Good Friday: ಗುಡ್ ಫ್ರೈಡೇ ಎಂದು ಯಾಕೆ ಕರೆಯುತ್ತಾರೆ; ಈ ವಿಶೇಷ ದಿನದ ಬಗ್ಗೆ ತಿಳಿಯಿರಿ
ಗುಡ್ ಫ್ರೈಡೇ ಪದವು ಸಂಭ್ರಮಾಚರಣೆಯ ಅರ್ಥವನ್ನು ಕೊಟ್ಟರೂ ಈ ದಿನ ಕ್ರೈಸ್ತ ಬಾಂಧವರಿಗೆ ಅತ್ಯಂತ ಗಂಭೀರವಾದ ದಿನವಾಗಿರುತ್ತದೆ. ಇದನ್ನು ಗುಡ್ ಫ್ರೈಡೇ ಅಂತ ಯಾಕೆ ಕರಿಯಲಾಗುತ್ತದೆ ಎಂಬುದನ್ನು ತಿಳಿಯೋಣ.

ಯಾವುದೇ ಹಬ್ಬ ಹರಿದಿನಗಳಂತೆ ಗುಡ್ ಫ್ರೈಡೇ ದಿನ ಸಂಭ್ರಮ ಇರುವುದಿಲ್ಲ, ತುಂಬಾ ವಿಭಿನ್ನವಾಗಿರುತ್ತದೆ. ಎಲ್ಲಾ ಕ್ರೈಸ್ತನ ಭಕ್ತರು ಗಂಭೀರವಾಗಿರುತ್ತಾರೆ. ದುಃಖ ಮತ್ತು ಮರಣವನ್ನು ಸ್ಮರಿಸುತ್ತಾರೆ. ಚರ್ಚ್ ಗಳಲ್ಲಿ ವಿಶೇಷ ಕೂಟಗಳನ್ನು ಆಯೋಜಿಸಲಾಗುತ್ತದೆ. ಪಾದ್ರಿಗಳು ಯೇಸು ಕ್ರಿಸ್ತನ ಕೊನೆಯ ದಿನಗಳ ಬಗ್ಗೆ ಬೈಬಲ್ ಮೂಲಕ ಭಕ್ತರಿಗೆ ವಿವರಿಸುತ್ತಾರೆ. ಕ್ರಿಶ್ಚಿಯನ್ ನಂಬಿಕೆಗಳ ಪ್ರಕಾರ, ಮಾನವಕುಲವನ್ನು ಪಾಪದಿಂದ ರಕ್ಷಿಸುವ ಸಲುವಾಗಿ ಯೇಸು ಸ್ವಇಚ್ಛೆಯಿಂದ ಶಿಲುಬೆಯಲ್ಲಿ ತನ್ನ ಪ್ರಾಣವನ್ನು ಕೊಟ್ಟನು. ಈತನ ತ್ಯಾಗ, ಬಲಿದಾನವನ್ನು ಯಾರು ಕೂಡ ಸೋಲಾಗಿ ನೋಡಲಿಲ್ಲ. ಬದಲಾಗಿದೆ ಪ್ರೀತಿಯ ಕ್ರಿಯೆಯನ್ನಾಗಿ ನೋಡಲಾಯಿತು. ಹೀಗಾಗಿ ಗುಡ್ ಫ್ರೈಡೇಯನ್ನು ಸಂತೋಷದ ದಿನವನ್ನಾಗಿ ಸ್ವೀಕರಿಸಿದೆ ಗಂಭೀರವಾಗಿ ಪರಿಗಣಿಸುತ್ತಾರೆ.
ಬೈಬಲ್ ನ ಹಳೆಯ ಒಡಂಬಡಿಕೆಯ ಪ್ರವಾದಿ ಯೆಶಾಯನ ಒಂದು ವಚನವು ಯೇಸುವಿನ ತ್ಯಾಗಕ್ಕೆ ಬಲವಾಗಿ ಸಂಬಂಧಿಸಿದೆ ಮತ್ತು ಶುಭ ಶುಕ್ರವಾರದ ಸಾರವನ್ನು ಹೇಳುತ್ತದೆ.
ಯೆಶಾಯ 53.5
ಬೈಬಲ್ ನ ಹಳೆಯ ಒಡಂಬಡಿಕೆಯಲ್ಲಿ ಯೆಶಾಯ ವಚನವು ಹೀಗೆ ಹೇಳುತ್ತೆ. ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು. ನಮಗೆ ಸುಕ್ಷೇಮವನ್ನುಂಟುಮಾಡುವ ದಂಡನೆಯನ್ನ ಅವನು ಅನುಭವಿಸಿದನು. ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು.
ಬೈಬಲ್ ಪ್ರಕಾರ, ಯೇಸುವನ್ನು ಅವನ ಶಿಷ್ಯರಲ್ಲಿ ಒಬ್ಬನು ದ್ರೋಹ ಮಾಡಿ, ಬಂಧಿಸಿ, ಶಿಲುಬೆಗೇರಿಸಿ ಮರಣದಂಡನೆ ವಿಧಿಸಲಾಯಿತು. ಪಾಪದ ಯಾತನೆಗಳಿಂದ ಆ ವ್ಯಕ್ತಿಯನ್ನು ರಕ್ಷಿಸಲು ಹಾಗೂ ಮಾನವಕುಲದ ತಪ್ಪುಗಳ ಭಾರವನ್ನು ಹೊತ್ತುಕೊಂಡನು ಎಂದು ಹೇಳಲಾಗುತ್ತದೆ. ಕ್ರಿಶ್ಚಿಯನ್ನರು ಇದು ಅಂತ್ಯವಲ್ಲ, ಆದರೆ ಹೊಸ ಭರವಸೆಯ ಆರಂಭ ಎಂದು ನಂಬುತ್ತಾರೆ. ಇದನ್ನು ನಂಬುವ ಎಲ್ಲರಿಗೂ ಶಾಶ್ವತ ಜೀವನ ಸಿಗುತ್ತದೆ ಎಂಬ ನಂಬಿಕೆ ಇದೆ.
ಗುಡ್ ಫ್ರೈಡೇ ದಿನ ಚರ್ಚೆಗಳಿಗೆ ಹೋಗುವ ಅನೇಕ ವಿಶ್ವಾಸಿಗಳು ಉಪವಾಸದಿಂದ ಕೂಡಿದ ಕಣ್ಣೀರಿನ ಪ್ರಾರ್ಥನೆಗಳನ್ನು ಮಾಡುತ್ತಾರೆ. ಧ್ಯಾನಗಳನ್ನು ಮಾಡುತ್ತಾರೆ. ನಮ್ಮ ಪಾಪಕ್ಕಾಗಿ ನೀವು ಪ್ರಾಣವನ್ನು ಅರ್ಪಿಸಿದ್ದೀರಿ, ನಮ್ಮ ಪಾಪಕ್ಕಾಗಿ ನೀವು ಪವಿತ್ರ ರಕ್ತವನ್ನು ಸುರಿಸಿದ್ದೀರಿ ಎಂದು ಪ್ರಾರ್ಥಿಸುತ್ತಾರೆ. ಯೇಸು ಕ್ರಿಸ್ತನು ಮೃತಪಟ್ಟ ಬಳಿಕ ಸಮಾಧಿಯಲ್ಲಿ ಇಡಲಾಗುತ್ತದೆ. ಆದರೆ ಮೂರೇ ದಿನಕ್ಕೆ ಮತ್ತೆ ಜೀವಂತವಾಗಿ ಎದ್ದು ಬಂದಿದ್ದಾನೆ ಎಂಬ ನಂಬಿಕೆ ಇದೆ. ಯೇಸು ಮರಣದ ದಿನವನ್ನು ಗುಡ್ ಫ್ರೈಡೇ ಹಾಗೂ ಜೀವಂತವಾಗಿ ಎದ್ದು ಬಂದ ದಿನವನ್ನು ಈಸ್ಟರ್ ಸಂಡೇಯನ್ನಾಗಿ ಆಚರಿಸಲಾಗುತ್ತದೆ.
2025ರ ಗುಡ್ ಫ್ರೈಡೇ ಏಪ್ರಿಲ್ 18 ರಂದು ಇದ್ದರೆ, ಇದಾದ ಮೂರು ದಿನಕ್ಕೆ ಅಂದರೆ ಏಪ್ರಿಲ್ 20 ರಂದು ಈಸ್ಟರ್ ಭಾನುವಾರ ಇರುತ್ತದೆ. ಯೇಸು ಪುನರುತ್ಥಾನವನ್ನು ಸ್ಮರಿಸುವ ಈ ದಿನ ಸಾಮಾನ್ಯವಾಗಿ ಚರ್ಚ್ ಗಳನ್ನು ಮಲ್ಲಿಗೆ ಹೂವುಗಳಿಂದ ಸಿಂಗಾರ ಮಾಡಲಾಗುತ್ತದೆ. ದೇವರ ಹಾಡುಗಳು, ಪ್ರಾರ್ಥನೆ, ಸಾಕ್ಷಿ ಹೇಳುವುದು ಹಾಗೂ ವಿಶೇಷ ವಾಕ್ಯವನ್ನು ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
