ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದೆ ಇದ್ದಾರಾ? ಒಮ್ಮೆ ತೆಲಂಗಾಣದ ಬಾಸರ ಸರಸ್ವತಿ ದೇವಸ್ಥಾನಕ್ಕೆ ಹೋಗಿ ಬನ್ನಿ, ವಿವರ ಇಲ್ಲಿದೆ
ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿರುವ ಬಾಸರ ಸರಸ್ವತಿ ದೇವಸ್ಥಾನವು ಬಹಳ ಖ್ಯಾತಿ ಪಡೆದಿದೆ. ಹೊರ ರಾಜ್ಯಗಳಿಂದ ಕೂಡಾ ಇಲ್ಲಿಗೆ ಜನರು ತಮ್ಮ ಮಕ್ಕಳನ್ನು ಕರೆತಂದು ವಿಶೇಷ ಪೂಜೆ ಸಲ್ಲಿಸಿ ಹೋಗುತ್ತಾರೆ. ಈ ದೇವಸ್ಥಾನವು ಹೈದರಾಬಾದ್‌ನಿಂದ 200 ಕಿಮೀ, ನಿರ್ಮಲ್‌ನಿಂದ 72 ಹಾಗೂ ನಿಜಾಮಾಬಾದ್‌ನಿಂದ 34 ಕಿಮೀ ದೂರವಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಸರಸ್ವತಿಯನ್ನು ನದಿಗಳ ದೇವತೆ, ಗುಪ್ತಗಾಮಿನಿ ಎನ್ನುತ್ತೇವೆ. ಜೀವನ ರೂಪಿಸಿಕೊಳ್ಳಲು ವಿದ್ಯೆ ಮುಖ್ಯ. ಸರಸ್ವತಿಯನ್ನು ವಿದ್ಯಾಧಿದೇವತೆ ಎಂದು ಕರೆಯಲಾಗುತ್ತದೆ. ಹಣ, ವಿದ್ಯೆ ಎಷ್ಟೇ ಇದ್ದರೂ ಅದನ್ನು ಬಳಸಿಕೊಳ್ಳಲು ಜ್ಞಾನ ಇರಬೇಕು. ಆದ್ದರಿಂದ ಸರಸ್ವತಿಯನ್ನು ಜ್ಞಾನದೇವತೆ ಎಂದೂ ಕರೆಯುತ್ತೇವೆ. ವೇದ, ಯಂತ್ರ, ಮಂತ್ರಗಳ ಕಲಿಕೆಗೂ ಸರಸ್ವತಿ ಮುಖ್ಯವಾಗುತ್ತಾಳೆ.
ಗೋದಾವರಿ ನದಿ ತೀರದಲ್ಲಿರುವ ಬಾಸರ ದೇವಸ್ಥಾನ
ಸರಸ್ವತಿಯನ್ನು ಆದಿಶಕ್ತಿಯ ಪ್ರತಿರೂಪ ಎಂದು ಕರೆಯುತ್ತಾರೆ. ಈಕೆಯಲ್ಲಿ ಬ್ರಹನ ಶಕ್ತಿಯೂ ಅಡಕವಾಗಿದೆ. ಋಗ್ವೇದದಲ್ಲಿ ತ್ರಿಮೂರ್ತಿಗಳಿಗೆ ಸರಿ ಸಮಾನವಾದ ಸ್ಥಾನವನ್ನು ಸರಸ್ವತಿ ಮಾತೆಗೆ ನೀಡಲಾಗಿದೆ. ವಿದ್ವಾಂಸರ ನಾಲಿಗೆ ತುದಿಯಲ್ಲಿ ಸರಸ್ವತಿ ನೆಲೆಸಿದ್ದಾಳೆಂದು ಹೇಳಲಾಗುತ್ತದೆ. ದೇಶದಲ್ಲಿ ಸರಸ್ವತಿಯ ಬಹಳಷ್ಟು ದೇವಾಲಯಗಳಿವೆ. ಅದರಲ್ಲಿ ತೆಲಂಗಾಣದ ಬಾಸರದಲ್ಲಿರುವ ಸರಸ್ವತಿ ದೇವಸ್ಥಾನ ಕೂಡಾ ಒಂದು.
ಗೋದಾವರಿ ನದಿಯು ತೆಲಂಗಾಣದ ಬಾಸರ ಎಂಬ ಪ್ರದೇಶದಲ್ಲಿ ಹರಿಯುತ್ತದೆ. ಇದಕ್ಕೆ ಹೊಂದಿಕೊಂಡಂತೆ ಇರುವ ದೇವಾಲಯವೇ ಜ್ಞಾನ ಸರಸ್ವತಿ ದೇಗುಲ. ಮುಖ್ಯವಾಗಿ ಇಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸುವ ಮುನ್ನ ಅಕ್ಷರಾಭ್ಯಾಸವನ್ನು ನೆರವೇರಿಸಲು ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ವಾರ, ನಕ್ಷತ್ರ, ಶುಭದಿನ ಎಂಬುದನ್ನು ಪರಿಗಣಿಸದೆ ಈ ಕ್ಷೇತ್ರದಲ್ಲಿ ಅಕ್ಷರಾಭ್ಯಾಸ ಮಾಡಿಸಿದಲ್ಲಿ ಉತ್ತಮ ಜ್ಞಾನ, ವಿದ್ಯೆ ಮತ್ತು ಬುದ್ಧಿ ದೊರೆಯುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಈ ದೇವಾಲಯದ ಹಿಂದೆ ಒಂದು ಪುರಾಣ ಕಥೆ ಇದೆ.
ಸರಸ್ವತಿಗೆ ಪ್ರತಿದಿನ ವಿಶೇಷ ಪೂಜೆ
ಕುರುಕ್ಷೇತ್ರ ಯುದ್ದದಲ್ಲಿ ಉಂಟಾದ ಸಾವು ನೋವಿನಿಂದ ಬೇಸತ್ತ ಮಹರ್ಷಿ ವ್ಯಾಸರು, ವಿಶ್ವಾಮಿತ್ರರು ತಮ್ಮ ಶಿಷ್ಯರೊಂದಿಗೆ ಶಾಂತಿ ನೆಮ್ಮದಿಯನ್ನು ಅರಸಿ ಪ್ರಶಾಂತವಾದ ವಾತಾವರಣದಲ್ಲಿ ನೆಲೆಸಲು ತೀರ್ಮಾನಿಸುತ್ತಾರೆ. ಅವರೆಲ್ಲರೂ ದಂಡಕಾರಣ್ಯವನ್ನು ಪ್ರವೇಶಿಸುತ್ತಾರೆ. ಅಲ್ಲಿನ ಪ್ರಶಾಂತತೆಯನ್ನು ಕಂಡ ವ್ಯಾಸರು ಬಹುದಿನಗಳ ಕಾಲ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಇದರಿಂದ ಈ ಪ್ರದೇಶಕ್ಕೆ ವಾಸರ ಎಂಬ ಹೆಸರು ಬರುತ್ತದೆ. ದಿನ ಕಳೆದಂತೆ ಬಾಸರ ಎಂದು ಬದಲಾಗುತ್ತದೆ. ಈ ದೇವಾಲಯವಿರುವ ಪ್ರದೇಶದಲ್ಲಿ ಮಂಜಿರ ಮತ್ತು ಗೋದಾವರಿ ನದಿಗಳ ಸಂಗಮವಿದೆ. ಇಲ್ಲಿ ಒಟ್ಟು ಮೂರು ದೇವಾಲಯಗಳಿದ್ದು ಅದರಲ್ಲಿ ಸರಸ್ವತಿಯ ದೇಗುಲವು ಒಂದಾಗಿದೆ. ಶತ್ರುಗಳ ಆಕ್ರಮಣಕ್ಕೆ ತುತ್ತಾದ ಈ ದೇವಾಲಯವನ್ನು ತೆಲುಗು ನಾಡಿನ ಅರಸರು ಪುನರ್ ಪ್ರತಿಷ್ಠಾಪಿಸಿದ್ದಾರೆ.
ವಿದ್ಯಾಭ್ಯಾಸದಲ್ಲಿ ಹಿಂದುಳಿದವರು ಪುಸ್ತಕ, ಅಳತೆ ಪಟ್ಟಿ, ಲೇಖನಿ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಸರಸ್ವತಿಗೆ ಅರ್ಪಿಸುತ್ತಾರೆ. ಪ್ರತಿದಿನ ಇಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಶಿವರಾತ್ರಿ ಮತ್ತು ನವರಾತ್ರಿಗಳಲ್ಲಿ ಇಲ್ಲಿಗೆ ಜನಸಾಗರವೇ ಹರಿದುಬರುತ್ತದೆ. ನವರಾತ್ರಿಯಲ್ಲಿ ಹತ್ತು ದಿನಗಳ ಕಾಲ ಸರಸ್ವತಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಪ್ರದೇಶದಲ್ಲಿ ಮಹಾಕಾಳಿಯ ವಿಗ್ರಹವಿದ್ದು, ವಿಶೇಷ ಸೇವೆ ಸಲ್ಲಿಸಲಾಗುತ್ತದೆ. ಇದರ ಜೊತೆ ಮಹಾಲಕ್ಷ್ಮಿಯ ದೇವಾಲಯವೂ ಇಲ್ಲಿದೆ. ಸರಸ್ವತಿ, ಮಹಾಲಕ್ಷ್ಮಿ ಮತ್ತು ಮಹಾಕಾಳಿಯು ಬ್ರಹ್ಮ, ವಿಷ್ಣು ಮತ್ತು ಶಿವನನ್ನು ಪ್ರತಿನಿಧಿಸುತ್ತಾರೆ. ಆದ್ದರಿಂದ ಈ ದೇವಾಲಯದ ಪ್ರದೇಶವನ್ನು ತ್ರಿಮೂರ್ತಿಗಳ ವಾಸಸ್ಠಳವೆಂದು ಹೇಳಲಾಗುತ್ತದೆ. ಮಹಾಕಾಳಿಯ ಪೂಜೆಯಿಂದ ವೇದಾಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಹಾಲಕ್ಷಿಯ ಪೂಜೆಯಿಂದ ವಿದ್ಯಾಭ್ಯಾಸದಲ್ಲಿನ ಅಡ್ಡಿ ಆತಂಕಗಳು ದೂರವಾಗುತ್ತವೆ. ಆತ್ಮ ವಿಶ್ವಾಸ ಹೆಚ್ಚುತ್ತದೆ. ಸರಸ್ವತಿಗೆ ಶ್ವೇತವರ್ಣದ ಸೀರೆ ಮತ್ತು ಕಮಲದ ಹೂವನ್ನು ಅರ್ಪಿಸುವ ವಾಡಿಕೆ ಇದೆ.
ಬೆಂಗಳೂರಿನಿಂದ ಬಾಸರಕ್ಕೆ ಹೋಗುವುದು ಹೇಗೆ?
ಬಾಸರ ದೇವಸ್ಥಾನವು ಹೈದರಾಬಾದ್‌ನಿಂದ 200 ಕಿಮೀ ದೂರದಲ್ಲಿದೆ. ನಿರ್ಮಲ್ ಜಿಲ್ಲೆಯಿಂದ 72 ಕಿಮೀ ಹಾಗೂ ನಿಜಾಮಾಬಾದ್‌ನಿಂದ 34 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಈ ದೇವಸ್ಥಾನಕ್ಕೆ ಹೋಗಲು ಬಯಸುವವರು ಬೆಂಗಳೂರಿನಿಂದ ನಿಜಾಮಾಬಾದ್‌ಗೆ ತೆರಳಿ ಅಲ್ಲಿಂದ ಮತ್ತೆ ಬಾಸರಕ್ಕೆ ಬಸ್‌ನಲ್ಲಿ ಹೋಗಬೇಕು. ಬಾಸರ ದೇವಸ್ಥಾನಕ್ಕೆ ತೆರಳಲು ನಿರ್ಮಲ್, ನಿಜಾಮಾಬಾದ್‌ನಿಂದ ಬಸ್ ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗೆ ದೇವಸ್ಥಾನದ ವೆಬ್‌ಸೈಟ್ https://www.basaratemple.org/index.php ಸಂಪರ್ಕಿಸಬಹುದು.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
ಮೊಬೈಲ್: 8546865832
ಇದನ್ನೂ ಓದಿ: ವಾಸ್ತುದೋಷಕ್ಕೆ ಕಾರಣಗಳೇನು, ಅದರ ಪರಿಣಾಮಗಳೇನು