ಆಂಧ್ರ ಪ್ರದೇಶ ಅಹೋಬಿಲಂ ಕ್ಷೇತ್ರದಲ್ಲಿ 9 ವಿವಿಧ ರೂಪದಲ್ಲಿ ನೆಲೆಸಿರುವ ನರಸಿಂಹ ಸ್ವಾಮಿ; ಇಲ್ಲಿರುವ ದೇವಾಲಯಗಳಿವು-indian temple narasimha swamy settled in 9 various avatar in andhra pradesh ahobilam temple sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆಂಧ್ರ ಪ್ರದೇಶ ಅಹೋಬಿಲಂ ಕ್ಷೇತ್ರದಲ್ಲಿ 9 ವಿವಿಧ ರೂಪದಲ್ಲಿ ನೆಲೆಸಿರುವ ನರಸಿಂಹ ಸ್ವಾಮಿ; ಇಲ್ಲಿರುವ ದೇವಾಲಯಗಳಿವು

ಆಂಧ್ರ ಪ್ರದೇಶ ಅಹೋಬಿಲಂ ಕ್ಷೇತ್ರದಲ್ಲಿ 9 ವಿವಿಧ ರೂಪದಲ್ಲಿ ನೆಲೆಸಿರುವ ನರಸಿಂಹ ಸ್ವಾಮಿ; ಇಲ್ಲಿರುವ ದೇವಾಲಯಗಳಿವು

Indian Temple: ಆಂಧ್ರ ಪ್ರದೇಶ ಅಹೋಬಿಲಂ ಕ್ಷೇತ್ರದಲ್ಲಿ ನರಸಿಂಹ ಸ್ವಾಮಿ 9 ವಿವಿಧ ರೂಪದಲ್ಲಿ ನೆಲೆಸಿದ್ದಾನೆ. ಇಲ್ಲಿ ಭಾರ್ಗವ ನರಸಿಂಹಸ್ವಾಮಿ ದೇವಾಲಯ, ಯೋಗಾ ನರಸಿಂಹಸ್ವಾಮಿ ದೇವಾಲಯ, ಚಕ್ರವತ ನರಸಿಂಹ ದೇವಾಲಯ ಸೇರಿದಂತೆ ಒಟ್ಟು ಒಂಭತ್ತು ದೇವಸ್ಥಾನಗಳಿವೆ.

ಆಂಧ್ರದ ಅಹೋಬಿಲಂ ಕ್ಷೇತ್ರದಲ್ಲಿ 9 ವಿವಿಧ ರೂಪದಲ್ಲಿ ನೆಲೆಸಿರುವ ನರಸಿಂಹ ಸ್ವಾಮಿ
ಆಂಧ್ರದ ಅಹೋಬಿಲಂ ಕ್ಷೇತ್ರದಲ್ಲಿ 9 ವಿವಿಧ ರೂಪದಲ್ಲಿ ನೆಲೆಸಿರುವ ನರಸಿಂಹ ಸ್ವಾಮಿ (PC: Mindhack.diva @MindhackD , ಉಮೇಶ್ ಹಲ್ಲರೆ @Hs_Umesh)

ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿರುವ ಅಹೋಬಿಲ ದೇವಸ್ಥಾನ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ನರಸಿಂಹಸ್ವಾಮಿಯು 9 ವಿವಿಧ ರೂಪಗಳಲ್ಲಿ ನೆಲೆಸಿದ್ದಾನೆ. ಪ್ರತಿದಿನವೂ ನೂರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಮಳೆ, ಚಳಿ, ಬಿಸಿಲು ಎನ್ನದೆ ಬೆಟ್ಟ ಹತ್ತಿ ದೇವರ ದರ್ಶನ ಪಡೆಯುತ್ತಾರೆ. ಈ ಕ್ಷೇತ್ರದಲ್ಲಿರುವ 9 ದೇವಸ್ಥಾನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಭಾರ್ಗವ ನರಸಿಂಹಸ್ವಾಮಿ ದೇವಾಲಯ

ಅಹೋಬಿಲದ ಆರಂಭದ ಭಾಗದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿ ಇರುವ ದೇವಾಲಯವೇ ಭಾರ್ಗವ ನರಸಿಂಹಸ್ವಾಮಿ ದೇವಾಲಯ. ಇದು ಬೆಟ್ಟದ ಮೇಲೆ ಇದೆ. ಇದರ ಬಳಿ ಪವಿತ್ರ ಕೊಳವಿದೆ. ಅದನ್ನು ಭಾರ್ಗವ ತೀರ್ಥ ಎಂಬ ಹೆಸರಿನಿಂದ ಕರೆಯುತ್ತಾರೆ. ಈಸ್ಥಳದಲ್ಲಿ ಶ್ರೀ ಭಾರ್ಗವ ರಾಮನು ತಪಸ್ಸು ಮಾಡಿ ನರಸಿಂಹ ಸ್ವಾಮಿಯನ್ನು ಅರ್ಚಿಸಿದ ಕಾರಣ ಇಲ್ಲಿರುವ ದೇವರಿಗೆ ಭಾರ್ಗವ ನರಸಿಂಹ ಸ್ವಾಮಿ ಎಂಬ ಹೆಸರು ಬಂದಿದೆ. ಭಾರ್ಗವರಾಮ ಎಂಬುದು ಪರಶುರಾಮನ ಮತ್ತೊಂದು ಹೆಸರು. ಇಲ್ಲಿರುವ ಕೊಳದಲ್ಲಿ ಮುಂಚಾನೆ ಸ್ನಾನ ಮಾಡಿ ನಂತರ ಶ್ರೀನರಸಿಂಹಸ್ವಾಮಿಗೆ ಪೂಜೆ ಮಾಡಿದಲ್ಲಿ ಜೀವನದಲ್ಲಿ ಎದುರಾಗುವ ತೊಂದರೆಗಳು ಮರೆಯಾಗುತ್ತವೆ ಎಂಬ ನಂಬಿಕೆ ಇದೆ.

ಯೋಗಾ ನರಸಿಂಹಸ್ವಾಮಿ ದೇವಾಲಯ

ಈ ದೇವಾಲಯವು ಅಹೋಬಿಲಂನ ಈಶಾನ್ಯ ಭಾಗದಲ್ಲಿದೆ. ಹಿರಣ್ಯಕಶಿಪುನನ್ನು ಸಂಹಾರ ಮಾಡಿದ ನರಸಿಂಹಸ್ವಾಮಿಯು ಈ ದೇವಾಲಯದಲ್ಲಿ ಯೋಗ ಭಂಗಿಯಲ್ಲಿ ವಿಶ್ರಾಂತಿ ಪಡೆಯುತ್ತಾನೆ. ಅಲ್ಲದೆ ಭಕ್ತಪ್ರಹ್ಲಾದನಿಗೆ ಯೋಗ ಸಂಬಂಧಿತ ಮಂತ್ರಗಳನ್ನು ಬೋಧಿಸುತ್ತಾನೆ. ಆದ್ದರಿಂದ ಇಲ್ಲಿರುವ ದೇವರನ್ನು ಯೋಗಾ ನರಸಿಂಹಸ್ವಾಮಿ ಎಂದು ಕರೆಯಲಾಗಿದೆ. ಸ್ವತ: ಬ್ರಹ್ಮದೇವನೆ ಈ ಸ್ಥಳದಲ್ಲಿ ನರಸಿಂಹಸ್ವಾಮಿಯ ಪೂಜೆ ಮಾಡಿದನೆಂದು ತಿಳಿದುಬರುತ್ತದೆ. ಜನ್ಮಕುಂಡಲಿಯಲ್ಲಿ ಶನಿಗ್ರಹದ ದೋಷ ಇದ್ದಲ್ಲಿ ಈ ದೇವಾಲಯದಲ್ಲಿ ಪೂಜೆ ಮಾಡಿಸುವುದು ಶ್ರೇಯಸ್ಕರ. ಇಲ್ಲಿರುವ ವಿಗ್ರಹ ಪದ್ಮಾಸನ ಭಂಗಿಯಲ್ಲಿ ಕುಳಿತಿದೆ.

ಚತ್ರವತ ನರಸಿಂಹಸ್ವಾಮಿ ದೇವಾಲಯ

ಈ ದೇವಾಲಯವು ಅರಳಿಮರದ ಕೆಳಗೆ ಸ್ಥಿತವಾಗಿದೆ. ಈ ದೇವಾಲಯವು ಮುಳ್ಳಿನ ಪೊದೆಗಳಿಂದ ಆವೃತವಾಗಿದೆ ಆದ್ದರಿಂದ ಈ ದೇವಾಲಕ್ಕೆ ಈ ಹೆಸರು ಬಂದಿದೆ. ಇಲ್ಲಿನ ವಿಗ್ರಹವು ಅತಿ ಮುದ್ದಾಗಿ ಕಾಣುತ್ತದೆ. ಈ ಸ್ಥಳದಲ್ಲಿ ನರಸಿಂಹಸ್ವಾಮಿ ಇಬ್ಬರು ಗಂಧರ್ವರ ಜೊತೆಯಲ್ಲಿ ಸಂತೋಷದಿಂದ ಕಾಲ ಕಳೆದನೆಂದು ಹೇಳಲಾಗುತ್ತದೆ.

ಅಹೋಬಿಲ ನರಸಿಂಹಸ್ವಾಮಿ ದೇವಾಲಯ

ಇಲ್ಲಿನ ಅತಿಮುಖ್ಯವಾದ ದೇವಾಲಯವೇ ನರಸಿಂಹಸ್ವಾಮಿ ದೇವಾಲಯ. ಇದು ಇಲ್ಲಿರುವ ಅತಿ ಪುರಾತನ ಕಾಲದ ದೇವಾಲಯವಾಗಿದೆ. ಉಗ್ರ ಸ್ವರೂಪದ ನರಸಿಂಹಸ್ವಾಮಿ ವಿಗ್ರಹ ಇಲ್ಲಿದೆ. ಈ ವಿಗ್ರಹವು ಉಧ್ಭವವಾಗಿರುವ ದೇವರೆಂದು ತಿಳಿದುಬರುತ್ತದೆ. ಭಕ್ತಪ್ರಹ್ಲಾದನ ಭಕ್ತಿಗೆ ಮೆಚ್ಚಿದ ಭಗವಾನ್ ವಿಷ್ಣುವು ಕಂಬದ ಮೂಲಕ ನರಸಿಂಹಸ್ವಾಮಿ ರೂಪದಲ್ಲಿ ಪ್ರತ್ಯಕ್ಷನಾಗಿ ಹಿರಣ್ಯಕಶಿಪುನನ್ನು ವಧಿಸುತ್ತಾನೆ. ಆನಂತರ ಪ್ರಹ್ಲಾದನನಿಗೆ ವರವನ್ನು ದಯಪಾಲಿಸುತ್ತಾನೆ. ಇಲ್ಲಿ ಆದಿಲಕ್ಷ್ಮಿ ಮತ್ತು ಚೆಂಚು ಲಕ್ಷ್ಮಿಯರು ನೆಲೆಸಿರುತ್ತಾರೆ.

ವರಾಹ ನರಸಿಂಹಸ್ವಾಮಿ

ಇಲ್ಲಿರುವ ನರಸಿಂಹಸ್ವಾಮಿಯು ವರಾಹದ ರೂಪದಲ್ಲಿ ನೆಲೆಸಿದ್ದಾನೆ. ಆದ್ದರಿಂದ ಇದನ್ನು ವರಾಹ ನರಸಿಂಹಸ್ವಾಮಿ ಎಂದು ಕರೆಯಲಾಗುತ್ತದೆ. ಈ ಸ್ಥಳವನ್ನು ಸಿದ್ಧಕ್ಷೇತ್ರ ಎಂದೂ ಕರೆಯಲಾಗುತ್ತದೆ. ತನ್ನ ಕೊಂಬಿನ ಮೇಲೆ ಭೂದೇವಿಯನ್ನು ಇರಿಸಿಕೊಂಡ ಭಗವಾನ್ ವಿಷ್ಣುವಿನ ಅವತಾರ ಇದಾಗಿದೆ. ಹಿರಣ್ಯಕಶಿಪುನನ್ನು ವಧೆ ಮಾಡಿದ ನಂತರ ನರಸಿಂಹಸ್ವಾಮಿಯ ಆಕ್ರೋಶವನ್ನು ನೋಡಿದ ಬ್ರಹ್ಮದೇವ ನರಸಿಂಹಸ್ವಾಮಿ ಬಳಿ ಬರಲು ಹಿಂಜರಿಯುತ್ತಾನೆ. ರಾಕ್ಷಸರು ಅಪಹರಿಸಿದ್ದ ನಾಲ್ಕೂ ವೇದಗಳನ್ನು ಮರಳಿ ಬ್ರಹ್ಮನಿಗಿಟ್ಟ ಸ್ಥಳ ಇದಾಗಿದೆ. ಇಲ್ಲಿ ಸೇವೆ ಸಲ್ಲಿಸಿದಲ್ಲಿ ಉತ್ತಮ ವಿದ್ಯೆ ಲಭ್ಯವಾಗುತ್ತದೆ ಎಂದು ಹೇಳಲಾಗುತ್ತದೆ.

ಕರಂಜ ನರಸಿಂಹಸ್ವಾಮಿ ದೇವಾಲಯ

ಈ ದೇವಾಲಯವು ಹೊಂಗೆ ಮರದ ಕೆಳಗೆ ಇದೆ. ಕರಂಜ ಎಂಬುದು ಸಂಸ್ಕೃತ ಪದವಾಗಿದೆ. ಆದ್ದರಿಂದ ಇಲ್ಲಿರುವ ದೇವರನ್ನು ಕರಂಜ ನರಸಿಂಹಸ್ವಾಮಿ ಎಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಶ್ರೀ ಹನುಮಂತನು ಶ್ರೀರಾಮನನ್ನು ಕುರಿತು ತಪಸ್ಸು ಮಾಡುತ್ತಾನೆ. ಆಗ ಶ್ರೀನರಸಿಂಹಸ್ವಾಮಿಯು ಪ್ರತ್ಯಕ್ಷನಾಗುತ್ತಾನೆ. ಆದರೆ ಶ್ರೀಆಂಜನೇಯನು ನರಸಿಂಹಸ್ವಾಮಿಯನ್ನು ರಾಮನ ಅವತಾರ ಎಂದು ಒಪ್ಪುವುದಿಲ್ಲ. ಆದ್ದರಿಂದ ಶ್ರೀನರಸಿಂಹಸ್ವಾಮಿಯು ಶ್ರೀರಾಮನರೂಪವನ್ನು ತಳಿಯುತ್ತಾನೆ. ಇಲ್ಲಿ ಪೂಜೆ ಸಲ್ಲಿಸಿದಲ್ಲಿ ಶ್ರೀರಾಮ ಮತ್ತು ಶ್ರೀಹನುಮಂತರ ಅನುಗ್ರಹವೂ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಮಲೋಲ ನರಸಿಂಹಸ್ವಾಮಿ ದೇವಾಲಯ

ಶ್ರೀ ನರಸಿಂಹಸ್ವಾಮಿಯು ಭಕ್ತರಿಗೆ ತನ್ನ ಸೌಮ್ಯರೂಪವನ್ನು ತೋರಿದ ಸ್ಥಳ ಇದಾಗಿದೆ. ಮ ಎಂದರೆ ಶ್ರೀಲಕ್ಷ್ಮೀಮಾತೆ. ಲೋಲ ಎಂದರೆ ಸಂತೋಷವಾಗಿರುವುದು ಎಂಬ ಅರ್ಥಬರುತ್ತದೆ. ಇಲ್ಲಿನ ದೇವರ ವಿಗ್ರಹವು ಶಾಂತಸ್ವರೂಪಿಯಾದ ನರಸಿಂಹಸ್ವಾಮಿ ಮತ್ತು ಶ್ರೀಲಕ್ಷ್ಮಿಯ ರೂಪದಲ್ಲಿದೆ. ಇಲ್ಲಿ ಶಡ್ಗೋಪ ನಾರಾಯಣಯತೀಂದ್ರ ಮಹಾದೇಶಿಕರಿಗೆ ನರಸಿಂಹಸ್ವಾಮಿಯು ಪ್ರತ್ಯಕ್ಷನಾದನೆಂದು ತಿಳಿದುಬರುತ್ತದೆ. ಈ ದೇವರಿಗೆ ಇಂದಿಗೂ ಇವರ ವಂಶಸ್ಥರೆ ಪೂಜೆ ಮಾಡುತ್ತಾರೆ.

ಜ್ವಾಲಾ ನರಸಿಂಹಸ್ವಾಮಿ ದೇವಾಲಯ

ಹಿರಣ್ಯಕಶಿಪುವನ್ನು ವಧಿಸಿದ ಸ್ಥಳ ಇದಾಗಿದೆ. ಅತಿ ಉಗ್ರ ರೂಪದಲ್ಲಿ ನರಸಿಂಹಸ್ವಾಮಿಯು ಪ್ರತ್ಯಕ್ಷನಾದ ಸ್ಥಳವೇ ಇದು. ಭಗವಾನ್ ವಿಷ್ಣುವು ಇಲ್ಲಿ ತನ್ನ ನಾಲ್ಕನೇ ಅವತಾರವನ್ನು ತಾಳುತ್ತಾನೆ. ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರಿಂದ ಶತ್ರುಗಳ ಉಪಟಳ ನಿಲ್ಲುತ್ತದೆ. ಜೀವನದಲ್ಲಿನ ಕಷ್ಟನಷ್ಟಗಳು ಮರೆಯಾಗುತ್ತವೆ. ಮುಖ್ಯವಾಗಿ ಋಣಾತ್ಮಕ ಶಕ್ತಿಯು ದೂರವಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲಸುತ್ತದೆ.

ಪಾವನ ನರಸಿಂಹಸ್ವಾಮಿ ದೇವಾಲಯ

ಪಾವನ ನದಿಯ ದಡದ ಮೇಲೆ ಈ ದೇವಾಲಯವಿದೆ. ಆದ್ದರಿಂದ ಇಲ್ಲಿ ನೆಲೆಸಿರುವ ದೇವರನ್ನು ಪಾವನ ನರಸಿಂಹಸ್ವಾಮಿ ಎಂದು ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ ಕುಳಿತು ಆದಿಶಂಕರರು ಶ್ರೀನರಸಿಂಹಕರಾವಲಂಬನ ಸ್ತೋತ್ರವನ್ನು ರಚಿಸುತ್ತಾರೆ. ಈ ದೇವಾಲಯದಲ್ಲಿ ಪೂಜೆ ಮಾಡಿದಲ್ಲಿ ಬ್ರಹ್ಮಹತ್ಯಾದೋಷ ನಿವಾರಣೆ ಆಗುತ್ತದೆ. ಜನ್ಮಕುಂಡಲಿಯಲ್ಲಿ ಯತಿ ಶಾಪವಿದ್ದಲ್ಲಿ ಪರಿಹಾರಗೊಳ್ಳಲಿದೆ. ಇದು ಆದಿಶೇಷನ ವಾಸಸ್ಥಾನವಾಗಿದೆ. ಕುಜ ದೋಷವಿದ್ದವರು ಇಲ್ಲಿ ಪೂಜೆ ಮಾಡಿಸಿದಲ್ಲಿ ಕುಜದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.