಾಢ ಮಾಸದ ಹತ್ತನೇ ದಿನದಂದು ಎಲ್ಲಾ ರಥಗಳು ಮತ್ತೆ ಮುಖ್ಯ ದೇವಾಲಯದ ಕಡೆಗೆ ಹಿಂತಿರುಗುತ್ತವೆ. ರಥಗಳನ್ನು ಹಿಂತೆಗೆದುಕೊಳ್ಳುವ ಆಚರಣೆಯನ್ನು ಬಹುದ ಯಾತ್ರೆ ಎಂದು ಕರೆಯಲಾಗುತ್ತದೆ.
ರಥಯಾತ್ರೆಗೆ ಸಂಬಂಧಿಸಿದ ವಿಶೇಷ ಸಂಗತಿಗಳು
* ಪುರಿಯಲ್ಲಿ ರಥ ಯಾತ್ರೆಗಾಗಿ ಭಗವಾನ್ ಜಗನ್ನಾಥ, ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಗಾಗಿ ಮೂರು ವಿಭಿನ್ನ ರಥಗಳನ್ನು ಸಿದ್ಧಪಡಿಸಲಾಗುತ್ತದೆ. ಬಲಭದ್ರನ ರಥ ಮುಂದಿನ ಸಾಲಿನಲ್ಲಿದ್ದರೆ ಮಧ್ಯದಲ್ಲಿ ಸುಭದ್ರಾ ಅಮ್ಮನವರ ರಥವಿರುತ್ತದೆ. ಹಿಂದೆ ಜಗನ್ನಾಥನ ರಥವಿರುತ್ತದೆ.
* ಬಲಭದ್ರನ ರಥವನ್ನು ತಾಳಧ್ವಜ ಎಂದು ಕರೆಯಲಾಗುತ್ತದೆ. ಇದರ ಬಣ್ಣ ಕೆಂಪು ಮತ್ತು ಹಸಿರು. ಸುಭದ್ರಾ ದೇವಿಯ ರಥವನ್ನು ಪದ್ಮ ರಥಂ ಅಥವಾ ದರ್ಪದಲನ್ ಎಂದು ಕರೆಯಲಾಗುತ್ತದೆ. ಇದು ಕಪ್ಪು ಮತ್ತು ಕೆಂಪು ಬಣ್ಣದ್ದಾಗಿದೆ. ಅಂತಿಮವಾಗಿ, ಜಗನ್ನಾಥನ ರಥದ ಹೆಸರನ್ನು ನಂದಿಘೋಷ ಎಂದು ಕರೆಯಲಾಗುತ್ತದೆ. ಈ ರಥವು ಕೆಂಪು ಮತ್ತು ಹಳದಿ ಬಣ್ಣದಲ್ಲಿದೆ.
* ಈ 3 ರಥಗಳನ್ನು ವಿಶೇಷವಾಗಿ ಬೇವಿನ ಮರದಿಂದ ತಯಾರಿಸಲಾಗುತ್ತದೆ. ಇದನ್ನು ದರು ಎನ್ನುತ್ತಾರೆ. ಇದಕ್ಕಾಗಿ ಜಗನ್ನಾಥ ದೇವಸ್ಥಾನದಲ್ಲಿ ವಿಶೇಷ ಸಮಿತಿ ರಚಿಸಲಾಗುವುದು.
* ಜಗನ್ನಾಥನ ರಥದ ಎತ್ತರವು 45.6 ಅಡಿ, ಬಲಭದ್ರನ ರಥ 45 ಅಡಿ ಮತ್ತು ಸುಭದ್ರಾದೇವಿಯ ರಥವು 44.6 ಅಡಿ ಎತ್ತರವಿದೆ.
* ರಥಯಾತ್ರೆಯಲ್ಲಿ ಭಾಗವಹಿಸುವ ಭಕ್ತರಿಗೆ ವಿಶೇಷ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಜಗನ್ನಾಥನ ರಥಯಾತ್ರೆಯಲ್ಲಿ ರಥವನ್ನು ಎಳೆಯುವುದರಿಂದ ಮರಣಾನಂತರ ಆತ್ಮಕ್ಕೆ ಮುಕ್ತಿ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ. ಭಕ್ತರು ಉಪವಾಸ ಮಾಡುವ ಮೂಲಕ ಈ ರಥಗಳನ್ನು ಎಳೆಯುತ್ತಾರೆ.
(ಬರಹ: ಅರ್ಚನಾ ವಿ ಭಟ್)