ಮಹಾಭಾರತದ ಖಳನಾಯಕನಿಗೂ ಇದೆ ದೇವಸ್ಥಾನ, ಕಲ್ಲುಗಳೇ ಇಲ್ಲಿ ನೈವೇದ್ಯ; ದುರ್ಯೋಧನ ದೇವಸ್ಥಾನದ ಇತಿಹಾಸ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತದ ಖಳನಾಯಕನಿಗೂ ಇದೆ ದೇವಸ್ಥಾನ, ಕಲ್ಲುಗಳೇ ಇಲ್ಲಿ ನೈವೇದ್ಯ; ದುರ್ಯೋಧನ ದೇವಸ್ಥಾನದ ಇತಿಹಾಸ ಹೀಗಿದೆ

ಮಹಾಭಾರತದ ಖಳನಾಯಕನಿಗೂ ಇದೆ ದೇವಸ್ಥಾನ, ಕಲ್ಲುಗಳೇ ಇಲ್ಲಿ ನೈವೇದ್ಯ; ದುರ್ಯೋಧನ ದೇವಸ್ಥಾನದ ಇತಿಹಾಸ ಹೀಗಿದೆ

Duryodhana Temple: ಮಹಾಭಾರತದ ಖಳನಾಯಕ ಎಂದರೆ ಥಟ್ಟನೆ ನೆನಪಾಗುವುದು ದುರ್ಯೋಧನ, ದುಶ್ಯಾಸನ, ಮತ್ತು ಶಕುನಿ. ಭಾರತದಲ್ಲಿ ದುರ್ಯೋಧನನಿಗೂ ಒಂದು ದೇವಾಲಯವಿದೆ ಎಂದರೆ ಯಾರಿಗಾದರೂ ಆಶ್ಚರ್ಯವಾಗದೇ ಇರಲಾರದು. ಆ ದೇವಸ್ಥಾನ ಬೇರೆಲ್ಲೂ ಇಲ್ಲ ಅದು ಭಾರತದಲ್ಲೇ ಇದೆ. ಹಾಗಾದರೆ ಆ ದೇವಸ್ಥಾನ ಎಲ್ಲಿದೆ? ಅದರ ಹಿಂದಿರುವ ಇತಿಹಾಸವೇನು ಇಲ್ಲಿದೆ ಓದಿ.

ಮಹಾಭಾರತದ ಖಳನಾಯಕನಿಗೂ ಇದೆ ದೇವಸ್ಥಾನ, ಕಲ್ಲುಗಳೇ ಇಲ್ಲಿ ನೈವೇದ್ಯ; ದುರ್ಯೋಧನ ದೇವಸ್ಥಾನದ ಇತಿಹಾಸ ಹೀಗಿದೆ
ಮಹಾಭಾರತದ ಖಳನಾಯಕನಿಗೂ ಇದೆ ದೇವಸ್ಥಾನ, ಕಲ್ಲುಗಳೇ ಇಲ್ಲಿ ನೈವೇದ್ಯ; ದುರ್ಯೋಧನ ದೇವಸ್ಥಾನದ ಇತಿಹಾಸ ಹೀಗಿದೆ (PC: Dr. Anita Gupte @anita_gupte)

Duryodhana Temple: ಭಾರತವು ಅನೇಕ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ತವರಾಗಿದೆ. ಇಲ್ಲಿ ಅನೇಕ ದೇವಾಲಯ, ಕೋಟೆ, ಬಸದಿ, ವಿಹಾರ, ಮಠಗಳನ್ನು ಕಾಣಬಹುದು. ಇಲ್ಲಿರುವ ಪ್ರತಿಯೊಂದು ದೇವಾಲಯವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅನೇಕ ಆಚರಣೆ, ಪದ್ಧತಿಗಳನ್ನು ನಡೆಸಿಕೊಂಡು ಬಂದಿದೆ. ಅಂತಹ ದೇವಸ್ಥಾನಗಳಿಲ್ಲಿ ಪೂಜೆ ಸಲ್ಲಿಸುವುದರಿಂದ ಭಕ್ತರ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.

ಆದರೆ ಭಾರತದಲ್ಲಿ ಪುರಾಣ ಪ್ರಸಿದ್ದ, ಐತಿಹಾಸಿಕ ವ್ಯಕ್ತಿಗಳ ದೇವಾಲಯಗಳೂ ಇವೆ. ಅಂತದ್ದೇ ಒಂದು ದೇವಸ್ಥಾನ ಕೇರಳದಲ್ಲಿದೆ. ಇಲ್ಲಿನ ಮಲನಾಡ ಎಂಬಲ್ಲಿ ದುರ್ಯೋಧನ ದೇವಸ್ಥಾನವಿದೆ.

ಕೇರಳದಲ್ಲಿರುವ ದೇವಸ್ಥಾನ

ಹೌದು, ಕೇರಳದ ಕೊಲ್ಲಂ ಜಿಲ್ಲೆಯ ಮಲನಾಡ ಗ್ರಾಮದಲ್ಲಿ ದುರ್ಯೋಧನನ ದೇವಸ್ಥಾನವಿದೆ. ಇದನ್ನು ಪೊರುವಾಜಿ ಪೆರುವಿರುತ್ತಿ ಮಲನಾಡ ದುರ್ಯೋಧನ ದೇವಸ್ಥಾನ ಎಂದು ಕರೆಯಲಾಗುತ್ತದೆ. ಭಾರತದ ಮಹಾಕಾವ್ಯ ಮಹಾಭಾರತದಲ್ಲಿ ಬರುವ ಅದೇ ದುರ್ಯೋಧನನಿಗೆ ಸಮರ್ಪಿತವಾದ ದೇವಸ್ಥಾನವಿದು. ದುರ್ಯೋಧನ ಹೇಗಿದ್ದ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದೇ ಇದೆ. ಪಿತೂರಿಗಳನ್ನು ಮಾಡುವ, ಒಳಸಂಚುಗಳನ್ನು ರೂಪಿಸುವ, ದುರಹಂಕಾರಿ ಮತ್ತು ಸೇಡಿನ ವ್ಯಕ್ತಿಯಾಗಿ ಇಡೀ ಮಹಾಭಾರತದಲ್ಲಿ ಕಾಣಿಸಿಕೊಂಡಿದ್ದಾನೆ. ಮಹಾಭಾರತ ಯುದ್ಧಕ್ಕೆ ದುರ್ಯೋಧನನೇ ಮುಖ್ಯ ಕಾರಣನೆಂದು ಹೇಳಲಾಗುತ್ತದೆ. ಧೃತರಾಷ್ಟ್ರನ 100 ಪುತ್ರರಲ್ಲಿ ದುರ್ಯೋಧನನೇ ಮೊದಲಿಗ. ಕೌರವರಲ್ಲಿ ಹಿರಿಯ. ಅವನಿಗೆ ಸುಯೋಧನ ಎಂಬ ಇನ್ನೊಂದು ಹೆಸರೂ ಸಹ ಇದೆ. ಮಹಾಕಾವ್ಯದಲ್ಲಿ ದುರ್ಯೋಧನನ್ನು ಅತ್ಯಂತ ಕೆಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಅಂತಹ ದುರ್ಯೋಧನನಿಗೂ ಒಂದು ದೇವಸ್ಥಾನವಿದೆ ಎಂದರೆ ಕೇಳಲು ಸ್ವಲ್ಪ ವಿಚಿತ್ರವೆನಿಸಿದರೂ ಅದು ಸುಳ್ಳಲ್ಲ.

ದುರ್ಯೋಧನ ದೇವಾಲಯದ ಇತಿಹಾಸ

ಸ್ಥಳ ಪುರಾಣದ ಪ್ರಕಾರ, ಪಾಂಡವರು 12 ವರ್ಷಗಳ ಕಾಲ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸಕ್ಕೆ ಹೋಗುತ್ತಾರೆ. ಈ ಸಮಯದಲ್ಲಿ ಪಾಂಡವರು ಎಲ್ಲಿರುವರು ಎಂಬುದರ ಬಗ್ಗೆ ತಿಳಿದರೆ ಇನ್ನೂ 12 ವರ್ಷಗಳ ಕಾಲ ಅವರನ್ನು ಕಾಡಿಗೆ ಕಳುಹಿಸಬಹುದು ಎಂದು ದುರ್ಯೋಧನನು ಸಂಚು ಮಾಡುತ್ತಾನೆ. ಅದಕ್ಕಾಗಿ ಅವನು ತನ್ನ ಸೈನ್ಯವನ್ನು ದೇಶದ್ಯಂತ ಕಳುಹಿಸುತ್ತಾನೆ. ಆದರೆ ಪಾಂಡವರ ಕುರುಹು ಯಾರಿಗೂ ಸಿಗುವುದಿಲ್ಲ. ಆಗ ದುರ್ಯೋಧನ ತಾನೇ ಪಾಂಡವರನ್ನು ಹುಡುಕಲು ಹೊರಡುತ್ತಾನೆ. ಆ ಸಮಯದಲ್ಲಿ ದುರ್ಯೋಧನ ಮಲನಾಡ ಪ್ರದೇಶದ ಕಾಡುಗಳಲ್ಲಿ ಪಾಂಡವರನ್ನು ಹುಡುಕುತ್ತಾನೆ.

ಪಾಂಡವರನ್ನು ಹುಡುಕುತ್ತಾ ಕೇರಳದ ಕಾಡುಗಳಲ್ಲಿ ಸಂಚರಿಸುತ್ತಾನೆ. ಆಗ ದುರ್ಯೋಧನನಿಗೆ ಮಲೆನಾಡ ಪ್ರಾಂತ್ಯದಲ್ಲಿ ಆಶ್ರಯ ನೀಡಲಾಗುತ್ತದೆ ಮತ್ತು ಆತ್ಮೀಯವಾಗಿ ಸ್ವಾಗತಿಸಲಾಗುತ್ತದೆ. ಅಲ್ಲಿ ಅವನಿಗೆ ಆಹಾರ ನೀಡಲಾಗುತ್ತದೆ.‌ ಅವರ ಆತಿಥ್ಯವನ್ನು ಮೆಚ್ಚಿದ ದುರ್ಯೋಧನನು ಗ್ರಾಮದ ಜನರನ್ನು ಆಶೀರ್ವದಿಸುತ್ತಾನೆ. ಅದನ್ನು ಗುರುತಿಸಿದ, ಆ ಗ್ರಾಮಸ್ಥರು ದುರ್ಯೋಧನನ ನೆನಪಿಗಾಗಿ ದೇವಾಲಯವನ್ನು ಸ್ಥಾಪಿಸುತ್ತಾರೆ. ಇಷ್ಟೇ ಅಲ್ಲದೇ, ಕೌರವರು, ದುಶ್ಯಾಸನ ಮುಂತಾದವರಿಗೆ ಮುಡಿಪಾದ ದೇವಾಲಯಗಳೂ ಇವೆ. ಪವಿತ್ರೇಶ್ವರಂನಲ್ಲಿ ಕೌರವರ ಮಾವನಾದ ಶಕುನಿಗೆ ಸಮರ್ಪಿತವಾದ ದೇವಾಲಯವೂ ಇದೆ. ಕೆಲವು ವರದಿಗಳ ಪ್ರಕಾರ ಕೊಲ್ಲಂ, ತಿರುವನಂತಪುರಂ, ಆಲಪ್ಪುಳ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಇಂತಹ 101 ದೇವಾಲಯಗಳಿವೆ ಎಂದು ಹೇಳಲಾಗುತ್ತದೆ.

ವಿಗ್ರಹವಿಲ್ಲದ ದೇವಸ್ಥಾನ

ಈ ದೇವಾಲಯದ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಇಲ್ಲಿ ದುರ್ಯೋಧನನ ಪ್ರತಿಮೆಯಿಲ್ಲ. ರಾಜಕುಮಾರನನ್ನು ಪ್ರತಿನಿಧಿಸುವ ಒಂದೇ ಒಂದು ಎತ್ತರದ ವೇದಿಕೆ ಮಾತ್ರ ಇದೆ. ಇಲ್ಲಿನ ಜನರು ವಿಗ್ರಹಗಳನ್ನು ಪೂಜಿಸುವುದಿಲ್ಲ. ಅಷ್ಟೇ ಅಲ್ಲದೇ, ಈ ದೇವಸ್ಥಾನದ ಭಕ್ತರು ದೇವರನ್ನು ದೇವರು ಎಂದು ಸಂಬೋಧಿಸುವುದೂ ಇಲ್ಲ. ಅವನನ್ನು ಅಪ್ಪೂಪನ್ ಎಂದು ಕರೆಯುತ್ತಾರೆ. ಹಾಗೆಂದರೆ ಮಲಯಾಳಂನಲ್ಲಿ ಅಜ್ಜ ಎಂದರ್ಥ. ಇನ್ನೊಂದು ಅಚ್ಚರಿಯ ವಿಷಯವೆಂದರೆ ಈ ದೇವಾಲಯದಲ್ಲಿ ದೇವರಿಗೆ ನೈವೇದ್ಯವಾಗಿ ಕಲ್ಲನ್ನು ಸಮರ್ಪಿಸಲಾಗುತ್ತದೆ.

ಕೇರಳದ ಪ್ರವಾಸೋದ್ಯಮದ ವೆಬ್‌ಸೈಟ್ ಪ್ರಕಾರ, ದೇವಾಲಯದಲ್ಲಿರುವ ಅರ್ಚಕರು ಕೌರವ ಸಮುದಾಯಕ್ಕೆ ಸೇರಿದವರು. ಸುದ್ದಿಯೊಂದರ ಪ್ರಕಾರ ಇಲ್ಲಿನ ಅರ್ಚಕರು ಯಾವುದೇ ಸಂಸ್ಕೃತ ಮಂತ್ರಗಳನ್ನು ಪಠಿಸುವುದಿಲ್ಲ. ಅವರು ಕೇವಲ ಮಲಯಾಳಂನಲ್ಲಿ ದೇವರನ್ನು ಪ್ರಾರ್ಥಿಸುತ್ತಾರೆ ಮತ್ತು ಆಶೀರ್ವದಿಸು ಎಂದು ಬೇಡಿಕೊಳ್ಳುತ್ತಾರೆ. ಈ ದೇವಾಲಯವು 24 ಗಂಟೆಗಳ ಕಾಲ ತೆರೆದಿರುತ್ತದೆ. ದೇವಾಲಯದಲ್ಲಿ ಎಲ್ಲರಿಗೂ ಪ್ರವೇಶವಿದೆ.

ದುರ್ಯೋಧನ ದೇವಾಲಯದಲ್ಲಿ ನಡೆಯುವ ಹಬ್ಬಗಳು

ಈ ದೇವಾಲಯವು ತನ್ನ ರೋಮಾಂಚಕ ಹಬ್ಬಗಳು ಮತ್ತು ವಿಶಿಷ್ಟ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ವಾರ್ಷಿಕ ಹಬ್ಬವೆಂದರೆ ಮಹಾಮು ಕೆಟ್ಟುಕಜ್ಜ. ಇದನ್ನು ಮಹಾ ಮಲಕ್ಕುಡ ಹಬ್ಬದ ಅಂಗವಾಗಿ ಆಚರಿಸಲಾಗುತ್ತದೆ. ಇಲ್ಲಿ ಎಡುಪ್ಪು ಕಾಲ ಎಂಬ ದೊಡ್ಡ ರಚನೆಗಳನ್ನು ಮಾಡಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಮಲೆನಾಡ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ. ಮಲನಾಡ ದುರ್ಯೋಧನ ದೇವಾಲಯ ಕೇವಲ ಪೂಜಾ ಸ್ಥಳವಲ್ಲದೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಸೌಹಾರ್ದತೆಯ ಕೇಂದ್ರವೂ ಆಗಿದೆ. ಈ ದೇವಸ್ಥಾನದಲ್ಲಿ ಯಾವುದೇ ಹಬ್ಬ ನಡೆದರೂ ಜಾತಿ ಧರ್ಮದ ಭೇದವಿಲ್ಲದೆ ಎಲ್ಲರೂ ಆಗಮಿಸುತ್ತಾರೆ. ದೇವಾಲಯದ ವಾಸ್ತುಶಿಲ್ಪವು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿದ್ದು ನೋಡಲು ಆಕರ್ಷಕವಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.