ಸದ್ದು ಮಾಡದ ಸಮುದ್ರ, ಗಾಳಿಗೆ ವಿರುದ್ಧವಾಗಿ ಹಾರಾಡುವ ಧ್ವಜ; ಅನೇಕ ನಿಗೂಢತೆಗಳಿಗೆ ಹೆಸರಾದ ಒಡಿಶಾ ಪುರಿ ಜಗನ್ನಾಥ ಮಂದಿರ
ಭಾರತದಲ್ಲಿ ಅನೇಕ ದೇವಾಲಯಗಳು ಪವಾಡಗಳಿಗೆ ಹೆಸರಾಗಿದೆ. ಹಾಗೇ ನಿಗೂಢತೆಯಿಂದಲೂ ಕೂಡಿದೆ. ಒಡಿಶಾದ ಪುರಿ ಜಗನ್ನಾಥ ಮಂದಿರ ಕೂಡಾ ಅನೇಕ ನಿಗೂಢತೆಗೆ ಹೆಸರಾಗಿದೆ. ಸದ್ದು ಮಾಡದ ಸಮುದ್ರ, ನೆರಳೇ ಬೀಳದೆ ದೇವಸ್ತಾನ…ಹೀಗೆ ಕೆಲವೊಂದು ವಿಚಾರಗಳೂ ವಿಜ್ಞಾನಿಗಳಿಗೆ ಸವಾಲಾಗಿದೆ.
ಒಡಿಶಾದಲ್ಲಿ ಸದ್ಯಕ್ಕೆ ಪುರಿ ಜಗನ್ನಾಥ ರಥ ಯಾತ್ರೆ ನಡೆಯುತ್ತಿದೆ. ಇದು ಭಾರತದಲ್ಲೇ ಅತಿ ಪುರಾತನ ಹಾಗೂ ಹೆಸರಾಂತ ರಥಯಾತ್ರೆಯಾಗಿದೆ. ಪ್ರತಿ ವರ್ಷವೂ ಜಗನ್ನಾಥ ಯಾತ್ರೆ ನಡೆಯುತ್ತದೆ. ರಥ ಎಳೆಯಲು ದೂರದ ರಾಜ್ಯಗಳಿಂದ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಜಗನ್ನಾಥ ದೇವಾಲಯಕ್ಕೆ ಆಗಮಿಸುತ್ತಾರೆ. ಈ ಬಾರಿ ಜೂನ್ 29ರಂದು ಆರಂಭವಾದ ರಥಯಾತ್ರೆ ಸಂಭ್ರಮ ಜುಲೈ 7 ರಂದು ಮುಕ್ತಾಯಗೊಂಡಿದೆ.
ಪುರಿ ಜಗನ್ನಾಥ ಮಂದಿರವು ರಥಯಾತ್ರೆಗೆ ಮಾತ್ರವಲ್ಲ, ಹಲವು ನಿಗೂಢತೆಗಳಿಗೆ ಸಾಕ್ಷಿಯಾಗಿದೆ. ಇಲ್ಲಿನ ಕೆಲವೊಂದು ರಹಸ್ಯ ವಿಜ್ಞಾನಿಗಳಿಗೆ ಇಂದಿಗೂ ಸವಾಲಾಗಿದೆ.
ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಹಾರಾಡುವ ಧ್ವಜ
ಜಗನ್ನಾಥ ಮಂದಿರದ ಗೋಪುರದ ಮೇಲಿನ ಧ್ವಜವು ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರಾಡುತ್ತದೆ. ಪುರಾತನ ಕಾಲದಿಂದಲೂ ಇರುವ ಈ ಧ್ವಜ ವೈಜ್ಞಾನಿಕತೆಗೂ ಸವಾಲು ಒಡ್ಡುವಂತಿದೆ. ಇದು ವಿಜ್ಞಾನಕ್ಕೂ ಮಿಗಿಲಾಗಿ ದೈವಿಕ ಶಕ್ತಿ ಇದೆ ಎಂಬುದನ್ನು ಸಾಬೀತು ಮಾಡಿದೆ.
ಸುದರ್ಶನ ಚಕ್ರ
ದೇವಸ್ಥಾನದ ಮೇಲ್ಭಾಗದಲ್ಲಿರುವ ಸುದರ್ಶನ ಚಕ್ರವಿದ್ದು ಇದು 20 ಅಡಿ ಎತ್ತರ ಹಾಗೂ ಒಂದು ಟನ್ ತೂಕವಿದೆ. ಇದನ್ನು ಸುತ್ತಮುತ್ತಲಿನ ಯಾವುದೇ ಸ್ಥಳದಲ್ಲಿ ನಿಂತೂ ನೋಡಿದರೂ ನೋಡಬಹುದು. ಅದಕ್ಕಿಂತ ಮುಖ್ಯವಾದ ವಿಚಾರವೆಂದರೆ ನೀವು ಯಾವ ದಿಕ್ಕಿಗೆ ಹೋಗಿ ನೋಡಿದರೂ ಆ ಚಕ್ರದ ಮುಖಭಾಗ ನಿಮ್ಮ ಕಡೆಗೇ ಇರುವಂತೆ ಕಾಣುತ್ತದೆ. ಈ ಸುದರ್ಶನ ಚಕ್ರದ ಮೇಲೆ ಯಾವುದೇ ಪಕ್ಷಿ ಆಗಲೀ, ಕೀಟ, ವಿಮಾನವಾಗಲೀ ಹಾರಾಡುವುದಿಲ್ಲ. ಇದು ಕೂಡಾ ದೈವಶಕ್ತಿ ಎನ್ನುವುದು ಭಕ್ತರ ನಂಬಿಕೆ.
ಸದ್ದು ಮಾಡದ ಸಮುದ್ರ
ಸಾಮಾನ್ಯವಾಗಿ ಸಮುದ್ರದ ಸುತ್ತಮುತ್ತಲಿನ ಸ್ಥಳಗಳಿಗೆ ಸದ್ದು ಜೋರಾಗಿ ಕೇಳುತ್ತದೆ. ಆದರೆ ಜಗನ್ನಾಥ ಮಂದಿರದ ಬಳಿ ಇರುವ ಸಮುದ್ರ ಸದ್ದು ಮಾಡದಂತೆ ಹನುಮಂತನು ತಡೆದಿದ್ದಾನೆ ಎಂಬುದು ಜನರ ನಂಬಿಕೆ. ದೇವಾಲಯದ ಪಕ್ಕದಲ್ಲೇ ಸಮುದ್ರ ಇದ್ದರೂ ಅದರ ಸದ್ದು ದೇವಾಲಯಕ್ಕೆ ಕೇಳುವುದಿಲ್ಲ. ಜಗನ್ನಾಥನು ಯಾವುದೇ ಸದ್ದು ಗದ್ದಲ ಇಲ್ಲದೆ ನಿದ್ರಿಸಲಿ ಎಂಬ ಕಾರಣಕ್ಕೆ ಹನುಮನು ಈ ಸಮುದ್ರವನ್ನು ಕಾಯುತ್ತಿದ್ದಾನೆ ಎಂದು ಪುರಾಣದಲ್ಲಿ ಉಲ್ಲೇಖವಿದೆ.
ಪ್ರವೇಶ ದ್ವಾರದ ಶಬ್ದ ತರಂಗಗಳು
ಪುರಿ ಜಗನ್ನಾಥ ಮಂದಿರದ ಒಳ ಪ್ರವೇಶಿಸಲು 4 ಪ್ರಮುಖ ದ್ವಾರಗಳಿವೆ. ಆದರೆ ಸಿಂಗದ್ವಾರ ಎಂದು ಕರೆಯಲ್ಪಡುವ ಮುಖ್ಯ ಪ್ರವೇಶ ದ್ವಾರದ ಬಳಿ ಹೋದಾಗ ಶಬ್ದ ತರಂಗಗಳು ಸಂಗೀತದಂತೆ ಕೇಳುತ್ತದೆ. ಆದರೆ ಅದೇ ದ್ವಾರದಿಂದ ವಾಪಸಾಗುವಾಗ ಈ ಶಬ್ದ ಕೇಳುವುದಿಲ್ಲ.
ಪ್ರತಿದಿನ ಬಾವುಟ ಬದಲಿಸುವ ಅರ್ಚಕರು
ಈ ದೇವಸ್ಥಾನದ ಗೋಪುರವು ಸುಮಾರು 45 ಮಹಡಿಗಳನ್ನು ಹೊಂದಿದೆ. ಪ್ರತಿದಿನ ಅರ್ಚಕರು ಇಲ್ಲಿನ ಮಹಡಿಗಳನ್ನು ಹತ್ತಿ ಗೋಪುರದ ಬಾವುಟವನ್ನು ಬದಲಿಸುತ್ತಾರೆ. ಈ ಆಚರಣೆ ಇಂದು ನಿನ್ನೆಯದಲ್ಲಿ ಸುಮಾರು 1800 ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಒಂದು ವೇಳೆ ಒಂದು ದಿನವಾದರೂ ಬಾವುಟ ಬದಲಿಸುವುದನ್ನು ತಪ್ಪಿಸಿದರೆ ಮುಂದಿನ 18 ವರ್ಷಗಳ ಕಾಲ ದೇವಾಲಯದ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ಬರುತ್ತದೆ ಎಂಬ ನಂಬಿಕೆ ಇದೆ.
ಪ್ರಸಾದ ತಯಾರಿಸುವ ವಿಧಾನ
ಈ ದೇವಸ್ಥಾನದಲ್ಲಿ ಪ್ರತಿದಿನ ಪ್ರಸಾದ ತಯಾರಿಸಲಾಗುತ್ತದೆ. ಆದರೆ ಇಲ್ಲಿ ಇತರ ದೇವಾಲಯಗಳಂತೆ ದೊಡ್ಡ ದೊಡ್ಡ ಪಾತ್ರೆಗಳನ್ನು ಒಲೆ ಮೇಲಿಟ್ಟು ಪ್ರಸಾದ ತಯಾರಿಸುವುದಿಲ್ಲ. ಬದಲಿಗೆ ಒಂದು ಮಡಕೆಯ ಮೇಲೆ 7 ಮಡಕೆಗಳನ್ನು ಇಟ್ಟು ಆಹಾರ ಬೇಯಿಸಲಾಗುತ್ತದೆ. ಸೌದೆ ಬಳಸಿ ತಯಾರಿಸುವ ಈ ಆಹಾರ ಬಹಳ ರುಚಿಯಾಗಿರುತ್ತದೆ. ಎಷ್ಟೇ ಭಕ್ತರು ಬಂದರೂ ಒಂದು ದಿನವೂ ಯಾವ ಭಕ್ತರೂ ಪ್ರಸಾದ ಇಲ್ಲ ಎಂದು ಹೋಗುವುದಾಗಲೀ, ಹೆಚ್ಚಾಯ್ತು ಎಂದು ಪೋಲಾಗುವ ಸಂದರ್ಭ ಬಂದಿಲ್ಲ.
ನೆರಳು ಇಲ್ಲ
ಅಪರೂಪಕ್ಕೆ ಒಮ್ಮೆ ಜೀರೋ ಶ್ಯಾಡೋ ಆಚರಿಸುವುದನ್ನು ನಾವು ನೋಡಿದ್ದೇವೆ. ಆದರೆ ಪುರಿ ಜಗನ್ನಾಥ ದೇವಾಲಯದ ನೆರಳು ಭೂಮಿಮೇಲೆ ಕಾಣುವುದೇ ಇಲ್ಲ. ಇದು ಈ ದೇವಸ್ಥಾನದ ಮತ್ತೊಂದು ವಿಶೇಷ. ದಿನದ ಯಾವುದೇ ಸಮಯದಲ್ಲೂ ನೀವು ಇಲ್ಲಿ ನೆರಳು ನೋಡಲು ಸಾಧ್ಯವಾಗುವುದಿಲ್ಲ. ಇದು ಕೂಡಾ ದೇವರ ಪವಾಡ ಎಂಬ ನಂಬಿಕೆ ಮನೆ ಮಾಡಿದೆ.
ಯಮಶಿಲೆ
ಇಲ್ಲಿನ ಪ್ರಮುಖ ದ್ವಾರದ ಮೂರನೇ ಮೆಟ್ಟಿಲನ್ನು ಯಮಶಿಲೆ ಎಂದು ಕರೆಯಲಾಗುವುದು. ದೇವಸ್ಥಾನಕ್ಕೆ ಹೋಗಿ ವಾಸಪ್ ಬರುವಾಗ ಈ ಯಮಶಿಲೆಯನ್ನು ತುಳಿದರೆ ಮನುಷ್ಯನು ತನ್ನ ಜೀವನದಲ್ಲಿ ಮಾಡಿದ ಪುಣ್ಯಗಳೆಲ್ಲಾ ನಶಿಸುವುದು ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ ಈ ದೇವಾಲಯಕ್ಕೆ ಮದುವೆ ಗೊತ್ತಾದ ಜೋಡಿ ಬಂದರೆ ಅವರ ನಡುವೆ ಪ್ರೀತಿ ಮರೆಯಾಗಲಿದೆ ಎಂದು ರಾಧೆ ಶಾಪ ನೀಡಿದ್ದು ಯಾವ ಜೋಡಿಗಳಗೂ ಈ ದೇವಾಲಯಕ್ಕೆ ಬರುವುದಿಲ್ಲ ಎನ್ನಲಾಗಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.