ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸದಾ ಭಕ್ತರಿಂದ ತುಂಬಿರುವ ಪ್ರಸಿದ್ಧ ಕ್ಷೇತ್ರಗಳಿಗೆ ಪ್ರವಾಸ ಹೊರಡಬೇಕು ಎಂದಿದ್ದರೆ ಈ ಸಲಹೆಗಳನ್ನು ಪಾಲಿಸಿ

ಸದಾ ಭಕ್ತರಿಂದ ತುಂಬಿರುವ ಪ್ರಸಿದ್ಧ ಕ್ಷೇತ್ರಗಳಿಗೆ ಪ್ರವಾಸ ಹೊರಡಬೇಕು ಎಂದಿದ್ದರೆ ಈ ಸಲಹೆಗಳನ್ನು ಪಾಲಿಸಿ

ಕೆಲವು ದೇವಸ್ಥಾನಗಳು ಸದಾ ಭಕ್ತರಿಂದ ತುಂಬಿರುತ್ತದೆ. ಅದರಲ್ಲೂ ಹಬ್ಬ, ಜಾತ್ರೆ, ಪ್ರವಾಸದ ಋತುಗಳಲ್ಲಿ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಾಗಿರುತ್ತದೆ. ನೀವು ಅಂತಹ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಬೇಕೆಂದಿದ್ದರೆ ಈ ಸಲಹೆಗಳನ್ನು ಪಾಲಿಸಿ. ಶಾಂತ ರೀತಿ ದೇವರ ದರ್ಶನವನ್ನು ಮಾಡಿ, ಆಧ್ಯಾತ್ಮದ ಒಲವನ್ನು ಹೆಚ್ಚಿಸಿಕೊಳ್ಳಬಹುದು. (ಬರಹ: ಅರ್ಚನಾ ವಿ ಭಟ್)

ಸದಾ ಭಕ್ತರಿಂದ ತುಂಬಿರುವ ಪ್ರಸಿದ್ಧ ಕ್ಷೇತ್ರಗಳಿಗೆ ಪ್ರವಾಸ ಹೊರಟಿದ್ದರೆ ಈ 7 ಸಲಹೆಗಳನ್ನು ಪಾಲಿಸಿ
ಸದಾ ಭಕ್ತರಿಂದ ತುಂಬಿರುವ ಪ್ರಸಿದ್ಧ ಕ್ಷೇತ್ರಗಳಿಗೆ ಪ್ರವಾಸ ಹೊರಟಿದ್ದರೆ ಈ 7 ಸಲಹೆಗಳನ್ನು ಪಾಲಿಸಿ

ದೇವಸ್ಥಾನಗಳಿಗೆ ಭೇಟಿ ನೀಡುವುದು ನಮ್ಮ ಸಂಸ್ಕೃತಿಯ ಬೇರುಗಳನ್ನು ಅರಿಯಲು ಇರುವ ಮಾರ್ಗವಾಗಿದೆ. ಅಲ್ಲಿನ ಅದ್ಭುತ ಶಿಲ್ಪಕಲೆ, ಇತಿಹಾಸ, ಪ್ರಕೃತಿ ಸೌಂದರ್ಯವನ್ನು ಆನಂದಿಸಲು, ಆಧ್ಯಾತ್ಮದ ಒಲವನ್ನು ಹೆಚ್ಚಿಸಿಕೊಳ್ಳಲು ಈಗಿನ ಯುವಪಡೆಯೂ ಉತ್ಸುಕರಾಗಿರುವುದು ಕಂಡುಬರುತ್ತಿದೆ. ಕಾಶಿ, ಚಾರ್‌–ಧಾಮ್, ವೈಷ್ಣೋದೇವಿ, ದ್ವಾದಶ ಜ್ಯೋತಿರ್ಲಿಂಗ, ತಿರುಪತಿ, ಧರ್ಮಸ್ಥಳಗಳಂತಹ ಕೆಲವು ಪ್ರಸಿದ್ಧ ದೇವಸ್ಥಾನಗಳು ಸದಾ ಪ್ರವಾಸಿಗರಿಂದ ತುಂಬಿರುತ್ತದೆ. ಅದರಲ್ಲೂ ಪ್ರವಾಸದ ಋತುಗಳಲ್ಲಂತೂ ಜನದಟ್ಟಣೆ ಇನ್ನೂ ಹೆಚ್ಚಾಗಿರುತ್ತದೆ.

ಕೇದಾರನಾಥ, ಬ್ರದಿನಾಥ, ವೈಷ್ಣೋದೇವಿಯಂತಹ ದೇವಸ್ಥಾನಗಳಿಗೆ ಭೇಟಿ ನೀಡಲು ನಿಗದಿತ ಸಮಯವೂ ಇದೆ. ದೇವರ ಸನ್ನಿಧಾನದಲ್ಲಿ ಶಾಂತಿ, ನೆಮ್ಮದಿ ಇರುವುದು ಮುಖ್ಯವಾಗಿದೆ. ಆದರೆ ಜನದಟ್ಟಣೆಯ ದಿನಗಳಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಅಲ್ಲಿನ ಪ್ರಶಾಂತ ವಾತಾವರಣದ ಕೊರತೆ ಕಾಡುತ್ತದೆ. ಹಾಗಾಗಿ ನೀವು ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಬೇಕೆಂದಿದ್ದರೆ ಈ ಸಲಹೆಗಳನ್ನು ಪಾಲಿಸಿ.

1. ಆಫ್‌ ಸೀಸನ್‌ ಆಯ್ದುಕೊಳ್ಳಿ

ನೀವು ದೇವಾಲಯಗಳಿಗೆ ಭೇಟಿ ನೀಡಬೇಕೆಂದಿದ್ದರೆ ಹೆಚ್ಚಾಗಿ ಆಫ್‌–ಸೀಸನ್‌ ಆಯ್ದುಕೊಳ್ಳಿ. ಕಡಿಮೆ ಯಾತ್ರಿಕರು ಇರುವ ಸಮಯ ದೇವಸ್ಥಾನದ ಭೇಟಿಗೆ ಸೂಕ್ತ ಸಮಯವಾಗಿದೆ. ಅತಿಯಾದ ಜನದಟ್ಟಣೆ ದಿನಗಳಲ್ಲಿ ನೀವು ದೇವಸ್ಥಾನಕ್ಕೆ ಹೋದರೆ ಅಲ್ಲಿ ನೀವು ಪ್ರಶಾಂತವಾಗಿ ದೇವರ ಪೂಜೆ ಮಾಡಲು ಸಾಧ್ಯವಾಗುವುದಿಲ್ಲ. ನೀವು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರೆಂದರೆ ಮುಂಜಾನೆಯ ಸಮಯ ಹೆಚ್ಚು ಸೂಕ್ತವಾಗಿದೆ ಏಕೆಂದರೆ ಪ್ರಶಾಂತವಾದ ಸ್ಥಳಗಳಲ್ಲಿ ದೇವರ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ಸುಲಭವಾಗಿದೆ. ಆಧ್ಯಾತ್ಮದ ಕಡೆಗೆ ನಿಮ್ಮ ಒಲವನ್ನು ಹೆಚ್ಚಿಸಿಕೊಳ್ಳಲು ಸಹ ಇದು ಉಪಯುಕ್ತವಾಗಿದೆ.

2) ದೇವಸ್ಥಾನದಲ್ಲಿ ಪ್ರಶಾಂತತೆಯನ್ನು ಕಾಪಾಡಿ

ದೇವಸ್ಥಾನದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾಗ, ನೀವೂ ಅಲ್ಲಿಗೆ ಹೋಗಿ ಜನದಟ್ಟಣೆಯನ್ನು ಹೆಚ್ಚಿಸಬೇಡಿ. ಅದರಿಂದ ದೇವಸ್ಥಾನದ ಪ್ರಶಾಂತತೆ ಹಾಳಾಗುತ್ತದೆ. ಮೊದಲು ಬಂದವರಿಗೆ ಆದ್ಯತೆ ಕೊಡಿ. ಏಕೆಂದರೆ ಏಲ್ಲರೂ ದೇವರ ದರ್ಶನಕ್ಕೆಂದೇ ಬಂದಿರುತ್ತಾರೆ. ಆ ಸಮಯದಲ್ಲಿ ದೇವಸ್ಥಾನದಲ್ಲಿರುವ ಯಾವುದಾದರೂ ಒಂದು ಶಾಂತ ಸ್ಥಳವನ್ನು ಆಯ್ದುಕೊಂಡು ಧ್ಯಾನ ಮಾಡಿ. ಅದು ನಿಮಗೆ ಆಧ್ಯಾತ್ಮದ ಕಡೆಗೆ ಇರುವ ಒಲವನ್ನು ಹಚ್ಚಿಸುತ್ತದೆ.

3) ಪ್ರವೇಶ ಆಯ್ಕೆಗಳ ಲಾಭ ಪಡೆದುಕೊಳ್ಳಿ

ಕೆಲವು ವಿಶೇಷ ದಿನಗಳಲ್ಲಿ ದೇವಸ್ಥಾನ ಪ್ರವೇಶಿಸಲು ವಿಶೇಷ ಅನುಮತಿ ನೀಡಲಾಗುತ್ತದೆ. ನಿಮಗೆ ಸಮಯದ ಅಭಾವವಿದ್ದರೆ ಅದನ್ನು ಬಳಸಿಕೊಳ್ಳಬಹುದು. ಅಲ್ಲಿರುವ ನಿಯಮಗಳನ್ನು ಪಾಲಿಸಿ, ದೇವರ ದರ್ಶನ ಮಾಡಬಹುದು. ನಿಮ್ಮ ಪ್ರವಾಸದಲ್ಲಿ ಬಹಳಷ್ಟು ಸ್ಥಳಗಳನ್ನು ಭೇಟಿ ನೀಡುವುದಿದ್ದರೆ ಈ ಆಯ್ಕೆ ಉತ್ತಮವಾಗಿದೆ. ದೇವಾಲಯದ ಸಿಬ್ಬಂದಿಗಳನ್ನು ಸಂಪರ್ಕಿಸಿ, ಪ್ರವೇಶ ಅನುಮತಿಗಳ ಲಾಭ ಪಡೆದುಕೊಳ್ಳಿ.

4) ಭಕ್ತಾದಿಗಳು ಭೇಟಿ ನೀಡುವ ಸಮಯ ತಿಳಿದುಕೊಳ್ಳಿ

ದೇವಸ್ಥಾನಕ್ಕೆ ಹೋಗುವ ಮೊದಲು ಭಕ್ತಾದಿಗಳು ಹೆಚ್ಚಾಗಿ ಭೇಟಿ ನೀಡುವ ಸಮಯ ಮತ್ತು ದಿನಗಳ ಬಗ್ಗೆ ತಿಳಿದುಕೊಳ್ಳಿ. ಅದರ ಪ್ರಕಾರ ನಿಮ್ಮ ಪ್ರವಾಸದ ದಿನ ಮತ್ತು ಸಮಯಗಳನ್ನು ಹೊಂದಿಸಿಕೊಳ್ಳಿ. ಪ್ರವಾಸದ ಋತುಗಳ ಬದಲಿಗೆ ಕಡಿಮೆ ಯಾತ್ರಿಗಳು ಭೇಟಿ ನೀಡುವ ದಿನಗಳನ್ನು ಆಯ್ದುಕೊಂಡರೆ ನೆಮ್ಮದಿಯಿಂದ ದೇವರ ದರ್ಶನ ಮಾಡಬಹುದು.

5) ತಂತ್ರಜ್ಞಾನದ ಸಹಾಯ ಪಡೆದುಕೊಳ್ಳಿ

ಸಾಮಾನ್ಯವಾಗಿ ಪ್ರಸಿದ್ಧ ದೇವಾಲಯಗಳೆಲ್ಲವೂ ಅವರದೇ ಆದ ವೆಬ್‌ಸೈಟ್‌ ಹೊಂದಿರುತ್ತದೆ. ಅದರಲ್ಲಿ ದೇವರ ದರ್ಶನ, ಸೇವೆ ಮತ್ತು ಪ್ರಸಾದಕ್ಕಾಗಿ ಆನ್‌ಲೈನ್‌ ಟಿಕೆಟ್‌ಗಳ ಸೌಕರ್ಯಗಳನ್ನು ನೀಡುತ್ತದೆ. ಭಕ್ತರು ಅದರ ಲಾಭ ಪಡೆದುಕೊಳ್ಳಬಹುದು. ನೀವು ಮುಂಚಿತವಾಗಿ ಟಿಕೆಟ್‌ ಕಾಯ್ದಿರಿಸುವುದರಿಂದ ಟಿಕೆಟ್‌ ಖರೀದಿಗಾಗಿ ಸಮಯ ಹಾಳಾಗುವುದನ್ನು ತಪ್ಪಿಸಬಹುದು ಮತ್ತು ದರ್ಶನಕ್ಕಾಗಿ ಗಂಟೆಗಟ್ಟಲೆ ಕಾಯುವುದು ತಪ್ಪುತ್ತದೆ.

6. ನೈತಿಕತೆ ಮರೆಯಬೇಡಿ

ಜನಜಂಗುಳಿಯ ದೇವಾಲಯಗಳು ನಿಮ್ಮ ತಾಳ್ಮೆ ಮತ್ತು ಸಂಯಮವನ್ನು ಪರೀಕ್ಷಿಸುತ್ತದೆ. ದರ್ಶನಕ್ಕಾಗಿ ಇರುವ ಉದ್ದದ ಸಾಲು ನಿಮ್ಮ ಮನಸ್ಸು ಕೆಡಿಸಬಹುದು. ಕೆಲವು ಕ್ಷೇತ್ರಗಳ ಭೇಟಿಗೆ ದೈಹಿಕ ಸಾಮರ್ಥ್ಯದ ಅವಶ್ಯಕತೆಯೂ ಇರುತ್ತದೆ. ಬೆಟ್ಟ ಅಥವಾ ಮೆಟ್ಟಿಲುಗಳನ್ನು ಹತ್ತಿ ಹೋಗಲು ದೈಹಿಕ ಶಕ್ತಿಯ ಜೊತೆಗೆ ಮಾನಸಿಕ ಶಕ್ತಿಯ ಅವಶ್ಯಕತೆಯೂ ಇರುತ್ತದೆ. ಅದಕ್ಕಾಗಿ ಮೊದಲೇ ಸಿದ್ಧರಾಗಿರಿ. ಅಂತಹ ಸ್ಥಳಗಳಿಗೆ ಭೇಟಿ ನೀಡುವಾಗ ನೀರು, ದ್ರವಾಹಾರಗಳನ್ನು ತೆಗೆದುಕೊಂಡು ಹೋಗಿ. ಧಾರ್ಮಿಕ ಆಚರಣೆಗಳಲ್ಲಿ ಉಂಟಾಗುವ ಜನಸಂದಣಿಯನ್ನು ತಪ್ಪಿಸಲು ಸಾಕಷ್ಟು ಅಂತರ ಕಾಯ್ದುಕೊಳ್ಳಿ. ಅಲ್ಲಿಗೆ ಬರುವ ಪ್ರತಿಯೊಬ್ಬರ ಇಚ್ಛೆಯೂ ನಿಮ್ಮಂತೆಯೇ ಇರುತ್ತದೆ ಎನ್ನುವುದನ್ನು ನೆನಪಿಡಿ. ಫೋಟೋ ಶೂಟ್‌ ಮಾಡುವಾಗ ಇತರರ ಬಗ್ಗೆ ಕಾಳಜಿವಹಿಸಿ. ಬೇರೊಬ್ಬರಿಗೆ ನೋವಾಗದಂತೆ, ಪ್ರಶಾಂತ ವಾತಾವರಣ ಹಾಳಾಗದಂತೆ ನೋಡಿಕೊಳ್ಳಿ. ಕೆಲವು ದೇವಾಲಯಗಳಲ್ಲಿ ಛಾಯಾಗ್ರಹಣ ನಿಷೇಧಿಸಿರುತ್ತಾರೆ. ಅದನ್ನು ಖಂಡಿತ ಗೌರವಿಸಿ. ನಿಮಗೆ ಫೋಟೊ ಬೇಕು ಎಂದಾಗ ಆಡಳಿತ ಮಂಡಳಿಯನ್ನು ಸಂಪರ್ಕಿಸಿ.

7. ಸುತ್ತಮುತ್ತಲಿನ ದೇವಾಲಯಗಳಿಗೆ ಭೇಟಿ ನೀಡಿ

ಪ್ರವಾಸದ ಋತುಗಳಲ್ಲಿ ಪ್ರಸಿದ್ಧಿಯಲ್ಲಿರುವ ದೇವಸ್ಥಾನಗಳಿಗೆ ಹೋಗುವ ಬದಲು ಆ ಸಮಯದಲ್ಲಿ ನಿಮ್ಮ ಸುತ್ತಲಿನ ಕಡಿಮೆ ಪ್ರಸಿದ್ಧಿಯನ್ನು ಹೊಂದಿರುವ ದೇವಾಲಯಗಳಿಗೆ ಭೇಟಿ ನೀಡಬಹುದು. ಪ್ರಸಿದ್ಧ ಕ್ಷೇತ್ರಗಳಲ್ಲಿ ಜನದಟ್ಟಣೆ ಕಡಿಮೆಯಿರುವ ದಿನಗಳನ್ನು ನೀವು ಆಯ್ದುಕೊಳ್ಳಬಹುದು. ಅದರಿಂದ ನಿಮ್ಮ ಆಧ್ಯಾತ್ಮದ ಗುರಿಗಳನ್ನು ಮುಟ್ಟಲು ಸಾಧ್ಯವಾಗುತ್ತದೆ.

ನೀವು ಸರಿಯಾಗಿ ಪರಿಶೀಲಿಸಿ ನಿಮ್ಮ ಪ್ರವಾಸವನ್ನು ಪ್ಲಾನ್‌ ಮಾಡಿದ್ದರೆ ಜನದಟ್ಟಣೆಯ ದಿನಗಳಲ್ಲೂ ಸಹ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಶಾಂತ ರೀತಿಯಿಂದ ವರ್ತಿಸುವುದು ಮತ್ತು ಪ್ರಜ್ಞಾವಂತರಾಗಿ ನಡೆದುಕೊಳ್ಳುವುದರ ಮೂಲಕ ಕ್ಷೇತ್ರಗಳ ದರ್ಶನದ ಸುಂದರ ನೆನಪು ಸದಾ ನಿಮ್ಮ ಮನಸ್ಸಿನಲ್ಲಿರಲು ಸಾಧ್ಯವಾಗುತ್ತದೆ.‌

 ಬರಹ: ಅರ್ಚನಾ ವಿ ಭಟ್ 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.