ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಒಡಿಶಾದ ಪುರಿಯಲ್ಲಿ ಸರಪಳಿಯಿಂದ ಬಂಧಿತನಾಗಿರುವ ಹನುಮಂತ; ಆಂಜನೇಯನು ಜಗನ್ನಾಥನ ಕೋಪಕ್ಕೆ ಗುರಿಯಾಗಿದ್ದೇಕೆ?

ಒಡಿಶಾದ ಪುರಿಯಲ್ಲಿ ಸರಪಳಿಯಿಂದ ಬಂಧಿತನಾಗಿರುವ ಹನುಮಂತ; ಆಂಜನೇಯನು ಜಗನ್ನಾಥನ ಕೋಪಕ್ಕೆ ಗುರಿಯಾಗಿದ್ದೇಕೆ?

ಒಡಿಶಾದ ಪುರಿಯಲ್ಲಿರುವ ಹನುಮಾನ್‌ ದೇವಾಲಯದಲ್ಲಿ ಹನುಮನನ್ನು ಸರಪಗಳಿಗಳಿಂದ ಬಂಧಿಸಲಾಗಿದೆ. ಜಗನ್ನಾಥನು ಆಂಜನೇಯನ ಮೇಲೆ ಕೋಪಗೊಂಡು ಹೀಗೆ ಬಂಧಿಸಿದ್ದಾನೆ ಎನ್ನಲಾಗಿದೆ. ಇದರ ಹಿಂದೆ ಆಸಕ್ತಿಕರ ಕಥೆ ಪ್ರಚಲಿತದಲ್ಲಿದೆ.

ಒಡಿಶಾದ ಪುರಿಯಲ್ಲಿ ಸರಪಳಿಯಿಂದ ಬಂಧಿತನಾಗಿರುವ ಹನುಮಂತ; ಆಂಜನೇಯನು ಜಗನ್ನಾಥನ ಕೋಪಕ್ಕೆ ಗುರಿಯಾಗಿದ್ದೇಕೆ?
ಒಡಿಶಾದ ಪುರಿಯಲ್ಲಿ ಸರಪಳಿಯಿಂದ ಬಂಧಿತನಾಗಿರುವ ಹನುಮಂತ; ಆಂಜನೇಯನು ಜಗನ್ನಾಥನ ಕೋಪಕ್ಕೆ ಗುರಿಯಾಗಿದ್ದೇಕೆ? (PC: Anu Satheesh 🇮🇳🚩 @AnuSatheesh5)

ಒಡಿಶಾದ ಪುರಿಯಲ್ಲಿ ಭಕ್ತರು ಜಗನ್ನಾಥ ರಥಯಾತ್ರೆ ಸಂಭ್ರಮದಲ್ಲಿದ್ದಾರೆ. 9 ದಿನಗಳ ಕಾಲ ನಡೆಯುವ ಈ ಜಗನ್ನಾಥ ರಥಯಾತ್ರೆಯಲ್ಲಿ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಜುಲೈ 7 ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಥವನ್ನು ಎಳೆಯುವ ಮೂಲಕ ರಥೆಯಾತ್ರೆಗೆ ಚಾಲನೆ ನೀಡಿದ್ದರು.

ಬಂಧಿತನಾಗಿರುವ ಹನುಮಂತ

ಜಗನ್ನಾಥ ದೇವಾಲಯವು ಒಡಿಶಾದ ಪುರಿ ಕರಾವಳಿಯಲ್ಲಿರುವ ಅತ್ಯಂತ ಪ್ರಸಿದ್ಧ ಸ್ಥಳವಾಗಿದೆ. ಜಗನ್ನಾಥ ದೇವಾಲಯದ ಜೊತೆಗೆ ಇಲ್ಲಿ ನೋಡಬೇಕಾದ ಕೆಲವು ದೇವಸ್ಥಾನಗಳಿವೆ. ಅದರಲ್ಲಿ ಹನುಮಾನ್ ದೇವಸ್ಥಾನ ಕೂಡಾ ಒಂದು. ಜಗನ್ನಾಥ ದೇವಾಲಯಕ್ಕೆ ಸಮೀಪದಲ್ಲಿರುವ ಈ ಹನುಮಾನ್ ದೇವಾಲಯ ಕೂಡಾ ಅದ್ಭುತಗಳಿಗೆ ಹೆಸರುವಾಸಿಯಾಗಿದೆ. ಈ ದೇವಾಲಯದ ವಿಶೇಷವೆಂದರೆ ಇಲ್ಲಿ ಹನುಮಂತನನ್ನು ಸರಪಳಿಯಲ್ಲಿ ಬಂಧಿಸಲಾಗಿದೆ. ಆದ್ದರಿಂದಲೇ ಈ ಹನುಮಂತನಿಗೆ ಬೇಡಿ ಹನುಮಂತ ಎಂದು ಕರೆಯುತ್ತಾರೆ. ಬೇಡಿ ಎಂದರೆ ಸರಪಳಿಗಳು. ಇದು ಸಂಯಮದ ಸಂಕೇತವೆಂದು ಪರಿಗಣಿಸಲಾಗಿದೆ. ಪರಾಕ್ರಮಿ ಹನುಮಂತನನ್ನು ಸರಪಳಿಯಿಂದ ಬಂಧಿಸಲು ಕಾರಣಗಳೇನು? ಇದರ ಹಿಂದೆ ಆಸಕ್ತಿಕರ ಕಥೆಯೊಂದಿದೆ.

ಇಲ್ಲಿ ಹನುಮಂತನನ್ನು ದರ್ಯಾ ಮಹಾವೀರ ಎಂದೂ ಕರೆಯುತ್ತಾರೆ. ದರ್ಯಾ ಎಂದರೆ ಸಮುದ್ರ. ಜಗನ್ನಾಥ ದೇವಾಲಯವನ್ನು ಸಮುದ್ರದ ಅಲೆಗಳಿಂದ ರಕ್ಷಿಸುವ ಹನುಮಂತನನ್ನು ಈ ರೀತಿ ಕರೆಯುತ್ತಾರೆ. ಈ ಪುರಿ ಜಗನ್ನಾಥ ದೇವಾಲಯವನ್ನು ರಕ್ಷಿಸಲು ಭಗವಾನ್ ಹನುಮಂತ ಕಾವಲು ಕಾಯುತ್ತಾನೆ ಎಂದು ನಂಬಲಾಗಿದೆ.

ಹನುಮನ ಮೇಲೆ ಕೋಪಗೊಂಡ ಜಗನ್ನಾಥ

ಜಗನ್ನಾಥ ದೇವಾಲಯವು ಸಮುದ್ರದ ಬಳಿ ಇರುವುದರಿಂದ ಅದರ ಅಲೆಗಳು ದೇವಾಲಯದ ಬಳಿ ಬರುತ್ತವೆ. ಒಮ್ಮೆ ಹನುಮಂತನು ಪುರಿ ದೇವಸ್ಥಾನದ ಬಳಿ ಸಮುದ್ರದ ಅಲೆಗಳು ಬರದಂತೆ ರಕ್ಷಿಸುತ್ತಿದ್ದನು. ಆದರೆ ಇದ್ದಕ್ಕಿದ್ದಂತೆ ಹನುಮಂತನಿಗೆ ಅಯೋಧ್ಯೆಗೆ ಹೋಗಿ ಶ್ರೀರಾಮನನ್ನು ನೋಡುವ ಅಗಾಧ ಆಸೆಯಾಯಿತು. ರಾಮನ ಮೇಲಿನ ಪ್ರೀತಿಗೆ ಮಿತಿಯಿಲ್ಲದ ಕಾರಣ, ಹನುಮಂತನು ಯಾರಿಗೂ ಹೇಳದೆ ತಕ್ಷಣವೇ ಅಯೋಧ್ಯೆಗೆ ಹೊರಟನು. ಅಂದು ರಾತ್ರಿ ಸಮುದ್ರದ ಅಲೆಗಳು ದೇವಸ್ಥಾನದ ಬಳಿ ನುಗ್ಗಿದ್ದರಿಂದ ಜನರು ತುಂಬಾ ಭಯಭೀತರಾಗಿದ್ದರು. ಆಗ ಜಗನ್ನಾಥನು ಹನುಮಂತನು ಎಲ್ಲಿದ್ದಾನೆ ಎಂದು ಕೇಳಿದಾಗ ಅವನು ಅಯೋಧ್ಯೆಗೆ ಹಠಾತ್ ಪ್ರವಾಸಕ್ಕೆ ಹೋದನೆಂಬ ಸುದ್ದಿ ತಿಳಿಯುತ್ತದೆ. ಜಗನ್ನಾಥನಿಗೆ ವಿಷಯ ತಿಳಿದು ಕೋಪಗೊಳ್ಳುತ್ತಾನೆ. ಹನುಮನು ಮತ್ತೆ ವಾಪಸ್‌ ಬಂದಾಗ ಅವನನ್ನು ಸರಪಳಿಯಿಂದ ಬಂಧಿಸಿ ಮತ್ತೆ ತನ್ನ ಸ್ಥಾನವನ್ನು ಬಿಟ್ಟು ಹೋಗದೆ, ನಗರವನ್ನು ಕಾಪಾಡುವಂತೆ ಆದೇಶಿಸಿದ್ದಾಗಿ ಕಥೆ ಪ್ರಚಲಿತದಲ್ಲಿದೆ.

ಹನುಮಂತನು ಸರಪಳಿ ಹಿಂದೆ ಬಂಧಿಯಾಗಿರುವುದರ ಹಿಂದೆ ಮತ್ತೊಂದು ಕುತೂಹಲಕಾರಿ ಕಥೆ ಕೂಡ ಜನಪ್ರಿಯವಾಗಿದೆ. ಸಮುದ್ರ ದೇವರಾದ ವರುಣ ದೇವರು ಜಗನ್ನಾಥನನ್ನು ಭೇಟಿ ಮಾಡಲು ಬಯಸಿದನು. ಆದರೆ ಅವನು ದೇವಾಲಯವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ , ಸಮುದ್ರದ ಅಲೆಗಳು ಅವನನ್ನು ಹಿಂಬಾಲಿಸುತ್ತದೆ. ಹನುಮಂತನು ವರುಣನನ್ನು ಜಗನ್ನಾಥನನ್ನು ಭೇಟಿ ಮಾಡುವುದನ್ನು ತಡೆಯುತ್ತಾನೆ. ಇದಕ್ಕೆ ಸೇಡು ತೀರಿಸಿಕೊಳ್ಳುವ ವರುಣನು, ಹನುಮಂತನನ್ನು ಜಗನ್ನಾಥನನ್ನು ನೋಡುವಂತೆ ಪ್ರೇರೇಪಿಸಿ ಸಮುದ್ರ ಬಿಟ್ಟು ದೇವಸ್ಥಾನದ ಕಡೆಗೆ ಹೋಗುವಂತೆ ಮಾಡುತ್ತಾನೆ. ಆಗ ಜಗನ್ನಾಥನು ಕೋಪಗೊಂಡು ಕರ್ತವ್ಯ ಮರೆತ ಹನುಮನನ್ನು ಹೀಗೆ ಸರಪಳಿಯಿಂದ ಬಂಧಿಸುತ್ತಾನೆ ಎಂಬ ಕಥೆ ಪ್ರಸಿದ್ಧಿಯಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.