ಪಂಚರಂಗ ಕ್ಷೇತ್ರಗಳಲ್ಲಿ ಆದಿರಂಗ ಎಂದು ಪ್ರಸಿದ್ಧಿಯಾಗಿರುವ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದ ವೈಶಿಷ್ಟ್ಯವೇನು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪಂಚರಂಗ ಕ್ಷೇತ್ರಗಳಲ್ಲಿ ಆದಿರಂಗ ಎಂದು ಪ್ರಸಿದ್ಧಿಯಾಗಿರುವ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದ ವೈಶಿಷ್ಟ್ಯವೇನು?

ಪಂಚರಂಗ ಕ್ಷೇತ್ರಗಳಲ್ಲಿ ಆದಿರಂಗ ಎಂದು ಪ್ರಸಿದ್ಧಿಯಾಗಿರುವ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದ ವೈಶಿಷ್ಟ್ಯವೇನು?

ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಾಲಯವು ಆದಿರಂಗ ಎಂದೇ ಪ್ರಸಿದ್ಧಿಯಾಗಿದೆ. ಮಂಡ್ಯ ಜಿಲ್ಲೆಯಲ್ಲೇ ಇರುವ ಶಿವನಸಮುದ್ರದ ದೇವಸ್ಥಾನವನ್ನು ಮಧ್ಯರಂಗ ಎಂದೂ, ತಮಿಳುನಾಡಿನ ಶ್ರೀರಂಗಂನಲ್ಲಿರುವ ದೇವಸ್ಥಾನವನ್ನು ಅಂತ್ಯರಂಗ ಎಂದೂ ಕರೆಯಲಾಗುತ್ತದೆ. ಒಂದೇ ದಿನ ಈ ಮೂರೂ ದೇವಸ್ಥಾನಗಳಲ್ಲಿ ರಂಗನಾಥನ ದರ್ಶನ ಪಡೆದರೆ ಪುಣ್ಯ ಹೆಚ್ಚು ಎಂಬ ನಂಬಿಕೆ ಇದೆ.

ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಬಳಿಯಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯ
ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಬಳಿಯಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯ (PC: @bcleeve)

ಕಾವೇರಿಯು ಹಲವಾರು ಪುಣ್ಯಕ್ಷೇತ್ರಗಳ ಮೂಲಕ ಹರಿಯುತ್ತಾಳೆ. ಇವುಗಳಲ್ಲಿ ಕೆಲವೊಂದು ಕ್ಷೇತ್ರಗಳು ರಂಗನಾಥ ಸ್ವಾಮಿಗೆ ಮೀಸಲಾಗಿದೆ. ರಂಗನಾಥ ಸ್ವಾಮಿಯು ವಿಷ್ಣುವಿನ ರೂಪ. ಕಾವೇರಿ ನದಿ ದಡದಲ್ಲಿ ಐದು ರಂಗನಾಥ ಸ್ವಾಮಿ ಕ್ಷೇತ್ರಗಳಿವೆ ಇವುಗಳನ್ನು ಪಂಚರಂಗ ಕ್ಷೇತ್ರಗಳು ಅಥವಾ ಪಂಚರಂಗಗಳು ಎಂದು ಕರೆಯುತ್ತೇವೆ. ಶ್ರೀರಂಗಪಟ್ಟಣವನ್ನು ಆದಿರಂಗ ಎಂದು ಕರೆಯಲಾಗುತ್ತದೆ.

ರಂಗನಾಥಸ್ವಾಮಿಯನ್ನು ಪೂಜಿಸುತ್ತಿದ್ದ ಟಿಪ್ಪು ಸುಲ್ತಾನ್

ಕರ್ನಾಟಕ ಮಂಡ್ಯ ಜಿಲ್ಲೆ. ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯವನ್ನು ಗಂಗಾ ರಾಜವಂಶಕ್ಕೆ ಸೇರಿದ ತಿರುಮಲಯ್ಯ ನಿರ್ಮಿಸಿದ್ದಾರೆ. ಆನಂತರ ಹೊಯ್ಸಳರು ಮತ್ತು ವಿಜಯನಗರದ ಅರಸರು ಈ ದೇವಾಲಯವನ್ನು ಪುನರ್ರೂಪಿಸಿ ಹೊಸ ರೂಪ ನೀಡುತ್ತಾರೆ. ಇಲ್ಲಿನ ಪ್ರಧಾನ ದೇವತೆಯಾದ ರಂಗನಾಥಸ್ವಾಮಿಯನ್ನು ಮುಸ್ಲಿಂ ದೊರೆಯಾದ ಟಿಪ್ಪು ಸುಲ್ತಾನನು ಪೂಜಿಸಿ ಗೌರವಿಸುತ್ತಿದ್ದನು. ಯುದ್ದದ ಸಂದರ್ಭದಲ್ಲಿ ಟಿಪ್ಪು ಸುಲ್ತಾನನಿಗೆ ರಂಗನಾಥಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ಭಗವದ್ಗೀತೆ ಕೇಳಿಸಿತು ಎಂಬ ನಂಬಿಕೆಯಿದೆ.

ಶ್ರೀರಂಗಪಟ್ಟಣವನ್ನು ಆಳಿದ ನಾಯಕ ದೊರೆಯು ಶ್ರೀ ರಂಗನಾಥ ದೇವಾಲಯದ ಸಂಕೀರ್ಣವನ್ನು ನಿರ್ಮಿಸುತ್ತಾನೆ. ಅವನ ವಂಶಸ್ಥರು ಬಹುಕಾಲದವರೆಗೆ ಶ್ರೀರಂಗಪಟ್ಟಣವನ್ನು ಆಳುತ್ತಾರೆ. ಆನಂತರ ಶ್ರೀರಂಗಪಟ್ಟಣವು ವಿಜಯನಗರ ಸಾಮ್ರಾಜ್ಯದ ಆಡಳಿತಕ್ಕೆ ಸೇರುತ್ತದೆ. ಈ ದೇವಾಲಯವನ್ನು ಮೂರು ಹಂತಗಳಲ್ಲಿ ಕಟ್ಟಲಾಗಿದೆ. ದೇವಾಲಯದ ಒಳಭಾಗವು ಹೊಯ್ಸಳರ ಶೈಲಿಯನ್ನು ಹೋಲುತ್ತದೆ. ದೇವಾಲಯದ ಗೋಪುರವು ವಿಜಯನಗರದ ಅರಸರ ಕಾಲದ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. ರಂಗನಾಥನ ದೇವಾಲಯದ ಮೂಲ ವಿಗ್ರಹವು ಐದು ತಲೆಯ ಸರ್ಪದ ಆಸರೆಯನ್ನು ಪಡೆದಂತೆ ಕಾಣುತ್ತದೆ. ಈ ದೇವಾಲಯದ ಮುಂಭಾಗದ ಅಂಗಳದಲ್ಲಿ ಟಿಪ್ಪು ಸುಲ್ತಾನನ ತಂದೆ ಹೈದರ್ ಅಲಿಯು ಉಡುಗೊರೆಯಾಗಿ ರಥವನ್ನು ನೀಡಿರುವುದು ದಾಖಲೆಗಳಲ್ಲಿ ಉಲ್ಲೇಖವಾಗಿದೆ.‌

ಪೂರ್ವ ರಂಗನಾಥ ಕ್ಷೇತ್ರ

ಈ ದೇವಾಲಯವನ್ನು ಪೂರ್ವ ರಂಗನಾಥ ಕ್ಷೇತ್ರ ಎಂದು ಕರೆಯಲಾಗುತ್ತದೆ. ಆದರೆ ಕಾವೇರಿ ನದಿಯ ಪಶ್ಚಿಮ ಭಾಗದಲ್ಲಿರುವ ಈ ದೇವಸ್ಥಾನವನ್ನು ಪಶ್ಚಿಮ ರಂಗನಾಥ ಕ್ಷೇತ್ರ ಎಂದೂ ಕರೆಯಲಾಗುತ್ತದೆ. ಪುಷ್ಯ ಮಾಸದಲ್ಲಿ ಇಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳು ನಡೆಯುತ್ತವೆ. ವಿಷ್ಣುವಿನ ಕೈಯಲ್ಲಿನ ಶಂಖು ವಿಶೇಷವಾದ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ. ಈ ದೇವಾಲಯದಲ್ಲಿ, ರಂಗನಾಥನು ಆದಿಶೇಷನನ್ನೇ ಹಾಸಿಗೆಯನ್ನಾಗಿಸಿ ವಿಶ್ರಾಂತಿ ಪಡೆಯುವಂತೆ ಕಾಣುತ್ತದೆ. ರಂಗನಾಥನ ಪತ್ನಿ ರಂಗನಾಯಕಿಯ ವಿಗ್ರಹವೂ ಇಲ್ಲಿದೆ.

ಮಂಡ್ಯ ಜಿಲ್ಲೆಯಲ್ಲೇ ಇರುವ ಶಿವನಸಮುದ್ರದ ಬಳಿ ಇರುವ ದೇವಸ್ಥಾನವನ್ನು ಮಧ್ಯರಂಗ ಎಂದೂ, ತಮಿಳುನಾಡಿನ ಶ್ರೀರಂಗಂನಲ್ಲಿರುವ ದೇವಸ್ಥಾನವನ್ನು ಅಂತ್ಯರಂಗ ಎಂದೂ ಕರೆಯಲಾಗುತ್ತದೆ. ಈ ಮೂರೂ ರಂಗನಾಥಸ್ವಾಮಿ ದೇವಾಲಯಗಳು ಕಾವೇರಿ ನದಿಯಿಂದ ಸುತ್ತುವರೆದಿದೆ. ಒಂದೇ ದಿನ ಈ ಮೂರೂ ದೇವಸ್ಥಾನಗಳಿಗೆ ತೆರಳಿ ರಂಗನಾಥನ ದರ್ಶನ ಪಡೆದರೆ ಬಹಳ ಪುಣ್ಯ ಎಂಬ ನಂಬಿಕೆ ಇದೆ.

ಶ್ರೀರಂಗಪಟ್ಟಣ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗುವುದು ಹೇಗೆ?

ಮೈಸೂರು-ಬೆಂಗಳೂರು ಹೆಚ್ಚಾರಿಯಲ್ಲಿ ಶ್ರೀರಂಗಪಟ್ಟಣ ಇದೆ. ಮೈಸೂರು ಕಡೆಯಿಂದ ಹೋಗುವವರಿಗೆ ಇದು ಬಹಳ ಹತ್ತಿರ. ಅಲ್ಲಿಂದ 18 ಕಿಮೀ ದೂರದಲ್ಲಿದೆ. ಮೈಸೂರಿನಿಂದ ಹೋಗುವವರು ಚೆಕ್‌ಪೋಸ್ಟ್‌ ಬಳಿಯ ಕೋಟೆದಾರಿಯಿಂದ ದೇವಸ್ಥಾನದ ಬಳಿ ಹೋಗಬಹುದು. ಬೆಂಗಳೂರಿನಿಂದ ಶ್ರೀರಂಗಪಟ್ಟಣ 126 ಕಿಮೀ ಇದೆ. ಬಸ್‌ನಲ್ಲಿ ಬರುವವರು ಶ್ರೀರಂಗಪಟ್ಟಣ ಬಸ್‌ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಆಟೋದಲ್ಲಿ ಒಂದೂವರೆ ಕಿಮೀ ಕ್ರಮಿಸಿದರೆ ದೇವಸ್ಥಾನಕ್ಕೆ ತೆರಳಬಹುದು. ರೈಲಿನಲ್ಲಿ ಬರುವವರಿಗೆ ಇನ್ನೂ ಅನುಕೂಲ. ರಂಗನಾಥಸ್ವಾಮಿ ದೇವಸ್ಥಾನದ ಹಿಂಭಾಗವೇ ನಿಲ್ದಾಣವಿದೆ. ಸ್ವಂತ ವಾಹನದಲ್ಲಿ ಬರುವವರು ಶ್ರೀರಂಗಪಟ್ಟಣ ಬಸ್‌ ಸ್ಟಾಪ್‌ನಿಂದ ಕೋಟೆ ಬಾಗಿಲಿನ ಕಡೆಯಿಂದ ದೇವಸ್ಥಾನ ತಲುಪಬಹುದು.

ಶ್ರೀರಂಗಪಟ್ಟಣ ದೇವಸ್ಥಾನಕ್ಕೆ ಬರುವವರು ಸುತ್ತಮುತ್ತ ಗೋಸಾಯಿ ಘಾಟ್‌, ನಿಮಿಷಾಂಬ, ಕರಿಘಟ್ಟ, ಕುಂತಿಬೆಟ್ಟ, ಕೆಆರ್‌ಎಸ್‌ ಕೂಡಾ ನೋಡಬಹುದು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.