ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತಾನೇ ಭಕ್ತನ ಬಳಿ ತೆರಳಿ ದರ್ಶನ ಕೊಡುವ ಸ್ವಾಮಿ; ಮಂದಿರದ ಬಳಿ ಇರುವ ಮಜರ್‌ ಸಮಾಧಿ ಬಳಿ ಪುರಿ ಜಗನ್ನಾಥ ರಥ ನಿಲ್ಲುವುದೇಕೆ?

ತಾನೇ ಭಕ್ತನ ಬಳಿ ತೆರಳಿ ದರ್ಶನ ಕೊಡುವ ಸ್ವಾಮಿ; ಮಂದಿರದ ಬಳಿ ಇರುವ ಮಜರ್‌ ಸಮಾಧಿ ಬಳಿ ಪುರಿ ಜಗನ್ನಾಥ ರಥ ನಿಲ್ಲುವುದೇಕೆ?

ಒಡಿಶಾದ ಪುರಿಯಲ್ಲಿ ಪ್ರತಿ ವರ್ಷ 9 ದಿನಗಳ ಕಾಲ ಜಗನ್ನಾಥ ರಥಯಾತ್ರೆ ನಡೆಯುತ್ತದೆ. ಈ ರಥಯಾತ್ರೆ ಸಮಯದಲ್ಲಿ ದೇವಾಲಯದಿಂದ ಸ್ವಲ್ಪ ದೂರದಲ್ಲಿರುವ ಮಜರ್‌ ಎಂಬ ಭಕ್ತನ ಸಮಾಧಿ ಬಳಿ ರಥ ಸ್ವಲ್ಪ ಹೊತ್ತು ನಿಂತುಬಿಡುತ್ತದೆ. ಸ್ವತಃ ಜಗನ್ನಾಥನೇ ಭಕ್ತನಿಗೆ ಈ ರೀತಿ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ.

ಭಕ್ತನ ಬಳಿ ಸ್ವತಃ ತೆರಳಿ ದರ್ಶನ ಕೊಡುವ ಸ್ವಾಮಿ; ಪುರಿ ಜಗನ್ನಾಥ ಮಂದಿರದ ಬಳಿ ಇರುವ ಮಜಾರ್‌ ಸಮಾಧಿ ಬಳಿ ರಥ ನಿಲ್ಲುವುದೇಕೆ?
ಭಕ್ತನ ಬಳಿ ಸ್ವತಃ ತೆರಳಿ ದರ್ಶನ ಕೊಡುವ ಸ್ವಾಮಿ; ಪುರಿ ಜಗನ್ನಾಥ ಮಂದಿರದ ಬಳಿ ಇರುವ ಮಜಾರ್‌ ಸಮಾಧಿ ಬಳಿ ರಥ ನಿಲ್ಲುವುದೇಕೆ? (PC: Ananya Das @AnanyaDasIAS)

ಜಗನ್ನಾಥ ರಥಯಾತ್ರೆ: ಒಡಿಶಾದಲ್ಲಿ ಸದ್ಯಕ್ಕೆ ಬಹು ನಿರೀಕ್ಷಿತ ಪುರಿ ಜಗನ್ನಾಥ ರಥಯಾತ್ರೆ ನಡೆಯುತ್ತಿದೆ. 9 ದಿನಗಳ ಕಾಲ ಜರುಗುವ ವಾರ್ಷಿಕ ರಥ ಯಾತ್ರೆಯಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಸುಮಾರು 15 ದಿನಗಳ ಕಾಲ ಪುರಿಯಲ್ಲೇ ಉಳಿದುಕೊಳ್ಳುವ ಭಕ್ತರು ರಥ ಎಳೆದು, ಜಗನ್ನಾಥನನ್ನು ಕಣ್ತುಂಬಿಕೊಳ್ಳುತ್ತಾರೆ.

ಭಕ್ತನ ಬಳಿ ಹೋಗಿ ದರ್ಶನ ನೀಡುವ ಜಗನ್ನಾಥ

ಜಗನ್ನಾಥ ರಥಯಾತ್ರೆಯು ಬಹಳ ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ. ಅಲ್ಲದೆ ಇಲ್ಲಿನ ಕೆಲವೊಂದು ನಿಗೂಢ ವಿಚಾರಗಳು ಇಂದಿಗೂ ಸವಾಲಾಗಿದೆ. ಸದ್ದೇ ಮಾಡದ ಸಮುದ್ರ, ದೇಗುಲ ಪ್ರವೇಶ ದ್ವಾರದ ಶಬ್ಧ ತರಂಗಗಳು, ಯಮಶಿಲೆ, ದೇವಸ್ಥಾನದ ನೆರಳು ಭೂಮಿಗೆ ಬೀಳದೆ ಇರುವುದು, ನೈವೇದ್ಯ ತಯಾರಿ ಎಲ್ಲವೂ ಬಹಳ ಪವಾಡಕ್ಕೆ ಸಾಕ್ಷಿಯಾಗಿದೆ. ಇದಿಷ್ಟೇ ಅಲ್ಲದೆ ಪ್ರತಿ ವರ್ಷವೂ ರಥ ಸಾಗುವಾಗ ಒಂದು ನಿರ್ದಿಷ್ಠ ಸ್ಥಳದಲ್ಲಿ ರಥ ನಿಲ್ಲುತ್ತದೆ. ಜನರು ಎಷ್ಟೇ ಎಳೆಯಲು ಪ್ರಯತ್ನಿಸಿದರೂ ಈ ಸ್ಥಳದಲ್ಲಿ ರಥ ಮುಂದಕ್ಕೆ ಹೋಗುವುದಿಲ್ಲ. ಇದಕ್ಕೆ ಒಂದು ಕಾರಣವಿದೆ. ಸಾಮಾನ್ಯವಾಗಿ ದೇವರನ್ನು ನೋಡಲು ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿ ದೇವರೇ ಭಕ್ತನೊಬ್ಬನ ಮುಂದೆ ಹೋಗಿ ದರ್ಶನ ನೀಡಿ ಬರುವ ಘಟನೆ ನಡೆಯುತ್ತದೆ.

ಗರ್ಭಗುಡಿಯಲ್ಲಿರುವ ವಿಗ್ರಹಗಳನ್ನು ರಥಗಳ ಮೇಲೆ ಇರಿಸುವ ಮೂಲಕ ಗುಂಡಿಚಾ ದೇವಸ್ಥಾನಕ್ಕೆ ಮೆರವಣಿಗೆಯ ರೂಪದಲ್ಲಿ ಯಾತ್ರೆ ಸಾಗುತ್ತದೆ. ಇದನ್ನು ಬಹುದಾ ಯಾತ್ರೆ ಎನ್ನುತ್ತಾರೆ. ಭಕ್ತರು ಸಾಮಾನ್ಯವಾಗಿ ಭಗವಂತನ ದರ್ಶನ ಪಡೆಯಲು ಕಾತರದಿಂದ ಬರುತ್ತಾರೆ. ಆದರೆ ಈ ರಥಯಾತ್ರೆಯಲ್ಲಿ ಒಂದು ಕುತೂಹಲಕಾರಿ ದೃಶ್ಯ ನಡೆಯುತ್ತದೆ. ಇಲ್ಲಿ ಜಗನ್ನಾಥನೇ ತನ್ನ ಭಕ್ತನಿಗೆ ದರ್ಶನ ಕೊಡಲು ಹೋಗುತ್ತಾನೆ. ಪುರಿ ದೇವಸ್ಥಾನದಿಂದ ರಥಯಾತ್ರೆ ಪ್ರಾರಂಭವಾದ ನಂತರ ರಥವು 200 ಮೀಟರ್ ದೂರ ಕ್ರಮಿಸಿದ ನಂತರ ಸ್ವಲ್ಪ ಸಮಯದವರೆಗೆ ನಿಲ್ಲುತ್ತದೆ. ಅಲ್ಲಿ ಎಷ್ಟು ಜನ ಪ್ರಯತ್ನಿಸಿದರೂ, ಎಷ್ಟು ಎಳೆದರೂ ರಥ ಮುಂದೆ ಸಾಗುವುದಿಲ್ಲ. ಆ ಸ್ಥಳದ ಹೆಸರು ಮಜರ್. ಇದು ಜಗನ್ನಾಥನ ಮುಸ್ಲಿಂ ಭಕ್ತ ಸಾಲ್ಬೇಗ್ ಅವರ ಸಮಾಧಿಯಾಗಿದೆ. ಮೊಘಲರ ಕಾಲದಿಂದಲೂ ಜಗನ್ನಾಥನ ರಥ ಇಲ್ಲಿ ನಿಲ್ಲುತ್ತದೆ.

ಯಾರು ಈ ಸಾಲ್ಬೇಗ್?

ಮೊಗಲ್ ಸುಬೇದಾರ್ ಒಬ್ಬರ ಮಗ ಲಾಲ್‌ಬೇಗ್. ಅವನು ಹಿಂದೂ ಯುವತಿಯೊಬ್ಬಳನ್ನು ಮದುವೆಯಾಗುತ್ತಾನೆ. ಈ ದಂಪತಿಗೆ ಹುಟ್ಟಿದ ಮಗುವೇ ಸಾಲ್ಬೇಗ್. ಅವರ ತಾಯಿ ಜಗನ್ನಾಥನ ಮಹಾನ್ ಭಕ್ತೆ. ಒಂದು ದಿನ ಸಾಲ್ಬೇಗ್ ಅನಾರೋಗ್ಯಕ್ಕೆ ಒಳಗಾದಾಗ, ಅವರ ತಾಯಿ ಜಗನ್ನಾಥನನ್ನು ಪೂಜಿಸುತ್ತಾಳೆ. ಅಂದಿನಿಂದ ಸಾಲ್ಬೇಗ್‌ ಕೂಡಾ ತನ್ನ ತಾಯಿಯಂತೆ ಜಗನ್ನಾಥನ ಭಕ್ತನಾಗುತ್ತಾನೆ. ಒಮ್ಮೆ ಸಾಲ್ಬೇಗ್‌ ಪುರಿಯ ಜಗನ್ನಾಥ ದೇವಸ್ಥಾನಕ್ಕೆ ಹೋಗಿ ಸ್ವಾಮಿಯ ದರ್ಶನ ಮಾಡಬೇಕೆಂದು ಬಯಸುತ್ತಾನೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.

ಅವರು ಸಾಯುವ ಮೊದಲು ಒಮ್ಮೆಯಾದರೂ ಜಗನ್ನಾಥನನ್ನು ಭೇಟಿ ಮಾಡಲು ಸಾಲ್ಬೇಕ್‌ ಕಾಯುತ್ತಿದ್ದನು. ಆದರೆ ಆ ಆಸೆ ಈಡೇರದೆ ಸಾವನ್ನಪ್ಪಿದರು. ಸಾಲ್ಬೇಕ್‌ ಆಸೆಯಂತೆ ಆ ಮನೆಯಲ್ಲಿಯೇ ಸಮಾಧಿ ಮಾಡಲಾಯಿತು. ಈ ಸಮಾಧಿಯೇ ಹೆಸರು ಮಜಾರ್. ದೇವರನ್ನು ನೋಡಬೇಕೆಂಬ ಸಾಲ್ಬೇಗ್‌ ಆಸೆ ಜಗನ್ನಾಥನ ಹೃದಯವನ್ನು ಮುಟ್ಟುತ್ತದೆ. ಅಂದಿನಿಂದ ರಥಯಾತ್ರೆ ಪ್ರಾರಂಭವಾದ ನಂತರ, ಜಗನ್ನಾಥನ ರಥವು ಮಜರ್ ಬಳಿ ಸ್ವಲ್ಪ ಸಮಯದವರೆಗೆ ನಿಲ್ಲುತ್ತದೆ. ಜಗನ್ನಾಥನೇ ತನ್ನ ಭಕ್ತನ ಬಳಿಗೆ ಬಂದು ದರ್ಶನ ಕೊಟ್ಟಡುತ್ತಾನೆಂಬ ನಂಬಿಕೆ ಇದೆ. ಮೊಘಲರ ಕಾಲದಿಂದಲೂ ಈ ಸಂಪ್ರದಾಯ ಆಚರಣೆಯಲ್ಲಿದೆ.

ಸಾಲ್ಬೇಗ್‌ ರಚಿಸಿದ ಭಕ್ತಿಗೀತೆಗಳು

ನಿರ್ಮಲ ಮನಸ್ಸಿನಿಂದ ದೇವರನ್ನು ಪೂಜಿಸಿದರೆ ಆ ಬಯಕೆ ಸದಾ ದೇವರನ್ನು ತಲುಪುತ್ತದೆ ಎಂಬ ನಂಬಿಕೆಗೆ ಇದು ಸಾಕ್ಷಿ ಎಂದು ಹೇಳಲಾಗುತ್ತದೆ. ಭಕ್ತನ ಧಾರ್ಮಿಕ ಬಯಕೆಯು ದೇವರ ಹೃದಯವನ್ನು ತಲುಪಿತು ಮತ್ತು ಆದ್ದರಿಂದ ದೇವರೇ ಅವನಿಗಾಗಿ ಇಳಿದು ಬಂದನು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಹೇಳಲಾಗುತ್ತದೆ. ಸಾಲ್ಬೇಗ್ ಸ್ವತ: ರಚಿಸಿದ “ಅಹೇ ನೀಲಾ ಶೈಲಾ..” ಗೀತೆಯನ್ನು ಜಗನ್ನಾಥ ದೇವಾಲಯದಲ್ಲಿ ಪ್ರತಿದಿನ ಇತರ ಭಕ್ತರಿಗೆ ಕೇಳಿಸಲಾಗುತ್ತದೆ. ಅವರು ಬರೆದ ಅನೇಕ ಭಕ್ತಿಗೀತೆಗಳನ್ನು ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಗರ್ಭಗುಡಿಯಲ್ಲಿ ಪ್ರಸಾರ ಮಾಡಲಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.