ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶ್ರೀರಾಮ ತನ್ನ ಪೂರ್ವಜರಿಗೆ ಪಿಂಡ ಪ್ರದಾನ ಮಾಡಿದ ಸ್ಥಳವಿದು; ಬಿಹಾರದ ಗಯಾಗೆ ಹೋದರೆ ಮೋಕ್ಷ ದೊರೆಯುವುದಾ? ಆಸಕ್ತಿಕರ ಕಥೆ ಇಲ್ಲಿದೆ

ಶ್ರೀರಾಮ ತನ್ನ ಪೂರ್ವಜರಿಗೆ ಪಿಂಡ ಪ್ರದಾನ ಮಾಡಿದ ಸ್ಥಳವಿದು; ಬಿಹಾರದ ಗಯಾಗೆ ಹೋದರೆ ಮೋಕ್ಷ ದೊರೆಯುವುದಾ? ಆಸಕ್ತಿಕರ ಕಥೆ ಇಲ್ಲಿದೆ

ಭಾರತದಲ್ಲಿ ಅನೇಕ ದೇವಸ್ಥಾನಗಳು ಮಹಿಮೆಗೆ ಹೆಸರಾಗಿದೆ. ಬಿಹಾರದ ಗಯಾ ಕೂಡಾ ಅಂಥ ದೇವಸ್ಥಾನಗಳಲ್ಲಿ ಒಂದು. ಈ ಸ್ಥಳದಲ್ಲಿ ಪಿಂಡಪ್ರದಾನ ಮಾಡಿದರೆ ಪೂರ್ವಜರ ಆತ್ಮಕ್ಕೆ ಮೋಕ್ಷ ದೊರೆಯುತ್ತದೆ ಎಂಬ ಕಾರಣಕ್ಕೆ ಪ್ರತಿದಿನ ಸಾವಿರಾರು ಮಂದಿ ಇಲ್ಲಿಗೆ ಆಗಮಿಸಿ ತಮ್ಮ ಪೂರ್ವಜರಿಗೆ ಪಿಂಡದಾನ ಮಾಡಿ ಪೂಜೆ ಸಲ್ಲಿಸುತ್ತಾರೆ.

ಶ್ರೀರಾಮ ತನ್ನ ಪೂರ್ವಜನರಿಗೆ ಪಿಂಡ ಪ್ರದಾನ ಮಾಡಿದ ಸ್ಥಳವಿದು; ಬಿಹಾರದ ಗಯಾ ಹಿಂದಿನ ಆಸಕ್ತಿಕರ ಕಥೆ ಇಲ್ಲಿದೆ
ಶ್ರೀರಾಮ ತನ್ನ ಪೂರ್ವಜನರಿಗೆ ಪಿಂಡ ಪ್ರದಾನ ಮಾಡಿದ ಸ್ಥಳವಿದು; ಬಿಹಾರದ ಗಯಾ ಹಿಂದಿನ ಆಸಕ್ತಿಕರ ಕಥೆ ಇಲ್ಲಿದೆ (PC: twitter)

ಜಗತ್ತನ್ನು ಸೃಷ್ಟಿಸಿದ ವಿಷ್ಣುವು ಧರ್ಮವನ್ನು ಸ್ಥಾಪಿಸಲು ನಾನಾ ಅವತಾರಗಳನ್ನು ಎತ್ತಿದ್ದಾನೆ. ತ್ರೇತಾಯುಗದಲ್ಲಿ ಶ್ರೀರಾಮನಾಗಿ, ದ್ವಾಪರಯುಗದಲ್ಲಿ ಶ್ರೀಕೃಷ್ಣನಾಗಿ ಅವತರಿಸಿದ್ದಾನೆ. ಅಲ್ಲದೆ ಕಲಿಯುಗದಲ್ಲಿ ವಿಷ್ಣುವು ಕಲ್ಕಿ ಅವತಾರ ಎತ್ತುತ್ತಾನೆ ಎಂಬ ನಂಬಿಕೆ ಇದೆ. ಇದನ್ನು ಹೊರತುಪಡಿಸಿ ವಿಷ್ಣು ಇನ್ನೂ ಅನೇಕ ರೂಪಗಳಲ್ಲಿ ಅವತರಿಸಿದ್ದಾನೆ. ವಿಷ್ಣುವಿನ ಈ ರೂಪಗಳನ್ನು ಇಂದಿಗೂ ಪೂಜಿಸಲಾಗುತ್ತಿದೆ. ಪುರಾಣದಲ್ಲಿ ವಿಷ್ಣುವಿನ ದಶಾವತಾರದ ಉಲ್ಲೇಖವಿದೆ.

ಬಿಹಾರದ ಗಯಾ ವಿಷ್ಣುಪಾದ ದೇವಸ್ಥಾನ

ದೇಶಾದ್ಯಂತ ವಿಷ್ಣುವಿನ ಅನೇಕ ದೇವಸ್ಥಾನಗಳಿವೆ. ಅವುಗಳಲ್ಲಿ ಬಿಹಾರದ ಗಯಾದಲ್ಲಿರುವ ದೇವಸ್ಥಾನ ಕೂಡಾ ಒಂದು. ಇದು ವಿಷ್ಣುವಿನ ಭಕ್ತ ಗಯಾಸುರನಿಗೆ ಸಂಬಂಧಿಸಿದ ದೇವಸ್ಥಾನವಾದರೂ ಇಲ್ಲಿ ವಿಷ್ಣು ಕೂಡಾ ನೆಲೆಸಿದ್ದಾನೆ. ಈ ಸ್ಥಳಕ್ಕೆ ಬರುವ ವ್ಯಕ್ತಿಯು ಮರಣಾ ನಂತರ ಮೋಕ್ಷ ಪಡೆಯುತ್ತಾನೆ. ಇಲ್ಲಿ ಪಿಂಡ ಪ್ರಧಾನ ಮಾಡಿದರೆ ಪೂರ್ವಜರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎಂಬ ನಂಬಿಕೆ ಮನೆ ಮಾಡಿದೆ. ಈ ದೇವಸ್ಥಾನದ ಪೌರಾಣಿಕ ಹಿನ್ನೆಲೆ ಹಾಗೂ ಇನ್ನಿತರ ಮಾಹಿತಿ ಹೀಗಿದೆ.

ಪ್ರಾಚೀನ ಕಾಲದಲ್ಲಿ ಗಯಾ ಎಂಬ ರಾಜನು ಬ್ರಾಹ್ಮಣನ ಶಾಪದಿಂದ ರಾಕ್ಷಸನಾಗಿ ಬದಲಾದನು. ಗಯಾಸುರ ವಿಷ್ಣುವಿನ ಪರಮ ಭಕ್ತನಾಗಿದ್ದನು. ತನ್ನ ಭಕ್ತಿಯಿಂದ ಗಯಾಸುರನು ಭಗವಾನ್ ವಿಷ್ಣುವನ್ನು ಮೆಚ್ಚಿಸಿ ವರವೊಂದನ್ನು ಪಡೆದನು. ಗಯಾಸುರನು ವಿಷ್ಣುವಿನ ಪರಮ ಮತ್ತು ಧರ್ಮನಿಷ್ಠ ಭಕ್ತನಾಗಿದ್ದರಿಂದ ಗಯಾಸುರನ ದರ್ಶನದಿಂದಲೇ ಜನಸಾಮಾನ್ಯರ ಪಾಪಗಳು ನಾಶವಾಗುತ್ತಿದ್ದವು. ಇದಕ್ಕಾಗಿ ಗಯಾಸುರನ ದರ್ಶನ ಪಡೆಯಲು ಪ್ರತಿದಿನ ಅಪಾರ ಸಂಖ್ಯೆಯಲ್ಲಿ ಜನ ಗಯಾಗೆ ಬರುತ್ತಿದ್ದರು. ಗಯಾಸುರನ ಕೀರ್ತಿಯು ಭೂಮಿಯಲ್ಲಿ ಮಾತ್ರವಲ್ಲದೆ ಮೂರು ಲೋಕಗಳಲ್ಲಿಯೂ ಹರಡಿತು. ಗಯಾಸುರನನ್ನು ನೋಡುವುದರಿಂದ ಒಬ್ಬ ವ್ಯಕ್ತಿಯು ಮರಣಾನಂತರ ಸ್ವರ್ಗವನ್ನು ಪಡೆಯುತ್ತಾನೆ ಎಂಬ ಸುದ್ದಿ ಹರಡುತ್ತಿದ್ದಂತೆ, ಗಯಾಸುರನ ದರ್ಶನಕ್ಕಾಗಿ ಎಲ್ಲರೂ ಆಗಮಿಸತೊಡಗಿದರು.

ಗಯಾಸುರ ದೇಹತ್ಯಾಗ ಮಾಡಿದ್ದು ಏಕೆ?

ಇದರಿಂದಾಗಿ ಸ್ವರ್ಗ ಮತ್ತು ಗಯಾದಲ್ಲಿ ಜನಸಾಗರವೇ ಸೇರತೊಡಗಿತು. ಪಾಪಿಗಳು ಕೂಡಾ ಮರಣಾ ನಂತರ ಸ್ವರ್ಗಕ್ಕೆ ಹೊರಟರು. ಇದರಿಂದಾಗಿ ಸ್ವರ್ಗದ ರಾಜ ಇಂದ್ರನಿಗೆ ಬಹಳ ಚಿಂತೆಯಾಗುತ್ತದೆ. ಎಲ್ಲಾ ದೇವತೆಗಳು, ಇದೆಲ್ಲವನ್ನೂ ನಿಲ್ಲಿಸುವಂತೆ ವಿಷ್ಣುವನ್ನು ಬೇಡುತ್ತಾರೆ. ಆಗ ವಿಷ್ಣುವು ಗಯಾಸುರನನ್ನು ಸಂಹಾರ ಮಾಡಲು ಯೋಚಿಸುತ್ತಾನೆ. ನಾನು ಒಂದು ಯಜ್ಞ ಮಾಡಬೇಕು. ಅದಕ್ಕಾಗಿ ಒಳ್ಳೆ ಸ್ಥಳವನ್ನು ಸೂಚಿಸು ಎನ್ನುತ್ತಾನೆ. ನೀನು ನನ್ನ ಮೇಲೆ ಯಜ್ಞ ಮಾಡಬಹುದು ಎಂದು ಗಯಾ ಹೇಳುತ್ತಾನೆ. ಗಯಾಸುರನ ಎದೆ ಮೇಲೆ ಯಜ್ಞಕುಂಡ ಇರಿಸಿ ಯಜ್ಞ ಮಾಡಿದರೂ ಆತನಿಗೆ ಏನೂ ಆಗುವುದಿಲ್ಲ. ವಿಷ್ಣುವಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಗಯಾಸುರ, ನನ್ನ ಎರಡು ಆಸೆಯನ್ನು ನೆರವೇರಿಸಿದರೆ ನಾನೇ ದೇಹತ್ಯಾಗ ಮಾಡುತ್ತೇನೆ. ಆಗ ನನ್ನನ್ನು ಕೊಂದ ಆರೋಪವೂ ನಿನ್ನ ಮೇಲೆ ಇರುವುದಿಲ್ಲ ಎನ್ನುತ್ತಾನೆ.

ಸೂರ್ಯ, ಚಂದ್ರ ಇರುವವರೆಗೂ ನಾನು ಇದೇ ಸ್ಥಳದಲ್ಲಿ ನೆಲೆಸುತ್ತೇನೆ, ನೀನೂ ಇದೇ ಸ್ಥಳದಲ್ಲಿ ನೆಲೆಸಬೇಕು. ಈ ಸ್ಥಳಕ್ಕೆ ಬರುವ ಜನರು ಶ್ರಾದ್ಧ ಕಾರ್ಯ ಕೈಗೊಂಡರೆ ಅವರಿಗೆ ಮೋಕ್ಷ ನೀಡಬೇಕು ಎಂದು ಮನವಿ ಮಾಡುತ್ತಾನೆ. ವಿಷ್ಣುವು ಗಯಾಸುರನ ಆಸೆಗಳನ್ನು ಈಡೇರಿಸುವಂತೆ ವರ ನೀಡುತ್ತಾನೆ. ಆಗ ಗಯಾಸುರನ ಮೊದಲೇ ಕೊಟ್ಟ ಮಾತಿನಂತೆ ದೇಹ ತ್ಯಾಗ ಮಾಡುತ್ತಾನೆ. ಅಂದಿನಿಂದ ಈ ಸ್ಥಳವೇ ಗಯಾಸುರನ ಹೆಸರಿನಿಂದ ಗಯಾ ಎಂದು ಹೆಸರಿಸಲಾಯಿತು. 

ಶ್ರೀರಾಮನು ತನ್ನ ಪೂರ್ವಜನರಿಗೆ ಪಿಂಡದಾನ ಮಾಡಿದ ಸ್ಥಳ

ಅನಾದಿ ಕಾಲದಿಂದಲೂ ಈ ಸ್ಥಳದಲ್ಲಿ ಪಿಂಡ ದಾನವನ್ನು ನಡೆಸಲಾಗುತ್ತದೆ. ಶ್ರೀರಾಮನು ಕೂಡಾ ಗಯಾದಲ್ಲಿ ತನ್ನ ಪೂರ್ವಜರಿಗೆ ತರ್ಪಣವನ್ನು ಅರ್ಪಿಸಿದನೆಂದು ನಂಬಲಾಗಿದೆ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಪೂರ್ವಜರಿಗೆ ಮೋಕ್ಷವನ್ನು ನೀಡಲು ಮತ್ತು ಫಲ್ಗು ನದಿಯ ದಡದಲ್ಲಿ ಪಿಂಡ ದಾನವನ್ನು ನೀಡಲು ಗಯಾಕ್ಕೆ ಬರುತ್ತಾರೆ. ಇಲ್ಲಿ ಪ್ರೇತ ಶಿಲೆ ಎಂಬ ದೊಡ್ಡ ಗಾತ್ರದ ಕಲ್ಲು ಇದೆ. ಆತ್ಮಗಳು ಈ ಕಲ್ಲಿನ ಬಿರುಕುಗಳಿಂದ ಆಗಮಿಸಿ ತಮ್ಮ ಸಂಬಂಧಿಕರು ಮಾಡಿದ ಪಿಂಡದಾನವನ್ನು ಸ್ವೀಕರಿಸಿದ ನಂತರ ಮುಕ್ತಿ ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಗಯಾ, ಬಿಹಾರದ ಪಾಟ್ನಾದಿಂದ ಸುಮಾರು 100 ಕಿಮೀ ದೂರದ ಫಲ್ಗೂ ನದಿ ತೀರದಲ್ಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.