ಹಲವು ವೈಶಿಷ್ಟ್ಯಗಳಿಂದ ಕೂಡಿದ ಆಂಧ್ರಪ್ರದೇಶದ ಅಹೋಬಿಲ ದೇವಸ್ಥಾನ; ನರಸಿಂಹ ಸ್ವಾಮಿ ಹೊರ ಬಂದ ಕಂಬ ಇರುವುದು ಇದೇ ಸ್ಥಳದಲ್ಲಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹಲವು ವೈಶಿಷ್ಟ್ಯಗಳಿಂದ ಕೂಡಿದ ಆಂಧ್ರಪ್ರದೇಶದ ಅಹೋಬಿಲ ದೇವಸ್ಥಾನ; ನರಸಿಂಹ ಸ್ವಾಮಿ ಹೊರ ಬಂದ ಕಂಬ ಇರುವುದು ಇದೇ ಸ್ಥಳದಲ್ಲಿ

ಹಲವು ವೈಶಿಷ್ಟ್ಯಗಳಿಂದ ಕೂಡಿದ ಆಂಧ್ರಪ್ರದೇಶದ ಅಹೋಬಿಲ ದೇವಸ್ಥಾನ; ನರಸಿಂಹ ಸ್ವಾಮಿ ಹೊರ ಬಂದ ಕಂಬ ಇರುವುದು ಇದೇ ಸ್ಥಳದಲ್ಲಿ

Indian Temples: ಆಂಧ್ರಪ್ರದೇಶದ ಅಹೋಬಿಲ ದೇವಸ್ಥಾನ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ನರಸಿಂಹ ಸ್ವಾಮಿ ಹೊರ ಬಂದ ಕಂಬ ಇರುವುದು ಇದೇ ಸ್ಥಳದಲ್ಲಿದೆ. ಈ ಕ್ಷೇತ್ರದಲ್ಲಿ ನರಸಿಂಹ ಸ್ವಾಮಿಯು ವಿವಿಧ ಅವತಾರಗಳಲ್ಲಿ ನೆಲೆಸಿದ್ದಾರೆ. ಲಕ್ಷ್ಮಿನರಸಿಂಹ ಸ್ವಾಮಿಯು ಆದಿ ಶಂಕರರಿಗೆ ರಕ್ಷಣೆ ನೀಡಿದ್ದು ಕೂಡಾ ಇದೇ ಸ್ಥಳದಲ್ಲಿ.

ಹಲವು ವೈಶಿಷ್ಟ್ಯಗಳಿಂದ ಕೂಡಿದ ಆಂಧ್ರಪ್ರದೇಶದ ಅಹೋಬಿಲ ದೇವಸ್ಥಾನ; ನರಸಿಂಹ ಸ್ವಾಮಿ ಹೊರ ಬಂದ ಕಂಬ ಇರುವುದು ಇದೇ ಸ್ಥಳದಲ್ಲಿ
ಹಲವು ವೈಶಿಷ್ಟ್ಯಗಳಿಂದ ಕೂಡಿದ ಆಂಧ್ರಪ್ರದೇಶದ ಅಹೋಬಿಲ ದೇವಸ್ಥಾನ; ನರಸಿಂಹ ಸ್ವಾಮಿ ಹೊರ ಬಂದ ಕಂಬ ಇರುವುದು ಇದೇ ಸ್ಥಳದಲ್ಲಿ (PC: Vertigo_Warrior @VertigoWarrior)

ಭಾರತದಲ್ಲಿ ಅನೇಕ ದೇವಾಲಯಗಳಿವೆ. ನಮಗೇ ತಿಳಿಯದಂತೆ ಎಷ್ಟೋ ದೇವಾಲಯಗಳು ಒಂದೊಂದು ವೈಶಿಷ್ಟ್ಯಕ್ಕೆ ಹೆಸರಾಗಿದೆ. ಆಂಧ್ರಪ್ರದೇಶದಲ್ಲಿ ಕೂಡಾ ಇಂಥಹ ಸಾಕಷ್ಟು ದೇವಾಲಯಗಳಿವೆ. ಅದರಲ್ಲಿ ಅಹೋಬಿಲ ದೇವಾಲಯ ಕೂಡಾ ಒಂದು. ಕರ್ನೂಲ್ ಜಿಲ್ಲೆಯಲ್ಲಿ ಇರುವ ಈ ದೇವಸ್ಥಾನವು ಪವಿತ್ರ ಕ್ಷೇತ್ರವಾಗಿದೆ.

ಅಹೋಬಿಲದಲ್ಲಿ ಒಟ್ಟು ಒಂಬತ್ತು ದೇವಾಲಯಗಳಿವೆ. ಇದನ್ನು 15 ಶತಮಾನದಲ್ಲಿ ವಿಜಯನಗರದ ಅರಸರು ನಿರ್ಮಿಸಿದರು ಎಂದು ತಿಳಿದುಬಂದಿದೆ. ಇದು ಅತ್ಯಂತ ಕಡಿದಾದ ಪ್ರದೇಶದಲ್ಲಿ ಇದೆ. ಆದ್ದರಿಂದ ಅನಾರೋಗ್ಯ ಇರುವವರು ಮತ್ತು ವಯೋವೃದ್ಧರು ಈ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ. ಈ ದೇವಾಲಯಗಳನ್ನು ರಾಜರ ಕಾಲದಲ್ಲಿಯೇ ಪುನರುತ್ಥಾನಗೊಳಿಸಿದೆ ಎಂದು ಚರಿತ್ರೆಗಳಿಂದ ತಿಳಿದು ಬರುತ್ತದೆ.

ನರಸಿಂಹಸ್ವಾಮಿ ಹೊರಬಂದ ಕಂಬ ಇರುವುದು ಇದೇ ಕ್ಷೇತ್ರದಲ್ಲಿ

ಈ ಕ್ಷೇತ್ರದಲ್ಲಿ ಸ್ವಯಂ ಶಿವನೇ ನರಸಿಂಹ ಸ್ವಾಮಿಯನ್ನು ಅರ್ಚಿಸುತ್ತಾನೆ. ಶ್ರೀ ರಾಮಚಂದ್ರನು ಅಹೋಬಿಲ ನರಸಿಂಹ ಸ್ವಾಮಿಯನ್ನು ಪೂಜಿದಿದನೆಂದು ಚರಿತ್ರೆಯಲ್ಲಿ ಉಲ್ಲೇಖವಾಗಿದೆ. ರಾಕ್ಷಸರು 4 ವೇದಗಳನ್ನು ಒಮ್ಮೆ ಅಪಹರಿಸುತ್ತಾರೆ. ಆ ವೇದಗಳನ್ನು ಮರಳಿ ಪಡೆಯಲು ಬ್ರಹ್ಮನು ಇತರ ದೇವಾನುದೇವತೆಗಳ ಸಹಿತ ಈ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಪೂಜಿಸುತ್ತಾರೆ. ಆನಂತರ ದೇವತೆಗಳಿಗೆ ವೇದಗಳು ಮರಳಿ ದೊರೆಯುತ್ತವೆ. ಗರುಡ ಮತ್ತು ಭಗವಾನ್ ವಿಷ್ಣುವಿನ ನಡುವಿನ ಸಂಬಂಧವು ನಮ್ಮೆಲ್ಲರಿಗೂ ತಿಳಿದಿದೆ. ಈ ಸ್ಥಳದಲ್ಲಿ ಗರುಡನ ಪ್ರಾರ್ಥನೆಗೆ ಓಗೊಟ್ಟು ಶ್ರೀ ನರಸಿಂಹಸ್ವಾಮಿಯು ಜ್ವಾಲಾ ನರಸಿಂಹಸ್ವಾಮಿಯ ರೂಪದಿಂದ ದರ್ಶನ ನೀಡುತ್ತಾನೆ.

ಒಮ್ಮೆ ಆದಿಶಂಕರರ ಪ್ರಾಣಕ್ಕೆ ಸಂಚಕಾರ ಬರುತ್ತದೆ. ಈ ಪವಿತ್ರ ಕ್ಷೇತ್ರದಲ್ಲಿ ಆದಿಶಂಕರರಿಗೆ ಶ್ರೀ ಲಕ್ಷಿನರಸಿಂಹಸ್ವಾಮಿಯಿಂದ ರಕ್ಷಣೆಯು ದೊರೆಯುತ್ತದೆ. ಭಕ್ತಿ ಮತ್ತು ಮುಗ್ಧತೆಗೆ ಉದಾಹರಣೆ ಭಕ್ತಪ್ರಹ್ಲಾದ. ಈತನ ಭಕ್ತಿಯನ್ನು ಮೆಚ್ಚಿ ನರಸಿಂಹನು ಕಂಬವನ್ನು ಒಡೆದು ಹೊರ ಬಂದು ಹಿರಣ್ಯಕಶಿಪುವನ್ನು ಸಂಹರಿಸಿದ ಸ್ಥಳ ಕೂಡಾ ಇದೇ. ಸೀಳಿಹೋದ ಆ ಕಂಬವನ್ನು ಇಂದಿಗೂಈ ಕ್ಷೇತ್ರದಲ್ಲಿ ನೋಡಬಹುದು.

9 ರೂಪದಲ್ಲಿ ನೆಲೆಸಿರುವ ನರಸಿಂಹ ಸ್ವಾಮಿ

ಈ ಕ್ಷೇತ್ರದಲ್ಲಿ ನರಸಿಂಹಸ್ವಾಮಿಯು ವಿವಿಧ ಪ್ರದೇಶದಲ್ಲಿ ಒಟ್ಟು 9 ರೂಪದಲ್ಲಿ ನೆಲೆಸಿದ್ದಾನೆ. ಪ್ರತಿಯೊಂದಕ್ಕೂ ತನ್ನದೇಆದ ವಿಶೇಷತೆಗಳು ಇವೆ. ಅಹೋಬಿಲ ನರಸಿಂಹಸ್ವಾಮಿಯು ಪೂರ್ವಾಭಿಮುಖಿಯಾಗಿ ಚಕ್ರಾಸನ ಭಂಗಿಯಲ್ಲಿ ಕುಳಿತಿರುತ್ತಾನೆ. ಇದು ಪ್ರಮುಖವಾದ ದೇವಾಲಯವಾಗಿದೆ. ಇದಲ್ಲದೆ ಜ್ವಾಲಾ ನರಸಿಂಹ, ಮಾಲೋಲ ನರಸಿಂಹ, ಕ್ರೋಧ ನರಸಿಂಹ, ಕಾರಂಜ ನರಸಿಂಹ, ಭಾರ್ಗವ ನರಸಿಂಹ, ಯೋಗಾನಂದ ನರಸಿಂಹ, ಚತ್ರವತ ನರಸಿಂಹ ಮತ್ತು ಪಾವನ ನರಸಿಂಹ ದೇವಾಲಯಗಳು ಇಲ್ಲಿವೆ.

ಇಲ್ಲಿರುವ ಮತ್ತೊಂದು ವಿಶೇಷವೆಂದರೆ ನರಸಿಂಹಸ್ವಾಮಿಯನ್ನು ವಿವಾಹದ ವೇಳೆ ಸ್ವಯಂ ಶ್ರೀ ವೆಂಕಟೇಶ್ವರನೇ ಸ್ಥಾಪಿಸಿ ಪೂಜಿಸಿದನೆಂದು ತಿಳಿದುಬರುತ್ತದೆ. ಶ್ರೀ ಅನ್ನಮಾಚಾರ್ಯರ ಟ್ರಸ್ಟ್‌ ಸಹಯೋಗದಲ್ಲಿ ಪ್ರತಿದಿನ ಸುಮಾರು 500 ರಿಂದ 700 ಜನರಿಗೆ ಅನ್ನದಾನ ಮಾಡಲಾಗುತ್ತದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಇಲ್ಲಿ ವಿಶೇಷವಾದ ಪೂಜೆ ನಡೆಯುತ್ತದೆ. ಈ ಅವಧಿಯಲ್ಲಿ ಎಲ್ಲಾ ಒಂಬತ್ತು ದೇವಾಲಯಗಳನ್ನು ಭೇಟಿ ಮಾಡಲು ವಿಶೇಷವಾದ ಅನುಕೂಲತೆಗಳನ್ನು ಕಲ್ಪಿಸಲಾಗುತ್ತದೆ. ಗರುಡನು ತಪಸ್ಸನ್ನು ಮಾಡಿದ ಗರುಡಾಚಲ ಬೆಟ್ಟವನ್ನೂ ಇಲ್ಲಿ ಕಾಣಬಹುದು. ಶ್ರೀ ಕೃಷ್ಣದೇವರಾಯನು ಈ ದೇವಾಲಯವನ್ನು ನವೀಕರಣಗೊಳಿಸಿ ಪೂಜೆ ಸಲ್ಲಿಸಿದನೆಂದು ಚರಿತ್ರೆಗಳ ಪುಸ್ತಕಗಳಿಂದ ತಿಳಿದುಬರುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.