ಸಾಕಷ್ಟು ವೈಶಿಷ್ಟ್ಯಗಳಿಗೆ ಹೆಸರಾದ ತಮಿಳುನಾಡಿನ ಬಾಲ ಸುಬ್ರಹ್ಮಣ್ಯಸ್ವಾಮಿ ದೇವಾಲಯ; ಪತ್ನಿಯರೊಂದಿಗೆ ನೆಲೆಸಿರುವ ನವಗ್ರಹಗಳ ದೇವಸ್ಥಾನ ಇಲ್ಲಿದೆ
ತಮಿಳುನಾಡಿನಲ್ಲಿ ಸಾಕಷ್ಟು ವೈಶಿಷ್ಟ್ಯಗಳಿಗೆ ಹೆಸರಾದ ದೇವಾಲಯಗಳಲ್ಲಿ ಗೋಬಿಚೆಟ್ಟಿಪಾಳ್ಯಂನಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಕೂಡಾ ಒಂದು. ಈ ದೇವಾಲಯ ದ್ರಾವಿಡಶಿಲ್ಪ ಶೈಲಿಯಲ್ಲಿದೆ. ದೇವಾಲಯದಲ್ಲಿರುವುದು ತಮಿಳುನಾಡಿನ ಅತಿ ದೊಡ್ಡ ಸುಬ್ರಹ್ಮಣ್ಯಸ್ವಾಮಿಯ ಪ್ರತಿಮೆಗಳಲ್ಲಿ ಒಂದಾಗಿದೆ.
ದೇಶದಲ್ಲಿ ಅನೇಕ ದೇವಾಲಯಗಳು ತನ್ನದೇ ಮಹಿಮೆಗೆ ಹೆಸರಾಗಿದೆ. ಕೆಲವು ಅದರ ವಾಸ್ತುಶಿಲ್ಪಕ್ಕೆ ಹೆಸರಾದರೆ, ಕೆಲವರು ಬಹಳ ಮಹಿಮೆಗೆ ಹೆಸರಾಗಿದೆ. ಅದೇ ರೀತಿ ತಮಿಳುನಾಡಿನ ಬಾಲ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಕೂಡಾ ಬಹಳ ಖ್ಯಾತಿ ಪಡೆದಿದೆ. ಈ ದೇವಸ್ಥಾನವನ್ನು ಪಚೈಮಲೈ ಬಾಲಮುರುಗನ್ ದೇವಾಲಯ ಎಂದೂ ಕರೆಯಲಾಗುತ್ತದೆ
ದ್ರಾವಿಡ ಶೈಲಿಯ ಸುಂದರ ದೇವಾಲಯ
ಈ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಭಾರತದ ತಮಿಳುನಾಡಿನ ಗೋಬಿಚೆಟ್ಟಿಪಾಳ್ಯಂನಲ್ಲಿರುವ ಎರಡು ಪ್ರಮುಖ ಬೆಟ್ಟಗಳ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ತಮಿಳು ವಾಸ್ತುಶೈಲಿಯನ್ನು ಹೊಂದಿದೆ. ಇದು ಹೊರ ವಲಯದಲ್ಲಿರುವ ಬೆಟ್ಟದ ಮೇಲೆ ಇದೆ. ದೇವಾಲಯದ ಸುತ್ತಮುತ್ತ ಹಸಿರು ಗಿಡಗಳು ಮತ್ತು ನಿರೀನ ಪ್ರದೇಶ ಮನ ಸೆಳೆಯುತ್ತದೆ. ದೂರ್ವಾಸ ಮುನಿಯು ಈ ದೇವಾಲಯಕ್ಕೆ ಭೇಟಿನೀಡಿ ಪೂಜೆ ಸಲ್ಲಿಸಿದ್ದರೆಂದು ವೈದಿಕ ಗ್ರಂಥಗಳಿಂದ ತಿಳಿದುಬರುತ್ತದೆ. ಇಲ್ಲಿರುವ 5 ಅಂತಸ್ತಿನ ಗೋಪುರ ಮಾದರಿ ಬಹಳ ವಿಭಿನ್ನವಾಗಿದೆ. ಈ ದೇವಾಲಯವನ್ನು ದ್ರಾವಿಡರ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ಮಗುವಿನ ರೂಪದಲ್ಲಿರುವ ಸುಬ್ರಹ್ಮಣ್ಯಸ್ವಾಮಿಯ ದೇವಾಲಯವಾಗಿದೆ. ಈ ದೇವಾಲಯವನ್ನು ಬಾಲ ಮುರುಗನ್ ಎಂದು ಕರೆಯಲಾಗುತ್ತದೆ.
ಈ ದೇವಸ್ಥಾನವು ಪಶ್ಚಿಮಾಭಿಮುಖವಾಗಿದೆ. ಇದು ತಮಿಳುನಾಡಿನ ಅತಿ ದೊಡ್ಡ ಸುಬ್ರಹ್ಮಣ್ಯಸ್ವಾಮಿಯ ಪ್ರತಿಮೆಗಳಲ್ಲಿ ಒಂದಾಗಿದೆ. ಇಲ್ಲಿ ವಿದ್ಯಾ ಗಣಪತಿ ದೇಗುಲವಿದೆ. ವಿದ್ಯಾಭ್ಯಾಸ ಆರಂಭಿಸುವ ಮುನ್ನ ಈ ದೇವರಿಗೆ ಪೂಜೆ ಸಲ್ಲಿಸಿದಲ್ಲಿ ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚುತ್ತದೆ, ವಿದ್ಯೆ ಒಲಿಯುತ್ತದೆ ಎಂದು ನಂಬಲಾಗಿದೆ. ಜೊತೆಗೆ ಇಲ್ಲಿ ಮರಗತೀಶ್ವರ್ ಮತ್ತು ಅವರ ಪತ್ನಿ ಮರಗತವಲ್ಲಿ ದೇವಾಲಯವನ್ನು ಕಾಣಬಹುದು. ಶ್ರೀಸುಬ್ರಹ್ಮಣ್ಯಸ್ವಾಮಿ ಮತ್ತು ಪತ್ನಿಯರಾದ ವಲ್ಲಿ ಮತ್ತು ದೇವಸೇನೆಯ ದೇವಾಲಯವಿದು. ಅಷ್ಟೇ ಅಲ್ಲ, ಶ್ರೀದೇವಿ ಮತ್ತು ಭೂದೇವಿಯ ದೇಗುಲ ಕೂಡಾ ಇದೆ. ಜನ್ಮ ಕುಂಡಲಿಯಲ್ಲಿ ವಿವಾಹವಾಗಲು ಇದ್ದ ಅಡ್ಡಿ ಆತಂಕವಿದ್ದರೂ ಇಲ್ಲಿ ಪೂಜೆ ಸಲ್ಲಿಸುವುದರಿಂದ ದೂರವಾಗುತ್ತದೆ. ಇದರೊಂದಿಗೆ ದಕ್ಷಿಣಾಮೂರ್ತಿಸ್ವಾಮಿಯ ದೇಗುಲವಿದೆ. ಇಲ್ಲಿ ಪೂಜೆಗೈದಲ್ಲಿ ನೆನಪಿನ ಶಕ್ತಿ ಸುಧಾರಿಸುತ್ತದೆ. ಪತ್ನಿಯರ ಸಹಿತ ಇರುವ ನವಗ್ರಹಗಳ ದೇವಸ್ಥಾನ ಕೂಡಾ ಇಲ್ಲಿದೆ.
ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ
ದೇವಸ್ಥಾನವು ಆರು ಮುಖವುಳ್ಳ ಷಣ್ಮುಖಸ್ವಾಮಿ ಹೆಸರುವಾಸಿಯಾಗಿದೆ. ಪ್ರತಿ ತಿಂಗಳಲ್ಲಿಯೂ ವಿಶಾಖ ನಕ್ಷತ್ರ ಇರುವ ದಿನ, ಶುದ್ದ ಷಷ್ಠಿ ಮತ್ತು ಕೃತ್ತಿಕ ನಕ್ಷತ್ರವಿರುವ ದಿನದಂದು ದೇವರಿಗೆ ವಿಭೂತಿ ಮತ್ತು ಪಂಚಾಮೃತ ಅಭಿಷೇಕ ಮತ್ತು ವಿಶೇಷ ಪೂಜೆ ನಡೆಯುತ್ತದೆ. ಸ್ಕಂದಷಷ್ಟಿಯ ಸಮಯದಲ್ಲಿ, ಷಣ್ಮುಖ ಸ್ವಾಮಿಗೆ ಸತತವಾಗಿ ಆರು ದಿನಗಳ ಕಾಲ ವಿಶೇಷ ಪೂಜೆ ನಡೆಸಲಾಗುತ್ತದೆ. ಫಾಲ್ಗುಣ ಮಾಸದಲ್ಲಿ ವಾರ್ಷಿಕ ಕಾರ್ಯಕ್ರಮ ನಡೆಯಲಿದ್ದು ಈ ಅವಧಿಯಲ್ಲಿ ಬಾಲಸುಬ್ರಹ್ಮಣ್ಯಸ್ವಾಮಿ, ವಲ್ಲಿ ದೇವಸೇನಾ ಸಮೇತ ಸುಬ್ರಹ್ಮಣ್ಯಸ್ವಾಮಿ ಮತ್ತು ಷಣ್ಮುಖಸ್ವಾಮಿಯ ಮೂರೂ ರೂಪದಲ್ಲಿ ನೋಡಬಹುದಾಗಿದೆ. ಭಗವಾನ್ ಷಣ್ಮುಗ ಮತ್ತು ಅವನ ಸಂಗಾತಿಗಳಾದ ವಲ್ಲಿ ಮತ್ತು ದೇವಸೇನೆಯರನ್ನು ಸಂಪೂರ್ಣವಾಗಿ ಶ್ರೇತವಸ್ತ್ರ ಹಾಗೂ ಹೂಗಳಿಂದ ಅಲಂಕರಿಸಲಾಗುತ್ತದೆ. ಬಾಲ ಸುಬ್ರಹ್ಮಣ್ಯಸ್ವಾಮಿಯನ್ನು ಸೃಷ್ಟಿಕರ್ತ ಬ್ರಹ್ಮನಿಗೆ ಹೋಲಿಸಲಾಗುತ್ತದೆ.
ಎರಡನೆಯ ರೂಪವನ್ನು ಕೆಂಪು ವಸ್ತ್ರ ಮತ್ತು ಕೆಂಪು ಹೂಗಳಿಂದ ಅಲಂಕರಿಸಲಾಗುತ್ತದೆ. ಇದನ್ನು ಶಿವನಿಗೆ ಹೋಲಿಸಲಾಗುತ್ತದೆ. ಫಾಲ್ಗುಣ ಮಾಸದ ಉತ್ತರ ನಕ್ಷತ್ರ ಬರುವ ದಿನದಂದು ದೇವರಿಗೆ ಹಸಿರು ವಸ್ತ್ರದಿಂದ ಅಲಂಕರಿಸುತ್ತಾರೆ. ಭಕ್ತರು ಆ ದಿನ ದೇವರಿಗೆ ಹಸಿರು ಹೂವುಗಳು, ಬಟ್ಟೆಗಳು ಮತ್ತು ಪನ್ನೀರುಗಳನ್ನು ಅರ್ಪಿಸುತ್ತಾರೆ. ಆ ದಿನ ದಂಪತಿ ಜೊತೆ ಸೇರಿ ಪೂಜೆ ಮಾಡುವುದು ಬಹ ವಿಶೇಷ. ಈ ಪೂಜೆಯಿಂದ ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ ಎಂಬ ನಂಬಿಕೆ ಇದೆ.
ಇಲ್ಲಿ ಪ್ರತಿ ವರ್ಷ ಫಾಲ್ಗುಣ ಮಾಸದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿಯ ಕಲ್ಯಾಣ್ಯೋತ್ಸವವನ್ನು ಸಾಮೂಹಿಕವಾಗಿ ಆಚರಿಸಲಾಗುತ್ತದೆ. ಕಂದರ್ ಷಷ್ಠಿಯ ದಿನದಂದು ವಿಶೇಷ ಪೂಜೆ ಮಾಡಲಾಗುತ್ತದೆ. ಕಂದರ್ ಷಷ್ಟಿಯ ಸಮಯದಲ್ಲಿ ಏಳು ದಿನಗಳ ಕಾಲ ಉಪವಾಸ ಮಾಡಿ ಪೂಜೆ ಮಾಡಿದಲ್ಲಿ ಜೀವನದಲ್ಲಿ ಎದುರಾಗುವ ಅಡಚಣೆಯು ದೂರವಾಗುತ್ತದೆ ಎಂಬ ನಂಬಿಕೆ ಇದೆ. ಇಲ್ಲಿರುವ ಸುಬ್ರಹ್ಮಣ್ಯ ಮೂರ್ತಿಯು 600 ವರ್ಷಗಳಷ್ಟು ಹಳೆಯದು ಎಂದು ಶಾಸನದಿಂದ ತಿಳಿದುಬರುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).