ಕೇರಳ ಶಬರಿಮಲೆ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ: ಈ ಬಾರಿ 82 ಕೋಟಿ ರೂಪಾಯಿಗೂ ಹೆಚ್ಚು ಆದಾಯ
Sabarimala Temple: ಕೇರಳದ ಶಬರಿಮಲೆಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ದೇವಸ್ಥಾನಕ್ಕೆ ಆದಾಯ ಕೂಡಾ ಹೆಚ್ಚಾಗಿದೆ. ಅರವಣ ಪ್ರಸಾದ ಮಾರಾಟದಿಂದ 124 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ಬಾರಿ 101 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಈ ಬಾರಿ 82 ಕೋಟಿ ರೂಪಾಯಿಗೂ ಹೆಚ್ಚುಆದಾಯ ಬಂದಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಭಾರತದ ಖ್ಯಾತ ದೇವಸ್ಥಾನಗಳಲ್ಲಿ ಕೇರಳದ ಶಬರಿಮಲೆ ದೇವಸ್ಥಾನ ಕೂಡಾ ಒಂದು. ಪ್ರತಿವರ್ಷ ಇಲ್ಲಿಗೆ ಲಕ್ಷಾಂತರ ಭಕ್ತರು ಬಂದು ಅಯ್ಯಪ್ಪನ ದರ್ಶನ ಮಾಡಿ ಹೋಗುತ್ತಾರೆ. ಮಾಲೆ ಧರಿಸಿ ಅಯ್ಯಪ್ಪನ ಭಜನೆ ಮಾಡುತ್ತಾರೆ. ಅದರಲ್ಲೂ ಜನವರಿಯ ಮಕರ ಸಂಕ್ರಾಂತಿ ಸಮಯದಲ್ಲಿ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಇತರ ದಿನಗಳಿಗೆ ಹೋಲಿಸಿದರೆ ದುಪ್ಪಟ್ಟು ಇರುತ್ತದೆ. ಇದರಿಂದ ಶಬರಿಮಲೆ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ಕಳೆದ ವರ್ಷಕ್ಕಿಂತ ಹೆಚ್ಚಿದ ಭಕ್ತರ ಸಂಖ್ಯೆ
ಕಳೆದ ವರ್ಷ ಇದೇ ಅವಧಿಯಲ್ಲಿ 28,42,447 ಭಕ್ತರು ಶಬರಿಮಲೆಗೆ ಬಂದು ದರ್ಶನ ಪಡೆದಿದ್ದರು. ಈ ಬಾರಿ ಕಳೆದ ವರ್ಷಕ್ಕಿಂತ 4,07,309 ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ. ಲೈವ್ ಬುಕಿಂಗ್ ವ್ಯವಸ್ಥೆಯ ಮೂಲಕ 5,66,571 ಭಕ್ತರು ಆಗಮಿಸಿದ್ದಾರೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಪಿಎಸ್ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಪುಲ್ಮೇಡು ಮೂಲಕ ಈ ಬಾರಿ 74,774 ಭಕ್ತರು ಆಗಮಿಸಿದ್ದಾರೆ. ಕಳೆದ ವರ್ಷ 69,250 ಭಕ್ತರು ಬಂದಿದ್ದರು. 41 ದಿನಗಳ ಉತ್ಸವದ ಅವಧಿಯಲ್ಲಿ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ. ಕಳೆದ ವರ್ಷ 214ಕೋಟಿ ಆದಾಯ ಬಂದಿದ್ದು ಈ ಬಾರಿಯ ಉತ್ಸವದ ಒಟ್ಟು ಆದಾಯವು ರೂ 297 ಕೋಟಿ ಆಗಿದೆ. ಅರವಣ ಪ್ರಸಾದ ಮಾರಾಟದಿಂದ 124 ಕೋಟಿ ರೂ. ದೊರೆತಿದೆ ಕಳೆ ಬಾರಿ 101 ಕೋಟಿ ರೂ. ದೊರೆತಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಾಣಿಕೆ ಕೂಡಾ 14 ಕೋಟಿ ರೂ ಹೆಚ್ಚಾಗಿದೆ. ಕಳೆದ ವರ್ಷ 66 ಕೋಟಿ ರೂ. ಗಳಿಸಿದ್ದರೆ ಈ ಬಾರಿ 80 ಕೋಟಿ ರೂ ಹೆಚ್ಚಾಗಿದೆ. ಒಟ್ಟಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 82 ಕೋಟಿ ರೂ ಹೆಚ್ಚು ಆದಾಯ ದೊರೆತಿದೆ. ಶಬರಿಮಲೆ ಯಾತ್ರೆಯ ಮೊದಲ ಹಂತ ನವೆಂಬರ್ 15 ರಿಂದ ಡಿಸೆಂಬರ್ 26 ರ ಅವಧಿಯಲ್ಲಿ 297 ಕೋಟಿ ರೂ ಸಂಗ್ರಹವಾಗಿದೆ. ಎರಡನೇ ಹಂತ ಡಿಸೆಂಬರ್ 30 ರಂದು ಪ್ರಾರಂಭವಾಗಿದೆ. ಜನವರಿ 14, ಸಂಕ್ರಾತಿಯಂದು ಮಕರವಿಳಕ್ಕು ಆಚರಿಸಲಾಗುತ್ತದೆ. ಸಂಕ್ರಾಂತಿ ಮುಗಿದು ಕೆಲವು ದಿನಗಳ ನಂತರ ಎರಡನೇ ಹಂತದ ಯಾತ್ರೆ ಮುಕ್ತಾಯವಾಗುತ್ತದೆ.
ಭಕ್ತರಿಗಾಗಿ ಬಸ್ ವ್ಯವಸ್ಥೆ ಮಾಡಿದ ಆರ್‌ಟಿಸಿ
ಶಬರಿಮಲೆ ಅಯ್ಯಪ್ಪ ಕ್ಷೇತ್ರಕ್ಕೆ ಬರುವ ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಕೇರಳ ಆರ್‌ಟಿಸಿ ಹೆಚ್ಚಿನ ಸೇವೆಗೆ ವ್ಯವಸ್ಥೆ ಮಾಡಿದೆ. ಕೆಎಸ್‌ಆರ್‌ಟಿಸಿ ಹೊಸದಾಗಿ ಕೊಯಮತ್ತೂರು ಮತ್ತು ಕುಮಳಿಗೆ ಎರಡು, ತೆಂಕಶಿ, ತಿರುನೆಲ್ವೇಲಿ ಮತ್ತು ಥೇಣಿಗೆ ತಲಾ ಒಂದು ಬಸ್ ಸೇವೆಯನ್ನು ಆರಂಭಿಸಿದೆ. ಪಂಬಾ ಕೇರಳ ಆರ್‌ಟಿಸಿ ಬಸ್ ನಿಲ್ದಾಣದಿಂದ ದೂರದ ಸೇವೆಗಳು ಲಭ್ಯವಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಕ್ತರು ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಖರೀದಿಸಬಹುದು.
ಶಬರಿಮಲೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದರ್ಶನ ಪಡೆಯಲು ತಿರುವಾಂಕೂರು ದೇವಸ್ವಂ ಮಂಡಳಿ ವ್ಯವಸ್ಥೆ ಮಾಡುತ್ತಿದೆ. ಎರುಮೇಲಿಯಿಂದ ಅರಣ್ಯ ಮಾರ್ಗವಾಗಿ ದೇವಸ್ಥಾನಕ್ಕೆ ತಲುಪುವ ಭಕ್ತರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಅರಣ್ಯ ಮಾರ್ಗವಾಗಿ ಬರುವ ಯಾತ್ರಾರ್ಥಿಗಳು ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ದೇಗುಲಕ್ಕೆ ಆಗಮಿಸಿ ದೇವರ ದರ್ಶನ ಪಡೆಯಬಹುದಾಗಿದೆ. ಇದಕ್ಕಾಗಿ ಎರುಮೇಲಿ ಮತ್ತು ಪುಲುಮೇಡು ಅಯ್ಯಪ್ಪ ಭಕ್ತರಿಗೆ ವಿಶೇಷ ಪಾಸ್ ವಿತರಿಸಲಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳ ನೆರವಿನಿಂದ ಭಕ್ತರಿಗೆ ವಿಶೇಷ ಟ್ಯಾಗ್ ನೀಡುವ ನಿರೀಕ್ಷೆಯಲ್ಲಿ ದೇವಸ್ಥಾನ ಮಂಡಳಿ ಇದೆ ಎಂದು ಪಿಎಸ್ ಪ್ರಶಾಂತ್ ಹೇಳಿದ್ದಾರೆ.